More

    ಕಾರ್ಡ್ ಎಟಿಎಂನಲ್ಲೇ ಬಾಕಿ!

    ಅವಿನ್ ಶೆಟ್ಟಿ, ಉಡುಪಿ
    ಎಟಿಎಂನಿಂದ ಹಣ ಪಡೆದು ವಾಪಸ್ ಬರುವಾಗ ಕಾರ್ಡ್ ಮಷಿನ್‌ನಲ್ಲೇ ಉಳಿಯಿತೇ?
    ಇಂಥ ಅನುಭವ ಹಲವರಿಗಾಗಿದೆ. ಪ್ರಸ್ತುತ ಎಲ್ಲ ಎಟಿಎಂಗಳಲ್ಲಿ ಸುರಕ್ಷತೆಯ ಕಾರಣಕ್ಕೆ ರೀಡರ್ ಯಂತ್ರವನ್ನು ಅಳವಡಿಸಲಾಗಿದೆ. ಇದರಿಂದಾಗಿ ಎಟಿಎಂ ಕೇಂದ್ರಗಳಲ್ಲಿ ಹಣ ಪಡೆದ ಬಳಿಕ, ಕಾರ್ಡ್ ಮರೆಯುವರ ಸಂಖ್ಯೆ ಹೆಚ್ಚಿದೆ. ಕಾರ್ಡ್‌ಗೆ ಹಾನಿಯಾದ ನಿದರ್ಶನವೂ ಸಾಕಷ್ಟಿದೆ.
    ಸುರಕ್ಷತೆ ದೃಷ್ಟಿಯಿಂದ 2018ರಲ್ಲಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶದ ಮೇರೆಗೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಹಿಂದೆ ಇದ್ದ ಎಟಿಎಂನ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್‌ಗಳನ್ನು ಇಎಂವಿ ಚಿಪ್ ಕಾರ್ಡ್‌ಗಳಿಗೆ ಅಪ್‌ಗ್ರೇಡ್ ಮಾಡಿತ್ತು. ಸದ್ಯ ಇಎಂವಿ ಚಿಪ್ ಇಲ್ಲದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಅಪ್‌ಗ್ರೇಡ್ ಆದ ಇಎಂವಿ ಚಿಪ್ ಎಟಿಎಂ ಕಾರ್ಡ್‌ಗೆ ಪೂರಕವಾಗಿ ನಗರ ಮತ್ತು ಗ್ರಾಮೀಣ ಭಾಗದ ಎಲ್ಲ ಎಟಿಎಂ ಕೇಂದ್ರಗಳಲ್ಲಿ ರೀಡರ್ ಸ್ಲಾಟನ್ನು ಅಳವಡಿಸಲಾಗಿದೆ.
    ಈ ಹಿಂದೆ ಇದ್ದ ಮ್ಯಾಗ್ನೆಟಿಕ್ ಸ್ಟ್ರೈಪ್ ಎಟಿಎಂ ಕಾರ್ಡನ್ನು ಒಮ್ಮೆ ಸ್ವೈಪ್ ಮಾಡಿ ವಾಪಸ್ ತೆಗೆದ ನಂತರ ಹಣದ ವಹಿವಾಟು ಪ್ರಕ್ರಿಯೆ ನಡೆಸಲಾಗುತ್ತಿತ್ತು. ಈಗಿನ ವ್ಯವಸ್ಥೆಯಲ್ಲಿ ಇಎಂವಿ ಚಿಪ್ ಇರುವ ಎಟಿಎಂ ಅನ್ನು ಹಾಕಿದ ತಕ್ಷಣ ಸ್ವೈಪ್ ಮಾಡಿ ತೆಗೆಯಲು ಸಾಧ್ಯವಿಲ್ಲ. ಹಣದ ವಹಿವಾಟು ಮುಗಿಯುವವರೆಗೆ ರೀಡರ್ ಸ್ಲಾಟ್‌ನಲ್ಲಿ ಕಾರ್ಡ್ ತನ್ನ ಪ್ರಕಿಯೆಯಲ್ಲಿರುತ್ತದೆ. ಎಟಿಎಂನಿಂದ ಹಣ ಬಂದ ಕೂಡಲೇ ಹಣ ತೆಗೆದುಕೊಂಡು ರೀಡರ್‌ನಿಂದ ಕಾರ್ಡನ್ನು ತೆಗೆದುಕೊಳ್ಳದೆ, ಗ್ರಾಹಕರು ಮರೆತು ಹೋಗುತ್ತಾರೆ. ನಗರ, ಗ್ರಾಮೀಣ ಭಾಗದ ಹೆಚ್ಚಿನ ಎಟಿಎಂಗಳಲ್ಲಿ ಪ್ರತೀ ದಿನ 5ರಿಂದ 10 ಎಟಿಎಂಗಳಲ್ಲಿ ಕಾರ್ಡ್ ಸಿಗುತ್ತಿವೆ ಎಂದು ಬ್ಯಾಂಕ್ ಸಿಬ್ಬಂದಿ ಹೇಳುತ್ತಾರೆ.

    ಬಾಕಿಯಾದರೆ ಕಾರ್ಡ್ ಪಡೆಯುವುದು ಹೇಗೆ?: ಬಾಕಿಯಾದ ಕಾರ್ಡ್‌ಗಳನ್ನು ಎಟಿಎಂ ಕೇಂದ್ರದ ಭದ್ರತಾ ಸಿಬ್ಬಂದಿ ಸಂಬಂಧಪಟ್ಟ ಶಾಖೆಗೆ ನೀಡುತ್ತಾರೆ. ಬ್ಯಾಂಕ್‌ಗೆ ತೆರಳಿ ಗುರುತುಚೀಟಿ ನೀಡಿ ಎಟಿಎಂಗಳನ್ನು ಪಡೆಯಬಹುದು. ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂಗಳಲ್ಲಿ ಮರೆತುಹೋದರೆ ಬಹುತೇಕ ಮಂದಿ ತಮ್ಮ ಶಾಖೆಗೆ ತೆರಳಿ ಎಟಿಎಂ ಕಳೆದಿದೆ ಎಂದು ದೂರು ಕೊಟ್ಟು ಬ್ಲಾಕ್ ಮಾಡಿಸುತ್ತಾರೆ. ಕೆಲವರು ಎಟಿಎಂಗೆ ತೆರಳಿ ಕಾರ್ಡನ್ನು ಮರಳಿ ಪಡೆಯುತ್ತಾರೆ. ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂಗಳಲ್ಲಿ ಮರೆತ ಕಾರ್ಡ್‌ಗಳು ಕೆಲವರಿಗೆ ಸಿಗದ ಪ್ರಕರಣಗಳೂ ಇವೆ. ಇಂಥವನ್ನು ಆದಷ್ಟು ಬೇಗ ಬ್ಯಾಂಕ್ ಗಮನಕ್ಕೆ ತರಬೇಕು.

    ಎಳೆದರೆ ಕಾರ್ಡ್‌ಗಳಿಗೆ ಹಾನಿ: ಮೊದಲಿನ ವ್ಯವಸ್ಥೆಯಂತೆ ಕಾರ್ಡ್ ಒಮ್ಮೆ ಸ್ವೈಪ್ ಮಾಡಿ ತೆಗೆಯುವ ವ್ಯವಸ್ಥೆ ಇನ್ನೂ ಇದೆ ಎಂದು ಭಾವಿಸಿರುವ ಕೆಲವರು ರೀಡರ್ ಸ್ಲಾಟ್‌ನಲ್ಲಿ ಕಾರ್ಡ್ ಸಿಕ್ಕಿಕೊಂಡಿದೆ ಎಂದು ಭಾವಿಸಿ ಎಳೆದು ತಗೆಯಲು ಪ್ರಯತ್ನಿಸುವುದೂ ಇದೆ. ಆಗ ಎಟಿಎಂ ಕಾರ್ಡ್‌ನ ಚಿಪ್‌ಗೆ ಹಾನಿಯಾಗುತ್ತದೆ. ಹಲವರು ಈ ರೀತಿ ಕಾರ್ಡ್‌ಗೆ ಹಾನಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಎಲ್ಲ ಎಟಿಎಂ ಕೇಂದ್ರಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಈ ಬಗ್ಗೆ ತಿಳುವಳಿಕೆ ಮೂಡಿಸುವ ಬರಹ ಅಳವಡಿಸಲಾಗಿದೆ.

    ಹಸಿರು ಬಣ್ಣ, ಅಲರ್ಟ್ ಸೌಂಡ್ ಗಮನಿಸಿ; ಎಟಿಎಂ ಕಾರ್ಡನ್ನು ರೀಡರ್ ಸ್ಲಾಟ್‌ಗೆ ಹಾಕಿದಾಗ ಕೆಂಪು ಬಣ್ಣದ ಎಲ್‌ಇಡಿ ಲೈಟ್ ಆನ್ ಆಗುತ್ತದೆ. ಕಾರ್ಡ್‌ನ ಚಿಪ್ ಸ್ಲಾಟ್‌ನಲ್ಲಿ ಲಾಕ್ ಆಗಿ ರೀಡಿಂಗ್ ಪ್ರಕ್ರಿಯೆ ನಡೆಯುತ್ತದೆ. ವಹಿವಾಟು ಪೂರ್ಣಗೊಂಡ ಬಳಿಕ ಹಸಿರು ಬಣ್ಣದ ಲೈಟ್ ಆನ್ ಆಗಿ ಅಲರ್ಟ್ ಸೌಂಡ್ ಬರುತ್ತದೆ. ಆಗ ಕಾರ್ಡನ್ನು ಸುರಕ್ಷಿತವಾಗಿ ಹೊರತೆಗೆಯಬೇಕು. ಕೆಲವರು ಲೈಟ್ ಮತ್ತು ಸೌಂಡ್ ಅಲರ್ಟ್‌ನ್ನು ಗಮನಿಸದೆ ಎಟಿಎಂ ಕಾರ್ಡ್ ಮರೆತು ಹೋಗುತ್ತಾರೆ ಎಂದು ಎನ್ನುತ್ತಾರೆ ಬ್ಯಾಂಕ್ ಸಿಬ್ಬಂದಿ.

    ಆಫ್‌ಲೈನ್ ಸಮಸ್ಯೆ ಕಿರಿಕಿರಿ: ಜಿಲ್ಲೆಯಲ್ಲಿ ವಿವಿಧ ಬ್ಯಾಂಕುಗಳ 450 ಎಟಿಎಂ ಕೇಂದ್ರಗಳಿವೆ. ಇದರಲ್ಲಿ ಶೇ.60ರಷ್ಟು ನಗರ ಪ್ರದೇಶದಲ್ಲಿವೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲವು ಎಟಿಎಂಗಳು ಆಫ್‌ಲೈನ್ ಸಮಸ್ಯೆ ಎದುರಿಸುತ್ತಿವೆ. ಸರ್ವರ್ ಸಿಸ್ಟಂ ಕಾರ್ಯನಿರ್ವಹಿಸದ ಕಾರಣ ಹಣ ಡ್ರಾ ಆಗಿರುವ ಸಂದೇಶ ಮೊಬೈಲ್‌ಗೆ ಬರುತ್ತದೆ. ಬ್ಯಾಲೆನ್ಸ್ ಕಟ್ ಆಗಿರುತ್ತದೆ. ಆದರೆ ಎಟಿಎಂನಲ್ಲಿ ಹಣ ಕೈಗೆ ಸಿಕ್ಕಿರುವುದಿಲ್ಲ. ಬಳಿಕ 24 ಗಂಟೆ ಒಳಗೆ ತಮ್ಮ ಖಾತೆಗೆ ಜಮಾ ಆದರೂ, ತಕ್ಷಣಕ್ಕೆ ಹಣದ ಅಗತ್ಯ ಇರುವರಿಗೆ ಇದು ಸಮಸ್ಯೆಯಾಗುತ್ತಿದೆ. ಇತ್ತೀಚೆಗೆ ಈ ತಾಂತ್ರಿಕ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಎಟಿಎಂ ಕೇಂದ್ರಗಳಲ್ಲಿ ಕಾರ್ಡ್ ಬಿಟ್ಟು ಹೋಗುವ ಸಮಸ್ಯೆ ಗಮನಕ್ಕೆ ಬಂದಿದೆ. ಎಟಿಎಂ ಕೇಂದ್ರದ ಸಂಬಂಧಪಟ್ಟ ಶಾಖೆಗಳಲ್ಲಿ ಸಾರ್ವಜನಿಕರು ತಮ್ಮ ಕಾರ್ಡ್‌ಗಳನ್ನು ಗುರುತು ಚೀಟಿ ತೋರಿಸಿ ಪಡೆದುಕೊಳ್ಳಬಹುದು. ಅಪ್‌ಗ್ರೇಡ್ ಎಟಿಎಂ ವ್ಯವಸ್ಥೆ ಬಗ್ಗೆ ಸಾರ್ವಜನಿಕರ ತಿಳುವಳಿಕೆಗಾಗಿ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
    – ರುದ್ರೇಶ್ ವ್ಯವಸ್ಥಾಪಕ, ಜಿಲ್ಲಾ ಲೀಡ್‌ಬ್ಯಾಂಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts