More

    ಬಿ.ಕೆ ಹರಿಪ್ರಸಾದ್ ವಿಚಾರಣೆ, ರಾಜಭವನದ ‘ಕೈ’ವಾಡ!

    ಬೆಂಗಳೂರು: ವಿವಿಧ ಕಾರಣದಿಂದ ಸರ್ಕಾರದ ವಿರುದ್ಧ ನಿಡುಸುಯ್ಯುತ್ತಲೇ ಬಂದಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿರುವ ಬೆಳವಣಿಗೆ ಪಕ್ಷದೊಳಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
    ಹಿಂದುಳಿದ ವರ್ಗಗಳ ಸಂಘಟನೆ, ತಮ್ಮನ್ನು ಕಡೆಗಣಿಸುತ್ತಿರುವ ಕುರಿತಂತೆ ಅಭಿಪ್ರಾಯ ಹೊರಹಾಕಿ ಸದ್ದು ಮಾಡಿದ್ದ ಬಿ.ಕೆ ಹರಿಪ್ರಸಾದ್ ಇತ್ತೀಚೆಗೆ, ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆ ಸಂಬಂಧ ಗೋಧ್ರಾ ಪ್ರಕರಣ ಉಲ್ಲೇಖಿಸಿ ಗಲಭೆ ನಡೆಯಬಹುದೆಂದು ಎಚ್ಚರಿಕೆ ನೀಡಿದ್ದರು.
    ಈ ಬಗ್ಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನಾಯಕರಿಗೆ ಗಲಭೆ ನಡೆಯುವ ಮಾಹಿತಿ ಇರಬಹುದು, ವಿಚಾರಣೆಗೊಳಪಡಿಸಬೇಕೆಂದು ಆಗ್ರಹಿಸಿದ್ದರು.
    ಶುಕ್ರವಾರ ಕುಮಾರಕೃಪ ಅತಿಥಿಗೃಹದಲ್ಲಿ ಬಿ.ಕೆ ಹರಿಪ್ರಸಾದ್ ಅವರನ್ನು ಭೇಟಿ ಮಾಡಿದ್ದ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಈ ಹೇಳಿಕೆ ಬಗ್ಗೆ ಯಾವ ಮಾಹಿತಿ ಇದೆ ಎಂದು ಪ್ರಶ್ನಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಹರಿಪ್ರಸಾದ್, ಸರ್ಕಾರದ ವಿರುದ್ಧ ಕಿಡಿಕಾರಿ, ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವೋ ಅಥವಾ ಆರೆಸ್ಸೆಸ್ ಸರ್ಕಾರವೋ ಎಂದು ಆಕ್ರೋಶ ಹೊರಹಾಕಿದ್ದರು.
    ಇದಿಗ ವಿಚಾರಣೆ ಕುರಿತಂತೆ ಸರ್ಕಾರ ಮುಜುಗರಕ್ಕೆ ಸಿಲುಕಿದ್ದು, ಆಡಳಿತ ಪಕ್ಷದ ಮುಖಂಡರು, ಕಾರ್ಯಕರ್ತರೇ ಅಸಮಾಧಾನ ಹೊರಹಾಕಿದ್ದಾರೆ. ಇನ್ನೊಂದೆಡೆ, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಸರ್ಕಾರ, ಈ ವಿಚಾರಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ. ಇಷ್ಟರಲ್ಲಾಗಲೇ ದೆಹಲಿಗೂ ದೂರು ತಲುಪಿದೆ ಎಂದು ಮೂಲಗಳು ತಿಳಿಸಿವೆ.

    ಯಾರ ಕೈವಾಡ?

    ರಾಜ್ಯಪಾಲರು ಬಿ.ಕೆ ಹರಿಪ್ರಸಾದ್ ಹೇಳಿಕೆಯ ಬಗ್ಗೆ ತನಿಖೆ ಆಗುತ್ತಿದೆಯಾ? ಇಲ್ಲವೇ ? ಎಂದು ಪದೇ ಪದೆ ಕೇಳಿದ್ದಾರೆ. ಹೀಗಾಗಿ ರಾಜ್ಯಪಾಲರ ಮಾತಿಗೆ ಗೌರವ ಕೊಟ್ಟು ಬಿ.ಕೆ ಹರಿಪ್ರಸಾದ್ ವಿಚಾರಣೆಗೆ ಪೊಲೀಸರು ತೆರಳಿದ್ದರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು.
    ಇದರಿಂದ ಸರ್ಕಾರವೇ ಪೊಲೀಸರನ್ನು ಕಳಿಸಿ ವಿಚಾರಣೆ ಮಾಡಿ ಮುಜುಗರ ಉಂಟು ಮಾಡಿದೆ ಎಂದು ಹೇಳಲು ಆಗುವುದಿಲ್ಲ ಎಂದು ಅವರು ಸಮರ್ಥಿಸಿಕೊಂಡರು.
    ರಾಜ್ಯಪಾಲರು ಏಕೆ ಇಷ್ಟೊಂದು ಆಸಕ್ತಿ ಹೊಂದಿದ್ದಾರೆ? ಕೇಂದ್ರ ಸರ್ಕಾರದಿಂದ ಅವರಿಗೆ ಏನಾದರೂ ನಿರ್ದೇಶನವಿದೆಯೇ? ಎಂದು ಪ್ರಶ್ನಿಸಿರುವ ಅವರು ಎಲ್ಲೆಲ್ಲಿ ಬಿಜೆಪಿ ಇಲ್ಲವೋ ಅಲ್ಲೆಲ್ಲ ರಾಜ್ಯಪಾಲರ ಮೂಲಕ ಬಿಜೆಪಿಗರು ಆಳ್ವಿಕೆ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

    ಕಲ್ಲಡ್ಕ ಇಂದಲ್ಲ ನಾಳೆ ಒಳಗೆ

    ಯಾರೇ ಪ್ರಚೋದನಾಕಾರಿ ಹೇಳಿಕೆ ಕೊಟ್ಟರೂ ಸರ್ಕಾರ ಹಗುರವಾಗಿ ಪರಿಗಣಿಸುವುದಿಲ್ಲ. ಅನಂತ ಕುಮಾರ್ ಹೆಗಡೆ ಅಥವಾ ಕಲ್ಲಡ್ಕ ಪ್ರಭಾಕರ್ ಭಟ್ ಯಾರೇ ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಮೀರಲು ಯಾರನ್ನೂ ಬಿಡುವುದಿಲ್ಲ ಎಂದರು. ಇಲ್ಲಿ ಉತ್ತರ ಪ್ರದೇಶದ ಆಡಳಿತ ನಡೆಯುವುದಿಲ್ಲ. ಇವರೆಲ್ಲರೂ ಇಂದಲ್ಲ, ನಾಳೆ ಒಳಗಡೆ ಹೋಗುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts