More

    ಅಡಿಲೇಡ್‌ನಲ್ಲೂ ಅಡಿಮೇಲಾದ ಇಂಗ್ಲೆಂಡ್, ಸತತ 9ನೇ ಅಹರ್ನಿಶಿ ಟೆಸ್ಟ್ ಗೆದ್ದ ಆಸೀಸ್

    ಅಡಿಲೇಡ್: ವಿಕೆಟ್ ಕೀಪರ್-ಬ್ಯಾಟರ್ ಜೋಸ್ ಬಟ್ಲರ್ (26 ರನ್, 207 ಎಸೆತ, 2 ಬೌಂಡರಿ) ಜಿಗುಟಿನ ಬ್ಯಾಟಿಂಗ್ ಪ್ರತಿರೋಧದ ನಡುವೆ ವೇಗಿ ಜೇ ರಿಚರ್ಡ್‌ಸನ್ (42ಕ್ಕೆ 5) ದಾಳಿಗೆ ಕುಸಿದ ಇಂಗ್ಲೆಂಡ್ ತಂಡ ಆಶಸ್ ಸರಣಿಯ 2ನೇ ಹಾಗೂ ಅಹರ್ನಿಶಿ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾಕ್ಕೆ 275 ರನ್‌ಗಳಿಂದ ಶರಣಾಗಿದೆ. ಇದರಿಂದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಸತತ 9ನೇ ಗೆಲುವಿನೊಂದಿಗೆ ಅಜೇಯ ದಾಖಲೆ ಮುಂದುವರಿಸಿದ ಆಸೀಸ್, 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯನ್ನೂ ಸಾಧಿಸಿದೆ. ಇದರಿಂದ ಬರೀ ಆಶಸ್ ಟ್ರೋಫಿ ಗೆಲುವಷ್ಟೇ ಅಲ್ಲದೆ ಆಸೀಸ್ ತಂಡ ಸರಣಿ ಕ್ಲೀನ್‌ಸ್ವೀಪ್ ಸಾಧಿಸುವ ನಿರೀಕ್ಷೆಯೂ ಹೆಚ್ಚಾಗಿದೆ.

    468 ರನ್ ಸವಾಲಿಗೆ ಪ್ರತಿಯಾಗಿ ಸೋಮವಾರ 4 ವಿಕೆಟ್‌ಗೆ 82 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ, ಡಿನ್ನರ್ ಬ್ರೇಕ್ ಬಳಿಕ 192 ರನ್‌ಗಳಿಗೆ ಸರ್ವಪತನ ಕಂಡಿತು. ಬೆಳಗ್ಗೆ ಬೆನ್ ಸ್ಟೋಕ್ಸ್ (12) ಕೆಲಕಾಲ ಪ್ರತಿರೋಧ ಒಡ್ಡಿದರು. ಬಳಿಕ ಕ್ರಿಸ್ ವೋಕ್ಸ್ (44) ಜತೆಗೂಡಿ 61 ರನ್ ಸೇರಿಸಿದ ಬಟ್ಲರ್, ಸುಮಾರು 32 ಓವರ್‌ಗಳ ಕಾಲ ಆಸೀಸ್ ಬೌಲರ್‌ಗಳನ್ನು ಕಾಡಿದರು. ಆದರೆ ಕೊನೆಗೆ ದಿನದಾಟದ 21 ಓವರ್ ಬಾಕಿ ಇರುವಾಗ ಆಂಗ್ಲರ ಹೋರಾಟ ಕೊನೆಗೊಂಡಿತು.

    ಸರಣಿಯ 3ನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಡಿ.26ರಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಇದರಲ್ಲಿ ಕನಿಷ್ಠ ಡ್ರಾ ಸಾಧಿಸಿದರೂ ಆಸೀಸ್ ಟ್ರೋಫಿ ಉಳಿಸಿಕೊಳ್ಳಲಿದೆ. ಆಶಸ್ ಸರಣಿಯಲ್ಲಿ ಒಮ್ಮೆ ಮಾತ್ರ ತಂಡವೊಂದು 0-2 ಹಿನ್ನಡೆಯ ಬಳಿಕವೂ ಸರಣಿ ಗೆದ್ದ ದೃಷ್ಟಾಂತವಿದೆ. 1936-37ರಲ್ಲಿ ದಿಗ್ಗಜ ಡಾನ್ ಬ್ರಾಡ್ಮನ್ ನಾಯಕತ್ವದ ಚೊಚ್ಚಲ ಸರಣಿಯಲ್ಲಿ ಆಸೀಸ್ ಈ ಸಾಧನೆ ತೋರಿತ್ತು.

    ಆಸ್ಟ್ರೇಲಿಯಾ: 9 ವಿಕೆಟ್‌ಗೆ 473 ಡಿಕ್ಲೇರ್ ಮತ್ತು 9 ವಿಕೆಟ್‌ಗೆ 230 ಡಿಕ್ಲೇರ್; ಇಂಗ್ಲೆಂಡ್: 236 ಮತ್ತು 192 (ಸ್ಟೋಕ್ಸ್ 12, ಬಟ್ಲರ್ 26, ವೋಕ್ಸ್ 44, ಜೇ ರಿಚರ್ಡ್‌ಸನ್ 42ಕ್ಕೆ 5, ಸ್ಟಾರ್ಕ್ 43ಕ್ಕೆ 2, ಲ್ಯಾನ್ 55ಕ್ಕೆ 2). ಪಂದ್ಯಶ್ರೇಷ್ಠ: ಮಾರ್ನಸ್ ಲಬುಶೇನ್.

    3ನೇ ಟೆಸ್ಟ್‌ಗೆ ಕಮ್ಮಿನ್ಸ್, ಹ್ಯಾಸಲ್‌ವುಡ್
    ಆಸೀಸ್ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಸಲ್‌ವುಡ್ ಆಶಸ್ ಸರಣಿಯ 3ನೇ ಪಂದ್ಯಕ್ಕೆ ಮರಳಲಿದ್ದಾರೆ. ಕರೊನಾ ಸೋಂಕಿತರ ಸಂಪರ್ಕದಿಂದಾಗಿ ಕಮ್ಮಿನ್ಸ್ 2ನೇ ಟೆಸ್ಟ್ ತಪ್ಪಿಸಿಕೊಂಡಿದ್ದರೆ, ಹ್ಯಾಸಲ್‌ವುಡ್ ಗಾಯಗೊಂಡಿದ್ದರು. ಸರಣಿಯ ಉಳಿದ ಮೂರು ಪಂದ್ಯಗಳಿಗೂ ಇದೇ ತಂಡ ಉಳಿಸಿಕೊಳ್ಳಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

    ಏಕದಿನ ನಾಯಕತ್ವದಿಂದ ಕೊಹ್ಲಿ ವಜಾಗೊಳಿಸಲು 4 ತಿಂಗಳಿನಿಂದ ಕಾದಿತ್ತು ಬಿಸಿಸಿಐ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts