More

    ದೌರ್ಜನ್ಯಗಳಿಗೆ ದುರ್ಜನರು ಮಾತ್ರವಲ್ಲ ಸಜ್ಜನರ ಮೌನವೂ ಕಾರಣ

    ಒಮ್ಮೆ ಕಾಲೇಜೊಂದರ ತರಗತಿಯಲ್ಲಿ ನ್ಯಾಯಶಾಸ್ತ್ರವನ್ನು ಬೋಧಿಸುತ್ತಿದ್ದ ಪ್ರಾಧ್ಯಾಪಕರೊಬ್ಬರು ಕ್ಲಾಸ್ ರೂಮಿನೊಳಗೆ ಬರುತ್ತಿದ್ದಂತೆ ಏನೂ ತಪ್ಪು ಮಾಡದೆ Preraneಸುಮ್ಮನೆ ಕುಳಿತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ತಕ್ಷಣ ಕ್ಲಾಸಿನಿಂದ ಹೊರಗೆ ನಡೆಯುವಂತೆ ಅಜ್ಞಾಪಿಸಿದರು. ಗಲಿಬಿಲಿಗೊಂಡ ಆಕೆ ಕಾರಣವನ್ನು ಕೇಳಲಾಗಿ, ‘ನನ್ನನ್ನು ಪ್ರಶ್ನಿಸುವ ಹಕ್ಕು ನಿನಗಿಲ್ಲ. ನಾನು ಹೇಳಿದಂತೆ ನಡೆಯಬೇಕು. ನೀನು ಕ್ಲಾಸು ಬಿಟ್ಟು ತೊಲಗಬೇಕು ಎಂದು ನಾನು ಹೇಳಿ ಆಯಿತು. ಮರು ಮಾತಿಲ್ಲದೆ ಜಸ್ಟ್ ಗೆಟೌಟ್’ ಎಂದು ಏರಿದ ದನಿಯಲ್ಲಿ ಗುಡುಗಿದರು. ಬೇರೆ ದಾರಿ ಕಾಣದೆ ಆ ವಿದ್ಯಾರ್ಥಿನಿ ಹೊರಗೆ ಹೋದಳು. ಇದಕ್ಕೆ ಕಾರಣವನ್ನು ತಿಳಿಯದ ಕ್ಲಾಸಿನ ಇತರ ವಿದ್ಯಾರ್ಥಿಗಳು ಅಸಮಾಧಾನದಿಂದ ಪ್ರಶ್ನಾರ್ಥಕವಾಗಿ ಪ್ರಾಧ್ಯಾಪಕರನ್ನು ನೋಡಹತ್ತಿದರು. ಇವರ ಭಾವನೆಯನ್ನು ಅರಿತ ಪ್ರಾಧ್ಯಾಪಕರು ನ್ಯಾಯಶಾಸ್ತ್ರದ ಪಾಠವನ್ನು ಪ್ರಾರಂಭಿಸಿದರು.

    ‘ಕಾನೂನುಗಳು ಇರುವುದು ಏತಕ್ಕೆ?’ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಎಲ್ಲರೂ ಅವರದೇ ಆದ ರೀತಿಯಲ್ಲಿ ಉತ್ತರಿಸಲು ಆರಂಭಿಸಿದರು. ಒಬ್ಬಾತ ನ್ಯಾಯವನ್ನು ಒದಗಿಸಲು ಎಂದು ಹೇಳಿದರೆ, ಇನ್ನೊಬ್ಬ ನ್ಯಾಯದ ರಕ್ಷಣೆಗೆ ಎಂದ. ಮತ್ತೊಬ್ಬ ಸರ್ಕಾರ ನಡೆಸಲು ಕಾನೂನುಗಳ ಆವಶ್ಯಕತೆ ಇದೆ ಎಂದು ಹೇಳಿದ. ಇನ್ನೊಬ್ಬ ಅಪರಾಧಿಗಳನ್ನು, ಅನ್ಯಾಯ ಮಾಡಿದವರನ್ನು ಶಿಕ್ಷಿಸಲು ಕಾನೂನು ನೆರವಾಗುತ್ತದೆ ಎಂದು ಹೇಳಿದ. ಎಲ್ಲವನ್ನೂ ಕೇಳಿದ ಬಳಿಕ ಉಪಾಧ್ಯಾಯರು ವಿದ್ಯಾರ್ಥಿಗಳಿಗೆ ಮರು ಪ್ರಶ್ನೆ ಒಂದನ್ನು ಹಾಕಿದರು. ‘ಏನೂ ತಪ್ಪು ಮಾಡದ ಆ ಹುಡುಗಿಯನ್ನು ನಾನು ಕ್ಲಾಸಿನಿಂದ ಹೊರಗೆ ಕಳಿಸಿದ್ದು ನ್ಯಾಯಸಮ್ಮತವಾಗಿತ್ತೇ?’ ಎಂದು ಕೇಳಿದರು. ‘ಇಲ್ಲ ಇಲ್ಲ’ವೆಂದು ಎಲ್ಲರೂ ಒಕ್ಕೊರಲಿನಿಂದ ಹೇಳಿದರು. ಪ್ರಾಧ್ಯಾಪಕರು ಕೇಳಿದರು: ‘ಮತ್ತೆ ಏಕೆ ನಿಮ್ಮಲ್ಲಿ ಯಾರೂ ಇದನ್ನು ಪ್ರಶ್ನಿಸಲಿಲ್ಲ? ಅನ್ಯಾಯ ಮಾಡುವುದು ತಪ್ಪು ಎಂದಾದರೆ ಅದನ್ನು ನೋಡಿಯೂ ಪ್ರತಿಭಟಿಸದೆ ಸುಮ್ಮನೆ ಇರುವುದು ಕೂಡ ತಪ್ಪಲ್ಲವೇ? ಈ ದೃಷ್ಟಿಯಲ್ಲಿ ನೀವೆಲ್ಲರೂ ತಪ್ಪಿತಸ್ಥರೇ ಸರಿ’ ಎಂದರು. ಪ್ರಾಧ್ಯಾಪಕರ ಪ್ರಶ್ನೆಗೆ ವಿದ್ಯಾರ್ಥಿಗಳ ಬಳಿ ಉತ್ತರವಿರಲಿಲ್ಲ. ಹೊರ ಕಳಿಸಿದ ವಿದ್ಯಾರ್ಥಿನಿಯನ್ನು ಪುನಃ ಕರೆಸಿ ಪಾಠ ಮುಂದುವರಿಸಿದರು. ಕಾರಣ ವಿವರಿಸಿ ಪಾಠ ಮುಂದುವರಿಸಿದರು.

    ಈ ಸತ್ಯವನ್ನೇ ಮಹಾಭಾರತದ ಒಂದು ಘಟನೆ ಸಾಬೀತುಪಡಿಸುತ್ತದೆ. ಮಹಾಭಾರತ ಯುದ್ಧ ಮುಗಿದು ಕೌರವರು ಸೋತು ಪಾಂಡವರು ರಾಜ್ಯಭಾರ ಮಾಡಲು ಪ್ರಾರಂಭಿಸಿದಾಗ ಭೀಷ್ಮಾಚಾರ್ಯರು ಒಮ್ಮೆ ತನ್ನ ಅಂತ್ಯಕಾಲದಲ್ಲಿ ಶ್ರೀಕೃಷ್ಣ ಪರಮಾತ್ಮನನ್ನು ಭೇಟಿಯಾಗಿ ನನಗೆ ಮೋಕ್ಷವಿದೆಯೇ? ಎಂದು ಕೇಳುತ್ತಾರೆ. ಉತ್ತರವಾಗಿ ಕೃಷ್ಣ ಇಲ್ಲ ಎನ್ನುತ್ತಾನೆ. ಆಶ್ಚರ್ಯಗೊಂಡ ಭೀಷ್ಮರು ಕಾರಣವನ್ನು ಕೇಳಲಾಗಿ ಕೃಷ್ಣನು ಹೇಳುತ್ತಾನೆ: ‘ಅಂದು ತುಂಬಿದ ರಾಜ ಸಭೆಯಲ್ಲಿ ಅರಮನೆಯ ಗೌರವಾನ್ವಿತ ಸೊಸೆ ದ್ರೌಪದಿಯ ವಸ್ತ್ರಾಪಹರಣ ಮಾಡುವಂತೆ ದುರ್ಯೋಧನ ತನ್ನ ತಮ್ಮ ದುಶ್ಶಾಸನನಿಗೆ ಆದೇಶ ನೀಡಿದಾಗ ಧರ್ವಿುಷ್ಠರೂ ಜ್ಞಾನಿಗಳೂ ಎಲ್ಲರಿಗೂ ಪಿತಾಮಹರೂ ಆದ ನೀವು ಏಕೆ ಸುಮ್ಮನಿದ್ದಿರಿ? ಆ ದುಷೃ್ಕ್ಯವನ್ನು ಏಕೆ ತಡೆಯಲಿಲ್ಲ?’

    ಉತ್ತರವಾಗಿ ಭೀಷ್ಮಾಚಾರ್ಯರು ಹೇಳುತ್ತಾರೆ.‘ನಾನೆಷ್ಟು ಬುದ್ಧಿ ಮಾತನ್ನು ಹೇಳಿದರೂ ಆ ಹೀನ ಕೃತ್ಯವನ್ನು ತಡೆಯಲೆತ್ನಿಸಿದರೂ ಛಲವಾದಿ ದುರ್ಯೋಧನ ನನ್ನ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆ ಕಾರಣ, ಹತಾಶನಾದ ನಾನೂ ಸುಮ್ಮನಾದೆ’ ಎಂದು. ಮಾತು ಮುಂದುವರಿಸಿದ ಕೃಷ್ಣ, ‘ಹೋಗಲಿ ಬಿಡಿ. ಈ ಕೃತ್ಯ ನೀವು ಕಾಪಾಡಿಕೊಂಡು ಬಂದಿರುವ ಹಸ್ತಿನಾವತಿಯ ಘನಪರಂಪರೆಗೆ ಕಳಂಕ ತರುವುದೆಂದು ನಿಮಗೆ ಗೊತ್ತಿದ್ದರೂ ಈ ಹೇಯ ಕೃತ್ಯ ನಡೆದಾಗ ತಾವೇಕೆ ಸಭೆಯನ್ನು ತೊರೆದು ಹೊರಟುಹೋಗಿ ಪ್ರತಿಭಟಿಸಲಿಲ್ಲ? ತಮ್ಮ ವಿರೋಧವನ್ನು ವ್ಯಕ್ತಪಡಿಸಲಿಲ್ಲ? ಹಾಗೆ ಮಾಡದೆ ತಾವು ಮೌನವಾಗಿದ್ದಿರಿ ಎಂದ ಮೇಲೆ ನೀವು ಈ ದುಷ್ಟ ಕೃತ್ಯವನ್ನು ಸಮರ್ಥಿಸಿಕೊಂಡಿರಿ, ಪರೋಕ್ಷವಾಗಿ ಈ ಪಾಪಕ್ಕೆ ಪಾಲುದಾರರಾದಿರಿ ಎಂದಾಯಿತಲ್ಲವೆ? ನಿಮ್ಮಂತಹವರಿಗೆ ಮೋಕ್ಷ ಪ್ರಾಪ್ತಿ ಹೇಗೆ ಸಾಧ್ಯ?’ ಎಂನ್ನುತ್ತಾನೆ. ಕೃಷ್ಣನ ಮಾತಿಗೆ ಭೀಷ್ಮಾಚಾರ್ಯರ ಬಳಿ ಉತ್ತರವಿಲ್ಲವಾಯಿತು.

    ಹೌದು. ದೌರ್ಜನ್ಯಗಳಿಗೆ ದುರ್ಜನರ ಕೆಟ್ಟ ಕೆಲಸ ಮಾತ್ರವಲ್ಲ, ಸಜ್ಜನರ ಮೌನವೂ ಕಾರಣವಾಗುತ್ತದೆ. ಸಮಾಜದಲ್ಲಿ ಅನ್ಯಾಯ ಅಧರ್ಮಗಳು ತಲೆ ಎತ್ತಿದಾಗ ಜ್ಞಾನಿಗಳು, ವಿಚಾರವಂತರು ಅವುಗಳ ವಿರುದ್ಧವಾಗಿ ದನಿ ಎತ್ತಬೇಕಾಗುತ್ತದೆ. ಇದು ಅವರ ಕರ್ತವ್ಯವೂ ಹೌದು. ಸಾಮಾಜಿಕ ಪ್ರಜ್ಞೆಯೂ ಹೌದು. ಈ ಹಿನ್ನೆಲೆಯಲ್ಲಿ ದುಷ್ಟರ ದೌರ್ಜನ್ಯಗಳಿಗಿಂತ ಶಿಷ್ಟರ ಮೌನವೇ ಹೆಚ್ಚು ಅಪಾಯಕಾರಿಯಾಗಬಲ್ಲದು. ಮೇಲಾಗಿ ನಿರಪರಾಧಿಗೆ ಶಿಕ್ಷೆಯಾದಾಗ ನ್ಯಾಯಾಧೀಶರೇ ಅಪರಾಧಿಯಾಗುತ್ತಾರೆ, ಅಲ್ಲವೇ?

    (ಪ್ರತಿಕ್ರಿಯಿಸಿ: [email protected])

    ಕ್ಷಮಿಸು ಅಮ್ಮ… ನನಗೆ ಗೊತ್ತಿಲ್ಲದೆ ದೊಡ್ಡ ತಪ್ಪು ಮಾಡಿದೆ: ಹಿರಿಯ ನಟಿ ಲಕ್ಷ್ಮೀ ಪುತ್ರಿ ಐಶ್ವರ್ಯಾ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts