More

    ವಿಮಾನ ನಿಲ್ದಾಣಗಳಿಗೆ ಕಿತ್ತೂರು ರಾಣಿ ಚನ್ನಮ್ಮ, ರಾಯಣ್ಣ ಹೆಸರಿಡಿ

    ಬಾಗಲಕೋಟೆ: ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಇಡಬೇಕು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಸಹ ಬರೆದಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಬಾದಾಮಿ ಕ್ಷೇತ್ರದ ಗಿಡ್ಡನಾಯಕನಾಳ ಗ್ರಾಮದಲ್ಲಿ ಮಂಗಳವಾರ ಕನಕದಾಸ ಜಯಂತಿ, ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾಗೂ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಸಂಗೊಳ್ಳಿ ರಾಯಣ್ಣ ನಮ್ಮೆಲ್ಲರಿಗೂ ಸ್ಫೂರ್ತಿ ಆಗಿದ್ದಾರೆ. ಅವರ ಹೆಸರು ಇಡಬೇಕು ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ ಕನಕದಾಸರ 500ನೇ ಜಯಂತಿ ಆಚರಿಸಿದ ಮೇಲೆ ಕುರುಬ ಸಮಾಜದಲ್ಲಿ ಜಾಗೃತಿ ಉಂಟಾಗುತ್ತಿದೆ. 500ನೇ ಕನಕ ಜಯಂತಿ ಬಳಿಕ ರಾಜ್ಯದಲ್ಲಿ ಕನಕ ಗುರುಪೀಠ ಶುರುವಾಯಿತು. ನಾಲ್ಕು ವಿಭಾಗಗಳಲ್ಲಿ ನಾಲ್ವರು ಸ್ವಾಮೀಜಿಗಳು ಇದ್ದಾರೆ. ಸಮಾಜ ಸಂಘಟನೆ, ಶಿಕ್ಷಣ, ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ ಎಂದರು. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಎಂ.ಬಿ.ಹಂಗರಗಿ, ಭೀಮಸೇನ ಚಿಮ್ಮನಕಟ್ಟಿ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.

    ಕೆನ್ನೆ ಹಿಡಿದು, ಕಾಲು ಮುಗಿದ ಯುವತಿ:
    ಗಿಡ್ಡನಾಯಕನಾಳ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಿಎಂ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರ ತಂಡವೊಂದು ಅವರನ್ನು ಪ್ರತ್ಯೇಕವಾಗಿ ಸನ್ಮಾನಿಸಿತು. ಯುವತಿಯೊಬ್ಬಳು ಸಿದ್ದರಾಮಯ್ಯ ಅವರಿಗೆ ಪೇಠ ತೊಡಿಸಿ ಅವರ ಕೆನ್ನೆ ಮುಟ್ಟಿ ಕಾಲಿಗೆ ನಮಸ್ಕರಿಸಿ ಅಭಿಮಾನ ಮೆರೆದಳು. ಯುವತಿಯ ಈ ಅಭಿಮಾನಕ್ಕೆ ಮಾಜಿ ಸಿಎಂ ನಗುನಗುತ್ತಲೇ ಫೋಟೋ ತೆಗೆಸಿಕೊಂಡರು.

    ಹೌದ್ದೊ ಹುಲಿಯಾ ಪ್ರತಿಧ್ವನಿ
    ಗ್ರಾಮಕ್ಕೆ ಸಿದ್ದರಾಮಯ್ಯ ಬರುತ್ತಿದ್ದಂತೆ ಯುವಕರ ಗುಂಪು ಹೌದ್ದೊ ಹುಲಿಯಾ ಎಂದು ಘೋಷಣೆ ಕೂಗಿತು. ಸಿದ್ದರಾಮಯ್ಯ ಹೋದ ಕಡೆಗೆಲ್ಲ ಆ ಯುವಕರು ಅವರ ಎದುರು ಕುಣಿದು ಕುಪ್ಪಳಿಸುತ್ತ ಹೌದ್ದೊ ಹುಲಿಯಾ ಎನ್ನುತ್ತ ಸಾಗುತ್ತಿದ್ದರು.

    ಸರ್ಕಾರದಲ್ಲಿ ದುಡ್ಡಿಲ್ಲ ನಾನೇನು ಮಾಡಲಿ
    ಸಿದ್ದರಾಮಯ್ಯ ವಾಸ್ತವ್ಯ ಮಾಡಿದ್ದ ಬಾದಾಮಿ ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲು ಅನೇಕ ಜನರು ಬಂದಿದ್ದರು. ಕೆಲವರು ತಮ್ಮ ಗ್ರಾಮದ ಅಭಿವೃದ್ಧಿಗೆ ಆ ಕೆಲಸ, ಈ ಕೆಲಸ ಆಗಬೇಕು ಎಂದಾಗ ಸರ್ಕಾರದ ಬಳಿ ದುಡ್ಡಿಲ್ಲ. ನಾನೇನು ಮಾಡಲಿ. ಬಜೆಟ್ ಆಗಲಿ ನೋಡೋಣ ಎನ್ನುತ್ತಿದ್ದರು. ಒಂದು ಗುಂಪು ಮತ್ತೆ ಮತ್ತೆ ಕೆಲಸ ಮಾಡಿಸಿ ಎಂದಾಗ ಗರಂ ಆದ ಸಿದ್ದರಾಮಯ್ಯ ಏ… ನಾ ಹೇಳಿದ್ದೇನು? ಸರ್ಕಾರದ ಕಡೆಗೆ ದುಡ್ಡೆ ಇಲ್ಲಂದ್ರೆ ಏನು ಹೇಳಲಿ. ನಡೀರಿ ನಡೀರಿ ಎಂದು ಮುಂದಕ್ಕೆ ಸಾಗಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts