More

    ಹುನಗುಂದದಲ್ಲಿ ಕೈ-ಕಮಲ ಕದನ ತಾರಕಕ್ಕೆ

    ಬಾಗಲಕೋಟೆ: ಪ್ರತಿಷ್ಠಿತ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆ ತಾರಕಕ್ಕೇರಿದೆ. ಅದರಲ್ಲೂ ಹುನಗುಂದ ಪಿಕೆಪಿಎಸ್ ಚುನಾವಣೆ ಕೈ-ಕಮಲ ಪಕ್ಷಗಳ ಪ್ರತಿಷ್ಠೆ ಮುಗಿಲು ಮುಟ್ಟಿದೆ.

    ಇದೀಗ ಹುನಗುಂದ ಪಿಕೆಪಿಎಸ್ ಕ್ಷೇತ್ರದ ಮತಾಧಿಕಾರದ ಡೆಲಿಗೇಷನ್ ಪವರ್ ಬಗ್ಗೆ ಕೈ-ಕಮಲ ಪಕ್ಷಗಳ ಕದನ ಜೋರಾಗಿದೆ. ಗುರುವಾರ ರಾತ್ರಿ ಬಾಗಲಕೋಟೆ ನಗರದ ಬ್ಯಾಂಕ್ ಪ್ರಧಾನ ಕಚೇರಿಗೆ ಬಿಜೆಪಿ ಅಭ್ಯರ್ಥಿ ವೀರೇಶ ಉಂಡೋಡಿ ಅವರು ತಮ್ಮ ಬೆಂಬಲಿಗರ ಜತೆ ಆಗಮಿಸಿ ತಕರಾರು ತೆಗೆದರು.

    ಈ ವೇಳೆ ಬೆಂಬಲಿಗರು ಹಾಗೂ ಡಿಸಿಸಿ ಬ್ಯಾಂಕ್ ಅಧಿಕಾರಿ ಮಧ್ಯೆ ನಡೆದ ವಾಗ್ವಾದ ಬ್ಯಾಂಕ್ ಹೊರಗಡೆ ಪ್ರತಿಧ್ವನಿಸಿತು.
    ಹುನಗುಂದ ತಾಲೂಕಿನ ಘಟ್ಟಿಗನೂರು ಮತ್ತು ಸೂಳೆಬಾವಿ ಪಿಕೆಪಿಎಸ್ ಮತಾಧಿಕಾರದ ಡೆಲಿಗೇಷನ್ ಪವರ್ ಬಗ್ಗೆ ಗುರುವಾರ ಮರು ಸಭೆ ನಡೆಸಿರುವುದು ಕಾನೂನು ಬಾಹಿರ ಎನ್ನುವುದು ಅವರ ವಾದವಾಗಿತ್ತು.

    ವಾದ, ಪ್ರತಿವಾದ ಜೋರಾಗಿದ್ದರಿಂದ ಸ್ಥಳಕ್ಕೆ ಡಿವೈಎಸ್ಪಿ ನಂದರೆಡ್ಡಿ, ಸಿಪಿಐ ಪಟ್ಟಣಶೆಟ್ಟಿ ಸೇರಿ ಅನೇಕ ಸಿಬ್ಬಂದಿ ಬ್ಯಾಂಕ್‌ಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂದಿತು.

    ಇದಕ್ಕೂ ಮೊದಲು ಬ್ಯಾಂಕ್‌ಗೆ ಹಿಂದಿನ ನಿರ್ದೇಶಕ ಹಾಗೂ ಹಾಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ ಸಹ ಬ್ಯಾಂಕ್‌ಗೆ ಆಗಮಿಸಿದ್ದರು. ಈ ವೇಳೆಯೂ ಮಾತಿನ ಯುದ್ಧ ನಡೆದಿತ್ತು ಎಂದು ಹೇಳಲಾಗುತ್ತಿದೆ. ಬ್ಯಾಂಕ್ ಚುನಾವಣೆ ಒಂದು ರೀತಿಯಾಗಿದ್ದರೆ ಹುನಗುಂದ ಕ್ಷೇತ್ರದ್ದು ಮತ್ತೊಂದು ರೀತಿ ಆಗಿದೆ ಎನ್ನುವ ಮಾತುಗಳು ನಿಜವಾಗುತ್ತಿವೆ.

    ಏನಿದು ವಿವಾದ ?
    ಹುನಗುಂದ ತಾಲೂಕು ಪಿಕೆಪಿಎಸ್ ಕ್ಷೇತ್ರದಲ್ಲಿ ಒಟ್ಟು 26 ಮತಗಳು ಇದ್ದು, ಇದರಲ್ಲಿ 13 ಕಾಂಗ್ರೆಸ್ ಮತ್ತು 13 ಬಿಜೆಪಿ ಬೆಂಬಲಿತರು ಇದ್ದಾರೆ ಎಂದು ಹೇಳಲಾಗುತ್ತಿತ್ತು. ಏತನ್ಮಧ್ಯೆ ತಾಲೂಕಿನ ಘಟ್ಟಿಗನೂರು ಮತ್ತು ಸೂಳೆಬಾವಿ ಪಿಕೆಪಿಎಸ್‌ಗಳ ಮತಾಧಿಕಾರ ಡೆಲಿಗೇಷನ್ ಪವರ್ ಕೊಡುವ ವೇಳೆ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಕಾಶಪ್ಪನವರ ಆರೋಪಿಸಿದ್ದರು.

    ಪಿಕೆಪಿಎಸ್‌ಗಳಿಗೆ ರಾತ್ರೋ ರಾತ್ರಿ ಸಿಇಒ ನೇಮಿಸಿ, ಮೇಲ್ವಿಚಾರಕರನ್ನು ಬದಲಿಸಲಾಗಿತ್ತು. ಡಿಸಿಸಿ ಬ್ಯಾಂಕ್ ನಿಯಮಾವಳಿ ಉಲ್ಲಂಘನೆ ಎಂದು ಕಾಶಪ್ಪನವರ ಬೆಂಬಲಿತರು ನ್ಯಾಯಾಲಯ ಮೊರೆ ಹೋಗಿದ್ದರು. ಕೋರ್ಟ್ ಮರುಸಭೆ ನಡೆಸಲು ನಿರ್ದೇಶಿಸಿತ್ತು. ಅದರಂತೆ ಇಂದು ಬೇರೆ ಮೇಲ್ವಿಚಾರಕರ ಸಮ್ಮುಖದಲ್ಲಿ ಮತಾಧಿಕಾರ ಡೆಲಿಗೇಷನ್ ಪವರ್ ಸಭೆ ನಡೆಸಿದ್ದು, ಈ ಎರಡು ವೋಟ್‌ಗಳು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಇದ್ದವು ಎನ್ನಲಾಗುತ್ತಿದೆ.
    ಇದೇ ವಿಚಾರವಾಗಿ ವಿಜಯಾನಂದ ಕಾಶಪ್ಪನವರ ಗುರುವಾರ ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿ, ಡಿಸಿಎಂ ಗೋವಿಂದ ಕಾರಜೋಳ ಹಾಗೂ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ವಿರುದ್ಧ ಆರೋಪಗಳ ಸುರಿಮಳೆಗೈದರು. ಪೊಲೀಸರ ಕಡೆಗೆ ಬೊಟ್ಟು ತೋರಿಸಿದ್ದರು. ಇದೀಗ ತಮ್ಮ ಗೆಲುವು ಖಚಿತ ಎಂದು ಸಾರಿದ್ದರು.

    ರಾತ್ರಿ ಡಿಸಿಸಿ ಬ್ಯಾಂಕ್‌ಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ವೀರೇಶ ಉಂಡೋಡಿ ಹಾಗೂ ಬೆಂಬಲಿಗರು ಮರುಸಭೆ ಬಗ್ಗೆ ತಕರಾರು ತೆಗೆದರು. ಮರುಸಭೆ ಕಾನೂನು ಬಾಹಿರವಾಗಿದೆ. ಪಿಕೆಪಿಎಸ್‌ನಲ್ಲಿ ಸಭೆಯೂ ನಡೆದಿಲ್ಲ. ಅಲ್ಲದೆ, ಸೂಳೆಬಾವಿ ಪಿಕೆಪಿಎಸ್ ಅಧಿಕಾರಾವಧಿ ಮುಗಿದಿದ್ದು, ಆಡಳಿತಾಧಿಕಾರಿ ನೇಮಕ ಆಗಿದೆ. ಇದರ ಜತೆಗೆ ಕಾರ್ಯದರ್ಶಿಗಳನ್ನು ಬಿಟ್ಟು ಸಭೆ ನಡೆಸಿದ್ದಾರೆ. ಅವರು ಸಭೆ ನಡೆಸಿದ್ದೆಲ್ಲಿ ಅಂತ ಗೊತ್ತಿಲ್ಲ. ಹೀಗಾಗಿ ಮರುಸಭೆಯಲ್ಲಿ ತೆಗೆದುಕೊಂಡಿರುವ ಮತಾಧಿಕಾರದ ಡೆಲಿಗೇಷನ್ ಪವರ್ ತಡೆದು, ಮೊದಲು ಇದ್ದವರಿಗೆ ಕೊಡಬೇಕು. ಮರುಸಭೆ ನಡೆಸಿದರೆ ಕಾರ್ಯದರ್ಶಿಗಳ ಸಮ್ಮುಖದಲ್ಲಿ ನಡೆಯಬೇಕು ಎಂದು ಆಗ್ರಹಿಸಿದರು.

    ಈ ವಿಚಾರ ಕುರಿತು ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಜತೆಗೆ ಮಾತುಕತೆ ನಡೆದಿದ್ದು, ರಾತ್ರಿ ಒಂಬತ್ತು ಗಂಟೆಯವರೆಗೂ ಚರ್ಚೆ ಮುಂದುವರಿದಿತ್ತು. ಯಾವುದೂ ಇತ್ಯರ್ಥವಾಗಿರಲಿಲ್ಲ.

    ಮತ್ತೊಂದೆಡೆ ಪೊಲೀಸರು ಸಹ ಕಾನೂನು ಬದ್ಧವಾಗಿ ಏನು ಮಾಡಬೇಕೋ ಅದನ್ನು ಮಾಡಿ. ಸುಮ್ಮನೆ ಕಾನೂನಿಗೆ ಧಕ್ಕೆಯಾಗುವಂತೆ ಮಾಡಬಾರದು ಎಂದು ಡಿಸಿಸಿ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು. ಹುನಗುಂದ ಪಿಕೆಪಿಎಸ್ ಕ್ಷೇತ್ರದ ಚುನಾವಣೆ ಪ್ರತಿಷ್ಠೆ ಮುಗಿಲು ಮುಟ್ಟಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ನಾನಾ… ನೀನಾ… ಎನ್ನುವ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಇದರಿಂದ ಹುನಗುಂದ ಕ್ಷೇತ್ರದ ಚುನಾವಣೆ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಿಸುತ್ತಿದೆ.

    ಹುನಗುಂದ ತಾಲೂಕಿನ ಘಟ್ಟಿಗನೂರು ಮತ್ತು ಸೂಳೆಬಾವಿ ಪಿಕೆಪಿಎಸ್‌ನ ಮರುಸಭೆ ನಡೆಸಿದ್ದು ಕಾನೂನುಬಾಹಿರ. ಕಾರ್ಯದರ್ಶಿ ಇಲ್ಲದೆ ಸಭೆ ನಡೆಸಿದ್ದೇಗೆ ? ಮರುಸಭೆ ಎಲ್ಲಿ ಮಾಡಿದ್ದಾರೆ ? ಯಾವುದೇ ಸಭೆ ನಡೆದರೂ ಅಲ್ಲಿ ಕಾರ್ಯದರ್ಶಿಗಳು ಇರಬೇಕು. ಕಾರ್ಯದರ್ಶಿಗಳು ಇಲ್ಲಿಯೇ ಇದ್ದಾರೆ ನೋಡಿ. ಮರುಸಭೆ ನಡೆಸಿದರೆ ಕಾರ್ಯದರ್ಶಿಗಳ ಸಮ್ಮುಖದಲ್ಲಿ ನಡೆಯಬೇಕು. ಅಕ್ರಮವಾಗಿ ಠರಾವು ಮಾಡಿದ್ದನ್ನು ರದ್ದುಪಡಿಸಬೇಕು.
    ವೀರೇಶ ಉಂಡೋಡಿ, ಹುನಗುಂದ ಪಿಕೆಪಿಎಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts