More

    ಬಾದಾಮಿ ಕ್ಷೇತ್ರಕ್ಕೆ ಹಣ ಕೊಟ್ಟಿದ್ದು ನಾನು

    ಬಾಗಲಕೋಟೆ: ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ 1200 ಕೋಟಿ ರೂ. ಯೋಜನೆ ತಂದಿದ್ದು ನಾನು ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಶುದ್ಧ ಸುಳ್ಳು. ಕಡತ ತೆಗೆದು ನೋಡಿ. ಇಂದು ನಡೆಯುತ್ತಿರುವ ಕೆಲಸಗಳು ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ನಾನು ನೀಡಿದ ಅನುದಾನದಿಂದ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

    ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಬಾದಾಮಿ ಕ್ಷೇತ್ರಕ್ಕೆ 1200 ಕೋಟಿ ರೂ. ಯೋಜನೆ ತಂದಿದ್ದೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೀವು ಕಡತ ತೆಗೆದು ನೋಡಿ. ಬಾದಾಮಿ ಕ್ಷೇತ್ರದಲ್ಲಿ ನಡೆಯುತ್ತಿರುವ ಯೋಜನೆಗಳು ಬಿಜೆಪಿ ಸರ್ಕಾರದಲ್ಲಿ ಆಗಿಲ್ಲ. ನಾನು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾದ ಯೋಜನೆಗಳವು. ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ಹನುಮಂತ ಮಾವಿನಮರದ ಪರ ಪ್ರಚಾರ ಕೈಗೊಂಡ ವೇಳೆ ಹಳ್ಳಿಗಳ ಜನ ಮನವಿ ಮಾಡಿದ್ದರು. ಜನರ ಭಾವನೆಗಳಿಗೆ ಸ್ಪಂದಿಸಿ ಬಾದಾಮಿ ಕ್ಷೇತ್ರಕ್ಕೆ ಅನುದಾನ ನೀಡಿದ್ದೇನೆ ಎಂದು ತಿಳಿಸಿದರು.

    ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಡಿಯಲ್ಲಿ ನಾನು ಪಾಲುದಾರನಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸ್ವಾತಂತ್ರ್ಯ ಇರಲಿಲ್ಲ. ಹೀಗಾಗಿ ಯುಕೆಪಿ ವಿಚಾರದಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಒಂದು ಕಡೆ ಮಾಜಿ ಸಿದ್ದರಾಮಯ್ಯ ಒತ್ತಡವಿತ್ತು. ನೀರಾವರಿ ಬಗ್ಗೆ ಹಳೇ ಯೋಜನೆ ಮುಂದುವರಿಸಿ ಎಂದು ಒತ್ತಡ ಇತ್ತು. ಇನ್ನೊಂದು ಕಡೆ ಬಿಜೆಪಿಯವರು ರೈತರ ಸಾಲಮನ್ನಾ ಮಾಡಿ ಎಂದು ಆಗ್ರಹ ಮಾಡುತ್ತಿದ್ದರು. ಮೈತ್ರಿ ಸರ್ಕಾರದಲ್ಲಿ ನಾನು ಕ್ಲಾರ್ಕ್ ರೀತಿ ಆಗಿದ್ದೆ. ಬಹಳಷ್ಟು ಕಷ್ಟ ಕೊಟ್ಟರು ಎಂದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ಗಣರಾಜ್ಯೋತ್ಸವ ದಿನ ನಡೆದ ಘಟನೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಇತಿಹಾಸದಲ್ಲೇ ಈ ಘಟನೆ ಕಪ್ಪು ಚುಕ್ಕೆಯಾಗಿದೆ. ಅಂತಹ ವಾತಾವರಣ ನಿರ್ಮಾಣವಾಗಬಾರದಿತ್ತು. ಕೇಂದ್ರ ಸರ್ಕಾರ ಹಠಮಾರಿ ಧೋರಣೆ ತೋರದೆ ರೈತರನ್ನು ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ. ಒಟ್ಟಾಗಿ ತೀರ್ಮಾನ ಬರಲಿ. ಘಟನೆ ಬಗ್ಗೆ ಕಾರಣವೇನು ಎನ್ನುವುದನ್ನು ಕಂಡು ಹಿಡಿಯಬೇಕು. ಅವರದ್ದೇ ಗುಪ್ತ ಇಲಾಖೆ ಇದೆ. ಮನ್ ಕಿ ಬಾತ್ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾವನೆ ವ್ಯಕ್ತಪಡಿಸುತ್ತಾರೆ. ಆದರೆ, ಇಂತಹ ಗಲಾಟೆ ಬಗ್ಗೆ ಹೇಳೋದಿಲ್ಲ. ಈ ಬಗ್ಗೆ ಎಂದೂ ಚರ್ಚೆಯಾಗುತ್ತಿಲ್ಲ. ರೈತರ ಬದುಕಿನ ಜತೆ ಚೆಲ್ಲಾಟ ಆಡಬಾರದು ಎಂದ ಅವರು, ಈ ಹಿಂದೆಯೇ ನಮ್ಮ ಸರ್ಕಾರವಿದ್ದಾಗ ಕಾಂಪಿಟ್ ವಿತ್ ಚೀನಾ ಯೋಜನೆ ಮಾಡಿದ್ದೆ. ಇದೀಗ ನರೇಂದ್ರ ಮೋದಿ ಆತ್ಮನಿರ್ಭರ ಅಂತ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

    ನಗರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿಯೂ ಕಾಂಗ್ರೆಸ್, ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ನೀರಾವರಿ ಯೋಜನೆಗಳಿಗೆ ಎರಡು ರಾಷ್ಟ್ರೀಯ ಪಕ್ಷಗಳು ಯಾವ ಕೊಡುಗೆ ನೀಡಿಲ್ಲ. ಕೃ.ಮೇ.ಯೋಜನೆಗೆ ದೇವೇಗೌಡರು ಪ್ರಧಾನಿ, ಮುಖ್ಯಮಂತ್ರಿ ಇದ್ದಾಗ ಕೊಡುಗೆ ನೀಡಿದ್ದಾರೆ. 15 ರಿಂದ 20 ಸಾವಿರ ಕೋಟಿ ರೂ. ಬಂದಿದೆ. ಆದರೂ ಯೋಜನೆ ಪೂರ್ಣಗೊಂಡಿಲ್ಲ. ನಮ್ಮ ಪಾಲಿನ ನೀರು ಪೂರ್ಣ ಬಳಕೆ ಮಾಡುವಲ್ಲಿ ವಿಫಲವಾಗಿದ್ದೇವೆ. ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ರೈತರು, ಕಾರ್ಮಿಕರು, ನೀರಾವರಿ ಯೋಜನೆಗಳ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು.



    ಬಾದಾಮಿ ಕ್ಷೇತ್ರಕ್ಕೆ ಹಣ ಕೊಟ್ಟಿದ್ದು ನಾನು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts