ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಿನ್ನೆ ನಡೆದ ದಾಂಧಲೆಯಲ್ಲಿ ಗಲಭೆಕೋರರು ಪೊಲೀಸರ ಜತೆಗೆ ಮಾಧ್ಯಮದವರನ್ನು ಟಾರ್ಗೆಟ್ ಮಾಡಿ ಕೈಗೆ ಸಿಕ್ಕವರ ಮೇಲೆಲ್ಲ ಹಲ್ಲೆ ನಡೆಸಿದ್ದಾರೆ.
ಪೊಲೀಸ್ ಠಾಣೆಗೆ ಸಾವಿರಾರು ಮಂದಿ ನುಗ್ಗಿ ಹೇಗೆ ದಾಂಧಲೆ ನಡೆಸಿದರೋ ಹಾಗೇ ಕಣ್ಣಿಗೆ ಬಿದ್ದ ಹಲವು ಮಾಧ್ಯಮ ಪ್ರತಿನಿಧಿಗಳ ಮೇಲೂ ಪುಂಡರು ಹಲ್ಲೆ ನಡೆಸಿದ್ದಾರೆ. ಪೊಲೀಸ್ ವಾಹನಗಳ ಜತೆಗೆ ಮಾಧ್ಯಮ ವಾಹನಗಳನ್ನೂ ಜಖಂಗೊಳಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ ನಡೆಯುತ್ತಿದ್ದ ಗಲಭೆಯ ವರದಿ ಮಾಡಲು ಹೋಗಿದ್ದ ದಿಗ್ವಿಜಯ ನ್ಯೂಸ್ 24*7 ವಾಹಿನಿಯ ವಾಹನವನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದು, ಚಾಲಕ ಶಿವಕುಮಾರ್ಗೆ ಗಾಯವಾಗಿದೆ.
ಇದನ್ನೂ ಓದಿರಿ ಗಲಭೆಕೋರರಿಂದಲೇ ನಷ್ಟ ವಸೂಲಿ; ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ
ಡಿಜೆ ಹಳ್ಳಿ ಠಾಣೆ ಬಳಿ ಗಲಭೆ ನಡೆಯುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಕಚೇರಿ ವಾಹನದಲ್ಲಿ ವರದಿಗಾರ ಸಂತೋಷ್ ಪಾಟೇಲ್, ಕ್ಯಾಮರಾಮ್ಯಾನ್ ಸ್ಥಳಕ್ಕೆ ತೆರಳಿದ್ದರು. ವಾಹನವನ್ನು ಠಾಣೆಯಿಂದ 500 ಮೀಟರ್ ದೂರದಲ್ಲಿ ನಿಲ್ಲಿಸಿ ವರದಿಗಾರ ಹಾಗೂ ಕ್ಯಾಮರಾಮ್ಯಾನ್ ವರದಿ ಮಾಡಲು ಠಾಣೆ ಬಳಿ ತೆರಳಿದ್ದರು. ಆ ಸಂದರ್ಭದಲ್ಲಿ ದಿಗ್ವಿಜಯ ಸುದ್ದಿ ವಾಹಿನಿಯ ವಾಹನದ ಗಾಜನ್ನು ಪುಡಿ ಮಾಡಿದ ಕಿಡಿಗೇಡಿಗಳು, ವಾಹನಕ್ಕೆ ದೊಣ್ಣೆಯಿಂದ ಹೊಡೆದು ಹಾನಿ ಮಾಡಿದ್ದಾರೆ. ವಾಹನದೊಳಗಿದ್ದ ಚಾಲಕ ಶಿವಕುಮಾರ್ಗೆ ಕಾರಿನ ಗಾಜುಗಳು ತಾಗಿ ಕಣ್ಣು ಸೇರಿ ದೇಹದ ಇತರ ಭಾಗಗಳಿಗೆ ಗಾಯವಾಗಿದೆ. ಕೂಡಲೇ ಅಲ್ಲಿಂದ ತೆರಳಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ದಾಂಧಲೆ ನಿಯಂತ್ರಣಕ್ಕೆ ಬಂದ ಬಳಿಕ ಶಿವಕುಮಾರ್ ಅವರನ್ನು ಮಿಂಟೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.