More

    ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಪ್ರಿಯಾಂಕಾ ನಾಯಕತ್ವ: ಯುವ ಸಮುದಾಯ ಕೇಂದ್ರೀಕೃತ ಕೈ ಪ್ರಣಾಳಿಕೆ

    ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ ನಾನೇ ಎಂದು ನೇರವಾಗಿ ಹೇಳದಿದ್ದರೂ, ‘ಕಾಂಗ್ರೆಸ್​ನಲ್ಲಿ ಯಾರ ಮುಖ ನಿಮಗೆ ಹೆಚ್ಚಾಗಿ ಕಾಣುತ್ತಿದೆ’ ಎನ್ನುವ ಮೂಲಕ ಪರೋಕ್ಷವಾಗಿ ಪಕ್ಷದಲ್ಲಿ ನಾಯಕತ್ವ ತನ್ನದೇ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

    ದೆಹಲಿಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ವೇಳೆ ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಉತ್ತರಿಸಿ ಸಿಎಂ ಅಭ್ಯರ್ಥಿ ಕುರಿತ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆ ದುರ್ಬಲಗೊಂಡಿರುವುದರಿಂದ ಕಾಂಗ್ರೆಸ್ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿಲ್ಲ. ಹೀಗಾಗಿ, ಪ್ರಿಯಾಂಕಾ ಚುನಾವಣೆ ಸ್ಪರ್ಧೆ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡಿಲ್ಲ.

    ಯುವ ಜನಾಂಗಕ್ಕೆ ಪ್ರಣಾಳಿಕೆ: ಕಾಂಗ್ರೆಸ್ ಈ ಸಲದ ಚುನಾವಣಾ ಪ್ರಣಾಳಿಕೆಯಲ್ಲಿ ನಿರುದ್ಯೋಗ ಸಮಸ್ಯೆಯನ್ನೇ ಪ್ರಮುಖವಾಗಿ ಕೈಗೆತ್ತಿಕೊಂಡಿದ್ದು, ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ಯುವಕರನ್ನು ಭರ್ತಿ ಮಾಡುವುದೇ ಆದ್ಯತೆಯಾಗಿರಲಿದೆ ಎಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಖಾಲಿ ಹುದ್ದೆಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ, ಇದಕ್ಕೆ ಕಾಂಗ್ರೆಸ್ ಕಂಡುಕೊಂಡಿರುವ ಪರಿಹಾರಗಳೇನು ಎಂದು ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ. ಕಳೆದೈದು ವರ್ಷಗಳಲ್ಲಿ 17 ಲಕ್ಷ ಯುವಕರು ನೌಕರಿ ಕಳೆದುಕೊಂಡಿದ್ದಾರೆ. ಅರ್ಹ ಶಿಕ್ಷಿತ ಯುವಕರು ನೌಕರಿಯಿಲ್ಲದೆ ಅಲೆದಾಡುವಂತಾಗಿದೆ ಎಂದು ಪ್ರಿಯಾಂಕಾ ದೂರಿದ್ದಾರೆ.

    ಸಚಿವ ಪಕ್ಷೇತರನಾಗಿ ಸ್ಪರ್ಧೆ: ಗೋವಾ ಸರ್ಕಾರದ ಲೋಕೋಪಯೋಗಿ ಸಚಿವ ದೀಪಕ್ ಪ್ರಭು ಪೌಸ್ಕರ್ ಸಂಪುಟಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. 2019ರಲ್ಲಿ ಮಹಾರಾಷ್ಟ್ರ ಗೋಮಂತಕ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದ ದೀಪಕ್ ಪ್ರಭು, ಈ ಬಾರಿ ಸನ್ವೊರ್ದಮ್ ಕ್ಷೇತ್ರದಿಂದ ಕಣಕ್ಕಿಳಿಯುವೆ ಎಂದು ಘೋಷಿಸಿದ್ದಾರೆ.

    ಬಿಜೆಪಿಗೆ ಪರಿಕರ್ ಪುತ್ರ ರಾಜೀನಾಮೆ: ಪಣಜಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಮಾಜಿ ಸಿಎಂ ದಿವಂಗತ ಮನೋಹರ ಪರಿಕರ್ ಪುತ್ರ ಉತ್ಪಲ್ ಪರಿಕರ್ ಪಕ್ಷ ತ್ಯಜಿಸಿದ್ದು, ಆಪ್​ಗೆ ಸೇರಿದ್ದಾರೆ. ಮನೋಹರ ಪರಿಕರ್ 2019ರವರೆಗೆ ಈ ಕ್ಷೇತ್ರವನ್ನು 25 ವರ್ಷಗಳ ಕಾಲ ಪ್ರತಿನಿಧಿಸಿದ್ದರು. ಆದರೆ, ಈ ಬಾರಿ ಪರಿಕರ್ ವಿರುದ್ಧ ಕ್ಷೇತ್ರದಲ್ಲಿ ರಾಜಕಾರಣ ಮಾಡಿಕೊಂಡಿದ್ದ ಅತನಾಸಿಯೋ ಮೊನ್ಸರೇಟ್​ಗೆ ಬಿಜೆಪಿ ಟಿಕೆಟ್ ನೀಡಲಾಗುತ್ತಿದೆ. ಹೀಗಾಗಿ, ನನ್ನ ರಾಜಕೀಯ ಜೀವನವನ್ನು ಕ್ಷೇತ್ರದ ಜನರೇ ತೀರ್ವನಿಸುತ್ತಾರೆ ಎಂದು ಉತ್ಪಲ್ ಪರಿಕರ್ ಅಸಮಾಧಾನ ಹೊರಹಾಕಿದ್ದಾರೆ.

    ಫೆ. 14ಕ್ಕೆ ಚುನಾವಣೆ ನಡೆಯಲಿರುವ ಉತ್ತರಾಖಂಡ ದಲ್ಲೂ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ 59 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದೆ. ಕಾಂಗ್ರೆಸ್​ನಿಂದ ವಲಸೆ ಬಂದ ಹಲವರಿಗೆ ಟಿಕೆಟ್ ದೊರಕಿರುವುದು ಪಕ್ಷದ ಮೂಲ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಉಳಿದ 11 ಕ್ಷೇತ್ರಗಳಿಗೆ ಬಿಜೆಪಿ 2ನೇ ಪಟ್ಟಿಯಲ್ಲಿ ಟಿಕೆಟ್ ಪ್ರಕಟಿಸಬೇಕಿದೆ.

    ಮಾನಹಾನಿ ಕೇಸ್​ಗೆ ಚನ್ನಿ ನಿರ್ಧಾರ: ತಮ್ಮ ಸಂಬಂಧಿ ನಿವಾಸದ ಮೇಲೆ ಇಡಿ ದಾಳಿ ನಡೆದ ಹಿನ್ನೆಲೆಯಲ್ಲಿ ತಮ್ಮನ್ನು ‘ಅಪ್ರಾಮಾಣಿಕ ವ್ಯಕ್ತಿ’ ಎಂದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿರುದ್ಧ ಪಂಜಾಬ್ ಸಿಎಂ ಚರಣ್​ಜಿತ್ ಮಾನನಷ್ಟ ಮೊಕದ್ದಮೆ ದಾಖಲಿಸುವ ತೀರ್ಮಾನ ಕೈಗೊಂಡಿದ್ದಾರೆ.

    ಪ್ರಣಾಳಿಕೆಯ ಪ್ರಮುಖಾಂಶ

    • 20 ಲಕ್ಷ ನೌಕರಿ ಭರ್ತಿ, ಇದರಲ್ಲಿ 8 ಲಕ್ಷ ಗೃಹ ಇಲಾಖೆಯಲ್ಲೇ ಇದೆ
    • ಸರ್ಕಾರಿ ಪರೀಕ್ಷಾ ವಿಧಾನಗಳ ಬದಲಾವಣೆ
    • 1.50 ಲಕ್ಷ ಪ್ರಾಥಮಿಕ ಶಿಕ್ಷಕರ ನೇಮಕ
    • ಸಂಸ್ಕೃತ, ಉರ್ದು ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ನೇಮಕ
    • ಹಿಂದುಳಿದ ಸಮುದಾಯದ ಯುವಕರಿಗೆ ಉದ್ಯಮ ಆರಂಭಿಸಲು ಶೇ.1ರ ಬಡ್ಡಿ ದರದಲ್ಲಿ ಸಾಲ

    ಬಿಜೆಪಿ ಪ್ರಥಮ ಪಟ್ಟಿ ಬಿಡುಗಡೆ: ಪಂಜಾಬ್ ವಿಧಾನಸಭಾ ಚುನಾವಣೆಗೆ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಸಂಯುಕ್ತ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, 34 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ 12 ಮಂದಿ ಕೃಷಿ ಕುಟುಂಬ, 8 ದಲಿತ ಸಮುದಾಯ ಮತ್ತು 13 ಅಭ್ಯರ್ಥಿಗಳು ಸಿಖ್ ಸಮುದಾಯದ ಹಿನ್ನೆಲೆಯವರು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮಾಹಿತಿ ನೀಡಿದ್ದಾರೆ.

    ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts