More

    ಆಧ್ಯಾತ್ಮಿಕ ಶ್ರದ್ಧೆಯಿಂದ ಉನ್ನತ ಮೌಲ್ಯ ಪ್ರಾಪ್ತಿ

    ಶೃಂಗೇರಿ: ಬದುಕಿನ ಉನ್ನತ ಮೌಲ್ಯಗಳಿಗಾಗಿ ನಮಗೆ ಬೇಕಾಗಿರುವ ಅದ್ಭುತ ಶಕ್ತಿ ಆಧ್ಯಾತ್ಮಿಕ ಶ್ರದ್ಧೆ. ಈ ಶ್ರದ್ಧೆ ನಿರಂತರವಾದ ರಕ್ಷಾಕವಚ ನೀಡುತ್ತದೆ. ಎಲ್ಲಿ ಸಂಸ್ಕಾರ, ಸಂಸ್ಕೃತಿಯ ಉನ್ನತ ಭಾವನೆ ಜನರಲ್ಲಿ ಇರುತ್ತದೆಯೋ ಅಂತಹ ದೇಶ ಸುರಕ್ಷತೆಯಿಂದ ಇರಲು ಸಾಧ್ಯ ಎಂದು ಶಕಟಪುರದ ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿ ತಿಳಿಸಿದರು.

    ಭಾನುವಾರ ತಾಲೂಕು ಬ್ರಾಹ್ಮಣ ಮಹಾಸಭಾದಿಂದ ವಿದ್ಯಾಭಾರತೀ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
    ಬ್ರಾಹ್ಮಣರು ವೇದ, ಶಾಸ್ತ್ರಗಳನ್ನು ಚೆನ್ನಾಗಿ ಅರ್ಥ್ಯೆಸಿಕೊಂಡು ಪ್ರತಿನಿತ್ಯ ಸಂಧ್ಯಾವಂದನೆ ಮಾಡಬೇಕು. ಗಾಯತ್ರಿ ಮಂತ್ರ ಪಠಣದಿಂದ ಬುದ್ಧಿವಂತಿಕೆ ಹಾಗೂ ವಿವೇಚನಾ ಶಕ್ತಿ ಬೆಳೆಯುತ್ತದೆ. ನಮ್ಮ ಹಿರಿಯರು ನೀಡಿ ಹೋದ ಸತ್ ಸಂಪ್ರದಾಯಗಳನ್ನು ನಾವು ಪರಿಪಾಲಿಸಿದರೆ ಮಾತ್ರ ದೈವಿಶಕ್ತಿ ಪ್ರಾಪ್ತವಾಗಲು ಸಾಧ್ಯ. ಋಷಿ ಪರಂಪರೆ ಗಾಯತ್ರಿ ಜಪವನ್ನು ಶ್ರದ್ಧಾಪೂರ್ವಕವಾಗಿ ಪಠಿಸಿ ಆತ್ಮಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ. ನಾವು ಭಕ್ತಪೂರ್ವಕವಾಗಿ ಭಗವಂತನನ್ನು ನಿರಂತರವಾಗಿ ಸ್ಮರಿಸಿದ್ದರೆ ಮಾತ್ರ ಜೀವನ ಸಾರ್ಥಕ್ಯವಾಗುತ್ತದೆ. ಲೌಕಿಕ ಕೆಲಸದ ಜತೆಗೆ ಭಗವಂತನ ನಾಮ ಸ್ಮರಣೆ, ಧಾರ್ಮಿಕ ಆಚರಣೆ ತೀರಾ ಅಗತ್ಯ ಎಂದರು.
    ಸನ್ಮಾನ ಸ್ವೀಕರಿಸಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್ಟ ಮಾತನಾಡಿ, ಸ್ವಾವಲಂಬನೆ-ಸಂಘಟನೆ-ಸಂಸ್ಕಾರ ಬ್ರಾಹ್ಮಣರ ಪ್ರಮುಖ ಧ್ಯೇಯವಾಗಿರಬೇಕು. ಇಂದಿನ ಜಾತ್ಯತೀತ ವ್ಯವಸ್ಥೆಯಲ್ಲಿ ಬ್ರಾಹ್ಮಣರ ಕುರಿತು ಸಮಾಜದಲ್ಲಿ ಮಾಡುವ ನಿಂದನೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಾಣುವುದು ಸುಲಭ. ಆಧುನಿಕ ಸೋಗಿನಲ್ಲಿ ನಾವು ಸಂಸ್ಕಾರ, ಸಂಸ್ಕೃತಿಯನ್ನು ಬದಿಗಿಟ್ಟು ಬದುಕು ಸಾಗಿಸುತ್ತಿದ್ದೇವೆ. ಮೆಕಾಲೆ ಶಿಕ್ಷಣ ಪದ್ಧತಿಗೆ ಜೋತು ಬಿದ್ದು ಪಾಶ್ಚಾತ್ಯ ಸಂಸ್ಕೃತಿಯತ್ತ ಮಕ್ಕಳ ಮನಸ್ಸು ವಾಲುತ್ತಿದೆ. ಮಕ್ಕಳ ಜೀವನಕ್ಕೆ ಮೂರ್ತರೂಪ ನೀಡುವ ಶಕ್ತಿ ಮಾತೆಗೆ ಇರುತ್ತದೆ. ನಮ್ಮಲ್ಲಿರುವ ಮಹಿಳಾ ಘಟಕಗಳು ಮಕ್ಕಳಿಗೆ ಆಧ್ಯಾತಿಕ ಮೌಲ್ಯದ ತಿರುಳನ್ನು ಅರ್ಥ್ಯೆಸಿ ಕೊಡಬೇಕಿದೆ. ಮಕ್ಕಳಿಗೆ ಶಿಕ್ಷಣದ ಜತೆ ಹಿಂದು ಧರ್ಮದ ಉನ್ನತ ಮೌಲ್ಯಗಳ ಅರಿವನ್ನು ಮೂಡಿಸಿ ಸಮಾಜದ ಸುಸಂಸ್ಕೃತಿಗೆ ಉನ್ನತ ಕೊಡುಗೆ ನೀಡಬೇಕಿದೆ ಎಂದರು.
    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಶ್ರೀ ರಾಘವೇಂದ್ರಭಟ್ಟ, ಜ್ಯೋತಿಷ್ಯ ತಂತ್ರಿ ಸುಬ್ಬಾಭಟ್ಟ,ಬೆಂಗಳೂರು ಕೇಂದ್ರೀಯ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆ.ಎನ್.ಸೂರ್ಯನಾರಾಯಣ ಜೋಯಿಸ್, ವ್ಯಂಗ್ಯಚಿತ್ರ ಕಲಾವಿದ ದಿವಾಕರ್ ಹನುಗೋಡು ಅವರನ್ನು ಗೌರವಿಸಲಾಯಿತು.
    ಮಹಾಸಭಾದ ಅಧ್ಯಕ್ಷ ಜಿ.ಎಂ.ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಹರಿಕೆ ನಾಗಭೂಷಣ್, ಮಹಾಬಲ ಭೀಡೆ, ಮಹಿಳಾ ಘಟಕದ ಅಧ್ಯಕ್ಷೆ ಕವನಾ ಶ್ಯಾಮ್‌ಸುಂದರ್ ಇದ್ದರು.
    ಮಹಾಸಭಾದಿಂದ ಶನಿವಾರ ಲಕ್ಷ ಗಾಯತ್ರಿ ಹೋಮದ ಅಂಗವಾಗಿ ನಡೆದ ಗಾಯತ್ರಿ ಜಪದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಭಾನುವಾರ ಲಕ್ಷ ಗಾಯತ್ರಿ ಹೋಮದ ಪೂರ್ಣಾಹುತಿ ಶಕಟಪುರ ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts