More

    ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ

    ಚಿಕ್ಕಮಗಳೂರು: ನೇಹಾ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಮುಂದೆ ರಾಜ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರದ ಅಜಾದ್ ಪಾರ್ಕ್ ಸರ್ಕಲ್‌ನಲ್ಲಿ ಸೋಮವಾರ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
    ಜಿಲ್ಲಾ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಅಜಾದ್ ಪಾರ್ಕ್ ವೃತ್ತಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕೊಲೆ ಪ್ರಕರಣಗಳು ಹಾಗೂ ಅನ್ಯಧರ್ಮಿಯರಿಂದ ಹಿಂದುಗಳ ಮೇಲೆ ನಿರಂತರವಾಗಿ ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ನಮ್ಮ ದೇಶದಲ್ಲಿಯೇ ಹಿಂದುಗಳು ರಕ್ಷಣೆಗಾಗಿ ಮನವಿ ಮಾಡುವ ಸ್ಥಿತಿ ನಿರ್ಮಾಣವಾಗಿರುವುದು ದುರಂತ ಎಂದರು.
    ನೇಹಾ ಹತ್ಯೆ ಮಾಡಿರುವ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಪಿಗೆ ಆದ ಶಿಕ್ಷೆ ನೋಡಿದವರು ಮುಂದೆ ಈ ರೀತಿಯ ಕೃತ್ಯ ಎಸಗಲು ಹೆದರುವಂತಾಗಬೇಕು. ಅದನ್ನು ಬಿಟ್ಟು ಸರ್ಕಾರ ಆರೋಪಿಯನ್ನು ರಕ್ಷಿಸಲು ಮುಂದಾಗಬಾರದು ಎಂದು ಆಗ್ರಹಿಸಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಹಿಂದುಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗುತ್ತಿದೆ. ಮಂಗಳೂರಿನಲ್ಲಿ ಹಿಂದುಗಳನ್ನೇ ಟಾರ್ಗೆಟ್ ಮಾಡಿ ಕುಕ್ಕರ್ ಬಾಂಬ್ ಬ್ಲಾಸ್ಟ್‌ಗೆ ಪ್ಲಾನ್ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಹೋಟೆಲ್ ಹೆಸರಿನಲ್ಲಿ ರಾಮ ಎಂಬ ಹೆಸರಿದೆ ಎನ್ನುವ ಕಾರಣಕ್ಕೆ ಬ್ಲಾಸ್ಟ್ ಮಾಡಲಾಯಿತು. ಹನುಮಾನ್ ಚಾಲೀಸಾ ಹಾಕಿದರು ಎನ್ನುವ ಕಾರಣಕ್ಕೆ ಅಂಗಡಿಯೊಳಗೆ ನುಗ್ಗಿ ಹಲ್ಲೆ ಮಾಡಲಾಗುತ್ತಿದೆ. ರಾಮನವಮಿಯಂದು ರಾಮನ ಪರ ಘೋಷಣೆ ಮಾಡಿದ್ದಕ್ಕೆ ಹಲ್ಲೆ ನಡೆಸಲಾಗಿದೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಕ್ರೈಂಸ್ಟೇಟ್ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಇದು ವೈಯಕ್ತಿಕ ವಿಚಾರಕ್ಕೆ ನಡೆದ ಘಟನೆ ಎನ್ನುತ್ತಾರೆ. ಇನ್ನು ಗೃಹ ಸಚಿವರು ಪ್ರೀತಿ ವಿಷಯಕ್ಕೆ ನಡೆದ ಘಟನೆ ಎಂದು ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಒಂದು ವೇಳೆ ಆರೋಪಿ ಪ್ರೀತಿಯ ವಿಷಯಕ್ಕಾಗಿಯೇ ನೇಹಾ ಹತ್ಯೆ ಮಾಡಿದ್ದರೆ ತಾನು ಅದೇ ಚಾಕುವಿನಿಂದಲೇ ತನ್ನ ಕತ್ತು ಕೊಯ್ದುಕೊಳ್ಳುತ್ತಿದ್ದ. ಆದರೆ ಆರೋಪಿ ಜಿಹಾದಿ ಮನೋಭಾವ ಹೊಂದಿದ್ದರಿಂದಲೇ ನೇಹಾಳನ್ನು ಹತ್ಯೆ ಮಾಡಿದ್ದಾನೆ. ಇಂಥ ವಿಚಾರಗಳಲ್ಲಿ ಕ್ಷುಲ್ಲಕ ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
    ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜೆಸಂತಾ ಅನಿಲ್ ಕುಮಾರ್, ಪ್ರಮುಖರಾದ ಹಿರೇಮಗಳೂರು ಪುಟ್ಟಸ್ವಾಮಿ, ಅಂಕಿತಾ, ಚೈತ್ರಾ ಗೌಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts