More

    ಕೋಟೆನಾಡಿನಲ್ಲಿ ಭಾರತ್ ಬಂದ್ ನೀರಸ

    ಬಾಗಲಕೋಟೆ: ಕೇಂದ್ರ ಸರ್ಕಾರ ಕೃಷಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಅನ್ನದಾತರು ಕರೆ ನೀಡಿದ್ದ ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾರ್ವಜನಿಕರ ಜೀವನ, ದೈನಂದಿನ ಚಟುವಟಿಕೆಗಳ ಮೇಲೆ ವ್ಯತ್ಯಯ ಉಂಟಾಗಲಿಲ್ಲ. ಕೇವಲ ವಿವಿಧ ಸಂಘಟನೆಗಳ ಪ್ರತಿಭಟನೆಗಳಿಗೆ ಮಾತ್ರ ಬಂದ್ ಸೀಮಿತವಾಯಿತು.

    ಬಾಗಲಕೋಟೆ ನಗರ ಹಾಗೂ ಮುಧೋಳ, ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ, ಬೀಳಗಿ, ಲೋಕಾಪುರ, ಹುನಗುಂದ, ಇಳಕಲ್ಲ, ಗುಳೇದಗುಡ್ಡ, ಬಾದಾಮಿ, ಕೆರೂರ, ಕಮತಗಿ ಸೇರಿ ಎಲ್ಲೆಡೆ ಜನ ಜೀವನ ಯಥಾಸ್ಥಿತಿಯಲ್ಲಿತ್ತು. ಬೆಳಗ್ಗೆಯಿಂದಲೇ ಸಾರಿಗೆ ಬಸ್, ಆಟೋ, ಟಂಟಂಗಳು ಸಂಚಾರ ಆರಂಭಿಸಿದವು. ಸಂಘ, ಸಂಸ್ಥೆಗಳು ಮತ್ತು ವ್ಯಾಪಾರಸ್ಥರು ಬೆಂಬಲ ಸೂಚಿಸಲಿಲ್ಲ. ಅಲ್ಲದೆ, ಕಚೇರಿ, ಅಂಗಡಿ ಮುಂಗಟ್ಟುಗಳು ಕೂಡ ಬಂದ್ ಆಗಲಿಲ್ಲ. ಹೀಗಾಗಿ ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ ಪ್ರಮುಖ ರಸ್ತೆ, ವೃತ್ತ, ಬೀದಿಗಳಲ್ಲಿ ನಿತ್ಯದ ಚಟುವಟಿಕೆಗಳು ಕಂಡು ಬಂದವು. ಸಾರ್ವಜನಿಕರಿಂದಲೂ ಬಂದ್‌ಗೆ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಆಸ್ಪತ್ರೆ, ಔಷಧ ಮಳಿಗೆ ಸೇರಿದಂತೆ ಅಗತ್ಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ.

    ವಿನೂತನ ಪ್ರತಿಭಟನೆ
    ರಾಜ್ಯ ರೈತ ಸಂಘದ ಕಾರ್ಯಕರ್ತರು ಹುನಗುಂದ ತಾಲೂಕಿನ ಕಮತಗಿ ಮಲಪ್ರಭಾ ಸೇತುವೆ ಮೇಲೆ ಪ್ರತಿಭಟನೆ ನಡೆಸಿ ಬ್ಯಾರಿಕೇಡ್ ಹಾಕಿ ರಸ್ತೆ ಸಂಚಾರ ಬಂದ್ ಮಾಡಿದರು. ಮುಧೋಳ ತಾಲೂಕಿನ ಮಹಾಲಿಂಗಪುರದ ಚನ್ನಮ್ಮ ವೃತ್ತದಲ್ಲಿ ಡಿಎಸ್‌ಎಸ್, ರೈತರು, ನೇಕಾರ ಸಂಘಟನೆಗಳ ಕಾರ್ಯಕರ್ತರು ರಸ್ತೆ ನಡುವೆ ಕುಳಿತು ಊಟ ಮಾಡಿ ಪ್ರತಿಭಟನೆ ನಡೆಸಿದರು. ಬೀಳಗಿಯಲ್ಲಿ ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218, ಮುಧೋಳದಲ್ಲಿ ಧಾರವಾಡ, ವಿಜಯಪುರ ರಾಜ್ಯ ಹೆದ್ದಾರಿ ತಡೆದು ರೈತರು ಹೋರಾಟ ಮಾಡಿದರು. ಇಳಕಲ್ಲನಲ್ಲಿ ಎಮ್ಮೆ, ಟ್ರಾೃಕ್ಟರ್, ಎತ್ತಿನ ಬಂಡಿಗಳೊಂದಿಗೆ ವಿಭಿನ್ನವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದರು. ತೇರದಾಳ ಪಟ್ಟಣದಲ್ಲಿ ರೈತರು ಕರಡಿ ಮಜಲು ಮೂಲಕ ಬೀದಿ ಬೀದಿಗಳಲ್ಲಿ ಸಂಚರಿಸಿ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಖಂಡಿಸಿದರು.

    ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ ಹೋರಾಟ
    ಬಾಗಲಕೋಟೆ ನಗರದಲ್ಲಿ ರಾಜ್ಯ ರೈತ ಸಂಘ-ಹಸಿರು ಸೇನೆ, ಕಾಂಗ್ರೆಸ್ ಕಿಸಾನ್ ಘಟಕ ಹಾಗೂ ಕಾರ್ಮಿಕ ಘಟಕ, ಶಿವರಾಮೇ ಗೌಡರ ಬಣದ ಕರವೇ, ನಾರಾಯಣ ಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಬಸವೇಶ್ವರ ಹಾಗೂ ಜಿಲ್ಲಾಡಳಿತ ಭವನ ಎದುರು ಹೋರಾಟ ನಡೆಸಿದ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಜಿಲ್ಲಾಡಳಿತ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

    ಜಿಲ್ಲಾಡಳಿತ ಭವನ ಎದುರು ರಾಜ್ಯ ರೈತ ಸಂಘ-ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುಖಂಡರಾದ ಗುರು ಗಾಣಗೇರ, ಮಧುಸೂಧನ ತಿವಾರಿ, ಶಶಿಕಾಂತ ಬಂಡರಗಲ್ಲ, ರಸುಲ್‌ಸಾಬ ತಹಸೀಲ್ದಾರ್, ಮಹಾಂತೇಶ ಐಹೊಳೆ, ಬಸನಗೌಡ ಪೈಲ್ ಇತರರು ಇದ್ದರು. ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಕಾರ್ಯಾಧ್ಯಕ್ಷ ಗಿರೀಶ ಅಂಕಲಗಿ, ಬಾಗಲಕೋಟೆ ತಾಲೂಕು ಘಟಕದ ಅಧ್ಯಕ್ಷ ಚನ್ನವೀರ ಅಂಗಡಿ, ಮುಖಂಡರಾದ ಹಾಜಿಸಾಬ ದಂಡಿನ, ಎಸ್.ಎನ್.ರಾಂಪುರ, ವಿಜಯಕುಮಾರ ಮುಳ್ಳೂರ, ಸಂದೀಪ ಬೆಳಗಲ್ಲ, ಆನಂದ ಶಿಲ್ಪಿ ಇದ್ದರು.

    ಶಿವರಾಮೇಗೌಡ ಬಣದ ಕರವೇ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದರು. ಚೇತನ ದೊಡ್ಡಮನಿ, ಶಂಕರ ಮುತ್ತಲಗೇರಿ, ಪವನ ಕಾಂಬಳೆ, ಸಿದ್ರಾಮೇಶ್ವರ ಹಾಸನ, ಅಪ್ಪು ಕಟ್ಟಿಮನಿ, ಮಂಜುನಾಥ ಮಾದರ, ಶಿವು ಪಾದಗಟ್ಟಿ, ಬಾಬು ಮಾದರ, ಮಲ್ಲು ಮುತ್ತಲಗೇರಿಮಠ, ನಾಗರಾಜ ಶಿರಗುಪ್ಪ, ಮಲ್ಲಿಕಾರ್ಜುನ ಪುರಾಣಿಕಮಠ ಇದ್ದರು.

    ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಬಸವರಾಜ ಧರ್ಮಂತಿ, ವಿನೀತ ಮೇಲಿನಮನಿ, ಆತ್ಮರಾಮ ನೀಲನಾಯಕ, ಬಸವರಾಜ ಅಂಬಿಗೇರ, ಸಂಗಮೇಶ ಅಂಬಿಗೇರ, ಪ್ರವೀಣ ಪಾಟೀಲ ಸೇರಿದಂತೆ ಇತರರು ಇದ್ದರು.

    ಮಂಗಳಮುಖಿಯರ ಸಾಥ್
    ಅನ್ನದಾತರ ಹೋರಾಟಕ್ಕೆ ಮಂಗಳಮುಖಿಯರು ಸಾಥ್ ನೀಡಿದರು. ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನಲ್ಲಿ ಹುಬ್ಬಳ್ಳಿ -ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218 ತಡೆದು ರೈತರು, ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಂಗಳಮುಖಿಯರು ಭಾಗವಹಿಸಿ ಗಮನ ಸೆಳೆದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನ್ನಕೊಟ್ಟ ರೈತರನ್ನು ತುಳಿಯುತ್ತಿದೆ ಎಂದು ದೂರಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts