More

    ಆಕರ್ಷಕ ಮಹಿಳಾ ಪಥ ಸಂಚಲನ

    ಬಾಗಲಕೋಟೆ: ಸಂಕ್ರಾಂತಿ ಹಬ್ಬದ ಅಂಗವಾಗಿ ರಾಷ್ಟ್ರ ಸೇವಿಕಾ ಸಮಿತಿ ಬಾಗಲಕೋಟೆ ಘಟಕ ಹಮ್ಮಿಕೊಂಡಿದ್ದ ಮಹಿಳೆಯರ ಪಥ ಸಂಚಲನ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ಮಹಿಳಾ ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನವನ್ನು ಸಾರ್ವಜನಿಕರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

    ಬಾಗಲಕೋಟೆ ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಬೀದಿ ಬೀದಿಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಮನೆಗಳ ಮುಂದೆ ರಂಗೋಲಿ ಚಿತ್ತಾರ ಗಮನ ಸೆಳೆಯುತ್ತಿದ್ದವು. ಹಸಿರು ತೋರಣ, ಸ್ವಾಗತ ಕಟೌಟ್ ಎಲ್ಲವೂ ಸೇರಿ ಹಬ್ಬದ ವಾತಾವರಣ ಸೃಷ್ಟಿಸಿತ್ತು.

    ಸಂಜೆ 4 ಗಂಟೆಗೆ ಸರಿಯಾಗಿ ಇಲ್ಲಿನ ಬಸವೇಶ್ವರ ಕಾಲೇಜು ಮೈದಾನದಿಂದ ಎರಡು ಮಾರ್ಗಗಳಲ್ಲಿ ಮಹಿಳಾ ಗಣವೇಷಧಾರಿಗಳು ಗಜಗಾಂಭೀರ್ಯದ ಹೆಜ್ಜೆ ಹಾಕುತ್ತ ಸಾಗಿದರು. ಗಣವೇಷಧಾರಿಗಳ ಸಂಖ್ಯೆ 1 ಸಾವಿರ ಗಡಿ ದಾಟಿತ್ತು. ಕೋಟೆ ನಗರಿಯ ಪ್ರಮುಖ ರಸ್ತೆಗಳಲ್ಲಿ ಶಿಸ್ತಿನ ನಡಿಗೆ ನಡೆಸುತ್ತಿದ್ದರೆ, ರಸ್ತೆಯ ಎರಡು ಇಕ್ಕೆಲಗಳಲ್ಲಿ ನಿಂತಿದ್ದ ಜನಸ್ತೋಮ ಪುಷ್ಪಾರ್ಚನೆ ಮಾಡಿ ಸಂಭ್ರಮಸಿದರು.

    ಚಿಕ್ಕ ಮಕ್ಕಳು ದೇಶಭಕ್ತರು, ಧಾರ್ಮಿಕ ಮುಖಂಡರು, ರಾಜ ಮಹಾರಾಜರು, ರಾಣಿಯರ ವೇಷಭೂಷಣ ಧರಿಸಿ ಗಣವೇಷಧಾರಿಗಳಿಗೆ ಪುಷ್ಪ ಚಿಂಚನಗೈಯುತ್ತ ಸ್ವಾಗತಿಸುತ್ತಿದ್ದ ಪರಿ ಕಣ್ಮನ ಸೆಳೆಯಿತು. ಮೊಳಗಿದ ಘೋಷಣೆ ಬೋಲೋ ಭಾರತ್ ಮಾತಾಕೀ ಜೈ..ಮಾತಾ.. ಮಾತಾ.. ಭಾರತ ಮಾತಾ.., ಜೋರ್ ಸೇ ಬೋಲೋ, ಪ್ಯಾರ್ ಸೇ ಬೋಲೋ ಹಿಂದುಸ್ತಾನ, ಹಿಂದುಸ್ತಾನ..,ಜೈ ಜೈ ಶಿವಾಜಿ, ಜೈ ಜೈ ಭವಾನಿ… ವಂದೇ ಮಾತರಂ ಘೋಷಣೆಗಳು ಪ್ರತಿಧ್ವನಿಸಿದವು. ಎರಡು ಮಾರ್ಗದಲ್ಲಿ ಹೊರಟಿದ್ದ ಪಥ ಸಂಚಲನಗಳು ಬಸವೇಶ್ವರ ವೃತ್ತದಲ್ಲಿ ಸಮಾಗಮಗೊಳ್ಳುತ್ತಿದ್ದಂತೆ ನೆರೆದಿದ್ದ ಜನಸ್ತೋಮದ ಸಂಭ್ರಮ ಮುಗಿಲು ಮುಟ್ಟಿತು.

    ಸಂಜೆ 4 ಗಂಟೆಗೆ ಆರಂಭಗೊಂಡ ಪಥ ಸಂಚಲನ 4.55ಕ್ಕೆ ಮರಳಿ ಕಾಲೇಜು ಮೈದಾನ ತಲುಪಿ ಸಮಾಪ್ತಿಯಾಯಿತು. ಎರಡು ಮಾರ್ಗದಲ್ಲಿ ಪಥ ಸಂಚಲನ ಸಂಜೆ ಸರಿಯಾಗಿ 4 ಗಂಟೆಯಿಂದ ಬಸವೇಶ್ವರ ಕಾಲೇಜು ಮೈದಾನದಿಂದ ಎರಡು ಮಾರ್ಗದಲ್ಲಿ ಮಹಿಳೆಯರು ಪಥ ಸಂಚಲನ ಆರಂಭಿಸಿದರು.

    ಒಂದು ತಂಡ ಬಸವೇಶ್ವರ ಕಾಲೇಜು ಮೈದಾನದಿಂದ ಆರಂಭಗೊಂಡು ಕರವೀರಮಠ, ಶಿರೂರ ಅಗಸಿ, ಕಿಣಗಿ ಕ್ರಾಸ್, ಹುಂಡೇಕಾರ ಗಲ್ಲಿ ಕ್ರಾಸ್, ಚರಂತಿಮಠ, ಮಾರವಾಡಿ ಗಲ್ಲಿ ಕ್ರಾಸ್, ಜವಳಿ ಚೌಕ, ಶಾರದಾ ಪ್ರೆಸ್, ಹಳಪೇಟೆ ಕ್ರಾಸ್, ಭಾವಸಾರ ಗಜಾನನ ಚೌಕ, ಕೊಪ್ಪ ದವಾಖಾನೆ, ಶಿವಾಜಿ ಸರ್ಕಲ್, ಹಳೇ ಅಂಚೆ ಕಚೇರಿ, ವೆಂಕಟೇಶ್ವರ ದೇವಸ್ಥಾನ, ವಲ್ಲಭಭಾಯಿ ಚೌಕ, ಬಸವೇಶ್ವರ ವೃತ್ತ ಮಾರ್ಗವಾಗಿ ಬಸವೇಶ್ವರ ಕಾಲೇಜು ಮೈದಾನ ತಲುಪಿತು. ಇನ್ನೊಂದು ಪಥ ಸಂಚಲನದ ತಂಡ ಬಸವೇಶ್ವರ ಕಾಲೇಜು ಮೈದಾನದಿಂದ ಹೊರಟು ಸಾಸನೂರ ಪೆಟ್ರೋಲ್ ಬಂಕ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದುರ್ಗಾ ವಿಹಾರ ಸರ್ಕಲ್, ಶಾಂತಿ ನಗರ ಕ್ರಾಸ್, ಹಳೇ ಐಬಿ ಕ್ರಾಸ್, ಹರಣ ಶಿಕಾರಿ ಗಲ್ಲಿ, ವಾಸವಿ ಚಿತ್ರಮಂದಿರ, ದುರ್ಗಾನಗರ ಕ್ರಾಸ್, ಶಾರದಾ ಲಾಜ್, ಹೊಳೆ ಆಂಜನೇಯ ದೇವಸ್ಥಾನ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಕಾಲೇಜು ಮೈದಾನಕ್ಕೆ ಆಗಮಿಸಿತು. ಘೋಷ ನಾದದ ನಡುವೆ ಏಕಕಾಲಕ್ಕೆ ಎರಡು ಸಂಚಲನಗಳು ನಿಗದಿತ ಸಮಯಕ್ಕೆ ಮರಳಿ ಮೈದಾನ ತಲುಪಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts