More

    ಕಾರ್ಯಕರ್ತರಿಗೆ ಕ್ಷಮೆ ಕೋರಿದ ಶಾಸಕ?: ಬಸವರಾಜ ದಢೇಸುಗೂರು ಹೆಸರಿನಲ್ಲಿನ ಬರಹ ವೈರಲ್

    ಕಾರಟಗಿ: ‘ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತ ಬಂಧುಗಳೇ, ನನ್ನಿಂದ ತಮಗಾದ ತೊಂದರೆಗೆ ಭೇಷರತ್ ಕ್ಷಮೆಯಾಚಿಸುತ್ತೇನೆ’ ಎನ್ನುವ ಸುದೀರ್ಘ ಸಂದೇಶ ಶಾಸಕ ಬಸವರಾಜ ದಢೇಸುಗೂರು ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಶಿವಶರಣೇಗೌಡ ಯರಡೋಣಾ ಅ.15ರಂದು ‘ಬ್ರೆಕಿಂಗ್ ನ್ಯೂಸ್, ಶಾಸಕರಿಗೆ ಟಿಕೆಟ್ ಕೈತಪ್ಪಲಿದ್ದು, ಕ್ಷೇತ್ರಕ್ಕೆ ಹೊಸಮುಖ ಬರಲಿದೆ. ಯಾರೂ ಪಕ್ಷ ತೊರೆಯುವ ಅಗತ್ಯವಿಲ್ಲ’ ಎನ್ನುವ ಪೋಸ್ಟನ್ನು ಬಿಜೆಪಿ ಕನಕಗಿರಿ ಕ್ಷೇತ್ರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಾಕಿದ್ದರು. ಇದು ಚರ್ಚೆಗೆ ಗ್ರಾಸವಾಗಿದ್ದಲ್ಲದೆ ಬಂಡಾಯ ಗುಂಪು ಸೃಷ್ಟಿಗೆ ಕಾರಣವಾಗಿತ್ತು. ಅ.21ರಂದು ಈ ಗುಂಪು ಬಹಿರಂಗ ಸಭೆ ನಡೆಸಿ ಶಾಸಕ ವಿರುದ್ಧ ಅಸಮಾಧಾನ ಹೊರಹಾಕಿತ್ತು. ಈ ಮಧ್ಯೆ ಜಿಲ್ಲಾ ಪ್ರಮುಖರು ಅ.22ರಂದು ದಿಢೀರ್ ಸಭೆ ಕರೆಯುತ್ತಿದ್ದಂತೆ ಅ.21ರ ರಾತ್ರಿಯಿಂದಲೇ ಶಾಸಕರ ಹೆಸರಿನಲ್ಲಿ ಕ್ಷಮೆ ಕೋರಿದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ವೈರಲ್ ಆದ ಪೋಸ್ಟ್‌ನಲ್ಲಿ ಏನಿದೆ?: ‘ಪಕ್ಷದ ಶಿಸ್ತಿನ ಕಾರ್ಯಕರ್ತರೇ ದಯವಿಟ್ಟು ಆತುರದ ನಿರ್ಧಾರ ಬೇಡ. ಏನಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ. ನಿಮ್ಮ ಯಾವುದೇ ಅಸಮಾಧಾನಕ್ಕೆ ಸಮಧಾನ, ಸಮಸ್ಯೆಗೆ ಪರಿಹಾರ, ನಿಮ್ಮ ಇಚ್ಛೆಯಂತೆ ನಡಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದಯವಿಟ್ಟು ಪಕ್ಷಕ್ಕೆ ಮುಜಗರ ಆಗದಂತೆ ಎಚ್ಚರಿಕೆ ವಹಿಸಬೇಕಿದೆ. ಪಕ್ಷದಲ್ಲಿ ನಮ್ಮೆಲ್ಲರ ಜವಾಬ್ದಾರಿ ಮಹತ್ವದ್ದು. ಆವೇಷದ ಕೈಯಲ್ಲಿ ಕೊಡಲಿ ಕೊಡೋದು ಬೇಡ. ಸಮಾಧಾನ, ತಾಳ್ಮೆಯಿಂದ ಸಮಸ್ಯೆಗೆ ಪರಿಹಾರ ಒದಗಿಸಲು ನಾನು ಸಿದ್ಧನಿದ್ದೇನೆ. ನನ್ನ ನೋವು ನಿಮಗೂ ತಿಳಿಸುವುದಿದೆ ಅರ್ಥಮಾಡಿಕೊಳ್ಳಿ. ಎಂದಿನಂತೆ ಪಕ್ಷದ ಕಾರ್ಯ ಚಟುವಟಿಕೆ ಕೈಗೊಂಡು ಪಕ್ಷ ಸಂಘಟನೆ ಮಾಡಬೇಕು. ಸಮ್ಮಿಶ್ರ ಸರ್ಕಾರ ಮತ್ತು ಕರೊನಾ ಸಂಕಷ್ಟ ಸಮಯದಲ್ಲಿ ಅಧಿಕಾರ ವಹಿಸಿಕೊಂಡಿರುವೆ. ಎರಡ್ಮೂರು ವರ್ಷಗಳಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಷ್ಟ. ಇನು ್ನಮುಂದೆ ಹಾಗೆ ಆಗದಂತೆ ಎಚ್ಚರಿಕೆ ವಹಿಸುವೆ. ನನ್ನ ವೈಯಕ್ತಿಕ ತೇಜೋವಧೆಗೆ ಕಾಣದ ಕೈಗಳ ಷಡ್ಯಂತ್ರ ಸಾಕಷ್ಟು ಇರುವುದು ನಿಮ್ಮೆಲ್ಲರ ಗಮನಕ್ಕೆ ಇದೆಯೆಂದು ಭಾವಿಸುತ್ತೇನೆ. ನಿಮ್ಮ ಸಮಸ್ಯೆ ಆಲಿಸಲು ವಿಳಂಬ ಮಾಡಿದ್ದಕ್ಕೆ ಪ್ರತಿಯೊಬ್ಬರಲ್ಲಿ ಕ್ಷಮೆಯಾಚಿಸುತ್ತೇನೆ.’ ಎನ್ನುವ ಸುದೀರ್ಘ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈಗಾಗಲೇ ಕೆಲ ನಿಷ್ಠಾವಂತರು ಬಿಜೆಪಿ ತೊರೆದು ಬೇರೆ ಪಕ್ಷಕ್ಕೆ ಸೇರಿದ್ದಾರೆ. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಅವರ ಕಡೆಗಣನೆ ಆಗಿದ್ದಲ್ಲಿ ನಾಯಕ ಮತ್ತು ಪಕ್ಷ ಎರಡಕ್ಕೂ ಅಪಾಯ ತಪ್ಪಿದ್ದಲ್ಲ. ಇದನ್ನು ಶಾಸಕರು ತಡವಾದರೂ ಅರಿತುಕೊಂಡಿದ್ದಾರೆ ಎನ್ನುವ ಚರ್ಚೆಗಳು ನಡೆದಿವೆ. ಆದರೆ, ಕ್ಷೇತ್ರದ ಕಾರ್ಯರ್ತರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


    ಫಲ ಕೊಡುವುದೇ ಕೊಪ್ಪಳದ ಸಭೆ

    ಕನಕಗಿರಿ ಕ್ಷೇತ್ರದಲ್ಲಾದ ಬೆಳವಣಿಗೆಗಳ ಕುರಿತು ಕೊಪ್ಪಳದಲ್ಲಿ ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಸಚಿವ ನಾಗಪ್ಪ ಸಾಲೋಣಿ, ಮಾಜಿ ಶಾಸಕ ಜಿ.ವೀರಪ್ಪ ಕೇಸರಹಟ್ಟಿ, ವಿಭಾಗೀಯ ಸಹಪ್ರಭಾರ ಚಂದ್ರಶೇಖರ ಹಲಗೇರಿ, ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ರಮೇಶ ನಾಡಿಗೇರ್, ನವೀನ್ ಗುಳಗಣ್ಣನವರ್, ನರಸಿಂಹರಾವ್ ಕುಲಕರ್ಣಿ, ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಕಾಡಾ ಮಾಜಿ ಅಧ್ಯಕ್ಷ ಎಚ್.ಗಿರೇಗೌಡ ನೇತೃತ್ವದಲ್ಲಿ ಅ.22ರ ಸಂಜೆ ಸಭೆ ನಡೆಸಲಾಗಿದೆ. ಕ್ಷೇತ್ರದ 30-40 ಜನರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಪಕ್ಷದ ಕಚೇರಿಯನ್ನು ಬೇರೆಕಡೆ ಮಾಡಬೇಕು. ಶಾಸಕರು ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ.

    ಕಾರ್ಯಕರ್ತರು ‘ದುಡಿದರೆ ಕೂಲಿ’ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಕೂಲಿಗಾಗಿ ಯಾರೂ ಕೆಲಸ ಮಾಡುತ್ತಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅನೇಕರು ಪಕ್ಷ ತೊರೆದಿದ್ದು ಅದರ ಬಗ್ಗೆ ಯಾರೂ ಚರ್ಚಿಸುತ್ತಿಲ್ಲ. ಶಾಸಕರೊಂದಿಗೆ ಯಾವುದೇ ಕಾರಣಕ್ಕೆ ರಾಜಿಸಂಧಾನವಿಲ್ಲ. ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿಯನ್ನು ಕರೆತನ್ನಿ, ಎಲ್ಲ ಕಾರ್ಯಕರ್ತರು ಅವರ ಗೆಲುವಿಗೆ ಶ್ರಮಿಸುತ್ತೇವೆಂದು ಬಂಡಾಯ ಗುಂಪಿನ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಶಾಸಕಗೆ ಸಭೆಯ ಮೂಲಕ ಸೂಕ್ಷ್ಮವಾಗಿ ಕಿವಿ ಮಾತು ಹೇಳಲಾಗಿದೆ. ಕಾರ್ಯಕರ್ತರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಹಳೇಜೂರಟಗಿ ಗ್ರಾಮದಲ್ಲಿ ಯಾರದೋ ಮಾತು ಕೇಳಿ ಸರ್ಕಾರಿ ಜಾಗವೆಂದು ನೇತೃತ್ವವಹಿಸಿಕೊಂಡು ತೆರವಿಗೆ ಮುಂದಾಗಿರುವುದು ಸರಿಯಲ್ಲವೆಂದು ಹಿರಿಯರು, ಶಾಸಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts