More

    ಬಾಗಲಕೋಟೆ ಏಡ್ಸ್ ಮುಕ್ತ ಜಿಲ್ಲೆಯನ್ನಾಗಿಸಿ

    ಬಾಗಲಕೋಟೆ: ಜಿಲ್ಲೆಯಲ್ಲಿ ಏಡ್ಸ್ ಸೋಂಕಿತರ ಪ್ರಮಾಣ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಸೋಂಕಿನ ಪ್ರಮಾಣವನ್ನು ಸೊನ್ನೆಗೆ ತರಲು ಇನ್ನು ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ಜಿ.ಪಂ ಸಿಇಒ ಟಿ.ಭೂಬಾಲನ್ ಹೇಳಿದರು.

    ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಈ ವರ್ಷ ಎಚ್.ಐ.ವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿ ಹಂಚಿಕೆ ಎಂಬ ಘೋಷ ವ್ಯಾಕ್ಯದೊಂದಿಗೆ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ ಎಂದರು.

    ಜಿಲ್ಲೆಯಲ್ಲಿ ಎಚ್.ಐ.ವಿ ಸೋಂಕಿತ ಪ್ರಮಾಣ ಕಡಿಮೆ ಮಾಡಲು ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು ಶ್ರಮಿಸುತ್ತಿರುವ ಪರಿಣಾಮ ಬಾಗಲಕೋಟೆ ಜಿಲ್ಲೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿಕೆ ಕಂಡಿರುವುದು ಉತ್ತಮ ಬೆಳವಣಿಗೆ. ಇದು ಸೊನ್ನೆಗೆ ತರುವವರೆಗೂ ನಿರಂತರ ಪರಿಶ್ರಮ ಅಗತ್ಯವಾಗಿದೆ. ಜಿಲ್ಲೆಯ ಡಿಎಪಿಸಿಯು ಹಾಗೂ ಜಮಖಂಡಿಯ ಐಸಿಟಿಸಿ ವಿಭಾಗವು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕೆ ರಾಜ್ಯ ಮಟ್ಟದ ಸನ್ಮಾನಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಮಾತನಾಡಿ, ಏಡ್ಸ್ ರೋಗ ತಡೆಗಟ್ಟುವಲ್ಲಿ ಎಲ್ಲ ಪಾತ್ರ ಮಹತ್ವವಾಗಿದೆ. ಸೋಂಕಿನ ತ್ವರಿತ ಪತ್ತೆಯ ಮೂಲಕ ರೋಗ ನಿಯಂತ್ರಿಸಲು ಸಾಧ್ಯವಾಗುತ್ತದೆ. ಅಲ್ಲದೆ ಸಾರ್ವಜನಿಕರಲ್ಲಿ ಈ ರೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಅಂದಾಗ ಮಾತ್ರ ಈ ಮಾರಕ ರೋಗವನ್ನು ತಡೆಗಟ್ಟಲು ಸಾಧ್ಯವೆಂದು ಎಂದು ಅಭಿಪ್ರಾಯಪಟ್ಟರು.

    ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ 2000 ಸಾವಿರ ಜನರನ್ನು ಪರೀಕ್ಷೆ ಮಾಡಿದಾಗ ಸಾವಿರದಷ್ಟು ಕೇಸ್‌ಗಳು ಪತ್ತೆಯಾಗುತ್ತಿದ್ದವು. ಈಗ ಆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಯಾವುದೇ ರೀತಿಯ ಕಳಂಕ, ತಾರತಮ್ಯವಿಲ್ಲದೇ ಎಚ್.ಐ.ವಿ ಸೋಂಕು ತಗಲಿರುವ 4400 ಗರ್ಭಿಣಿಯರ ಹೆರಿಗೆ ಮಾಡಲಾಗಿದೆ. ಮಗುವಿಗೆ ಸೋಂಕು ತಗಲದ ರೀತಿಯಲ್ಲಿ ಜಾಗೃತಿ ವಹಿಸಲಾಗಿದೆ. ಇದಕ್ಕೆ ಸ್ಟಾಪ್ ನರ್ಸ, ಲ್ಯಾಬ್ ಟೆಕ್ನಿಷಿಯನ್ ಸಹಕಾರ ದೊಡ್ಡದಿದೆ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಬಿ.ಜಿ.ಹುಬ್ಬಳ್ಳಿ ಸೇರಿದಂತೆ ಆರೋಗ್ಯ ಇಲಾಖೆಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಹಿರಿಯ ಆಪ್ತ ಸಮಾಲೋಚಕ ಎಚ್.ಆರ್.ಮರ್ದಿ ಸ್ವಾಗತಿಸಿದರು. ಎ.ಜಿ.ನೀಲವಾಣಿ ನಿರೂಪಿಸಿದರು.

    ಏಡ್ಸ್ ತಡೆಗಟ್ಟುವಕೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ
    ಏಡ್ಸ್ ನಿಯಂತ್ರಣ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದವರನ್ನು ಸನ್ಮಾನಿಸಲಾಯಿತು. ಎಚ್.ಐ.ವಿ ಸೋಂಕಿತರ ಶಸ ಚಿಕಿತ್ಸೆ ಮಾಡಿದ ಜಿಲ್ಲಾ ಆಸ್ಪತ್ರೆಯ ತಜ್ಞ ಡಾ.ಮಂಜುನಾಥ ಚಿಕರೆಡ್ಡಿ, ಕುಮಾರೇಶ್ವರ ಆಸ್ಪತ್ರೆ ರಕ್ತ ನಿಧಿ ಕೇಂದ್ರ, ಮುಧೋಳ ತಾಲೂಕಾ ಆಸ್ಪತ್ರೆಯ ಎ.ಆರ್.ಟಿ ಕೇಂದ್ರ, ಹುನಗುಂದ ತಾಲೂಕಾ ಆಸ್ಪತ್ರೆ ಐ.ಸಿ.ಟಿ.ಸಿ ಕೇಂದ್ರ, ಚೈತನ್ಯ ಮಹಿಳಾ ಸಂಘದ ಸಿಎಸ್‌ಸಿ ಕೇಂದ್ರ, ಬಾಗಲಕೋಟೆ ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯ, ರಬಕವಿ-ಬನಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ನವನಗರದ ಪ್ರಥಮ ದರ್ಜೆ ಮಹಾವಿದ್ಯಾಲಯದ ಅತ್ಯುತ್ತಮ ರೆಡ್ ರಿಬ್ಬನ್ ಕ್ಲಬ್, ಅತೀ ಹೆಚ್ಚು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ ಡಾ.ಕಾವ್ಯಾ ಸಿ.ಎನ್, ಶರಣಕುಮಾರ ಚಿಕ್ಕನರಗುಂದ, ಅಲ್ತಾಪ್ ಅತ್ತಾರ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಿದ ಚೈತನ್ಯ ಮಹಿಳಾ ಸಂಘ, ಸರ್ಚ ಸಂಸ್ಥೆ, ಭಾರತೀಯ ಶಿಕ್ಷಣ ಮಂಡಳಿಯವರನ್ನು ಸನ್ಮಾನಿಸಲಾಯಿತು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts