More

    ಇಂದು ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಕದನ

    ಸಿಡ್ನಿ: ಕರೊನಾ ಕಾಲದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸವಾಲಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡು ತಿಂಗಳ ಸುದೀರ್ಘ ಕಾದಾಟಕ್ಕೆ ಶುಕ್ರವಾರ ಏಕದಿನ ಸರಣಿಯೊಂದಿಗೆ ಚಾಲನೆ ಸಿಗಲಿದೆ. 1992ರ ಕಾಲದ ರೆಟ್ರೋ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ ಬಳಗ ಶುಭಾರಂಭದ ತವಕದಲ್ಲಿದೆ.

    ವರ್ಷಾರಂಭದ ನ್ಯೂಜಿಲೆಂಡ್ ಪ್ರವಾಸದ ಬಳಿಕ ಭಾರತ ತಂಡ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆಡಿಲ್ಲ. ಮಾರ್ಚ್‌ನಲ್ಲಿ ತವರಿನಲ್ಲಿ ನಿಗದಿಯಾಗಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ, ಕರೊನಾ ಭೀತಿಯಿಂದಾಗಿ ಮೊಟಕುಗೊಂಡಿತ್ತು. ಇದೀಗ 8 ತಿಂಗಳ ಬಳಿಕ ಭಾರತ ತಂಡದ ಅಂತಾರಾಷ್ಟ್ರೀಯ ಕ್ರಿಕೆಟ್ ಅಭಿಯಾನ ಪುನರಾರಂಭವಾಗುತ್ತಿದೆ. ಸೀಮಿತ ಓವರ್ ತಂಡದ ಎಲ್ಲ ಆಟಗಾರರು ಕಳೆದ 2 ತಿಂಗಳಿನಿಂದ ಐಪಿಎಲ್‌ನಲ್ಲಿ ಆಡಿರುವುದರಿಂದ ಉತ್ತಮ ಲಯದಲ್ಲಿರುವುದು ಆತ್ಮವಿಶ್ವಾಸ ವೃದ್ಧಿಸುವ ಅಂಶವಾಗಿದೆ.

    4 ಟೆಸ್ಟ್ ಪಂದ್ಯಗಳ ಬಾರ್ಡರ್-ಗಾವಸ್ಕರ್ ಟ್ರೋಫಿ ಹಾಲಿ ಪ್ರವಾಸದಲ್ಲಿ ಪ್ರತಿಷ್ಠಿತವೆನಿಸಿದ ಸರಣಿಯಾಗಿದ್ದರೂ, ಅದಕ್ಕೆ ಮುನ್ನ ವಿಶ್ವಾಸ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಸೀಮಿತ ಓವರ್ ಉಭಯ ತಂಡಗಳ ಪಾಲಿಗೂ ಮಹತ್ವದ್ದಾಗಿದೆ.

    ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್ ವಿಭಾಗಕ್ಕೆ ಸೆಡ್ಡು ಹೊಡೆಯುವ ಸವಾಲು ಭಾರತ ತಂಡದ ಮುಂದಿದೆ. ವೇಗಿಗಳಾದ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಜತೆಗೆ ಸ್ಪಿನ್ನರ್ ಆಡಂ ಜಂಪಾ ಕೂಡ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಬಲ್ಲರು. ಅನುಭವಿಗಳಾದ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಜತೆಗೆ ಯುವ ಬ್ಯಾಟಿಂಗ್ ಸೆನ್ಸೇಶನ್ ಮಾರ್ನಸ್ ಲಬುಶೇನ್ ಕೂಡ ಬ್ಯಾಟಿಂಗ್‌ನಲ್ಲಿ ಸವಾಲಾಗಬಲ್ಲರು.

    ಭುವನೇಶ್ವರ್ ಕುಮಾರ್ ಗಾಯದಿಂದಾಗಿ ಪ್ರವಾಸವನ್ನು ತಪ್ಪಿಸಿಕೊಂಡಿರುವುದರಿಂದ ಜಸ್‌ಪ್ರೀತ್ ಬುಮ್ರಾ ಆಸೀಸ್ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕಾಗಿದೆ. ಆಸೀಸ್ ಮಧ್ಯಮ ಸರದಿಗೆ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕಡಿವಾಣ ಹಾಕಬೇಕಿದೆ. ಹಾರ್ದಿಕ್ ಪಾಂಡ್ಯ ಸದ್ಯ ಬೌಲಿಂಗ್ ನಡೆಸದಿರುವುದು ಭಾರತ ತಂಡದ ಸಮತೋಲನಕ್ಕೆ ಸ್ವಲ್ಪ ಹಿನ್ನಡೆ ತಂದಿದೆ.

    ರೋಹಿತ್ ಶರ್ಮ ಗೈರಿನ ಹಿನ್ನಡೆ
    ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಆಗಿರುವ ರೋಹಿತ್ ಶರ್ಮ ಗಾಯದಿಂದಾಗಿ ಅಲಭ್ಯರಾಗಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಅವರ ಅನುಪಸ್ಥಿತಿ ಕಾಡದಂತೆ ಟೀಮ್ ಇಂಡಿಯಾ ಆಸೀಸ್ ನೆಲದಲ್ಲಿ ನಿರ್ವಹಣೆ ತೋರಬೇಕಾಗಿದೆ. ರೋಹಿತ್ ಗೈರಲ್ಲಿ ಸರಿಯಾದ ಕಾಂಬಿನೇಷನ್ ಕಂಡುಕೊಳ್ಳುವ ಸವಾಲು ಕೂಡ ನಾಯಕ ವಿರಾಟ್ ಕೊಹ್ಲಿ ಎದುರಿದೆ.

    ರಾಹುಲ್‌ಗೆ ಉಪನಾಯಕತ್ವ ಹೊಣೆ
    ರಾಹುಲ್ ದ್ರಾವಿಡ್ ಬಳಿಕ ಟೀಮ್ ಇಂಡಿಯಾದ ಉಪನಾಯಕತ್ವ ಒಲಿಸಿಕೊಂಡಿರುವ ಮೊದಲ ಕನ್ನಡಿಗ ಕೆಎಲ್ ರಾಹುಲ್. ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ತಂಡದ ಕಾರ್ಯತಂತ್ರಗಳನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರುವಲ್ಲಿ ಅವರು ನೆರವಾಗಬೇಕಾಗಿದೆ. ಜತೆಗೆ ವಿಕೆಟ್ ಕೀಪರ್ ಹೊಣೆಯನ್ನೂ ಅವರು ನಿಭಾಯಿಸಬೇಕಾಗಿದೆ. ಐಪಿಎಲ್‌ನಲ್ಲಿ ಗರಿಷ್ಠ ರನ್ ಪೇರಿಸಿ ಮಿಂಚಿರುವ ರಾಹುಲ್, ಬ್ಯಾಟಿಂಗ್‌ನಲ್ಲಿ ಉತ್ತಮ ಲಯದಲ್ಲಿದ್ದಾರೆ.

    ಕಪಿಲ್, ಅಜರ್, ಸಚಿನ್ ಕಾಲದ ಜೆರ್ಸಿ ವಾಪಸ್
    ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರು ಬದಲಾಗಿರುವಂತೆಯೇ ಜೆರ್ಸಿಯ ಬಣ್ಣವೂ ಬದಲಾಗಿದೆ. 1992ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಆಡಿದ್ದ ಕಡುನೀಲಿ ಬಣ್ಣದ ಜೆರ್ಸಿ ಧರಿಸಿ ಸೀಮಿತ ಓವರ್ ಸರಣಿಯಲ್ಲಿ ಆಡಲಿದೆ. ಕಪಿಲ್ ದೇವ್, ಮೊಹಮದ್ ಅಜರುದ್ದೀನ್, ಸಚಿನ್ ತೆಂಡುಲ್ಕರ್, ಕೆ. ಶ್ರೀಕಾಂತ್ ಮುಂತಾದ ದಿಗ್ಗಜರನ್ನು ಒಳಗೊಂಡ ತಂಡ ಈ ಕಡುನೀಲಿ ಜೆರ್ಸಿ ಧರಿಸಿ ಆಡಿದ್ದ ನೆನಪು ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಇನ್ನೂ ಹಚ್ಚರಾಗಿದೆ. ಆದರೆ ಭಾರತ ಆ ವಿಶ್ವಕಪ್‌ನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಕಾರಣದಿಂದಾಗಿ, ನಿರ್ವಹಣೆಯ ಲೆಕ್ಕಾಚಾರದಲ್ಲಿ ಈ ಜೆರ್ಸಿ ಭಾರತ ತಂಡಕ್ಕೆ ಅದೃಷ್ಟವಲ್ಲ ಎಂದೂ ವಿಶ್ಲೇಷಿಸಲಾಗುತ್ತಿದೆ.

    ಮತ್ತೆ ಸ್ಟೇಡಿಯಂಗೆ ಪ್ರೇಕ್ಷಕರು
    ಈ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಮತ್ತೊಮ್ಮೆ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಸಾಕ್ಷಿಯಾಗಲಿದ್ದಾರೆ. ಈ ಮುನ್ನ ಇಂಗ್ಲೆಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆದಿದ್ದವು. ಆದರೆ ಆಸೀಸ್‌ನಲ್ಲಿ ಸೀಮಿತ ಓವರ್ ಸರಣಿಯಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದ್ದು, ಈಗಾಗಲೆ ಎಲ್ಲ ಟಿಕೆಟ್‌ಗಳು ಬಿಕರಿಯಾಗಿವೆ. ಕರೊನಾ ಕಾಲದಲ್ಲಿ ಆಸೀಸ್‌ನಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಸರಣಿಯೂ ಆಗಿದೆ.

    ಕ್ವಾರಂಟೈನ್‌ನಿಂದ ಬಯೋಬಬಲ್‌ಗೆ…
    ಟೀಮ್ ಇಂಡಿಯಾ ಆಟಗಾರರು ಗುರುವಾರ ಆಸ್ಟ್ರೇಲಿಯಾದಲ್ಲಿನ 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿ ಪ್ರವಾಸದ ಬಯೋ-ಬಬಲ್ ವಾತಾವರಣವನ್ನು ಪ್ರವೇಶಿಸಿದ್ದಾರೆ. ಬಯೋ-ಬಬಲ್‌ನಲ್ಲಿ ಸ್‌ಟಾ ಕ್ವಾರಂಟೈನ್‌ಗಿಂತ ಸ್ವಲ್ಪ ಸ್ವತಂತ್ರವಾದ ವಾತಾವರಣ ಇರಲಿದೆ. ಸಿಡ್ನಿ ಹೊರವಲಯದಲ್ಲಿ ಕ್ವಾರಂಟೈನ್ ಆಗಿದ್ದ ಹೋಟೆಲ್‌ನಿಂದ ಭಾರತ ತಂಡ ಗುರುವಾರ ಹೊಸ ಹೋಟೆಲ್‌ಗೆ ಶ್‌ಟಿ ಆಗಿದೆ. ಕ್ವಾರಂಟೈನ್ ವೇಳೆ ಆಟಗಾರರಿಗೆ ಅಭ್ಯಾಸಕ್ಕಾಗಿ ಮಾತ್ರ ಹೋಟೆಲ್ ಕೋಣೆಯಿಂದ ಹೊರಬರಲು ಅವಕಾಶವಿತ್ತು.

    ಟೀಮ್ ನ್ಯೂಸ್:
    ಭಾರತ: ರೋಹಿತ್ ಶರ್ಮ ಗೈರಲ್ಲಿ ಶಿಖರ್ ಧವನ್ ಜತೆಗೆ ಆರಂಭಿಕರಾಗಿ ಕಣಕ್ಕಿಳಿಯಲು ಮಯಾಂಕ್ ಅಗರ್ವಾಲ್ ಮತ್ತು ಶುಭಮಾನ್ ಗಿಲ್ ನಡುವೆ ಸ್ಪರ್ಧೆ ಇದ್ದು, ಕನ್ನಡಿಗನಿಗೆ ಅವಕಾಶ ಒಲಿಯುವ ನಿರೀಕ್ಷೆ ಹೆಚ್ಚಿದೆ. ಅನುಭವಿ ವೇಗಿಗಳಾದ ಮೊಹಮದ್ ಶಮಿ ಮತ್ತು ಜಸ್‌ಪ್ರೀತ್ ಬುಮ್ರಾ ಅವರಿಬ್ಬರನ್ನು ಆವರ್ತನ ಪದ್ಧತಿಯಲ್ಲಿ ಆಡಿಸುವ ಸಾಧ್ಯತೆಯೂ ಇದೆ.
    ಸಂಭಾವ್ಯ ತಂಡ: ಶಿಖರ್ ಧವನ್, ಮಯಾಂಕ್ ಅಗರ್ವಾಲ್/ಶುಭಮಾನ್ ಗಿಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ/ಶಾರ್ದೂಲ್ ಠಾಕೂರ್, ನವದೀಪ್ ಸೈನಿ.

    ಆಸ್ಟ್ರೇಲಿಯಾ: ಐಪಿಎಲ್‌ಗೆ ಮುನ್ನ ಇಂಗ್ಲೆಂಡ್ ಪ್ರವಾಸದಲ್ಲಿ ಏಕದಿನ ಸರಣಿ ಆಡಿದ್ದ ಆಸೀಸ್ ತಂಡ ಅಲ್ಲಿ ಯಶ ಕಂಡ ತಂಡವನ್ನೇ ಇಲ್ಲೂ ಕಣಕ್ಕಿಳಿಸುವ ನಿರೀಕ್ಷೆ ಇದೆ. ಹೀಗಾಗಿ ತಂಡದ ಆಯ್ಕೆಯಲ್ಲಿ ಯಾವುದೇ ಹೆಚ್ಚಿನ ಗೊಂದಲಗಳಿಲ್ಲ.
    ಸಂಭಾವ್ಯ ತಂಡ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ನಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಂ ಜಂಪಾ, ಜೋಶ್ ಹ್ಯಾಸಲ್‌ವುಡ್.

    ಪಂದ್ಯ ಆರಂಭ: ಬೆಳಗ್ಗೆ 9.10
    ನೇರಪ್ರಸಾರ: ಸೋನಿ ನೆಟ್‌ವರ್ಕ್, ಡಿಡಿ.

    ಮುಖಾಮುಖಿ: 140
    ಭಾರತ: 52
    ಆಸೀಸ್: 78
    ರದ್ದು: 10
    ಆಸೀಸ್‌ನಲ್ಲಿ: 51
    ಭಾರತ: 13
    ಆಸೀಸ್: 36
    ರದ್ದು: 2
    ಸಿಡ್ನಿಯಲ್ಲಿ: 16
    ಭಾರತ: 2
    ಆಸೀಸ್: 14

    133: ವಿರಾಟ್ ಕೊಹ್ಲಿ ಏಕದಿನ ಸರಣಿಯಲ್ಲಿ 133 ರನ್ ಗಳಿಸಿದರೆ 12 ಸಾವಿರ ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ. ಸದ್ಯ 239 ಇನಿಂಗ್ಸ್‌ಗಳಿಂದ 11,867 ರನ್ ಗಳಿಸಿದ್ದು, 300 ಇನಿಂಗ್ಸ್‌ಗಳಲ್ಲಿ 12 ಸಾವಿರ ರನ್ ಗಳಿಸಿರುವ ಸಚಿನ್ ತೆಂಡುಲ್ಕರ್‌ರನ್ನು ಹಿಂದಿಕ್ಕಿ ಅತಿವೇಗದ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ.

    71: ವಿರಾಟ್ ಕೊಹ್ಲಿ (70) ಇನ್ನೊಂದು ಶತಕ ಸಿಡಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71 ಶತಕ ಸಿಡಿಸಿರುವ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದು, ನಂತರ ಸಚಿನ್ ತೆಂಡುಲ್ಕರ್ (100) ಮಾತ್ರ ಅವರಿಗಿಂತ ಮುಂದಿರುತ್ತಾರೆ.

    269: ಭಾರತ ತಂಡ 269 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಲಿದೆ. ಮಾರ್ಚ್ 2ರಂದು ನ್ಯೂಜಿಲೆಂಡ್ ವಿರುದ್ಧದ ಕ್ರೈಸ್ಟ್‌ಚರ್ಚ್ ಟೆಸ್ಟ್ ಮುಗಿದ ಬಳಿಕ ಭಾರತ ಯಾವುದೇ ಪಂದ್ಯವಾಡಿಲ್ಲ. ಮಾರ್ಚ್ 12ರಂದು ಧರ್ಮಶಾಲಾದಲ್ಲಿ ಏಕದಿನ ಆಡಬೇಕಿದ್ದರೂ, ಮಳೆಯಿಂದಾಗಿ ಒಂದೂ ಎಸೆತ ಕಾಣದೆ ಪಂದ್ಯ ರದ್ದುಗೊಂಡಿತ್ತು. ನಂತರ ಕರೊನಾ ಭೀತಿಯಿಂದ ಸರಣಿಯೇ ರದ್ದುಗೊಂಡಿತ್ತು.

    ಪಿಚ್ ರಿಪೋರ್ಟ್
    ಸಿಡ್ನಿಯಲ್ಲಿ ನಡೆದ ಕಳೆದ ಕೆಲ ಪಂದ್ಯಗಳನ್ನು ಗಮನಿಸಿದಾಗ ರನ್‌ಪ್ರವಾಹದ ನಿರೀಕ್ಷೆ ಇಡಬಹುದು. ಇಲ್ಲಿನ ಕಳೆದ 7 ಏಕದಿನ ಪಂದ್ಯಗಳಲ್ಲಿ 6ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಜಯಿಸಿದೆ. ಈ ಪಂದ್ಯಗಳಲ್ಲಿ ಸರಾಸರಿ ಮೊದಲ ಇನಿಂಗ್ಸ್ ಸ್ಕೋರ್ 312 ರನ್.

    *ರೋಹಿತ್ ಶರ್ಮ ಸ್ಥಾನವನ್ನು ತುಂಬಬಲ್ಲ ಮಯಾಂಕ್ ಅಗರ್ವಾಲ್ ಅವರಂಥ ಗುಣಮಟ್ಟದ ಆಟಗಾರರು ಭಾರತ ತಂಡದಲ್ಲಿದ್ದಾರೆ. ಕೊಹ್ಲಿ ಜತೆ ಆರ್‌ಸಿಬಿ ತಂಡದಲ್ಲಿ ಆಡಿದ್ದರೂ, ಅವರ ಯಾವ ದೌರ್ಬಲ್ಯಗಳೂ ನನಗೆ ಕಾಣಿಸಿಲ್ಲ.
    ಆರನ್ ಫಿಂಚ್, ಆಸೀಸ್ ನಾಯಕ

    *ರೋಹಿತ್ ಶರ್ಮ ಗಾಯದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಐಪಿಎಲ್ ವೇಳೆ ಆದ ಗಾಯದಿಂದಾಗಿ ಅವರು ಅಲಭ್ಯರಾಗಿದ್ದಾರೆ ಎಂದು ಆಯ್ಕೆ ಸಮಿತಿ ಸಭೆಗೆ ಮುನ್ನ ಹೇಳಲಾಗಿತ್ತು. ನಂತರ ಐಪಿಎಲ್‌ನಲ್ಲಿ ಆಡಿದಾಗ ಅವರು ಆಸೀಸ್‌ಗೆ ನಮ್ಮ ಜತೆ ಪ್ರಯಾಣಿಸುತ್ತಾರೆ ಎಂದೇ ತಿಳಿದಿದ್ದೆವು.
    ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ನಾಯಕ

    ಟೀಮ್ ಇಂಡಿಯಾಗೆ ಕಪಿಲ್ ದೇವ್ ಕಾಲದ ಸಮವಸ್ತ್ರ ವಾಪಸ್! ರೆಟ್ರೋ ಜೆರ್ಸಿಯ ಝಲಕ್ ಪ್ರದರ್ಶಿಸಿದ ಧವನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts