More

    ವೈಮನಸ್ಸು, ಗುಂಪುಗಾರಿಕೆ ಸಹಜ

    ಬೆಳಗಾವಿ: ರಾಜಕೀಯ ಪಕ್ಷ ಅಂದ ಮೇಲೆ ವೈಮನಸ್ಸು ಇರುವುದು ಸಹಜ. ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ಗಾಗಿ ಗುಂಪುಗಾರಿಕೆ ಉಂಟಾಗುವುದು ಸಾಮಾನ್ಯ. ಆದರೆ, ಪಕ್ಷದ ವಿಚಾರ ಬಂದಾಗ ನಾವೆಲ್ಲ ಒಂದಾಗುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

    ಬೆಳಗಾವಿ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಕಾರ್ಯಕರ್ತರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರಭಾವಿ ನಾಯಕರು. ಅವರ ನೇತೃತ್ವದಲ್ಲಿ ಪಕ್ಷ ಮುನ್ನಡೆಸುತ್ತೇವೆ. ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಬಣಗಳಿರುವುದು ನಿಜ. ಆದರೆ, ಪಕ್ಷ ಸಂಘಟನೆ ಇನ್ನಿತರ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತೇವೆ ಎಂದರು.

    ತಳಮಟ್ಟದಿಂದ ಸಂಘಟನೆ: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಆಯ್ಕೆ ಕುರಿತು ಬಹುದಿನಗಳಿಂದ ಚರ್ಚೆ ನಡೆದಿತ್ತು. ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದರು. ಇದನ್ನು ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಗಂಭೀರವಾಗಿ ಪರಿಗಣಿಸಿ ಒಬ್ಬ ಅಧ್ಯಕ್ಷ, ಮೂವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಅವರ ಮಾರ್ಗದರ್ಶನಂತೆ ತಳಮಟ್ಟದಿಂದ ಪಕ್ಷ ಸಂಘಟನೆ ಕೆಲಸ ಆರಂಭವಾಗಲಿದೆ ಎಂದರು.

    ಅಧ್ಯಕ್ಷರಿಗೆ ಸಹಕಾರ: ಮುಂದಿನ 3 ವರ್ಷದ ಬಳಿಕ ಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ. ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರು ಕೈಗೊಳ್ಳುವ ನಿರ್ಧಾರಕ್ಕೆ ಕಾರ್ಯಾಧ್ಯಕ್ಷರು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಡಿ.ಕೆ. ಶಿವಕುಮಾರ ಅವರು ಅಧ್ಯಕ್ಷರಾಗಿದ್ದರಿಂದ ಯುವ ಕಾರ್ಯಕರ್ತರಿಗೂ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯನ್ನು ಪರಿಶಿಷ್ಟ ಜಾತಿಯವರಿಗೂ ನೀಡಬೇಕು ಎಂಬ ಆಸೆ ನಮಗೂ ಇದೆ. ಇನ್ನೂ ಒಂದು ಹುದ್ದೆ ಖಾಲಿಯಿದ್ದು, ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು. ಪಕ್ಷದಲ್ಲಿ ಎಲ್ಲ ಸಮುದಾಯಕ್ಕೆ ನ್ಯಾಯ ಕಲ್ಪಿಸಿಕೊಡಲಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.

    ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಮುಖಂಡ ವೀರಕುಮಾರ ಪಾಟೀಲ, ಲಕ್ಷ್ಮಣರಾವ್ ಚಿಂಗಳೆ ಇತರರಿದ್ದರು.

    ಗೋಕಾಕ, ಕಾಗವಾಡ ಮತ್ತು ಅಥಣಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾಗಿರುವುದರಿಂದ ಕಾರ್ಯಕರ್ತರು ಬಿಜೆಪಿಯತ್ತ ಮುಖ ಮಾಡುತ್ತಿರುವುದು ನಿಜ. ಉಪ ಚುನಾವಣೆಯಲ್ಲಿ ನಾವೂ ನಮ್ಮ ಶಕ್ತಿ ಪ್ರದರ್ಶನ ಮಾಡಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಮತ್ತೆ ಪಕ್ಷ ಬಲಪಡಿಸುವ ಶಕ್ತಿ, ತಂತ್ರ ನಮ್ಮ ಕಾರ್ಯಕರ್ತರಲ್ಲಿಯೂ ಇದೆ.
    | ಸತೀಶ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts