More

    ಬಾಲ್ಯ ವಿವಾಹ ತಡೆಗೆ ಕ್ರಮ

    ಬಾಗಲಕೋಟೆ: ಜಿಲ್ಲೆಯ ಯಾವುದೇ ಭಾಗದಲ್ಲಿ ಬಾಲ್ಯ ವಿವಾಹ ನಡೆದಲ್ಲಿ ಅದಕ್ಕೆ ಕಾರಣರಾದ ಪೂಜಾರಿ, ಸಾಮೂಹಿಕ ವಿವಾಹ ಆಯೋಜಕ ಹಾಗೂ ಪೋಷಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ತನಿಖಾ ಸಮಿತಿ ಹಾಗೂ ಜಿಲ್ಲಾ ಮಕ್ಕಳ ಸಹಾಯ ಮಂಡಳಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕಳೆದ 2020 ಅಕ್ಟೋಬರ್ ರಿಂದ 2021 ಜನವರಿವರೆಗೆ ಒಟ್ಟು 74 ಬಾಲ್ಯ ವಿವಾಹ ತಡೆಯಲಾಗಿದೆ. ಈ ಎಲ್ಲ ಪ್ರಕರಣಗಳ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.

    ಜಿಲ್ಲೆಯಲ್ಲಿ ಮಕ್ಕಳ ಪಾಲನೆಯಲ್ಲಿ ತೊಡಗಿರುವ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪೊಲೀಸರಿಂದ ಪರಿಶೀಲನೆ ಕಡ್ಡಾಯವಾಗಿದೆ. ಪರಿಶೀಲನೆ ಮಾಡಿಸದಿದ್ದಲ್ಲಿ ಅಂತಹ ಸಂಸ್ಥೆ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಮಕ್ಕಳ ಸಹಾಯವಾಣಿ ಮೂಲಕ ದಾಖಲಾದ ಎಲ್ಲ ಪ್ರಕರಣಗಳನ್ನು ಸಂಬಂಧಿಸಿದ ಇಲಾಖೆಗೆ ಸವಿಸ್ತಾರವಾಗಿ ವರದಿ ಸಲ್ಲಿಸಬೇಕು. ಈ ಪ್ರಕರಣಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಅನುಸರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

    ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಭಾರತಿ ವಾಳ್ವೇಕರ ಮಾತನಾಡಿ, ಜಿಲ್ಲೆಯಲ್ಲಿರುವ 22 ಮಕ್ಕಳ ಪಾಲನಾ ಪೋಷಣಾ ಸಂಸ್ಥೆಗಳಲ್ಲಿರುವ ಮಕ್ಕಳಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ಕೋವಿಡ್ ನಿಯಮಗಳ ಪಾಲನೆ, ಪ್ರತಿಯೊಂದು ಶಾಲಾ ಕಾಂಪೌಂಡ್‌ಗಳ ಮೇಲೆ 1098 ಮಕ್ಕಳ ಸಹಾಯವಾಣಿ ಬಗ್ಗೆ ಗೋಡೆ ಬರಹ, ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

    ಜಿಲ್ಲೆಯಲ್ಲಿರುವ 192 ಅಪೌಷ್ಟಿಕ ಮಕ್ಕಳ ಆರೋಗ್ಯದಲ್ಲಿನ ಹಂತವಾರು ಮಾಹಿತಿ ನೀಡಬೇಕು. ಅಪೌಷ್ಟಿಕತೆ ತಡೆಗೆ ಕ್ರಮವಹಿಸುವ ಕೆಲಸವಾಗಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಕೋವಿಡ್ ಸಮಯದಲ್ಲಿ ಮಕ್ಕಳಿಗೆ ಆಹಾರಧಾನ್ಯ ಮನೆ ಮನೆಗೆ ತಲುಪಿಸುತ್ತಿರುವ ಬಗ್ಗೆ ಮಾಹಿತಿ ನೀಡಬೇಕು. ಮೊಟ್ಟೆಗಳನ್ನು ನೀಡಬೇಕು ತಿಳಿಸಿದರು.

    ಎಸ್ಪಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಟಿ.ಭೂಬಾಲನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ.ಕೆ. ಬಸಣ್ಣವರ, ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಅಧಿಕಾರಿಗಳಾದ ಜಯಮಾಲಾ ದೊಡಮನಿ, ಕೇಶವ ದಾಸ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಎಸ್.ಎಸ್.ಬೆಳಗಲಿ, ಡಾ.ಬಿ.ಡಿ.ಪಟ್ಟಣಶೆಟ್ಟಿ, ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

    47 ಬಾಕಿ ಪ್ರಕರಣಗಳು
    ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎನ್.ಪಾಟೀಲ ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯಿಂದ 1139 ಎಚ್‌ಐವಿ ಬಾಧಿತ ಮಕ್ಕಳಿಗೆ ಮಾಸಿಕ ಒಂದು ಸಾವಿರದಂತೆ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ. ಬಾಲ ನ್ಯಾಯಮಂಡಳಿಯಿಂದ ಬಿಡುಗಡೆ ಹೊಂದಿದ ಪ್ರಾಯೋಜಕತ್ವದಡಿ 69 ಮಕ್ಕಳಿಗೆ ಒಂದು ಸಾವಿರದಂತೆ ಸಹಾಯಧನ ನೀಡಲಾಗುತ್ತಿದೆ. ದತ್ತು ಕಾರ್ಯಕ್ರಮದಡಿ 5 ಮಕ್ಕಳನ್ನು ದತ್ತು ನೀಡಲಾಗಿದೆ. ಪೋಷಕತ್ವದಡಿ 3 ಮಕ್ಕಳನ್ನು ನೀಡಲಾಗಿದೆ. ಬಾಲನ್ಯಾಯ ಮಂಡಳಿಗೆ ಪ್ರಸಕ್ತ ತ್ರೈ ಮಾಸಿಕದಲ್ಲಿ 18 ಪ್ರಕರಣಗಳು ಇದ್ದು, ಹಳೆಯ 42 ಸೇರಿ ಒಟ್ಟು 60 ಪ್ರಕರಣಗಳಲ್ಲಿ 13 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. 47 ಬಾಕಿ ಪ್ರಕರಣಗಳು ಇರುವುದಾಗಿ ಸಭೆ ತಿಳಿಸಿದರು.

    ಮಕ್ಕಳು ಕೆಲಸ ಮಾಡುವ ಸ್ಥಳಗಳಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಬೇಕು. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಿಕೊಂಡು ಮಕ್ಕಳು ಕೆಲಸ ಮಾಡದಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಬೆಳೆಯುವ ಮಕ್ಕಳ ಹಿತದೃಷ್ಟಿಯಿಂದ ಪೋಷಣೆ ಬಹಳ ಮುಖ್ಯವಾಗಿದೆ. ಬಾಲ ನ್ಯಾಯ, ಪೋಸ್ಕೋ, ಬಾಲ್ಯ ವಿವಾಹ ನಿಷೇಧ, ಬಾಲ ಕಾರ್ಮಿಕ ನಿಷೇಧ ಪದ್ಧತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಬೇಕು.
    ಭಾರತಿ ವಾಳ್ವೇಕರ, ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ



    ಬಾಲ್ಯ ವಿವಾಹ ತಡೆಗೆ ಕ್ರಮ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts