More

    ಗಡಿ ತಂಟೆಗೆ ಬಂದರೆ ಬೆಂಬಲ ವಾಪಸ್‌ಗೆ ಆಗ್ರಹ

    ಬಾಗಲಕೋಟೆ: ಬೆಳಗಾವಿ ಗಡಿ ವಿಚಾರ ಮುಗಿದು ಹೋದ ಅಧ್ಯಾಯ. ಇದೀಗ ಮತ್ತೆ ಗಡಿ ತಂಟೆ ತೆಗೆದು ವಾತಾವರಣ ಕೆಡಿಸುವ ಕೆಲಸ ಮಾಡಬೇಡಿ. ಇನ್ನೊಮ್ಮೆ ಗಡಿ ತಂಟೆಗೆ ಬಂದರೆ ನಿಮ್ಮ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವಂತೆ ಸೋನಿಯಾ ಗಾಂಧಿ ಅವರಿಗೆ ಒತ್ತಾಯಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಎಚ್ಚರಿಸಿದ್ದಾರೆ.

    ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಜನ ವರದಿಯನ್ನು ಎರಡು ನಾಡಿನವರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಯಾರಿಗೂ ತಕರಾರು ಇಲ್ಲ. ಇದೀಗ ಸುಮ್ಮನೆ ರಾಜಕೀಯ ಲಾಭಕ್ಕಾಗಿ ಬೆಳಗಾವಿ, ಕಾರವಾರ ನಮ್ಮದು ಎನ್ನುವ ತಂಟೆ ತೆಗೆಯುವ ಕೆಲಸ ಮಾಡುವುದು ಸರಿಯಲ್ಲ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಮೊದಲೇ ಬೆಳಗಾವಿ ಹೊತ್ತಿ ಉರಿಯುತ್ತಿದೆ. ಈಗಲೂ ಅಲ್ಲಿ ಕೆಲ ಪ್ರದೇಶಗಳಲ್ಲಿ ಕನ್ನಡಿಗರ ಪರಿಸ್ಥಿತಿ ಗಂಭೀರವಾಗಿದೆ. ಇಂಥದ್ದರಲ್ಲಿ ನೀವು ಮತ್ತೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ಇನ್ನೊಮ್ಮೆ ಗಡಿ ಕ್ಯಾತೆ ತೆಗೆದರೆ ನಿಮ್ಮ ಸರ್ಕಾರಕ್ಕೆ ಕೊಟ್ಟಿರುವ ಬೆಂಬಲ ವಾಪಸ್ ಪಡೆಯುವಂತೆ ಒತ್ತಾಯಿಸಲು ಹಿಂದೇಟು ಹಾಕಲ್ಲ. ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದರು.

    ಹೊನ್ನಳ್ಳಿ ಶಾಸಕ ರೇಣುಕಾಚಾರ್ಯ ಮಸೀದಿಯಲ್ಲಿ ಮದ್ದು ಗುಂಡುಗಳು ಇವೆ ಎಂದು ಅತ್ಯಂತ ಬೇಜವಾಬ್ದಾರಿಯಿಂದ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ. ಯಾವ ಮಸೀದಿಯಲ್ಲಿ ನೀವು ನೋಡಿದ್ದೀರಿ ಸ್ಪಷ್ಟಪಡಿಸಿ. ರಾಜ್ಯ ಮತ್ತು ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ರಾಜ್ಯ ಮತ್ತು ಕೇಂದ್ರ ಸಚಿವರ ಗಮನಕ್ಕೆ ತರಬೇಕಿತ್ತು. ಸಿಎಂ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಬಿಟ್ಟಿ ಪ್ರಚಾರ ಗಿಟ್ಟಿಸುವ ಹೇಳಿಕೆ ಸಲ್ಲದು ಎಂದರು.

    ಒಂದು ವಾರದ ಒಳಗಾಗಿ ನೀವು ಮಾಡಿರುವ ಆರೋಪವನ್ನು ಸಾಬೀತುಪಡಿಸಿ, ಇಲ್ಲವೆ ಸಾರ್ವಜನಿಕವಾಗಿ ಕ್ಷಮೆ ಕೋರಿ. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಬಾಗಲಕೋಟೆ ಕಾಂಗ್ರೆಸ್ ವತಿಯಿಂದ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ ನಂಜಯ್ಯನಮಠ, ಶಾಸಕ ರೇಣುಕಾಚಾರ್ಯ ತನ್ನ ವರ್ತನೆಯಿಂದ ಸಾರ್ವಜನಿಕರ ಎದುರು ವಿದುಷಕನಂತಾಗಿದ್ದಾನೆ ಎಂದು ಗೇಲಿ ಮಾಡಿದರು.

    ಬಿಜೆಪಿ, ಕಾಂಗ್ರೆಸ್, ಜನತಾದಳ ಯಾವುದೇ ಪಕ್ಷ ಇದ್ದರೂ ಮಂದಿರ, ಮಸೀದಿ, ಚರ್ಚ್‌ಗಳ ಬಗ್ಗೆ ಬೇಜವಾಬ್ದಾರಿ ಹೇಳಿಕೆ ಕೊಡಬಾರದು. ಸಾರ್ವಜನಿಕರನ್ನು ನೆಮ್ಮದಿಯಿಂದ ಬದುಕಲು ಬಿಡಬೇಕು. ನೆಮ್ಮದಿ ಹಾಳು ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು ಎಂದರು.

    ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಾಣ
    ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಾಣದ ಕಾಮಗಾರಿಯನ್ನು ವರ್ಷದೊಳಗೆ ಮುಕ್ತಾಯಗೊಳಿಸಿ ಉದ್ಘಾಟನೆ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದ್ದಾರೆ. ಪಕ್ಷದ ಮುಖಂಡರು, ಸಾರ್ವಜನಿಕರು, ಕಾರ್ಯಕರ್ತರಿಂದ ದೇಣಿಗೆ ಸಂಗ್ರಹಿಸಿ ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.

    ಕಾರ್ಯಕರ್ತರು ನೊಂದಿದ್ದಾರೆ
    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನಾದರೂ ನೇಮಕ ಮಾಡಿ, ಬೇಗ ಮಾಡುವುದು ಒಳ್ಳೆಯದು. ಈಗಾಗಲೇ ಕಾರ್ಯಕರ್ತರು ನೊಂದಿದ್ದಾರೆ ಎಂದರು. ಸೋನಿಯಾ ಗಾಂಧಿ ಅವರು ಯಾರನ್ನು ಆಯ್ಕೆ ಮಾಡಿದರೂ ಅದಕ್ಕೆ ತಮ್ಮ ಒಲವು ಇರುತ್ತದೆ. ಯಾರು ಅಧ್ಯಕ್ಷರಾಗಿ ಬರುತ್ತಾರೋ ಅವರೇ ನಮ್ಮ ಅಧ್ಯಕ್ಷರು ಎಂದು ಪ್ರಶ್ನೆಯೊಂದಕ್ಕೆ ಹಾಸ್ಯಮಯವಾಗಿ ಉತ್ತರಿಸಿದರು.

    ಇನ್ನು ನಾಲ್ವರು ಕಾರ್ಯಾಧ್ಯಕ್ಷರ ನೇಮಕ ವಿಚಾರವಾಗಿ ಮಾಜಿ ಶಾಸಕರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು. ಸಂಘಟನೆ ಉದ್ದೇಶದಿಂದ ಒಳ್ಳೆಯದು. ಬರೀ ಸ್ಥಾನ ಅಲಂಕರಿಸಲು ಆಗಬಾರದು. ಆ ಪ್ರಕಾರ ಪಕ್ಷ ಸಂಘಟನೆ ಮಾಡಬೇಕಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts