More

    ಹಾವೇರಿ ಜಿಲ್ಲೆಯಲ್ಲಿ ಕೆಸಿಸಿ ಬ್ಯಾಂಕ್ ಸ್ಥಾಪನೆಗೆ ಪ್ರಯತ್ನ

    ಬ್ಯಾಡಗಿ: ಹಾವೇರಿ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಆರಂಭಿಸಲು ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆದಿದ್ದು, ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕರು ಸರ್ಕಾರದ ಜತೆ ಕೈಜೋಡಿಸಿ ರೈತರಿಗೆ ನ್ಯಾಯ ಒದಗಿಸಲು ಸಹಕರಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

    ಇಲ್ಲಿನ ಕೆಸಿಸಿ ಬ್ಯಾಂಕ್ ಸಭಾಭವನದಲ್ಲಿ ನೂತನ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿಯವರಿಗೆ ಬುಧವಾರ ಏರ್ಪಡಿಸಿದ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

    ರೈತರ ಕೃಷಿ ಚಟುವಟಿಕೆಗೆ ಆರ್ಥಿಕವಾಗಿ ಬೆನ್ನೆಲುಬಾಗಿರುವ ಜಿಲ್ಲೆಯ 227 ಸಹಕಾರಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಆಡಳಿತಾತ್ಮಕ ಹಾಗೂ ಆರ್ಥಿಕವಾಗಿ ಅಸ್ತಿತ್ವ ಉಳಿಸಿಕೊಂಡಿವೆ. ಚನ್ನಬಸಪ್ಪ ಹುಲ್ಲತ್ತಿ ಅವರು ಬ್ಯಾಡಗಿ ಮತಕ್ಷೇತ್ರದಿಂದ ಸ್ಪರ್ಧಿಸಿ 20 ಮತಗಳ ಪೈಕಿ 15 ಮತ ಪಡೆದು ಆಯ್ಕೆಯಾಗುವ ಮೂಲಕ ರೈತರ ಹಿತಕಾಯಲು ಬದ್ಧರಾಗಿದ್ದಾರೆ. ಎಪಿಎಂಸಿ ಅಧ್ಯಕ್ಷ ಹಾಗೂ ಗ್ರಾಮದ ಸಹಕಾರಿ ಸಂಘದ ನಿರ್ದೇಶಕರಾದ ಅನುಭವವಿದೆ. ಮೆಣಸಿನಕಾಯಿ ವ್ಯಾಪಾರಸ್ಥರೂ ಆಗಿರುವ ಅವರು ಎಲ್ಲವನ್ನು ತೂಗಿಸಿಕೊಂಡು ಹೋಗುವ ಸಾಮರ್ಥ್ಯವಿದೆ. ರೈತರಿಗೆ 5 ಲ.ರೂ. ಶೂನ್ಯಬಡ್ಡಿದರದ ಸಾಲ ವ್ಯವಸ್ಥೆ ಹಾಗೂ ಡಿಸಿಸಿ ಬ್ಯಾಂಕ್ ಸಲುವಾಗಿ ಜಿಲ್ಲೆಯ 8 ಜನ ನಿರ್ದೇಶಕರು ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಿ ಎಂದರು.

    ಜೈವಿಕ ಇಂಧನ ಮಂಡಳಿ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಆರಂಭಿಸಲು ಹಿಂದಿನಿಂದ ಹೋರಾಟ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ, ಸಹಕಾರ ಸಚಿವರು, ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ ಎಂದರು.

    ನೂತನ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರೈತ ಕುಟುಂಬದಿಂದ ಬೆಳೆದ ನನ್ನನ್ನು ಜನರು ಎಪಿಎಂಸಿ ಅಧ್ಯಕ್ಷ, ಕೆಸಿಸಿ ನಿರ್ದೇಶಕನನ್ನಾಗಿಸಿ ಅವಕಾಶ ಕಲ್ಪಿಸಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ರೈತಪರ ಯೋಜನೆ, ಬ್ಯಾಂಕ್ ಅಭಿವೃದ್ಧಿ, ಆಡಳಿತ ಚುರುಕುಗೊಳಿಸಲು ಯತ್ನಿಸುತ್ತೇನೆ. ಡಿಸಿಸಿ ಬ್ಯಾಂಕ್, ಪ್ರಾಂತೀಯ ಕಚೇರಿ, ಎಕರೆಗೆ 20 ಸಾ.ರೂ. ತಿದ್ದುಪಡಿಗೆ ಶ್ರಮಿಸುತ್ತೇನೆ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಜಿಲ್ಲಾ ಸಹಾಯಕ ನಿರ್ಭದಕ ವಿಕ್ರಮ ಕುಲಕರ್ಣಿ, ಜಿಲ್ಲಾ ವ್ಯವಸ್ಥಾಪಕ ರುದ್ರಪ್ಪ ಅಂತರದ, ಕೆಸಿಸಿ ವ್ಯವಸ್ಥಾಪಕ ಬಿ.ಎಚ್.ಮೋಟೆಬೆನ್ನೂರು, ಮುಖಂಡರಾದ ಶಿವನಗೌಡ ಪಾಟೀಲ, ಶಂಭಣ್ಣ ಪಾಟೀಲ, ಮಂಜನಗೌಡ ಪಾಟೀಲ, ಪರಮೇಶಣ್ಣ ತೆವರಿ, ದಾನಪ್ಪ ಚೂರಿ, ದಾನಗೌಡ್ರ ತೋಟದ, ಶಂಕರಗೌಡ್ರ ಪಾಟೀಲ, ವಕೀಲ ಪ್ರಕಾಶ ಬನ್ನಿಹಟ್ಟಿ, ಮಲ್ಲನಗೌಡ್ರ ಚನ್ನಗೌಡ್ರ, ಖಾದರಸಾಬ ದೊಡ್ಡಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts