More

    ಆಯುಷ್ಮಾನ್ ಭಾರತ್ ಸರ್ವರ್ ಡೌನ್

    ಭರತ್ ಶೆಟ್ಟಿಗಾರ್, ಮಂಗಳೂರು
    ಆಯುಷ್ಮಾನ್ ಭಾರತ್ ಯೋಜನೆಯಡಿ ಸಂಯೋಜಿತ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19ಗೆ ಚಿಕಿತ್ಸೆ ಸಿಗಲು ಆರಂಭವಾದ ಬಳಿಕ ಆಯುಷ್ಮಾನ್ ಭಾರತ್‌ಗೆ ಕಾರ್ಡ್‌ಗೆ ಮತ್ತೆ ಬೇಡಿಕೆ ಬಂದಿದೆ. ಇದರಿಂದಾಗಿ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು, ಜನರು ಕಾರ್ಡ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಎದುರಾಗಿದೆ.
    ಪ್ರಸ್ತುತ ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿವಿಧೆಡೆ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಶಿಬಿರಗಳನ್ನು ಆಯೋಜಿಸಿ ಕಾರ್ಡ್ ಇಲ್ಲವರಿಗೆ ಕಾರ್ಡ್ ಮಾಡಿಕೊಡುತ್ತಿವೆ. ಜತೆಗೆ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಮಂಗಳೂರು-1, ಸೇವಾ ಸಿಂಧು ಸೈಬರ್ ಸೆಂಟರ್, ಗ್ರಾಪಂಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಕಾರ್ಡ್ ನೋಂದಣಿ ಪ್ರಕ್ರಿಯೆಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳಿಂದ ಸರ್ವರ್ ಸಮಸ್ಯೆ ಹೆಚ್ಚಾಗಿದ್ದು, ಜನರು ರಜೆ ಮಾಡಿ ನೋಂದಣಿ ಕೇಂದ್ರಗಳಿಗೆ ತೆರಳಿದರೂ ಕಾರ್ಡ್ ಮಾಡಿಸಲು ಸಾಧ್ಯವಾಗದೆ ಹಿಂತಿರುಗುತ್ತಿದ್ದಾರೆ.
    ಸರ್ವರ್ ಸಮಸ್ಯೆ ಶಿಬಿರಗಳಿಗೂ ತಟ್ಟಿದೆ. ಶಿಬಿರಗಳೇ ರದ್ದಾದ ಉದಾಹರಣೆಯೂ ಇದೆ. ಕೆಲವೆಡೆ ಬೆರಳೆಣಿಕೆ ಮಂದಿಯನ್ನು ಮಾತ್ರ ನೋಂದಣಿ ಮಾಡಿಸಲು ಸಾಧ್ಯವಾಗಿದೆ. ಕಾರ್ಡ್‌ದಾರರ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಿದ್ದಂತೆ, ಕೊನೇ ಹಂತದಲ್ಲಿರುವಾಗ ಸರ್ವರ್ ಡೌನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ನೋಂದಣಿ ಮಾಡುವ ಸಿಬ್ಬಂದಿಗೂ ತಲೆನೋವಾಗಿ ಪರಿಣಮಿಸಿದೆ. ಕೋವಿಡ್‌ಗಿಂತ ಮುಂಚೆ ಕಾರ್ಡ್ ಮಾಡಿಸುವವರೇ ಇರಲಿಲ್ಲ. ದಿನದಲ್ಲಿ ಒಂದೋ ಎರಡೋ ನೋಂದಣಿ ಆಗುತ್ತಿತ್ತು. ಈಗ ಏಕಕಾಲದಲ್ಲಿ ಸರ್ವರ್‌ನ ಸಾಮರ್ಥ್ಯಕ್ಕಿಂತ ಹೆಚ್ಚು ಮಂದಿ ಲಾಗಿನ್ ಆಗಿ ನೋಂದಣಿ ಮಾಡುತ್ತಿರುವುದರಿಂದ ಈ ತೊಂದರೆ ಆಗಿದೆ. ಎಲ್ಲ ಕಡೆಗಳಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಸರಿಯಾಗಬಹುದು ಎನ್ನುತ್ತಾರೆ ಅಧಿಕಾರಿಗಳು.

    3.50 ಲಕ್ಷ ಮಂದಿಯಲ್ಲಿ ಕಾರ್ಡ್
    ದ.ಕ ಜಿಲ್ಲೆಯಲ್ಲಿ ಕೋವಿಡ್‌ಗೆ ಮುನ್ನ 3.50 ಲಕ್ಷ ಮಂದಿ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡಿದ್ದರು. ಮಾರ್ಚ್ ಬಳಿಕ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಒಂದು ತಿಂಗಳಿನಿಂದ ಮತ್ತೆ ಕಾರ್ಡ್ ನೋಂದಣಿ ಪ್ರಕ್ರಿಯೆ ಪುನರಾರಂಭವಾಗಿದ್ದು, ನೂರಾರು ಕಡೆ ಶಿಬಿರಗಳು ಆಯೋಜನೆಗೊಂಡಿವೆ. ಇದರಿಂದ ಕಾರ್ಡ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಎಷ್ಟು ನೋಂದಣಿಯಾಗಿದೆ ಎನ್ನುವ ಮಾಹಿತಿ ಇನ್ನಷ್ಟೇ ಸಿಗಬೇಕಾಗಿದೆ ಎನ್ನುತ್ತಾರೆ ಜಿಲ್ಲಾ ನೋಡಲ್ ಅಧಿಕಾರಿ ಡಾ.ರತ್ನಾಕರ ಗಾಣಿಗ.

    ಉಡುಪಿಯಲ್ಲಿಲ್ಲ ಸಮಸ್ಯೆ
    ಉಡುಪಿಯಲ್ಲಿ ಶೇ.60ರಷ್ಟು ಮಂದಿ ಆಯುಷ್ಮಾನ್ ಕಾರ್ಡ್ ಮಾಡಿಸಿದ್ದಾರೆ. ಕೋವಿಡ್-19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಪ್ರಸ್ತುತ ಯಾವುದೇ ನೋಂದಣಿ ಶಿಬಿರಗಳಿಗೆ ಅನುಮತಿ ನೀಡಿಲ್ಲ. ಪ್ರಸ್ತುತ ಜಿಲ್ಲಾಸ್ಪತ್ರೆಯಿಂದ ರೆಫರಲ್ ಮಾಡುವವರಿಗೆ ಆಯುಷ್ಮಾನ್ ಕಾರ್ಡ್ ಮಾಡಿಸಲಾಗುತ್ತಿದೆ. ಸರ್ವರ್ ಸಮಸ್ಯೆ ಬಗ್ಗೆ ದೂರು ಬಂದಿಲ್ಲ ಎಂದು ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಮಧುಸೂದನ್ ನಾಯಕ್ ತಿಳಿಸಿದ್ದಾರೆ.

    ಕೋವಿಡ್ ಬಂದ ಬಳಿಕ ಜನರಿಗೆ ಆರೋಗ್ಯ ಬಗ್ಗೆ, ಖರ್ಚು ವೆಚ್ಚಗಳ ಕುರಿತ ಕಾಳಜಿ ಹೆಚ್ಚಾಗಿದೆ. ಆಯುಷ್ಮಾನ್ ಭಾರತ್ ಕಾರ್ಡ್ ಮಹತ್ವ ಗೊತ್ತಾಗುತ್ತಿದೆ. ಆದ್ದರಿಂದ ಅಲ್ಲಲ್ಲಿ ಶಿಬಿರ ನಡೆಯುತ್ತಿವೆ. ಇದರಿಂದಾಗಿ ಸರ್ವರ್ ಸಮಸ್ಯೆಯೂ ಕಾಣಿಸಿಕೊಂಡಿದೆ. ಈ ಕುರಿತು ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ತಾಂತ್ರಿಕ ಕಾರಣವನ್ನು ಜಿಲ್ಲಾ ಮಟ್ಟದಲ್ಲಿ ಏನೂ ಮಾಡಲಾಗುವುದಿಲ್ಲ.
    ಡಾ.ರತ್ನಾಕರ್ ಗಾಣಿಗ, ದ.ಕ.ಜಿಲ್ಲಾ ನೋಡಲ್ ಅಧಿಕಾರಿ, ಆಯುಷ್ಮಾನ್ ಭಾರತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts