More

    ಗುರುಕುಲ ಶಿಕ್ಷಣ ಸಂಸ್ಥೆ ಆರಂಭ

    ಬಾದಾಮಿ: ಕಾರಣಿಕ ಯುಗಪುರುಷ ಹಾನಗಲ್ಲ ಗುರು ಕುಮಾರ ಶಿವಯೋಗಿಗಳು ಸಮಾಜಕ್ಕೆ ಸಮರ್ಥ ಸ್ವಾಮಿಗಳನ್ನು ನೀಡಿರುವುದಷ್ಟೆಯಲ್ಲ ಈ ನಾಡಿಗೆ ಆಧ್ಯಾತ್ಮಿಕ ಉನ್ನತಿಯನ್ನು ನೀಡಿದ ಮಹಾ ತಪಸ್ವಿಗಳು ಎಂದು ಮದ್ವೀರಶೈವ ಶಿವಯೋಗಮಂದಿರ ಅಧ್ಯಕ್ಷ ಡಾ.ಸಂಗನಬಸವ ಸ್ವಾಮೀಜಿ ಹೇಳಿದರು.

    ಸಮೀಪದ ಸುಕ್ಷೇತ್ರ ಮದ್ವೀರಶೈವ ಶಿವಯೋಗಿಮಂದಿರದಲ್ಲಿ ಶನಿವಾರ ಜರುಗಿದ ಕಾರಣಿಕ ಯುಗ ಪುರುಷ ಹಾನಗಲ್ಲ ಗುರು ಕುಮಾರ ಶಿವಯೋಗಿಗಳ 90ನೇ ಪುಣ್ಯಸ್ಮರಣೋತ್ಸವ, 110ನೇ ಜಾತ್ರಾ ಮಹೋತ್ಸವ, ಅಧ್ಯಾತ್ಮ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕುಮಾರ ಶ್ರೀಗಳು ಶಿಕ್ಷಣ, ವಚನ ಸಾಹಿತ್ಯ, ಸಂಗೀತ, ಆಯುರ್ವೇದ ಪದ್ಧತಿ, ಸಂಶೋಧನೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವರಾಗಿದ್ದರು. 110 ವರ್ಷಗಳ ಹಿಂದೆ ಶಾಸೋಕ್ತವಾದ ವಿಭೂತಿಯನ್ನು ಸುಕ್ಷೇತ್ರ ಶಿವಯೋಗಮಂದಿರದಲ್ಲಿ ತಯಾರಿಸುವ ಕೇಂದ್ರವನ್ನು ಸ್ಥಾಪಿಸಿದರು. ಅಲ್ಲದೆ, ಇಲ್ಲಿ ಕಲಿತು ಧರ್ಮಗಳ ತುಲನಾತ್ಮಕ ಜ್ಞಾನವನ್ನು ಪಡೆದ ನೂರಾರು ಮಠಾಧಿಪತಿಗಳು ಇಂದು ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ಅಮೂಲ್ಯವಾದ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

    ಮುಂಬರುವ ವರ್ಷದಲ್ಲಿ ಶ್ರೀಗಳ ಚಿಂತನೆಯಂತೆ ಶಿವಯೋಗಮಂದಿರ ಸ್ಥಳದಲ್ಲಿ ಉಚಿತವಾಗಿ ಗುರುಕುಲ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಾಗುವುದು. ಬಡ ಮಕ್ಕಳಿಗೆ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದರು.

    ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಗುರು ಕುಮಾರೇಶ್ವರ ಶಿವಯೋಗಿಗಳ ಚಿಂತನೆಗಳು ಮತ್ತು ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಸನ್ಮಾರ್ಗ ಪಡೆಯೋಣ. ಯಾರಿಗೆ ಜೀವನದಲ್ಲಿ ಕಷ್ಟಗಳು ಬಂದಾಗ ಕುಮಾರ ಶ್ರೀಗಳ ಕರ್ತೃ ಗದ್ದುಗೆಗೆ ಆಗಮಿಸಿ ನಿಮ್ಮ ಮನಸ್ಸಿನಲ್ಲಿರುವ ಗೊಂದಲವನ್ನು ಸ್ಮರಣೆ ಮಾಡಿ ಖಂಡಿತವಾಗಿ ಪರಿಹಾರವಾಗುತ್ತದೆ. ಅಂತಹ ಶಕ್ತಿ ಈ ಕ್ಷೇತ್ರದಲ್ಲಿ ಇದೆ ಎಂದು ಹೇಳಿದರು.

    ಕಮತಗಿ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಹಾನಗಲ್ಲ ಕುಮಾರ ಶಿವಯೋಗಿಗಳ ಭಾವಚಿತ್ರದ ಲಘು ರಥೋತ್ಸವ ವೈಭವದಿಂದ ಜರುಗಿತು.

    ಸಂಸ್ಥೆ ಉಪಾಧ್ಯಕ್ಷ ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಶಿರಿಸಿ ಶಿವಲಿಂಗ ಸ್ವಾಮೀಜಿ, ಘೋಡಗೇರಿ ಕಾಶಿನಾಥ ಸ್ವಾಮೀಜಿ, ಪ್ರಭು ನೀಲಕಂಠ ಸ್ವಾಮೀಜಿ, ರೋಣದ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಕಾಶಿನಾಥ ಸ್ವಾಮೀಜಿ ಹಾಗೂ ವಟು ಸಾಧಕರು ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ಎ.ಸಿ. ಪಟ್ಟಣದ, ಎಂ.ಕೆ. ಪಟ್ಟಣಶೆಟ್ಟಿ, ಕುಮಾರಗೌಡ ಜನಾಲಿ, ಮಾಹಾಂತೇಶ ಮಮದಾಪುರ, ವಾಸುದೇವ ಸಾಲಿಮನಿ, ಡಾ.ಆರ್.ಸಿ. ಭಂಡಾರಿ, ಪಂಪಣ್ಣ ಕಾಚಟ್ಟಿ, ಇಷ್ಠಲಿಂಗ ಶಿರಸಿ, ಶರಣಪ್ಪಗೌಡ ಪಾಟೀಲ, ಮೃತ್ಯುಂಜಯ ಬಟಗಣ್ಣವರ ಹಾಗೂ ಸುತ್ತ ಮುತ್ತಲಿನ ಗ್ರಾಮದ ಎಲ್ಲ ಸದ್ಭಕ್ತರು ಭಾಗವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಜಿ.ಬಿ. ಶೀಲವಂತ ನಿರೂಪಿಸಿ, ವಂದಿಸಿದರು.

    ಅಂದು ಕುಮಾರ ಶಿವಯೋಗಿಗಳು ಮಾಡಿದ ಕೆಲಸಗಳಿಂದ ವೀರಶೈವ ಧರ್ಮಕ್ಕೆ ಭವ್ಯವಾದ ಇತಿಹಾಸ ದೊರೆತಂತಾಗಿದೆ. ಈ ನಾಡಿನ ಕಲ್ಯಾಣಕ್ಕಾಗಿ ಕುಮಾರ ಶಿವಯೋಗಿಗಳು ಬಹಳಷ್ಟು ಶ್ರಮಿಸಿದ್ದಾರೆ. ಅವರ ಜೀವನದ ಆದರ್ಶಗಳನ್ನು ಮತ್ತು ಅವರ ಸಿದ್ಧಾಂತಗಳನ್ನು ಎಲ್ಲರೂ ಅನುಸರಿಸಿಕೊಂಡು ಬದುಕಬೇಕು.
    ಡಾ.ಸಂಗನಬಸವ ಸ್ವಾಮೀಜಿ ಶಿವಯೋಗಮಂದಿರ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts