More

    ರಾಮಮಂದಿರ ಶಿಲಾನ್ಯಾಸಕ್ಕೆ ಕ್ರೀಡಾತಾರೆಯರ ಸಂಭ್ರಮ

    ಬೆಂಗಳೂರು: ದೇಶಕ್ಕೆ ದೇಶವೇ 500 ವರ್ಷಗಳಿಂದ ಕಾಯುತ್ತಿದ್ದ ಕಾರ್ಯಕ್ರಮಕ್ಕೆ ಬುಧವಾರ ಅಯೋಧ್ಯೆ ವೇದಿಕೆಯಾಗಿದೆ. ರಾಮಮಂದಿರ ನಿರ್ಮಾಣದ ಕನಸು ನನಸಾಗುವುದಕ್ಕೆ ಚಾಲನೆ ಸಿಕ್ಕಿದ್ದು, ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಐತಿಹಾಸಿಕ ಕ್ಷಣದ ಬಗ್ಗೆ ದೇಶದ ಕ್ರೀಡಾತಾರೆಯರು ಕೂಡ ಸಂಭ್ರಮ ಹಂಚಿಕೊಂಡಿದ್ದಾರೆ.

    ಟೀಮ್ ಇಂಡಿಯಾ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸುರೇಶ್ ರೈನಾ, ಕುಸ್ತಿ ತಾರೆಯರಾದ ಯೋಗೇಶ್ವರ್ ದತ್, ಬಬಿತಾ ಪೋಗಟ್, ಪೂಜಾ ದಾಂಢ, ಸಾಕ್ಷಿ ಮಲಿಕ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ರಾಮಮಂದಿರ ನಿರ್ಮಾಣದ ಕನಸು ನನಸಾಗುತ್ತಿರುವ ಬಗ್ಗೆ ಸಂಭ್ರಮಿಸಿದ್ದಾರೆ.

    ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ರಾಮಮಂತ್ರದೊಂದಿಗೆ ‘ಅಯೋಧ್ಯಾ ಪತಿ ಶ್ರೀರಾಮ್ ಜೀ ಕಿ ಜೈ’ ಎಂದು ಶ್ರೀರಾಮನ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ. ಬಿಜೆಪಿ ಸಂಸದರೂ ಆಗಿರುವ ಗೌತಮ್ ಗಂಭೀರ್, ಶ್ರೀರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ವಿಡಿಯೋವನ್ನು ರೀಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ. ಸುರೇಶ್ ರೈನಾ ಕೂಡ, ‘ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ದೇಶದ ಜನರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಜತೆಗೆ ದೇಶದಲ್ಲಿ ಇನ್ನು ಶಾಂತಿ ನೆಲೆಸಲಿ ಎಂದು ಹಾರೈಸಿದ್ದಾರೆ.

    ಇದನ್ನೂ ಓದಿ: ಮುಂದಿನ ಪೀಳಿಗೆಗೆ ಶ್ರೀರಾಮಮಂದಿರ ಸ್ಫೂರ್ತಿ: ಪ್ರಧಾನಿ ಮೋದಿ

    ‘ಭೂಮಿ ಪೂಜೆ ನೆರವೇರಿತು. ದೇಶದ ಎಲ್ಲ ಜನರಿಗೆ ಅಭಿನಂದನೆಗಳು. ಜೈ ಶ್ರೀರಾಮ್’ ಎಂದು 2012ರ ಲಂಡನ್ ಒಲಿಂಪಿಕ್ಸ್ ಕಂಚು ವಿಜೇತ ಪೈಲ್ವಾನ್ ಯೋಗೇಶ್ವರ್ ದತ್ ಟ್ವೀಟಿಸಿದ್ದಾರೆ. ಕುಸ್ತಿಪಟು ಬಬಿತಾ ಪೋಗಟ್ ಟ್ವಿಟರ್ ಖಾತೆಯ ಪ್ರೊಫೈಲ್‌ನಲ್ಲಿ ಶ್ರೀರಾಮನ ಚಿತ್ರವನ್ನೇ ಹಾಕಿಕೊಂಡಿದ್ದು, ‘ಜೈ ಶ್ರೀರಾಮ್’ ಎಂದ ಬರೆದುಕೊಂಡಿದ್ದಾರೆ.

    ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಪ್ರಧಾನಿ ಮೋದಿ ಅವರ ಭೂಮಿ ಪೂಜೆಯ ಚಿತ್ರಗಳ ಸುದ್ದಿಗೆ ಪ್ರತಿಯಾಗಿ, ‘ಜೈ ಶ್ರೀರಾಮ್’ ಎಂದು ಟ್ವೀಟಿಸಿ ಸಂಭ್ರಮಿಸಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಕುಸ್ತಿ ಪಟು ಸಾಕ್ಷಿ ಮಲಿಕ್ ಕೂಡ ರಾಮಮಂದಿರದ ಚಿತ್ರವನ್ನು ಪ್ರಕಟಿಸಿ ಜೈಶ್ರೀರಾಮ್ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts