More

    ವೋಟು ಹಾಕುತ್ತೇವೆ, ಆದರೆ ಬದುಕು ಬದಲಾದೀತೇ?; ನೆಮ್ಮದಿ ಕೆಡಿಸಿದ ಲಾಕ್‌ಡೌನ್‌, ಬೀದಿಗೆ ಬಿದ್ದ ಅಸ್ಸಾಂ ದಂಪತಿ ಬದುಕು..

    | ರಾಘವ ಶರ್ಮ ನಿಡ್ಲೆ ಗುವಾಹಟಿ (ಅಸ್ಸಾಂ)

    ಕರೊನಾ ಮಹಾಮಾರಿ ಮತ್ತು ಲಾಕ್‌ಡೌನ್‌ ಎಷ್ಟೋ ಕುಟುಂಬಗಳನ್ನು ಬೀದಿಗೆ ತಳ್ಳಿದೆ. ಸಾವಿರಾರು ಮಂದಿ ಕರೊನಾಗೆ ಬಲಿಯಾದರೆ, ಲಾಕ್‌ಡೌನ್‌ ಲಕ್ಷಾಂತರ ಮಂದಿಯ ಜೀವನೋಪಾಯದ ಹಾದಿಯನ್ನೇ ಹೊಸಕಿಹಾಕಿತು. ನೌಕರಿ ಕಳೆದುಕೊಂಡು ಮಾನಸಿಕ ತೊಳಲಾಟ ಅನುಭವಿಸುತ್ತಿರುವವರೆಷ್ಟೋ?

    ಇಂಥದ್ದೇ ಒಂದು ಕಥೆ ಅಸ್ಸಾಂನ ಅಬ್ಬಾಸ್ ಅಲಿ ಮತ್ತು ಮೊರಿಜಿನಾ ಬೇಗಂ ದಂಪತಿಯದ್ದು. ಗುವಾಹಟಿಯಿಂದ 65 ಕಿ.ಮೀ. ದೂರದಲ್ಲಿರುವ ನಲ್ಬಾರಿ ಮೂಲದ ಈ ದಂಪತಿ ನೆಮ್ಮದಿಯನ್ನೇ ಲಾಕ್‌ಡೌನ್‌ ಕಿತ್ತುಕೊಂಡಿತು.

    ವೋಟು ಹಾಕುತ್ತೇವೆ, ಆದರೆ ಬದುಕು ಬದಲಾದೀತೇ?; ನೆಮ್ಮದಿ ಕೆಡಿಸಿದ ಲಾಕ್‌ಡೌನ್‌, ಬೀದಿಗೆ ಬಿದ್ದ ಅಸ್ಸಾಂ ದಂಪತಿ ಬದುಕು..ಅಬ್ಬಾಸ್ 22 ವರ್ಷಗಳಿಂದ ಖಾಸಗಿ ಪ್ರಿಂಟಿಂಗ್ ಪ್ರೆಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಕರೊನಾ ಪರಿಣಾಮ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಮಾಲೀಕರು ನಷ್ಟದ ಕಾರಣ ಹೇಳಿ ಅಬ್ಬಾಸ್ ಮತ್ತು ಐವರನ್ನು ಪ್ರಿಂಟಿಂಗ್ ಪ್ರೆಸ್‌ನಿಂದ ತೆಗೆದುಹಾಕಿದರು. “ನಾನು ವಿಕಲಾಂಗ, ಇಲ್ಲಿ ಬಿಟ್ಟರೆ ಬೇರೆಲ್ಲೂ ಕೆಲಸ ಸಿಗದು’ ಎಂದು ಅಂಗಲಾಚಿಕೊಂಡರೂ ಪ್ರಯೋಜನವಾಗಲಿಲ್ಲ. ನನ್ನ ಹಣೆಬರಹ ಎಂದುಕೊಂಡು ಅಬ್ಬಾಸ್ ಹೊರನಡೆದರು.

    ಅಬ್ಬಾಸ್ ಅಲಿ-ಮೊರಿಜಿನಾ ಬೇಗಂಗೆ 4ನೇ ತರಗತಿ ಓದುತ್ತಿರುವ ಪ್ರಿನ್ಸ್ ಅಹ್ಮದ್ ಮತ್ತು 1ನೇ ತರಗತಿಯಲ್ಲಿರುವ ಬಿಟು ಅಹ್ಮದ್ ಎಂಬ ಇಬ್ಬರು ಮಕ್ಕಳಿದ್ದಾರೆ. ಪ್ರಿಂಟಿಂಗ್ ಪ್ರೆಸ್‌ನಲ್ಲಿ ತಿಂಗಳಿಗೆ 15 ಸಾವಿರ ರೂ. ಸಂಬಳ ಪಡೆಯುತ್ತಿದ್ದ ಅಬ್ಬಾಸ್, ಪ್ರಿನ್ಸ್ ಅಹ್ಮದ್‌ನನ್ನು ಇಂಗ್ಲಿಷ್ ಮತ್ತು ಅಸ್ಸಾಮಿ ಭಾಷೆಯ ಖಾಸಗಿ ಶಾಲೆಗೆ ಸೇರಿಸಿದ್ದರು. ತಿಂಗಳಿಗೆ 970 ರೂ. ಫೀಸ್ ಕೊಡಬೇಕಿತ್ತು. ಆದರೆ, ಈಗ ದುಡ್ಡಿಲ್ಲ. ಖಾಸಗಿ ಶಾಲೆಯಿಂದ ಬಿಡಿಸಬೇಕಾಯ್ತು. ಗುವಾಹಟಿಯ ರಾಜಧಾನಿ ಸ್ಕೂಲ್ ಎಂಬ ಸರ್ಕಾರಿ ಶಾಲೆಯಲ್ಲಿ ಪ್ರಿನ್ಸ್ ಓದುತ್ತಿದ್ದಾನೆ.

    ನಿರುದ್ಯೋಗಿಯಾಗಿದ್ದ ಅಬ್ಬಾಸ್ 5 ತಿಂಗಳಿಂದ ಗುವಾಹಟಿಯ ಹಾತಿಗಾಂವ್‌ನ ಮುಖ್ಯರಸ್ತೆಯ ಬದಿಯಲ್ಲಿ ಕೂತು ಸಣ್ಣಪುಟ್ಟ ತಿನಿಸುಗಳು, ಚಹಾ, ಸುಪಾರಿ, ಎಲೆ-ಅಡಕೆ ಮಾರುತ್ತಿದ್ದಾನೆ. ಆತನ ಪತ್ನಿಯೂ ಕೈಜೋಡಿಸಿದ್ದಾಳೆ. ವಿಕಲಾಂಗತೆಯಿಂದಾಗಿ ಅಬ್ಬಾಸ್ ಕೂತಲ್ಲಿಯೇ ಗ್ರಾಹಕರನ್ನು ವಿಚಾರಿಸಿದರೆ, ಬೇಗಂ, ರೋಟಿ, ಸಬ್ಜಿ ಬೇಯಿಸುತ್ತಿದ್ದಾಳೆ. “ಪಾಲಿಕೆ ಅಧಿಕಾರಿಗಳನ್ನು ಹೇಗೋ ಮನವೊಲಿಸಿ ಬೀದಿ ಬದಿಯಲ್ಲೇ ಕೆಲಸ ಮಾಡಲು ಶುರು ಮಾಡಿದ್ದೇವೆ. ಮಕ್ಕಳನ್ನು ನಮ್ಮ ಎದುರಿಗೇ ಇರುವ ಶಾಲೆಗೆ ಕಳಿಸುತ್ತಿದ್ದೇವೆ. ಲಾಕ್‌ಡೌನ್ ನಮ್ಮ ಬದುಕನ್ನೇ ಕೆಡಿಸಿಬಿಟ್ಟಿತು’ ಎಂದು ಕಣ್ಣೀರು ಹಾಕಿದರು ಬೇಗಂ.

    ವೋಟು ಹಾಕುತ್ತೇವೆ, ಆದರೆ ಬದುಕು ಬದಲಾದೀತೇ?; ನೆಮ್ಮದಿ ಕೆಡಿಸಿದ ಲಾಕ್‌ಡೌನ್‌, ಬೀದಿಗೆ ಬಿದ್ದ ಅಸ್ಸಾಂ ದಂಪತಿ ಬದುಕು..

    ಅಬ್ಬಾಸ್-ಬೇಗಂ ದಂಪತಿ ಐದು ತಿಂಗಳಿಂದ ಬೀದಿಬದಿ ವ್ಯಾಪಾರಿಗಳು. ಗುವಾಹಟಿಯಲ್ಲಿ ಸಣ್ಣ ಕೋಣೆಯೊಂದನ್ನು ಬಾಡಿಗೆ ಪಡೆದು ವಾಸ್ತವ್ಯ ಹೂಡಿದ್ದಾರೆ. ಶಾಲೆ ಬಳಿಕ ಮಕ್ಕಳು ಅಪ್ಪ, ಅಮ್ಮನೊಂದಿಗೆ ರಾತ್ರಿವರೆಗೆ ರಸ್ತೆ ಬದಿಯಲ್ಲೇ ಕೂತಿರುತ್ತಾರೆ. ರೇಷನ್ ಕಾರ್ಡು ಇರುವುದರಿಂದ ತಿಂಗಳಿಗೆ 20 ಕೆ.ಜಿ. ಅಕ್ಕಿ ಸರ್ಕಾರದಿಂದ ಸಿಗುತ್ತಿದೆ. ಕುಟುಂಬಕ್ಕೆ ಅಗತ್ಯವಿರುವಷ್ಟು ಇಟ್ಟುಕೊಂಡು, ಉಳಿದದ್ದನ್ನು ಮಾರಿದ ಹಣದಲ್ಲಿ ಗೋಧಿ ಖರೀದಿಸಿ ಇಲ್ಲಿ ತಯಾರಿಸುವ ರೋಟಿಗೆ ಬಳಸುತ್ತೇನೆ ಎಂದರು ಬೇಗಂ.

    ಪ್ರಿಂಟಿಂಗ್ ಪ್ರೆಸ್‌ನಲ್ಲಿದ್ದಾಗ ತಿಂಗಳ ಸಂಬಳ ಎಣಿಸುತ್ತಿದ್ದೆವು. ಈಗ ಹಾಗಿಲ್ಲ. ನಿತ್ಯವೂ ಗ್ರಾಹಕರ ಸಂಖ್ಯೆ ಏರಿಳಿಕೆ ಆಗುತ್ತಿರುತ್ತದೆ. ಕೆಲಮೊಮ್ಮೆ ಏನೂ ಗಿಟ್ಟುವುದಿಲ್ಲ. ಯಾವಾಗ ಈ ಸ್ಥಳ ಖಾಲಿಮಾಡಿ ಎನ್ನುತ್ತಾರೋ ಗೊತ್ತಿಲ್ಲ. ಆಗ ಎಲ್ಲಿಗೆ ಹೋಗುವುದು? ಮಕ್ಕಳ ಬಗ್ಗೆಯೇ ನಮಗೆ ಚಿಂತೆ. ಅವರಿಗೆ ಒಳ್ಳೆಯ ಶಿಕ್ಷಣ ಕೊಡಬೇಕೆಂದಿದ್ದೆವು. ಈಗ ಎಲ್ಲವೂ ಅಯೋಮಯ. ನೀವು ಸರ್ಕಾರಕ್ಕೆ ನಮ್ಮ ಸಮಸ್ಯೆ ಹೇಳಿ ಏನಾದರೂ ಮಾಡುತ್ತೀರಾ? ಎಂದಾಗ ಆ ದಂಪತಿಯ ಕಣ್ಣಾಲಿಗಳು ಒದ್ದೆಯಾಗಿದ್ದವು. ಅಬ್ಬಾಸ್ ಮತ್ತು ಬೇಗಂ ಗುವಾಹಟಿಯ ಮತದಾರರು. ಚುನಾವಣೆಗಿಂತ ಹೆಚ್ಚು ಮಕ್ಕಳ ಭವಿಷ್ಯ, ಬದುಕು, ವ್ಯಾಪಾರದ ಬಗ್ಗೆ ಇಬ್ಬರೂ ಗಮನ ಕೇಂದ್ರೀಕರಿಸಿದ್ದಾರೆ. ವೋಟು ಹಾಕುತ್ತೇವೆ. ಅದು ನಮ್ಮ ಕರ್ತವ್ಯ. ಆದರೆ ನಮ್ಮ ಬದುಕು ಬದಲಾದೀತೇ? ಎನ್ನುವುದು ಅವರಿಬ್ಬರ ಪ್ರಶ್ನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts