More

  ಅಂಕಣ, ಬದಲಾದ ಭಾರತ; ಬಾವಿಗೆ ಬಿದ್ದಿದೆ ಬೇಸಾಯ- ಬೇಕೀಗ ಮೇವು ವ್ಯವಸಾಯ

  ಪುಣ್ಯಕೋಟಿ ಕಥೆ ಎಂದೊಡನೆ ‘ಅದು ನನಗೆ ಗೊತ್ತು’ ಅಂತ ಆ ಅಜ್ಜಿ ಹೇಳಿತು. ‘ನಾನು ಚಿಕ್ಕ ಹುಡುಗಿಯಾಗಿದ್ದಾಗ ಪುಣ್ಯಕೋಟಿ ಹಾಡು ಹಾಡುತ್ತಿದ್ದೆ’ ಎಂಬುದು ಆ ಹಣ್ಣುಹಣ್ಣು ಮುದುಕಿ ಅಂಬೋಣ. ‘ಆದ್ರೂ, ನೀನು ಈ ಬಡಕಲು ಹಸುಕರುನಾ ಕಾಡಿಗೆ ಅಟ್ಟಿತಲ್ಲಾ’ ಎಂದರೆ ‘ನೀವು ಸಿಟಿಯವರು; ಕತೆ ಹೇಳಕ್ಕೆ, ಕಥೆ ಕೇಳುತ್ತೆ ಸರಿ. ನಾವು ಬದುಕು ಮಾಡಬೇಕು. ನಿಮಗೆ ಇವೆಲ್ಲ ಗೊತ್ತಾಗೊಲ್ಲ’ – ಇದು ಆಕೆ ಮಾತು.‘

  ‘ಇದು ಬಿರುಬೇಸಿಗೆ ಕಾಲ. ಕಾಡಿಗೆ ಹೋದ್ರೆ ಈ ಹಸು-ಕರು ಉಳಿಯುತ್ತಾ?’ ಅಂದಾಗ ಅಜ್ಜಿ ಹೇಳಿದ್ದು- ‘ಹುಲಿನೇ ತಿಂದು ಪುಣ್ಯ ಕಟ್ಟಿಕೊಳ್ಳಿ’! ಮತ್ತೆ ಹೇಳಿದ್ಳು: ‘ನಾನೇ ಸಾಕಿಬೆಳೆಸಿದ ಹಸು-ಕರು ಹೀಗೆ ಮೇವಿಲ್ಲದೆ ಹಟ್ಟಿಯಲ್ಲಿ ಹಸಿವಿನಿಂದ ಸಾಯುವುದನ್ನ ನಾನು ಕಣ್ಣಾರೆ ನೋಡಲಾರೆ. ಅವು ಕಾಡಿಗೆ ಹೋಗ್ಲಿ. ಅವು ಬದುಕಿದರೂ ಬಂದರೂ ಅವನಿಚ್ಛೆ; ಬದುಕಿ ಬರದೇ ಹೋದರೂ ಅವನಿಚ್ಛೆ’ ಎಂದು ಅಜ್ಜಿ ಆ ದೇವರ ನೆನೆದಳು ಕಣ್ಣೀರು ಹಾಕುತ್ತಾ.

  ಮೇವಿಲ್ಲದೆ ಬದುಕಿನಲ್ಲಿ ದನಕರುಗಳನ್ನು ಹೇಗೆ ಇಟ್ಟಿಕೊಳ್ಳಬೇಕು ಅಂತಾ ಪ್ರಶ್ನೆ ಹಾಕ್ತಾಳೆ ಅಜ್ಜಿ. ಇದು ಬನ್ನೇರುಘಟ್ಟ ಕಾಡಿನ ಬೆಂಗಳೂರಿನಿಂದ 20 ಕಿಲೋಮೀಟರ್ ದೂರದ ಹಳ್ಳಿಯ ಸ್ಥಿತಿ. ಇನ್ನು ಬರಗಾಲದ ಸ್ವರ್ಗವಾದ ಕರ್ನಾಟಕದಲ್ಲಿ ಜಾನುವಾರುಗಳು ಎಂಥ ಹಿಂಸೆ ಅನುಭವಿಸುತ್ತಿರುವ ನೀವೇ ಊಹಿಸಿ. ಈಗ ಬಿಸಿಲು ಚುರುಕಾಗುತ್ತಿದೆ. ಈಗ ನಾವು ಎಚ್ಚೆತ್ತುಕೊಳ್ಳುವ ಕಾಲ; ಸಿದ್ಧತೆ ಮಾಡಿಕೊಳ್ಳುವ ಕಾಲ.

  2019ರಲ್ಲಿ ಪಶುಗಣತಿಯು ದೇಶದಲ್ಲಿ ನಡೆಯಿತು. ದನಗಳ ಟಾಪ್-10 ಪಟ್ಟಿಯಲ್ಲಿ ರಾಜಸ್ತಾನ- ಮಹಾರಾಷ್ಟ್ರ ಇವೆ. ಎಮ್ಮೆಗಳ ಟಾಪ್- 10 ಪಟ್ಟಿಯಲ್ಲಿ ರಾಜಸ್ಥಾನ ಎರಡನೇ ಸ್ಥಾನ, ಗುಜರಾತ್ ಮೂರನೇ ಸ್ಥಾನ ಹಾಗೂ ಮಹಾರಾಷ್ಟ್ರ 7ನೇ ಸ್ಥಾನದಲ್ಲಿದೆ. ಕರ್ನಾಟಕ ನಾಪತ್ತೆ! ಇಲ್ಲಿ ಈಚಿನ ವರ್ಷಗಳಲ್ಲಿ ಪಶುಪಾಲನೆ ಅಧೋಗತಿಗೆ ಇಳಿದಿದೆ. ಕರ್ನಾಟಕದಲ್ಲಿ ಪಶು ಸಂತತಿ ಕ್ಷೀಣಿಸಿದೆ.

  2012ರ ಪಶು ಗಣತಿಯಲ್ಲಿ ದನಕರು ಎಮ್ಮೆಗಳ ಸಂಖ್ಯೆ ರಾಜ್ಯದಲ್ಲಿ 1.30 ಕೋಟಿ ಇತ್ತು. ಈಗ ಅದು 1.15 ಕೋಟಿ ಇಳಿದಿದೆ. ರಾಜ್ಯದಲ್ಲಿ ಬರಗಾಲ 18ವರ್ಷದಲ್ಲೇ 11 ವರ್ಷಗಳ ಕಾಲ ಕಾಡಿದೆ. ಇದು ನಮಗೆ ಮಾತ್ರ ಅಲ್ಲ, ರಾಜಸ್ಥಾನ -ಗುಜರಾತ್ -ಮಹಾರಾಷ್ಟ್ರಗಳಿಗೂ ಇತ್ತು ಈ ರಾಜ್ಯಗಳಲ್ಲಿ ಬರ ಇದ್ದರೂ ಗೋಸಂಪತ್ತು ಬೆಳೆದಿದೆ! ಇಲ್ಲಿ ಇಲ್ಲ.

  ಏಕೆಂದರೆ ರಾಜ್ಯದ ಗ್ರಾಮೀಣ ಪ್ರದೇಶ ಕ್ಷಯಿಸುತ್ತಿದೆ. ರಾಜ್ಯದ ಜಿಡಿಪಿಯಲ್ಲಿ ಪೈರಿನ ಪಾಲು ಕೇವಲ ಶೇ.6.92ರಷ್ಟಕ್ಕೆ ಕ್ಷೀಣವಾಗಿದೆ. ಜಿಡಿಪಿಯಲ್ಲಿ ಪಶುಪಾಲನೆ ಪ್ಲಸ್ ಪಾಲು ಶೇ. 3.19 ರಷ್ಟು ದೊಡ್ಡದಾಗಿದೆ. ಅದುವೇ ಗ್ರಾಮೀಣ ಭಾಗದಲ್ಲಿ ದೊಡ್ಡ ಆರ್ಥಿಕ ಶಕ್ತಿ ಆಗಿದೆ. ಹಸು ಇದೆ, ಮೇವಿಲ್ಲ. ಇದು ಸರ್ವಥಾ ಸರಿಯಲ್ಲ

  ದೇಶದ ಹಣೆಬರಹವೂ ಇದೇ. ನಮಗೆಂದು ಭಾರತ ಆಹಾರ ನಿಗಮ ಇದೆ. ಆದರೆ ದೇಶದಲ್ಲಿರುವ 30 ಕೋಟಿ ದನ-ಕರು ಎಮ್ಮೆಗಳಿಗೆ ಮೇವಿಗಾಗಿ ಯಾವ ಸುರಕ್ಷೆ ಇದೆ? ಭಾರತದ ಮೇವು ನಿಗಮ ಇದೆಯೇ? ಅದು ಬೇಕು ಎಂಬುದರ ಕಲ್ಪನೆ ಕೂಡ ನಮಗಿಲ್ಲ! ಇದು ದುರಂತ.ಒಣ ಹುಲ್ಲಿಗೆ ಶೇ. 40, ಹಸಿರು ಹುಲ್ಲಿಗೆ ಶೇ. 36 ಹಾಗೂ ಹಿಂಡಿಗೆ ಶೇ. 56ರಷ್ಟು ಕೊರತೆ ಇದೆ. ಉದಾರೀಕರಣ ಯುಗದಲ್ಲಿ ಪಶುಪಾಲನೆ ನಿಸ್ಸೀಮ ನಿರ್ಲಕ್ಷಕ್ಕೆ ತುತ್ತಾಗಿದೆ.

  90ರ ದಶಕದ ಆರಂಭದಲ್ಲಿ ದೇಶದಲ್ಲಿ 29 ಕೋಟಿ ದನಕರು- ಎಮ್ಮೆಗಳಿದ್ದವು. ಈಗ 30 ವರ್ಷಗಳ ನಂತರ ಕೂಡ ಈ ಸಂಖ್ಯೆ 30 ಕೋಟಿಯಲ್ಲಿ ಉಳಿದಿರುವುದು ಆಘಾತಕರ ಸಂಗತಿ. ಆಗ ನಮ್ಮ ಜನಸಂಖ್ಯೆ 80 ಕೋಟಿ ಇತ್ತು; ಈಗ 136 ಕೋಟಿ ಆಗಿದೆ. ಪಶುಪಾಲನೆ ಬಗ್ಗೆ ಎಂತಹ ನಿಸ್ಸೀಮ ನಿರ್ಲಕ್ಷ ಇದೆ ಎಂಬುದನ್ನು ನೋಡಿದಿರಾ?

  ಮೇವಿನ ಮಾತಿಗೆ ಬರೋಣ. ಈಗ ದೇಶದಲ್ಲಿ 19 ಕೋಟಿ ದನಗಳ ಪೈಕಿ ಹಾಲು ಕೊಡುವುದು ಕರುಹಾಕಿದ ಕಾಲದಲ್ಲಿ 5 ಕೋಟಿಗೂ ಕಡಮೆ.. ಅಂದರೆ ಇರುವ ಹಸುಗಳಲ್ಲಿ ಹಾಲು ಕೊಡುವುದು ಕಾಲುಭಾಗದಷ್ಟು ಮಾತ್ರ. ದೇಶದಲ್ಲಿರುವ 11 ಕೋಟಿ ಎಮ್ಮೆಗಳಲ್ಲಿ ಹಾಲು ಕೊಡುವುದು ಮೂರನೆ ಒಂದು ಭಾಗ ಮಾತ್ರ.

  ವರ್ಷದ ಉಳಿದ ಮೂರನೇ ಎರಡು ಭಾಗದಷ್ಟು ಎಮ್ಮೆಗಳು ಹಾಲು ಕೊಡದಿದ್ದರೂ ನೀವು ಮೇವು ಕೊಡಲೇಬೇಕು ಎನ್ನುತ್ತವೆ! ಈ ಪರಿಸ್ಥಿತಿಯನ್ನು ಹೇಗೆ ರೈತರು ನಿಭಾಯಿಸಬೇಕು? ಹಸು ಎಮ್ಮೆಗಳಿಗೆ 12 ತಿಂಗಳೂ ಮೇವು ಬೇಕು; ನಮಗೆ 12 ತಿಂಗಳೂ ಹಾಲು ಬೇಕು. ಸ್ಥಿತಿ ಇದು. ಮೇವು ಕೊಡೋದು ಹೇಗೆ? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

  ಮೇವಿಗೆ ಬರ ಬರಲು ಮಳೆ ಕೊರತೆ ಕಾರಣ. ರಾಜ್ಯದ 175 ತಾಲೂಕುಗಳಲ್ಲಿ 156 ತಾಲೂಕುಗಳು 2018ರಲ್ಲಿ ಬರಗಾಲಕ್ಕೆ ತುತ್ತಾಗಿದ್ದವು. 163 ತಾಲೂಕುಗಳಲ್ಲಿ ಗೋಶಾಲೆ ನಿರ್ವಿುಸಿ ಎಂದು ಕೊನೆಗೆ ನ್ಯಾಯಾಲಯ ಕಟ್ಟಪ್ಪಣೆ ಮಾಡುವಷ್ಟು ನಿಸ್ಸೀಮ ನಿರ್ಲಕ್ಷ್ಯ ನಮ್ಮಲ್ಲಿತ್ತು; ಉಗ್ರ ಸ್ಥಿತಿ ಉಂಟಾಗಿತ್ತು.

  ಬೇಸಿಗೆ ಬಂದಾಗ ಮೇವಿನ ಕೊರತೆ ಪಶುಗಳ ಸಂಕಟ ಬಯಲಿಗೆ ಬರುತ್ತದೆ. ಆದರೆ ಸಮಸ್ಯೆಗೆ ವರ್ಷವಿಡಿ ಕುಳಿತು ಪರಿಹಾರ ಕಂಡುಹಿಡಿಯಬೇಕು. ಏಕೆಂದರೆ ನಮ್ಮ ಕೃಷಿಯ ಸಮಸ್ಯೆ- ನೀರು. ಈ ಸಮಸ್ಯೆ ನೀಗಲು ಸರ್ಕಾರದಿಂದ ಸಾಧ್ಯವಿಲ್ಲ. ಪಂಚವಾರ್ಷಿಕ ಯೋಜನೆಗಳು ಒಂದರಮೇಲೊಂದು ಉರುಳಿದರೂ ನಮ್ಮ ರಾಜ್ಯದಲ್ಲಿ ಕೃಷಿಭೂಮಿಯಲ್ಲಿ ಶೇ. 15ಕ್ಕೆ ಮಾತ್ರ ನಾಲೆ ನೀರು ಹರಿಯುತ್ತಿದೆ! ರಾಜ್ಯದ ಉಳಿದ ನೀರಾವರಿ ಕೆಲಸವನ್ನು ಬಾವಿ ಮಾಡುತ್ತಿದೆ. 2016 -17 ರಲ್ಲಿ 17 ಲಕ್ಷ ಹೆಕ್ಟೇರ್ ಗೆ ನಮ್ಮಲ್ಲಿ ಬಾವಿ ನೀರು ಹರಿಯಿತು.

  ಆದರೆ ನಾಲೆಗಳಿಂದ ಹರಿದ ನೀರು 14 ಲಕ್ಷ ಹೆಕ್ಟೇರು ಭೂಮಿಗೆ. ರಾಜಸ್ಥಾನ ಮರಳುಗಾಡು ರಾಜ್ಯ. ಕರ್ನಾಟಕಕ್ಕಿಂತ ನೀರಾವರಿಯಲ್ಲಿ ಮುಂದಿದೆ. ಇದು ದುರಂತ. ಬೇಸಾಯವು ವರುಣನ ಕೃಪೆ ಮೇಲೆ ನಡೆಯುತ್ತದೆ. ದಿಕ್ಕು ತಪ್ಪುತ್ತದೆ. ಆದರೆ ಪಶುಪಾಲನೆ ಹಾಗಲ್ಲ. ಇಲ್ಲಿ ಸ್ಪಷ್ಟತೆ- ಗ್ಯಾರಂಟಿ ಇದೆ. ನಮ್ಮ 30,000 ಹಳ್ಳಿಗಳಲ್ಲಿ 23,759ರಲ್ಲಿ ಪಶುಪಾಲನೆ ಇದೆ. ರಾಜ್ಯ ಸರ್ಕಾರದ ಸಹಾಯ ಹಸ್ತವು ಇಷ್ಟೂ ಹಳ್ಳಿಗಳಿಗೆ, ಸಮಸ್ತ ಗ್ರಾಮೀಣ ಪ್ರದೇಶಕ್ಕೆ ತಲುಪುವ ಏಕೈಕ ಮಾರ್ಗವೆಂದರೆ ಪಶುಪಾಲನೆ.

  ಕಳೆದ ಆಗಸ್ಟ್ ನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ ಸನ್ಮಾನ್ಯ ಯಡಿಯೂರಪ್ಪನವರ ಮುಂದೆ ನಾನು ಕೆಲವು ಸಲಹೆಗಳನ್ನು ಇಟ್ಟಿದ್ದೆ. ಅವರು ಅಧಿಕಾರ ವಹಿಸಿಕೊಂಡು ಮೊದಲು ಘೊಷಣೆ ಮಾಡಿದ್ದು- ನನ್ನ ಎರಡನೇ ಸಲಹೆಯನ್ನು! ಅದು ಮೇವಿಗೆ ಸಂಬಂಧಿಸಿದ್ದು. ರೈತರ ರಾಯಧನ ಅಂದರೆ ಕೃಷಿ ಸಮ್ಮಾನ್ ಯೋಜನೆಯ ಹಣವನ್ನು ಹತ್ತು ಸಹಸ್ರ ರೂಪಾಯಿಗೆ ಅವರು ಏರಿಸಿದರು. ಅದರೊಂದಿಗೆ ಅವರು ಮಾಡಿದ ಘೊಷಣೆ – ‘ನೀವು ಮೇವು ಬೆಳೆಯಿರಿ; ಒಂದು ಬೆಳೆಯಾಗಿ ಬೆಳೆಯಿರಿ ; ಟನ್ನಿಗೆ 4000 ರೂಪಾಯಿ ಕೊಡುತ್ತೇನೆ’. ನೋಡಿ ಹೇಗಿದೆ! ಕಬ್ಬಿಗೆ ಟನ್ನಿಗೆ 3000 ರೂಪಾಯಿ; ಮೇವಿಗೆ 4000 ರೂಪಾಯಿ! ಖಂಡಿತ ಆಗಲಿ.

  ಮುಖ್ಯಮಂತ್ರಿಗಳ ಘೊಷಣೆ ಅತ್ಯಂತ ಶ್ಲಾಘನೀಯ.. ಮೇವನ್ನು ಬೆಳೆಯಾಗಿ ಬೆಳೆಯುವುದು ದೇಶದಲ್ಲೇ ಆಗಬೇಕಾಗಿರುವ ಮಹತ್ತರ ಅಗತ್ಯ ಕಾರ್ಯ. ಏಕೆಂದರೆ ದೇಶದ ಉತ್ಪತ್ತಿಯಲ್ಲಿ ಪೈರಿನ ಪಾಲು ಶೇ.10 ಇದ್ದರೆ ಪಶುಪಾಲನೆಯದು ಶೇ.4.9ರಷ್ಟು ಅಗಾಧವಾಗಿದೆ. ಆದರೆ ಕೃಷಿ ವಲಯದ ಸಾಲದಲ್ಲಿ ಅದರ ಪಾಲು ಶೇ.9 ಮಾತ್ರ!

  ನಮ್ಮ ಬರಗಾಲ ಪೀಡಿತ ಪ್ರದೇಶದಲ್ಲಿ ಬೇಳೆಗಳಲ್ಲಿ ತೊಗರಿಗೆ ಸ್ವಲ್ಪ ಬೆಂಬಲ – ಆಸರೆ ಇದೆ. ಬೆಂಬಲ ಬೆಲೆ, ಖರೀದಿಗೆ ವ್ಯವಸ್ಥೆ, ಸಂಗ್ರಹಣೆ ಕಾರ್ಯ- ಇವೆಲ್ಲಾ ತೊಗರಿಗೆ ಸಿಕ್ಕ ಭಾಗ್ಯ. ಆದರೆ ಉಳಿದ ಬೇಳೆಗಳ ಗತಿ ? 2017- 18ರಲ್ಲಿ ತೊಗರಿ ಉತ್ಪಾದನೆ ರಾಜ್ಯದಲ್ಲಿ 8.44 ಲಕ್ಷ ಟನ್ ಇತ್ತು. ಉಳಿದ ಬೇಳೆಗಳ ಉತ್ಪಾದನೆ 22 ಲಕ್ಷ ಟನ್ ಎನ್ನುವಷ್ಟು ದೊಡ್ಡದಾಗಿತ್ತು. ಕಡಲೆಬೇಳೆಗೆ ಬೇಗನೆ ಕುಟ್ಟೆಹುಳ ಬರುತ್ತದೆ.

  ಆದರೆ ನಮ್ಮಲ್ಲಿ ಸಾಕಷ್ಟು ರೈತರು ಈ ಬಾರಿ ಕಡಲೆ ಬೆಳೆದಿದ್ದಾರೆ. ಕಷ್ಟದಲ್ಲಿದ್ದಾರೆ. ಈ ರೈತರು ಮೇವನ್ನು ಬೆಳೆಯಾಗಿ ಬೆಳೆಸಿದರೆ ಗ್ಯಾರಂಟಿ ಆದಾಯದ ಸುರಕ್ಷೆ ಸಿಗುತ್ತದೆ. ಅಲ್ಲದೆ ಅಂತರ ಬೆಳೆಯಾಗಿಯೂ ಮೇವನ್ನು ಬೆಳೆಯಬಹುದು. ತೆಂಗಿನ ತೋಟದಲ್ಲಿ ಮೇವನ್ನು ಬೆಳೆದು ಮಾರಾಟ ಮಾಡಿ ಇನ್ನೊಂದು ಗ್ಯಾರಂಟಿ ಪೇಮೆಂಟ್ ಪಡೆಯಬಹುದು!

  ರಾಜ್ಯ ಸರ್ಕಾರವು ಹೊಸ ಮೇವಿನ ನೀತಿಯನ್ನು ಪ್ರಕಟಿಸಿದೆ. ಇದು ಇನ್ನೂ ಮುಂದೆ ಸಾಗಬೇಕು.’ ಪ್ರತಿ ಹಸುವಿಗೂ ಮೇವು’- ಇದು ದೀಕ್ಷೆಯ ಆಗಬೇಕು. ಕೇವಲ ಬೇಸಿಗೆಯಲ್ಲಿನ ಮೇವು ಪೂರೈಕೆ ವಿಚಾರ ಇದಲ್ಲ. 12 ತಿಂಗಳೂ ಎಲ್ಲಾ ದನಕರು ಎಮ್ಮೆಗಳಿಗೆ ಸತತವಾಗಿ ಸಾಕಷ್ಟು ಮೇವು ವ್ಯವಸ್ಥೆ ಮಾಡುವುದು ಈ ದೀಕ್ಷೆ. ರಾಜ್ಯದ 23,759 ಹಳ್ಳಿಗಳ ಹಾಲು ಉತ್ಪಾದಕರಿಗೆ ಸತತವಾಗಿ ಮೇವು ಪೂರೈಕೆ ಆಗಬೇಕು; ಇದಕ್ಕೆ ಒಂದು ವ್ಯವಸ್ಥೆ ಮಾಡಬೇಕು. ನಾಡಿನ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಬೇಕು. ಹೊಸ ವಿಭಾಗ- ಹೊಸ ಆಯೋಗ ಬೇಕು. ಈಗ ಬಜೆಟ್ ನಲ್ಲಿ ಅದು ಆಗಬೇಕು.

  ಒಂದು ಜೋಡಿ ಎತ್ತು ವರ್ಷದಲ್ಲಿ 1.45 ಲಕ್ಷ ರೂಪಾಯಿ ಮೌಲ್ಯದ ಯೂರಿಯಾ ಗೊಬ್ಬರಕ್ಕೆ ಸಮನಾದ ಸಾವಯವ ಗೊಬ್ಬರವನ್ನು ನೀಡುತ್ತದೆ. ನಮ್ಮ ನಾಡಿನ 1.15 ಕೋಟಿ ದನಕರುಎಮ್ಮೆಗಳು ಎಷ್ಟು ಅಗಾಧ ಸಾವಯವ ಗೊಬ್ಬರ ನೀಡಬಹುದು ನೀವೇ ಲೆಕ್ಕ ಹಾಕಿ. ಮೇವನ್ನು ಖರೀದಿಸಿ, ಹಾಲು ಉತ್ಪಾದಕರಿಗೆ ನೀಡಿ, ಅವರಿಂದ ಬೆರಣಿ ಖರೀದಿಸಿ, ರೈತರಿಗೆ ಬೆರಣಿ ಗೊಬ್ಬರ ನೀಡಿದರೆ ಹಳ್ಳಿಗಾಡಿನಲ್ಲಿ ಹಾಲು ಜೇನಿನ ಹೊಳೆ ಹರಿಯಬಹುದು!

  ಅಲ್ಲದೆ ಬೇಸಾಯದಿಂದ ಬದುಕಲಾರದೆ ಬೆಂಗಳೂರು- ಮೈಸೂರು ಮೊದಲಾದ ನಗರಗಳಲ್ಲಿ ಚಾಲಕರಾಗಿ ಬದುಕುತ್ತಿರುವ ಮಾಜಿ ನೇಗಿಲಯೋಗಿಗಳಿಗೆ ಒಂದು ದಾರಿ ಇಲ್ಲಿ ಇದೆ. ಮೇವನ್ನು ಕೊಟ್ಟು ಹಾಲು ಉತ್ಪಾದಕರಿಂದ ಬೆರಣಿ ಸಂಗ್ರಹಿಸಿ ಸಾವಯವ ಗೊಬ್ಬರವನ್ನು ನಮ್ಮ ನೇಗಿಲಯೋಗಿಗೆ ನೀಡುವುದು ಸೂಕ್ತ.

  ಅದರಲ್ಲೂ ಯುವಕರಿಗೆ ನೀಡಿದರೆ, ಸಾವಯವ ಆಹಾರ ಉತ್ಪಾದನೆಗೆ‘ವಿಶೇಷ ಆರ್ಥಿಕ ವಲಯ- SEZ-’ ನಿರ್ವಿುಸಿದರೆ, ಕೃಷಿ ಪದವೀಧರರಿಗೆ ಈ ಯೋಜನೆಯನ್ನು ನೀಡಿದರೆ, ನಮ್ಮಲ್ಲೇ ಹೊಸದೊಂದು ಸಾವಯವ ಉದ್ಯೋಗ- ಉತ್ಪಾದನೆ ಯುಗ ಸೃಷ್ಟಿ ಆಗಬಹುದು! ಐಟಿಗಿಂತ ಜಾಸ್ತಿ ಡಾಲರ್ ಸಂಪಾದಿಸಬಹುದು!

  ಸನ್ಮಾನ್ಯ ಯಡಿಯೂರಪ್ಪನವರು ಮೊದಲ ಬಜೆಟ್ ಮಂಡನೆಯ ಪೂರ್ವದಲ್ಲಿ ನನ್ನನ್ನು ಉಪಹಾರಕ್ಕೆ ಕರೆದು ಬಜೆಟ್ ಬಗ್ಗೆ ರ್ಚಚಿಸಿದ್ದರು. ಆಗ ನಾನು ‘ಎಲ್ಲೆಲ್ಲಿ ರಸಗೊಬ್ಬರ ಮಾರಾಟ ಇದೆಯೋ ಅಲ್ಲೆಲ್ಲ ಸಾವಯವ ಗೊಬ್ಬರ ಮಾರಾಟ ಆಗಬೇಕು’ ಎಂದು ಆಶಿಸಿದ್ದೆ. ಆ ಬಜೆಟ್ ನಲ್ಲಿ ಅವರು 100 ಕೋಟಿ ರೂಪಾಯಿಯನ್ನು ಇದಕ್ಕೆ ಕೊಟ್ಟರು. ಈಗಲೂ ಹಳ್ಳಿಗಳಲ್ಲಿ ಸಾವಯವ ಭಾಗ್ಯ ಯೋಜನೆ ಇದೆ. ಇದು ಸಾಲದು. ಮೇವು ಆಂದೋಲನದ ಮೂಲಕ ಸಾವಯವ ಗೊಬ್ಬರ- ಸಾವಯವ ಆಹಾರ ಉತ್ಪಾದನೆ ಹಿಗ್ಗಬೇಕು.

  ಕಳೆದ ಆಗಸ್ಟ್ ನಲ್ಲಿ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿಕೊಂಡ ಸಂದರ್ಭದಲ್ಲಿ ನಾನು ಸೂಚಿಸಿದ ಸಲಹೆಗಳಲ್ಲಿ ಮೊದಲನೆಯದು ಪ್ರಧಾನಿ ಕಚೇರಿ- PMO ಮಾದರಿಯಲ್ಲಿ ಮುಖ್ಯಮಂತ್ರಿ ಕಚೇರಿ – CMO ಆಗಲಿ ಎಂಬುದಾಗಿತ್ತು. ಅದು ಆಗಿದೆ. ನನ್ನ ಎರಡನೆಯ ಸಲಹೆ ಮೇವು ಆಂದೋಲನದ್ದಾಗಿತ್ತು. ಮೇವಿಗೆ ಟನ್ನಿಗೆ 4,000 ರೂಪಾಯಿ ಘೊಷಿಸಿ ಅದನ್ನು ಆರಂಭ ಮಾಡಿದ್ದು ಆಗಿದೆ. ಈಗ ಬಜೆಟ್ನಲ್ಲಿ ಮೇವು ಆಂದೋಲನಕ್ಕೆ ಸರಿಯಾದ ವ್ಯವಸ್ಥೆ- ರೂಪರೇಷೆ ಮೂಡಬೇಕು. ಏಕೆಂದರೆ ಈ ಆಂದೋಲನ ಗ್ರಾಮೀಣ ಆರ್ಥಿಕ ಕ್ರಾಂತಿಯ ದೊಡ್ಡ ಆಯುಧ. ಮೇವಿನ ಮೂಲಕ ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ಮಹತ್ತರವಾದ ಸಾಧನೆ ಮಾಡಬಹುದು.

  ಒಂದು ವಿಷಯ ನಾನು ಕಂಡದ್ದೆಲ್ಲಾ ನಿಜವಾಗಿದೆ! ನಾನು 25 ವರ್ಷಗಳ ಹಿಂದೆ ಕನ್ನಡ ಪತ್ರಿಕೋದ್ಯಮದಲ್ಲಿ ಆರ್ಥಿಕ ವಿಚಾರಗಳ ಪುರವಣಿ‘ ವಿತ್ತಪ್ರಭ‘ ಆರಂಭಿಸಿದೆ. ಕನ್ನಡ ಆರ್ಥಿಕ ಪತ್ರಿಕೋದ್ಯಮ ಈಗ ರಜತ ಮಹೋತ್ಸವ ಕಂಡಿದೆ. 1998 ರಲ್ಲಿ ವೋಲ್ವೋ CMD ಆಗಿ ರವಿ ಉಪ್ಪಾಲ್ ಇದ್ದರು. ವೋಲ್ವೋ ಹೊಸಕೋಟೆ ಸ್ಥಾವರಕ್ಕೆ ನಾನು ಹೋಗಿದ್ದೆ. ಭಾರತಕ್ಕೆ ವೋಲ್ವೋ ಬಸ್ ತನ್ನಿ ಎಂದು ಆಗ ಸಲಹೆ ಮಾಡಿದ್ದೆ. ಆಮೇಲೆ ಆ ಬಸ್ ಬಂತು. ಈಗ ಭಾರತದ ರಸ್ತೆಗಳಲ್ಲಿ ವೋಲ್ವೋದೇ ದರ್ಬಾರ್! ನಾನು ಮೇವಿನ ಮೂಲಕ ಆರ್ಥಿಕ ಕ್ರಾಂತಿಯನ್ನು ಗ್ರಾಮೀಣ ಭಾಗದಲ್ಲಿ ಕಾಣುವ ಕನಸನ್ನು ಹೊಂದಿದ್ದೇನೆ. ಎಷ್ಟೋ ಆಗಿದೆ. ಇದೂ ಆಗಿಬಿಟ್ಟರೆ ರೈತರಿಗೆ ಅದೊಂದು ಅಮೃತಸಮಾನ ಆಸರೆ ಆಗುತ್ತದೆ ಎಂಬುದು ನನ್ನ ಆಸೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts