More

    ತ್ರಿಪದಿಗಳ ಮೂಲಕ ಅಸಮಾನತೆ ನಿವಾರಣೆ

    ಯಾದಗಿರಿ: ಪುರಾತನ ಕಾಲದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ಅಸಮಾನತೆಯನ್ನು ಕವಿ ಸರ್ವಜ್ಞರು ತ್ರಿಪದಿಗಳ ಮೂಲಕ ನಿವಾರಣೆ ಮಾಡಿದ್ದರು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ತಿಳಿಸಿದರು.

    ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸಂತಕವಿ ಸರ್ವಜ್ಞರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬದಲಾವಣೆ ಬರಬೇಕಾದರೆ ಮೊದಲು ಪ್ರತಿಯೊಬ್ಬರ ಮನಸ್ಥಿತಿ ಬದಲಾಗಬೇಕು. ಸರ್ವಜ್ಞರು ಲಿಂಗ, ಜಾತಿ ತಾರತಮ್ಯ ಹೋಗಲಾಡಿಸಿ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತ್ರಿಪದಿ ವಚನಗಳನ್ನು ರಚಿಸಿದ್ದಾರೆ. ಅಂತಹ ಪ್ರತಿಯೊಂದು ವಚನಗಳನ್ನು ಮಕ್ಕಳಿಗೆ ಕಲಿಸಬೇಕು. ಜತೆಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಅವರು ಸಲಹೆ ನೀಡಿದರು.

    ಸಹ ಶಿಕ್ಷಕ ಬಂಗಾರಪ್ಪ ಕುಂಬಾರ ಉಪನ್ಯಾಸ ನೀಡಿ, ಸರ್ವಜ್ಞನು ಗರ್ವದಿಂದ ಕಲಿತವನಲ್ಲ, ಸರ್ವರೊಳು ಒಂದೊಂದು ನುಡಿ ಕಲಿತು ಸರ್ವಜ್ಞನಾದನು. 16ನೇ ಶತಮಾನದಲ್ಲಿ ಸರಳ ಭಾಷೆ ಮೂಲಕ ಸಮಾಜದ ಅಂಕು-ಡೊಂಕು ತಮ್ಮ ತ್ರಿಪದಿ ವಚನಗಳ ಮೂಲಕ ತಿದ್ದುವ ಕೆಲಸ ಮಾಡಿದವರಲ್ಲಿ ಕವಿ ಸರ್ವಜ್ಞ ಒಬ್ಬರಾಗಿದ್ದಾರೆ. ಸರ್ವಜ್ಞ ಎಂಬುವುದು ಸರ್ವವವನ್ನು ತಿಳಿದವರು ಎಂದು ಉತ್ತಂಗಿ ಚನ್ನಪ್ಪನವರ ಬರೆದ ಪುಸ್ತಕದಲ್ಲಿ ಉಲ್ಲೇಖವಿದೆ. ತಂದೆ ಬಸವ ಅರಸ, ತಾಯಿ ಕುಂಬಾರ ಮಾಳಮ್ಮ ಅವರ ಮಗನಾಗಿ ಜನಿಸಿದ ಸರ್ವಜ್ಞ ಹಲವು ತ್ರಿಪದಿಗಳ ಮೂಲಕ ಹೆಸರಾಗಿದ್ದಾರೆ ಎಂದರು.

    ಸರ್ವಜ್ಞ ಎಲ್ಲ ಸಮಸ್ಯೆಗಳಿಗೂ ವಚನಗಳ ಮೂಲಕ ಉತ್ತರ ನೀಡಿದ್ದಾರೆ. ಅವರ ವಚನಗಳನ್ನು ಪಾಲನೆ ಮಾಡಿದಲ್ಲಿ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ. ಕುಂಬಾರ ಸಮಾಜದವರು ಮುಗ್ದರು. ಯಾರಿಗೂ ಕೇಡು ಬಯಸಿದವರಲ್ಲ. ಎಲ್ಲರೊಂದಿಗೆ ಬೆರೆತು ಬದುಕುವ ಸಮಾಜವಾಗಿದೆ. ಪ್ರಸ್ತುತ ಸಮಾಜದಲ್ಲಿ ಎಲ್ಲವೂ ಡಿಜಿಟಲೀಕರಣವಾಗಿದೆ. ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಪ್ರತಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಎಂದು ಹೇಳಿದರು.
    ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಕುಂಬಾರ ದರ್ಶನಾಪುರ, ಹಣಮಂತಪ್ಪ ಮಿನಾಸ್ಪುರ ಇತರರು ಇದ್ದರು.

    ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ತಂಡದವರು ನಾಡಗೀತೆ ಹಾಡಿದರು. ದತ್ತಪ್ಪ ಸಾಗನೂರ ಸ್ವಾಗತಿಸಿದರು. ಗುರುಪ್ರಸಾದ ವೈದ್ಯ ಅವರು ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಹೊಸಳ್ಳಿ ಕ್ರಾಸ್ನಿಂದ ಜಿಲ್ಲಾಡಳಿತ ಭವನದವರೆಗೆ ಕಲಾತಂಡಗಳೊಂದಿಗೆ ಸಂತಕವಿ ಸರ್ವಜ್ಞರ ಭಾವಚಿತ್ರದ ಮೆರವಣಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts