More

    ವಾಲ್ಮೀಕಿ ಆಶ್ರಮ ಶಾಲೆಗಿಲ್ಲ ಮೂಲಸೌಕರ್ಯ

    ಜಗದೀಶ್ ಟಿ.ಎನ್. ಚನ್ನಗಿರಿ: ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಆರಂಭಿಸಲಾದ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಮೂಲಸೌಕರ್ಯ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆ ಚಟುವಟಿಕೆಗಳಿಗೆ ಸಮಸ್ಯೆ ಅನುಭವಿಸುವಂತಾಗಿದೆ.

    ತಾಲೂಕು ಕೇಂದ್ರ ಚನ್ನಗಿರಿಯಿಂದ 18 ಕಿಮೀ ದೂರದ ಅಸ್ತಾಪನಹಳ್ಳಿ ಗ್ರಾಮದಲ್ಲಿ 1981ರಲ್ಲಿ ಸರ್ಕಾರ ವಾಲ್ಮೀಕಿ ಆಶ್ರಮ ಶಾಲೆ ಆರಂಭಿಸಿತು. ನಾಲ್ವರು ಶಿಕ್ಷಕರೇ ಪಾಠದ ಜತೆ ಇತರ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಚಿತ್ರದುರ್ಗ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

    ಶಾಲೆಯಲ್ಲಿ ಮೂರು ಕೊಠಡಿಗಳಿದ್ದು, ಎಲ್ಲವೂ ಶಿಥಿಲಗೊಂಡಿವೆ. ಇದರಲ್ಲೇ 1ರಿಂದ 5ನೇ ತರಗತಿಯ 125 ವಿದ್ಯಾರ್ಥಿಗಳು ಕೂರಬೇಕು. ಇನ್ನು ಮಳೆಗಾಲ ಬಂದರೆ, ಕಟ್ಟಡ ಸೋರುತ್ತದೆ. ಕೆಲವೆಡೆ ಕಬ್ಬಿಣದ ರಾಡುಗಳು ಕಾಣಿಸುತ್ತಿರುವ ಛಾವಣಿ ಕುಸಿಯುವಂತಿದ್ದು, ಭಯದಲ್ಲೇ ಪಾಠ ಕೇಳುವಂತಾಗಿದೆ.

    ಇನ್ನು ವಸತಿ ಕಟ್ಟಡದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಸಿಸಿ ಕ್ಯಾಮರಾ ಇದ್ದರೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಶೌಚಗೃಹ ದುರ್ವಾಸನೆ ಬೀರುತ್ತಿದ್ದು, ಮಕ್ಕಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ.

    ಮಕ್ಕಳಿಗೆ ಗುಣಮಟ್ಟ ನೀಡುವ ಸಲುವಾಗಿ ಸರ್ಕಾರ 2021ರಲ್ಲಿ 25 ಕಂಪ್ಯೂಟರ್‌ಗಳನ್ನು ನೀಡಿದ್ದು, ಶಿಕ್ಷಕರ ಕೊರತೆಯಿಂದಾಗಿ ಮೂಲೆ ಸೇರಿವೆ. ಪಠ್ಯೇತರ ಚಟುವಟಿಕೆಗಳ ವಿಷಯಗಳ ಬೋಧನೆಗೆ ಶಿಕ್ಷಕರಿಲ್ಲ.

    ಬಾಲಕ-ಬಾಲಕಿಯರ ಹಾಸ್ಟೆಲ್‌ಗಳಿಗೆ ವಾರ್ಡನ್‌ಗಳಿಲ್ಲದ ಕಾರಣ ಅಡುಗೆ ಸಿಬ್ಬಂದಿ ರಾತ್ರಿ ವೇಳೆ ಉಳಿಯಬೇಕಾಗಿದೆ. ಆದರೆ, ಇಲ್ಲಿ ಮಕ್ಕಳು ಭಯದಲ್ಲಿ ಸಮಯ ಕಳೆಯುವಂತಾಗಿದೆ. ಸಂಬಂಧಿತ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಇತ್ತ ಗಮನ ಹರಿಸಲಿ ಎಂಬುದು ಸಿಬ್ಬಂದಿ ಆಶಯ.

    ಕಟ್ಟಡ ಸಂಪೂರ್ಣ ಹಾಳಾಗಿರುವ ಕಾರಣ ದುರಸ್ತಿಗಾಗಿ 50 ಲಕ್ಷ ರೂ. ಮೊತ್ತದ ಕ್ರಿಯಾಯೋಜನೆ ರೂಪಿಸಿ ಸಂಬಂಧಿತ ಇಲಾಖೆಗೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ. ಹಾಸ್ಟೆಲ್‌ನಲ್ಲಿ ಶಿಕ್ಷಕರು ಇರಲು ಕ್ರಮ ತೆಗೆದುಕೊಳ್ಳಲಾಗುವುದು.
    l ಶಂಕರ್, ಜಿಲ್ಲಾ ಪರಿಶಿಷ್ಟ ಕಲ್ಯಾಣಾಧಿಕಾರಿ.


    ಶಾಲೆಯ ಕಟ್ಟಡದ ದುರಸ್ತಿಗಾಗಿ ಮೇಲಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತರಲಾಗಿದೆ. ನಾಲ್ವರು ಶಿಕ್ಷಕರು ಇದ್ದು, ಇವರಲ್ಲಿ ಒಬ್ಬರನ್ನು ಮಕ್ಕಳ ನಿರ್ವಹಣೆಗಾಗಿ ನಿಯೋಜನೆ ಮಾಡಲಾಗುವುದು.
    l ರಘು, ಮುಖ್ಯಶಿಕ್ಷಕ.

    ಬಡತನ ರೇಖೆಗಿಂತ ಕೆಳಗಿರುವ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಅನೇಕ ಮಕ್ಕಳು ಅಕ್ಷರ ಜ್ಞಾನ ಪಡೆಯಲು ದಾಖಲಾಗಿದ್ದಾರೆ. ಆಶ್ರಮ ಶಾಲೆಯಲ್ಲಿ ಮೂಲಸೌಕರ್ಯ ಕೊರತೆ ಕಾರಣ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ. ಕಟ್ಟಡ ಶಿಥಿಲಗೊಂಡಿದ್ದು, ಯಾವಾಗ ಬೀಳುತ್ತದೋ ಎಂಬ ಜೀವಭಯದಲ್ಲಿ ಇದ್ದಾರೆ. ಅನೇಕ ಸಲ ಛಾವಣಿಯ ಸಿಮೆಂಟ್ ಕಳಚಿ ತಲೆಯ ಮೇಲೆ ಬಿದ್ದು ಗಾಯಗೊಂಡಿದ್ದಾರೆ.
    l ಆರ್.ಪುನೀತ್‌ಕುಮಾರ್, ಅಧ್ಯಕ್ಷರು, ರಾಜ್ಯ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts