More

    ಬಂಡವಾಳ ಶಾಹಿಗಳಿಗೆ ಬಿಜೆಪಿ ಮಣೆ

    ಬಾಗಲಕೋಟೆ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು 130 ಕೋಟಿ ಜನರಿಗೆ ಅನ್ನ ಹಾಕುವ ರೈತರ ವಿರೋಧ ಕಟ್ಟಿಕೊಂಡು ಅಂಬಾನಿ, ಅದಾನಿಯಂತಹ ಬಂಡವಾಳ ಶಾಹಿಗಳನ್ನು ಶ್ರೀಮಂತರನ್ನಾಗಿಸಲು ಹೊರಟಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 135ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಅಂಬಾನಿ, ಅದಾನಿ ನಾಲ್ಕು ವಿಮಾಣ ನಿಲ್ದಾಣ, ರೈಲು ಖರೀದಿ ಮಾಡಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರವನ್ನು ನುಂಗಿ ಹಾಕಿದ್ದಾರೆ. ಇದೀಗ ಅವರ ಕಣ್ಣು ರೈತರ ಜಮೀನಿನ ಮೇಲೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಹಿಂದೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ರೈತರು ಐವತ್ತು ಮಿಲಿಯನ್ ಮೆಟ್ರಿಕ್‌ಟನ್ ಆಹಾರ ಧಾನ್ಯ ಬೆಳೆಯುತ್ತಿದ್ದರು. ಇದೀಗ 285 ಮೆಟ್ರಿಕ್ ಟನ್ ಆಹಾರ ಧಾನ್ಯ ಬೆಳೆಯುತ್ತಿದ್ದಾರೆ. ನಮ್ಮ ದೇಶದ 130 ಕೋಟಿ ಜನರು ಉಂಡು ಉಳಿದಿರುವುದನ್ನು ಹೊರ ದೇಶಕ್ಕೆ ರಫ್ತು ಮಾಡುತ್ತಿದ್ದೇವೆ. ಹಿಡಕಲ್ ಜಲಾಶಯ, ನವಿಲು ತೀರ್ಥ, ಆಲಮಟ್ಟಿ ಜಲಾಶಯ ಕಟ್ಟಿಸಿದ್ದು ಕಾಂಗ್ರೆಸ್. ಯಾರಾದರು ಪ್ರಶ್ನೆ ಮಾಡಿದರೆ ಕಾರ್ಯಕರ್ತರು ಇದು ಕಾಂಗ್ರೆಸ್ ಸಾಧನೆ ಎಂದು ತಿಳಿಸಬೇಕು ಎಂದರು.

    ಆಲಮಟ್ಟ ಜಲಾಶಯ ಪೂರ್ಣವಾದರೆ 32 ಲಕ್ಷ ಎಕರೆ ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಆಗುತ್ತದೆ. ಅದನ್ನೇ ಹನಿ ನೀರಾವರಿ ಪದ್ಧತಿ ಅಳವಡಿಸಿದರೆ ಒಂದು ಕೋಟಿ ಎಕರೆ ಭೂಮಿ ನೀರಾವರಿಯಾಗುತ್ತದೆ. ಆಗ ನಮ್ಮ ಉತ್ತರ ಕರ್ನಾಟಕದ ಭಾಗ ದೇಶದ ಯಾವುದೇ ಭಾಗದೊಂದಿಗೆ ಪೈಪೋಟಿ ಮಾಡಬಹುದು ಅಷ್ಟು ಸಮೃದ್ಧವಾಗುತ್ತದೆ. ಯುಕೆಪಿ ಮೂರನೇ ಹಂತದ ಬಗ್ಗೆ ಯಾವುದೇ ಕೆಲಸ ಆಗುತ್ತಿಲ್ಲ. ಭೂ ಸ್ವಾಧೀನ ನಡೆಯುತ್ತಿಲ್ಲ. ಉ.ಕ. ದಲ್ಲಿ ಒಟ್ಟಾರೆ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವ ಎಚ್.ವೈ.ಮೇಟಿ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮುಖಂಡರಾದ ಎಸ್.ಎನ್.ರಾಂಪೂರ, ನಾಗರಾಜ ಹದ್ಲಿ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts