More

    ವಿಶ್ವ ನಂ.1 ಆಶ್ಲೆಗ್ ಬಾರ್ಟಿಗೆ ಆಸ್ಟ್ರೇಲಿಯನ್ ಓಪನ್ ಕಿರೀಟ

    ಮೆಲ್ಬೋರ್ನ್: ವಿಶ್ವ ನಂ.1 ಆಶ್ಲೆಗ್ ಬಾರ್ಟಿ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿದರು. ಈ ಮೂಲಕ ಆತಿಥೇಯ ಆಸ್ಟ್ರೇಲಿಯನ್ನರ ಪಾಲಿಗೆ ಕಳೆದ 44 ವರ್ಷಗಳಿಂದ ಮರೀಚಿಕೆಯಾಗಿದ್ದ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿಯನ್ನು ಒಲಿಸಿಕೊಳ್ಳಲು ಯಶಸ್ವಿಯಾದರು. ರಾಡ್ ಲಾವೆರ್ ಅರೆನಾದಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸ್ಟಾರ್ ಆಟಗಾರ್ತಿ ಆಶ್ಲೆಗ್ ಬಾರ್ಟಿ 6-3, 7-6 ನೇರ ಸೆಟ್‌ಗಳಿಂದ ಅಮೆರಿಕದ ಡೇನಿಯಲ್ ಕಾಲಿನ್ಸ್ ಅವರನ್ನು ಸುಮಾರು 2 ಗಂಟೆಗಳ ಹಣಾಹಣಿಯಲ್ಲಿ ಮಣಿಸಿದರು. ಇದರೊಂದಿಗೆ ವೃತ್ತಿ ಜೀವನದಲ್ಲಿ ಮೂರನೇ ಗ್ರಾಂಡ್ ಸ್ಲಾಂ ಗೆದ್ದುಕೊಂಡರು.

    ತವರು ಪ್ರೇಕ್ಷಕರ ಭರ್ಜರಿ ಬೆಂಬಲದೊಂದಿಗೆ ಕಣಕ್ಕಿಳಿದ ಬಾರ್ಟಿಗೆ ಮೊದಲ ಸೆಟ್‌ನ ಆರಂಭಿಕ ಹಂತದಲ್ಲಿ ಅಮೆರಿಕದ 27 ಶ್ರೇಯಾಂಕಿತ ಆಟಗಾರ್ತಿ ಡೇನಿಯಲ್ ಕಾಲಿನ್ಸ್‌ರಿಂದ ಕೆಲಕಾಲ ಪೈಪೋಟಿ ಎದುರಿಸಿದರು. ಬಳಿಕ ಆಕರ್ಷಕ ಸರ್ವ್‌ಗಳ ಮೂಲಕ ಗಮನಸೆಳೆದ ಬಾರ್ಟಿ ಮೊದಲ ಸೆಟ್ ಅನ್ನು ಕೇವಲ 32 ನಿಮಿಷಗಳಲ್ಲಿ ಸುಲಭವಾಗಿ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ 28 ವರ್ಷದ ಅಮೆರಿಕ ಆಟಗಾರ್ತಿಯಿಂದ ಪ್ರಬಲ ಪೈಪೋಟಿ ಎದುರಿಸಿದ ಬಾರ್ಟಿ ಆರಂಭಿಕ ಹಿನ್ನಡೆ ಕಂಡರು. ಎರಡನೇ ಸೆಟ್‌ನಲ್ಲಿ 0-3 ರಿಂದ ಹಿನ್ನಡೆಯಲ್ಲಿದ್ದರೂ ಬಾರ್ಟಿ ತಿರುಗೇಟು ನೀಡಿದರು. ಏಕಾಏಕಿ 1-5 ರಿಂದ ಹಿನ್ನಡೆ ಅನುಭವಿಸಿದ ಬಾರ್ಟಿ ಸೋಲಿನ ಸುಳಿಗೆ ಸಿಲುಕಿದರು. ನಂತರ 6 ಗೇಮ್‌ನಲ್ಲಿ 5 ರಲ್ಲಿ ಜಯಿಸುವ ಮೂಲಕ ಬಾರ್ಟಿ ಸೆಟ್‌ನಲ್ಲಿ 6-6 ರಿಂದ ಸಮಬಲ ಸಾಧಿಸಿದರು. ಬಳಿಕ ಟೈಬ್ರೇಕರ್‌ನಲ್ಲಿ ಪ್ರಭುತ್ವ ಸಾಧಿಸಿದ ಬಾರ್ಟಿ ಆಕರ್ಷಕ ಸರ್ವ್‌ಗಳ ಮೂಲಕ ಜಯದ ನಗೆ ಬೀರಿದರು. ಲಿತಾಂಶ ನಿರ್ಣಾಯಕ್ಕಾಗಿ ಮೂರನೇ ಸೆಟ್‌ಗೆ ಕೊಂಡೊಯ್ಯುವ ಅಮೆರಿಕದ ಆಟಗಾರ್ತಿಯ ಯೋಜನೆ ಕೈಗೂಡಲಿಲ್ಲ. ಮತ್ತೊಂದೆಡೆ, ಬಾರ್ಟಿ ಟೂರ್ನಿಯುದ್ದಕ್ಕೂ ಎದುರಾಳಿಗಳಿಗೆ ಒಂದೇ ಒಂದು ಸೆಟ್ ಬಿಟ್ಟು ಕೊಡದೆ, ನೇರ ಸೆಟ್‌ಗಳಿಂದ ಜಯ ದಾಖಲಿಸಿದರು.

    ‘ನನ್ನ ಬಹುದಿನಗಳ ಕನಸು ನನಸಾಯಿತು. ಈ ಪ್ರಶಸ್ತಿಗಾಗಿ ಆಸ್ಟ್ರೇಲಿಯಾದ ಜನತೆ ಕಾಯುತ್ತಿದ್ದರು. ಅಂಥ ಕ್ಷಣ ಇಂದು ಒಲಿಯಿತು. ನನ್ನ ವೃತ್ತಿ ಜೀವನದ ಅವಿಸ್ಮರಣೀಯ ದಿನ ಇದಾಗಿದ್ದು, ಪ್ರಶಸ್ತಿಯನ್ನು ಆಸ್ಟ್ರೇಲಿಯಾ ಜನತೆಗೆ ಅರ್ಪಿಸುವೆ’ – ಆಶ್ಲೆಗ್ ಬಾರ್ಟಿ, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್

    * 3: ಬಾರ್ಟಿ ಜಯಿಸಿದ 3ನೇ ಗ್ರಾಂಡ್ ಸ್ಲಾಂ ಟ್ರೋಫಿ ಇದಾಗಿದೆ. 2021ರಲ್ಲಿ ವಿಂಬಲ್ಡನ್ ಹಾಗೂ 2019ರಲ್ಲಿ ಫ್ರೆಂಚ್  ಓಪನ್ ಜಯಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts