More

    ಸಮ್ಮೇಳನ, ಉತ್ಸವದಲ್ಲಿ ಸುಗಮ ಸಂಗೀತವಿರಲಿ: ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್ ಒತ್ತಾಯ

    ಮಂಡ್ಯ: ರಾಜ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಹಾಗೂ ಉತ್ಸವಗಳಲ್ಲಿ ಸುಗಮ ಸಂಗೀತ ಆಯೋಜಿಸಿರುವುದು ಕಡ್ಡಾಯವಾಗಲಿ ಎಂದು ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್ ಒತ್ತಾಯಿಸಿದರು.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಕೆ.ಎಸ್.ನ ಸಾಹಿತ್ಯ ಹಾಗೂ ಕಾವ್ಯ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸುಗಮ ಸಂಗೀತಕ್ಕೆ ನೀಡುವ ಪ್ರೋತ್ಸಾಹ ಹೆಚ್ಚಾಗಬೇಕಿದೆ ಎಂದರು.
    ಬದುಕಿನ ಸಾರವನ್ನು ಕೆ.ಎಸ್.ನರಸಿಂಹಸ್ವಾಮಿ ಅವರ ಪ್ರೇಮಗೀತೆಗಳು ಅತ್ಯಂತ ಸರಳವಾಗಿ ಮನಮುಟ್ಟುವ ರೀತಿಯಲ್ಲಿ ಅನಾವರಣ ಮಾಡುತ್ತವೆ. ಪಂಡಿತಪಾಮರರಿಗೂ ಇಷ್ಟವಾಗುವ ರೀತಿಯಲ್ಲಿ ಸಾಹಿತ್ಯ ಪ್ರಪಂಚದಲ್ಲಿ ಅನೇಕ ಅಮೋಘ ಪ್ರೇಮಗೀತೆಗಳನ್ನು ನೀಡಿದ ಹೆಗ್ಗಳಿಕೆ ಕೆಎಸ್‌ನ ಅವರಿಗೆ ಸಲ್ಲುತ್ತದೆ. ಅವರ ಗೀತೆಗಳು ಅಮೋಘವಾಗಿ ಜನಮನ ಮುಟ್ಟುವ ರೀತಿಯಲ್ಲಿ ರಾಗ ಸಂಯೋಜಿಸಿ, ಹಾಡಿ ಅದನ್ನು ಅಜರಾಮರಗೊಳಿಸಿದ ಹೆಗ್ಗಳಿಕೆಗೆ ಗಾಯಕ ಮೈಸೂರು ಅನಂತಸ್ವಾಮಿ ಹಾಗೂ ಡಾ.ಸಿ.ಅಶ್ವಥ್ ಅವರಿಗೆ ಸಲ್ಲುತ್ತದೆ. ಸುಗಮ ಸಂಗೀತದಲ್ಲಿ ಕೆ.ಎಸ್. ನರಸಿಂಹಸ್ವಾಮಿ ಅವರ ಪ್ರೇಮಗೀತೆಗಳು ಎಲ್ಲರಲ್ಲೂ ಮಧುರ ಭಾವನೆಯನ್ನು ಉಂಟು ಮಾಡಿ ಬದುಕಿನ ಅರ್ಥವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರೇರೇಪಿಸುತ್ತವೆ ಎಂದು ಹೇಳಿದರು.
    ಜೀವನದ ಮೌಲ್ಯಗಳನ್ನು ಸಾರುವ ದಾಂಪತ್ಯ ಗಟ್ಟಿತನದ ಹೊಳಹುಗಳನ್ನು ನರಸಿಂಹಸ್ವಾಮಿ ಅವರ ಪ್ರೇಮಗೀತೆಗಳು ಕಟ್ಟಿಕೊಡುತ್ತವೆ. ಸಾಹಿತ್ಯದಲ್ಲಿ ಅನೇಕ ಗಂಭೀರ ಕವನಗಳಿವೆ. ಅದನ್ನು ಅವರ ಮೊಮ್ಮಗಳು ಡಾ.ಮೇಖಲಾ ಆಂಗ್ಲ ಭಾಷೆಗೆ ತುರ್ಜುಮೆಗೊಳಿಸಿ ಪ್ರಪಂಚದಾದ್ಯಂತ ಸಾಹಿತ್ಯ ಪ್ರಿಯರಿಗೆ ಸಂಸ್ಕೃತಿ ಪ್ರಿಯರಿಗೆ ಮುಟ್ಟಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿರುವುದು ಅತ್ಯಂತ ಮೆಚ್ಚುಗೆಯ ವಿಷಯವಾಗಿದೆ ಎಂದರು.
    ಪ್ರಶಸ್ತಿ ಸ್ವೀಕರಿಸಿದ ಕವಿ ಸರಜೂ ಕಾಟ್ಕರ್ ಮಾತನಾಡಿ, ಕಾಲೇಜುಗಳಲ್ಲಿ ಯುವಸಮೂಹ, ಹೊರಗೆ ಸಾಹಿತ್ಯ ಪ್ರಿಯರು ಮೈಸೂರು ಮಲ್ಲಿಗೆಯ ಕವನ ಸಂಕಲನವನ್ನು ಹಿಡಿದುಕೊಂಡು ಅಲೆದಾಡುವುದೇ ಒಂದು ಫ್ಯಾಶನ್ ಆಗಿತ್ತು. ಇದು ಬದುಕಿನ ಸಾಹಿತ್ಯದ ಪ್ರೀತಿಯನ್ನು ಅಭಿವ್ಯಕ್ತಿಸುತ್ತದೆ. ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿರವರ ಸಾಹಿತ್ಯ ಕೃಷಿ ಅಮೋಘ. ಬದುಕಿನ ಸಂಕೀರ್ಣತೆಯನ್ನು ಪ್ರೇಮ ಸಂಬಂಧ ಹಾಗೂ ಮಧುರತೆಯನ್ನು ತಮ್ಮ ಸರಳವಾದ ಕವನದಲ್ಲಿ ಅಭಿವ್ಯಕ್ತಿಸುವ ಮೂಲಕ ಸಾಹಿತ್ಯ ಪ್ರಪಂಚಕ್ಕೆ ಸುಗಮ ಸಂಗೀತ ಕಲಾ ಪ್ರಕಾರಗಳಿಗೆ ಅಮೋಘ ಕಾಣಿಕೆಯನ್ನು ನೀಡಿದ್ದಾರೆ ಎಂದು ಬಣ್ಣಿಸಿದರು.
    ಇನ್ನು ರಾಜ್ಯ ಸರ್ಕಾರ ಕಲಾವಿದರು ಹಾಗೂ ಕಲಾಸಂಸ್ಥೆಗಳಿಗೆ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲದು. ನೆರೆಯ ಮಹಾರಾಷ್ಟ್ರ ಸರ್ಕಾರ ಕಲಾ ಸಂಸ್ಕೃತಿಯ ಪ್ರಸಾರಕ್ಕಾಗಿ ಕಲಾವಿದರಿಗಾಗಿ ಪ್ರತಿ ವರ್ಷ 50 ಕೋಟಿ ರೂ ಅನುದಾನವನ್ನು ಮೀಸಲಿಟ್ಟಿದೆ. ಈ ಆದ್ದರಿಂದ ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕಲಾವಿದರು ಹಾಗೂ ಕಲಾ ಸಂಘ ಸಂಸ್ಥೆಗಳಿಗೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕಾಗಿದೆ ಎಂದು ಸಲಹೆ ನೀಡಿದರು.
    ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ನಿಂದ 2021-22ನೇ ಸಾಲಿನ ಸಾಹಿತ್ಯ ಪ್ರಶಸ್ತಿಯನ್ನು ಕವಯತ್ರಿ ಸವಿತಾ ನಾಗಭೂಷಣ್ ಮತ್ತು 2022-23ನೇ ಸಾಲಿನ ಪ್ರಶಸ್ತಿಯನ್ನು ಕವಿ ಸರಜೂ ಕಾಟ್ಕರ್‌ಗೆ ಹಾಗೂ 2021-22ನೇ ಸಾಲಿನ ಕಾವ್ಯಗಾಯನ ಪ್ರಶಸ್ತಿಯನ್ನು ಗಾಯಕಿ ಎಂ.ಕೆ.ಜಯಶ್ರೀ ಮತ್ತು 2022-23ನೇ ಪ್ರಶಸ್ತಿಯನ್ನು ಗಾಯಕ ಗರ್ತಿಕೆರೆ ರಾಘಣ್ಣ ಅವರಿಗೆ ನೀಡಿ ಸನ್ಮಾನಿಸಲಾಯಿತು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ನ ಟ್ರಸ್ಟ್ ಕಾರ್ಯದರ್ಶಿ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರೊ.ಜಿ.ಟಿ.ವೀರಪ್ಪ, ಶ್ರೀನಿವಾಸ ಉಡುಪ, ಉದಯಕುಮಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts