More

    ಜನಗಣತಿ ಕಾರ್ಯ ಯಶಸ್ವಿಗೊಳಿಸಿ

    ಬಾಗಲಕೋಟೆ: ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನಗಣತಿ ಅಧಿಕಾರಿಗಳಿಗೆ (ಚಾರ್ಜ್ ಆಫೀಸರ್ಸ್‌) ಎರಡು ದಿನ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಸೋಮವಾರ ಚಾಲನೆ ನೀಡಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಜನಗಣತಿಯನ್ನು ಡಿಜಿಟಲ್ ಇಂಡಿಯಾ ಯೋಜನೆಯಡಿ ಇದೇ ಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳಲಾಗುತ್ತಿದೆ. ಇದರಿಂದ ಜನಗಣತಿಯ ಅಂಕಿ ಅಂಶಗಳ ಮಾಹಿತಿ ಸಂಗ್ರಹಣೆ, ಕ್ರೋಡೀಕರಣ ಹಾಗೂ ವಿವಿಧ ವರದಿಗಳ ತಯಾರಿಕೆ ಸುಗಮವಾಗಲಿದ್ದು, ನಿಖರವಾದ ಮತ್ತು ಸಕಾಲಿಕ ವರದಿಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ ಎಂದು ತಿಳಿಸಿದರು.

    ಗ್ರಾಮೀಣ ಪ್ರದೇಶದಲ್ಲಿ ತಹಸೀಲ್ದಾರ್ ಹಾಗೂ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಜನಗಣತಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಗಣತಿ ಬ್ಲಾಕ್‌ಗಳನ್ನು ಗುರುತಿಸುವುದು, ಗಣತಿದಾರರಿಗೆ ಬ್ಲಾಕ್‌ಗಳನ್ನು ಹಂಚಿಕೆ ಮಾಡುವುದು, ಗಣತಿ ಕ್ಷೇತ್ರ ಕಾರ್ಯಾಚರಣೆ ಮತ್ತು ಮೇಲ್ವಿಚಾರಣೆ ಎಲ್ಲ ಕರ್ತವ್ಯಗಳನ್ನು ತಂತ್ರಾಂಶದ ಮೂಲಕವೇ ನಿರ್ವಹಿಸಬೇಕಾಗಿದೆ. ಈ ಎರಡು ದಿನಗಳ ಕಾರ್ಯಾಗಾರದಲ್ಲಿ ನೀಡುವ ಎಲ್ಲ ಸೂಚನೆಗಳನ್ನು ಗಮನವಿಟ್ಟು ತಿಳಿದುಕೊಳ್ಳಬೇಕು. ಯಾವುದೇ ಸಂದೇಹಗಳು ಉಳಿಯದಂತೆ ಸಕ್ರಿಯವಾಗಿ ಪಾಲ್ಗೊಳ್ಳಲು ಮತ್ತು ಗಣತಿ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

    ಜನಗಣತಿಯ ನಿರ್ದೇಶನಾಲಯದ ಅಧಿಕಾರಿ ಸ್ಯಾಮ್‌ಕುಮಾರ ಹಾಗೂ ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಗಂಗಾಧರ ದಿವಟರ ತರಬೇತಿ ನೀಡಿದರು. ತರಬೇತಿಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪನ್ವಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ, ಉಪ ವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ ಸೇರಿ ಜಿಲ್ಲೆಯ ಎಲ್ಲ ತಹಸೀಲ್ದಾರ್‌ರು, ನಗರ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts