

ರಾಂಚಿ: ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ಒಂದೇ ಕುಟುಂಬದ ಐದು ಮಂದಿ ದುರಂತ ಸಾವಿಗೀಡಾಗಿರುವ ದಾರುಣ ಘಟನೆ ಜಾರ್ಖಂಡ್ ರಾಜ್ಯದ ದಿಯೋಘರ್ನ ಸಿಕಾತಿಯಾ ಬ್ಯಾರೆಜ್ನಲ್ಲಿರುವ ಸೇತುವೆಯಲ್ಲಿ ನಡೆದಿದೆ.
ದಿಯೋಘರ್ನ ಅಸಾನ್ಸೋಲ್ ಸಂಕುಲ್ ಗ್ರಾಮದಿಂದ ಗಿರಿಧಿಹ್ ಜಿಲ್ಲೆಗೆ ತೆರಳುತ್ತಿದ್ದ ಎಸ್ಯುವಿ ಕಾರು ಅಪಘಾತಕ್ಕೀಡಾಗಿ ಈ ದುರ್ಘಟನೆ ಸಂಭವಿಸಿದೆ. ಕಾರು ಚಾಲನೆ ವೇಳೆ ಚಾಲಕ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ನದಿಗೆ ಬಿದ್ದಿತು ಎಂದು ವರದಿಯಾಗಿದೆ. ಚಾಲಕ ಓರ್ಬ ಇಂಜಿನಿಯರ್ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸ್ಥಳೀಯರ ನೆರವಿನಿಂದ ಕಾರನ್ನು ನದಿಯಿಂದ ಹೊರಗೆ ತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಿಯೋಘರ್ ಸದಾರ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಅಪಘಾತ ಸಂಬಂಧ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಂದು ಮುಂಜಾನೆ ತಮಿಳುನಾಡಿನಲ್ಲಿ ಕಾರೊಂದು ಬಸ್‌ಗೆ ಡಿಕ್ಕಿ ಹೊಡೆದು ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ತಿರುವಣ್ಣಾಮಲೈನ ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಈ ಅಪಘಾತ ಸಂಭವಿಸಿತು. ಪುದುಚೇರಿ ಗ್ಲ್ಯೂ ತಯಾರಿಕಾ ಕಂಪನಿಯಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಸುಮೋ ವಾಹನ ತಮಿಳುನಾಡಿನ ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಮೃತ ಏಳರಲ್ಲಿ ಆರು ಮಂದಿ ಅಸ್ಸಾಂ ಮೂಲದ ಕಾರ್ಮಿಕರು. ಉಳಿದ ಒಬ್ಬ ಕಾರ್ಮಿಕ ತಮಿಳುನಾಡು ಮೂಲದವನು. ಮೃತರನ್ನು ಚೆಂಗಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. (ಏಜೆನ್ಸೀಸ್)