More

    ಚರಂಡಿಯಾದ ರಸ್ತೆ

    ವಿಜಯಪುರ: ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನಲ್ಲಿ ಹಾಗೂ ಬಚ್ಚಲು ಮೋರೆ ರಸ್ತೆ ತುಂಬ ಹರಿಯುತ್ತಿದೆ. ಇದರಿಂದ ಸಂಚಾರ ಸಮಸ್ಯೆ ಎದುರಿಸುತ್ತಿರುವ ನಿವಾಸಿಗಳಿಗೆ ಗಲೀಜಿನಿಂದಾಗಿ ರೋಗರುಜಿನಗಳು ಅಂಟಿಕೊಳ್ಳುತ್ತಿದ್ದರೂ ಸ್ಥಳೀಯ ಆಡಳಿತ ಮಂಡಳಿಯವರು ಇತ್ತ ತಿರುಗಿ ನೋಡುತ್ತಿಲ್ಲ.

    ಹೌದು, ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮ ಪಂಚಾಯಿತಿ ನಿರ್ಲಕ್ಷೃ ಧೋರಣೆಗೆ ಗ್ರಾಮದ ವಾರ್ಡ್ ನಂ. 1ರಲ್ಲಿರುವ ದರೋಜಿ ಒಣಿಯ ಸ್ಥಿತಿಯೇ ಸಾಕ್ಷಿ. ದರೋಜಿ ಒಣಿಯ ರಸ್ತೆ ತುಂಬೆಲ್ಲ ಚರಂಡಿಯಲ್ಲಿ ಹರಿದಂತೆ ಗಲೀಜು ನೀರು ಹರಿಯುತ್ತಿದೆ. ರಸ್ತೆಯನ್ನು ನೋಡಿದರೆ ಇದು ರಸ್ತೆಯೋ ಅಥವಾ ಚರಂಡಿಯೋ ಎನ್ನುವುದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ವಾರ್ಡ್‌ನ ನಿವಾಸಿಗಳು ಹಲವಾರು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಗ್ರಾಮ ಪಂಚಾಯಿತಿ ಮಾತ್ರ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಸೂಕ್ತವಾದ ಚರಂಡಿ ನಿರ್ಮಿಸುವ ಜತೆಗೆ ರಸ್ತೆಯನ್ನು ಸಂಪೂರ್ಣ ಸಿಸಿ ರಸ್ತೆಯನ್ನಾಗಿ ಪರಿವರ್ತಿಸದಿರುವುದೇ ನೀರು ರಸ್ತೆ ಮೇಲೆ ಹರಿಯಲು ಕಾರಣ. ಒಂದನೇ ವಾರ್ಡ್ ಸದಸ್ಯರು ಕೂಡ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

    ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಸಂಚಾರಕ್ಕೆ ಅನನುಕೂಲವಾಗಿದೆ. ಗಲೀಜಿನಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಗ್ರಾಮಸ್ಥರು ರೋಗಗಳಿಗೆ ತುತ್ತಾಗುವಂತಾಗಿದೆ. ನಲ್ಲಿಗಳಿಗೆ ನೀರು ಬಿಟ್ಟಾಗ ರಸ್ತೆಯಲ್ಲಿ ಹೊಳೆ ನೀರು ಹರಿದಂತೆ ಹರಿಯುತ್ತದೆ. ನಲ್ಲಿಗಳು ಸ್ಥಗಿತಗೊಂಡ ನಂತರ ಬಚ್ಚಲು ಮೋರೆ ನೀರು ರಸ್ತೆಯನ್ನು ಆವರಿಸುತ್ತದೆ. ಈ ಸಮಸ್ಯೆ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
    ರಫೀಕ್ ದರೋಜಿ, ಪರಶುರಾಮ ಗಾಣಿಗೇರ, ಗ್ರಾಮಸ್ಥರು

    ದರೋಜಿ ಓಣಿಯಲ್ಲಿ ಅರ್ಧದಷ್ಟು ಸಿಸಿ ರಸ್ತೆ ಮಾಡಲಾಗಿದೆ. ಇನ್ನುಳಿದ ರಸ್ತೆಯಲ್ಲಿ ಕಲ್ಲಿನ ಪರಸಿಗಳನ್ನು ಅಳವಡಿಸಲಾಗಿದೆ. ಹಲವು ಪರಸಿಗಳು ಮೇಲಕ್ಕೆ ಎದ್ದಿದ್ದರಿಂದ ನೀರು ಚರಂಡಿ ಬದಲು ರಸ್ತೆ ಮೇಲೆ ಹರಿಯುವಂತಾಗಿದೆ. ಕೂಡಲೇ ಪರಸಿ ಇರುವ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ರಸ್ತೆ ಮೇಲೆ ನೀರು ಹರಿಯದಂತೆ ಮಾಡಲಾಗುವುದು. ಪ್ರತಿಯೊಂದು ಮನೆಯ ನಲ್ಲಿಗೆ ತೋಟಿಗಳನ್ನು ಅಳಡಿಸುವ ಜತೆಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಂಪೂರ್ಣ ಸಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
    ರಮೇಶ ಗವಾರಿ, ಪಿಡಿಒ ಮಮದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts