More

    ಇ-ಸಮೀಕ್ಷೆಗೆ ಸೂಕ್ತ ಸಂಭಾವನೆ ನೀಡಿ

    ಬಾಗಲಕೋಟೆ: ಆಶಾ ಕಾರ್ಯಕರ್ತೆಯರಿಗೆ ಇ-ಸಮೀಕ್ಷೆಗೆ ಸೂಕ್ತ ಸಂಭಾವನೆ ನಿಗದಿ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

    ನವನಗರದ ಎಲ್‌ಐಸಿ ವೃತ್ತದಿಂದ ಗುರುವಾರ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ಪೊಲೀಸ್ ಪ್ಯಾಲೇಸ್, ಬಸ್ ನಿಲ್ದಾಣ ರಸ್ತೆ ಮೂಲಕ ಜಿಲ್ಲಾ ಆಡಳಿತ ಭವನ ತಲುಪಿ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು. ಜಿಪಂ ಸಿಇಒ ಟಿ.ಭೂಬಾಲನ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

    ಸಂಘನೆಯ ಜಿಲ್ಲಾ ಕಾರ್ಯದರ್ಶಿ ಅಂಜನಾ ಕುಂಬಾರ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಇ-ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಆದರೆ, ಅವರ ಸಮಸ್ಯೆ ಆಲಿಸಿಲ್ಲ. ಮೊಬೈಲ್, ಟ್ಯಾಬ್ ಜತೆ ಡೇಟಾ ಒದಗಿಸಿ ಸಮೀಕ್ಷೆ ನಡೆಸುವಂತೆ ಮಾಡಬೇಕು. ಆಶಾ ಕಾರ್ಯಕರ್ತೆಯರಲ್ಲಿ ಯಾರಿಗೆ ಮೊಬೈಲ್, ಟ್ಯಾಬ್ ಬಳಸಲು ಆಗುವುದಿಲ್ಲ ಅಂತಹವರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು. ಒತ್ತಡ ಮಾಡದೆ ಅಗತ್ಯವಿರುವಷ್ಟು ಸಮಯ ನೀಡಿ, ಇ-ಸಮೀಕ್ಷೆ ನಡೆಸುವಂತೆ ತಿಳಿಸಬೇಕು. ಆರ್ಥಿಕ ಮಾಹಿತಿಯನ್ನು ಇ ಸಮೀಕ್ಷೆಯಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

    ಆಶಾಗಳ ಬಳಿ ಮೊಬೈಲ್ ಇಲ್ಲವೆಂದರೆ ಹೊಸದು ಖರೀದಿ ಮಾಡಿಕೊಂಡು ಸಮೀಕ್ಷೆ ಮಾಡಬೇಕು ಎನ್ನುತ್ತಿದ್ದಾರೆ. ಮೊಬೈಲ್‌ದಲ್ಲಿ ಇ- ಸಮೀಕ್ಷೆ ಮಾಡಲು ಆಗುವುದಿಲ್ಲವೆಂದರೆ ಮನೆಯಲ್ಲಿ ಮಕ್ಕಳಿಂದ ಮತ್ತು ಪತಿಯಿಂದ ಮಾಡಿಸಬೇಕು. ಇಲ್ಲವಾದರೆ ಕೆಲಸ ಬಿಡಿ ಎಂದು ಗದರಿಸುತ್ತಿದ್ದಾರೆ. ಮೊಬೈಲ್ ಖರೀದಿಸಲು ಸಾವಿರಾರು ರೂಪಾಯಿ ಬೇಕು. ಅದು ಅಸಾಧ್ಯ. ಹೀಗಾಗಿ ಆರೋಗ್ಯ ಇಲಾಖೆ ಕೆಲಸಕ್ಕೆ ಇಲಾಖೆಯಿಂದ ಸೂಕ್ತ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದರು.

    ಸಂಘಟನೆ ಮುಖಂಡ ಮಲ್ಲಿಕಾರ್ಜುನ ಎಚ್.ಟಿ., ಶೈನಾ ಜಂಗಿ, ಶೀಲಾ ಮೆಳ್ಳಿಗೇರಿ, ನೀಲಮ್ಮ ವಿಭೂತಿ, ಸುರೇಖಾ ಕಾಳೆ, ಸುನಿತಾ ಜಂಬಗಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.



    ಇ-ಸಮೀಕ್ಷೆಗೆ ಸೂಕ್ತ ಸಂಭಾವನೆ ನೀಡಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts