More

    ಪರಿಸರ ಜಾಗೃತಿಗಾಗಿ ಪಾರಂಪರಿಕ ಸಂಚಾರ !

    ಸಂತೋಷ ದೇಶಪಾಂಡೆ
    ಬಾಗಲಕೋಟೆ
    : ಐತಿಹಾಸಿಕ ತಾಣಗಳ ಸಂರಕ್ಷಣೆ, ಪರಿಸರ ಕುರಿತು ಜಾಗೃತಿ ಮೂಡಿಸಲು ಜಾಗೃತಿ ಕಾರ್ಯಕ್ರಮವೊಂದು ಸದ್ದಿಲ್ಲದೆ ಸಿದ್ಧಗೊಂಡಿದೆ. ಪರಿಸರ ಪ್ರೇಮಿಗಳ ತಂಡವೊಂದು ಕೋಟೆನಾಡಿನಲ್ಲಿ ಬೈಸಿಕಲ್ ಮೂಲಕ ಬರೋಬ್ಬರಿ 100 ಕಿ.ಮೀ. ಸಂಚರಿಸಲು ಸಜ್ಜಾಗಿದ್ದಾರೆ.!!

    ಬಾಗಲಕೋಟೆ ನಗರದ ಸಮಾನ ಮನಸ್ಕ ಸ್ನೇಹಿತರ ಬಳಗ ಸೇರಿಕೊಂಡು ಬಾಗಲಕೋಟೆ ಬೈಸಿಕಲ್ ಕ್ಲಬ್ ಎನ್ನುವ ಪರಿಸರ ಪ್ರೇಮಿ ಕ್ಲಬ್ ಹುಟ್ಟು ಹಾಕಿದ್ದಾರೆ. ಈ ಕ್ಲಬ್ ನೇತೃತ್ವದಲ್ಲಿ ಫೆ.23 ರಂದು ಭಾನುವಾರ ವಿಭಿನ್ನವಾಗಿ ಜಾಗೃತಿ ನಡೆಯಲಿದೆ. ನಿರಂತರವಾಗಿ 7 ಗಂಟೆ ಸೈಕಲ್ ತುಳಿಯುತ್ತ ಪಾರಂಪರಿಕ ಸಂಚಾರ ಹೆಸರಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

    ಯಾವ ಮಾರ್ಗದಲ್ಲಿ ಸಂಚಾರ ?
    ಬೆಳಗ್ಗೆ 6 ಗಂಟೆಗೆ ಬಾಗಲಕೋಟೆ ನಗರದ ಇಂಜಿನಿಯರಿಂಗ್ ಕಾಲೇಜಿನಿಂದ ಜಾಥಾ ಆರಂಭಗೊಳ್ಳಲಿದೆ. ನಂತರ ಬಾದಾಮಿ ಮೇಣಬಸದಿ, ಬನಶಂಕರಿ, ಶಿವಯೋಗ ಮಂದಿರ, ಮಹಾಕೂಟ, ಪಟ್ಟದಕಲ್ಲು, ಸಿದ್ದನಕೊಳ್ಳ, ಐಹೊಳೆ, ಕಮತಗಿ ಮೂಲಕ ಮಧ್ಯಾಹ್ನ 12.30 ರಿಂದ 1ರವರೆಗೆ ನಿರಂತರವಾಗಿ ಸಂಚರಿಸಿ ಬಾಗಲಕೋಟೆ ನಗರದ ನೂತನ ಶಿರೂರ ಅಗಸಿಗೆ ಬಂದು ತಲುಪಲಿದ್ದಾರೆ. ಸಂಚಾರದ ವೇಳೆ ಪ್ರತಿಯೊಂದು ಐತಿಹಾಸಿತಾಣಗಳಲ್ಲಿ ಪ್ರವಾಸಿಗರು, ಸ್ಥಳೀಯ ಸಾರ್ವಜನಿಕರು ಹಾಗೂ ಮಾರ್ಗ ನಡುವೆ ಬರುವ ಗ್ರಾಮಗಳಲ್ಲಿ ಘೋಷಣೆಗಳ ಮೂಲಕ ಪರಿಸರ ಜಾಗೃತಿ ಮೂಡಿಸಲಿದ್ದಾರೆ. ಶತಮಾನಗಳ ಹಿಂದೆ ನಿರ್ಮಾಣವಾಗಿರುವ ಐತಿಹಾಸಿಕ ತಾಣಗಳನ್ನು ಉಳಿಸಿ-ಬೆಳೆಸಿ ಎನ್ನುವ ಕೂಗು ಮೊಳಗಿಸಲಿದ್ದಾರೆ.

    ಆಧುನಿಕ ಭರಾಟೆಯಲ್ಲಿ ಕೇವಲ ಯಂತ್ರಗಳ ಮೇಲೆ ಅವಲಂಬಿತರಾಗದೆ ಸಾಧ್ಯವಾದಷ್ಟು ಬೈಸಿಕಲ್ ಬಳಸಬೇಕು ಎಂದು ಜನರಲ್ಲಿ ತಿಳಿವಳಿಕೆ ಮೂಡಿಸಲು ಈ ಅಭಿಯಾನ ನಡೆಯುತ್ತಿರುವುದು ಸಂತಸದ ತಂದಿದೆ.

    45ಕ್ಕೂ ಜನರು ಭಾಗಿ
    ಬಾಗಲಕೋಟೆ ಬೈಸಿಕಲ್ ಕ್ಲಬ್‌ನಲ್ಲಿ 15ಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಪ್ರತಿ ದಿನ 40 ಕಿ.ಮೀ. ಸಂಚರಿಸಿ ಜಾಗೃತಿ ಮೂಡಿಸುತ್ತಾರೆ. ಜಾಗೃತಿಗೆ ಹೊಸ ಸ್ಪರ್ಶ ನೀಡುವ ಉದ್ದೇಶದಿಂದ ಕ್ಲಬ್ ಸದಸ್ಯರು ಹೆರಿಟೇಜ್ ರೈಡ್(ಪಾರಂಪರಿಕ ಸಂಚಾರ) ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನದ ಬಗ್ಗೆ ತಿಳಿಸಿದಾಗ ವಿಜಯಪುರ, ಬೀಳಗಿ, ಹುಬ್ಬಳ್ಳಿ ಮೂಲದ 30 ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ಭಾಗವಹಿಸುತ್ತಿದ್ದಾರೆ. 18 ವಯಸ್ಸು ಮೇಲ್ಪಟ್ಟ 50 ವಯಸ್ಸು ಒಳಗಿನ ಬೈಸಿಕಲ್ ತುಳಿಯುವ ಸದೃಢರಿಗೆ ಮಾತ್ರ ಅವಕಾಶ ನೀಡಲಾಗಿದೆ. 45 ಕ್ಕೂ ಹೆಚ್ಚು ಜನರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಉತ್ತಮ ಆರೋಗ್ಯ, ಪರಿಸರ ಜಾಗೃತಿ ಹಾಗೂ ಐತಿಹಾಸಿಕ ತಾಣಗಳ ಉಳಿವಿಗಾಗಿ ಈ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಬೈಸಿಕಲ್ ಬಳಸಿ ಪರಿಸರ ಉಳಿಸಿ ಎನ್ನುವುದು ನಮ್ಮ ಧ್ಯೇಯ. ಪರಿಸರ ಜಾಗೃತಿಗಾಗಿ ಜಿಲ್ಲೆಯ ಬಾದಾಮಿ, ಪಟ್ಟದಕಲ್ಲು ಸೇರಿ ವಿವಿಧ ಪಾರಂಪರಿಕ ತಾಣಗಳ ಮೂಲಕ ಬೈಸಿಕಲ್ ಸಂಚಾರ ನಡೆಯಲಿದೆ.
    – ಸಿದ್ದಯ್ಯ ಹಿರೇಮಠ ಬಾಗಲಕೋಟೆ ಬೈಸಿಕಲ್ ಕ್ಲಬ್‌ನ ಸಂಚಾಲಕ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts