More

    ಅಸಗೋಡು ಗ್ರಾಮದಲ್ಲಿ ಶಂಭುಲಿಂಗೇಶ್ವರ ಸ್ವಾಮಿ ತೇರು

    ಜಗಳೂರು: ಜಗಳೂರು ತಾಲೂಕಿನ ಅಸಗೋಡು ಗ್ರಾಮದಲ್ಲಿ ಭಾನುವಾರ ಸಂಜೆ ಶಂಭುಲಿಂಗೇಶ್ವರ ಸ್ವಾಮಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

    ದಾವಣಗೆರೆ ಅಲ್ಲದೆ ಸುತ್ತಮುತ್ತಲ ಜಿಲ್ಲೆಯ ಜನರು ಭಾಗಿಯಾಗಿ, ಶಂಭುಲಿಂಗೇಶ್ವರನ ಅಲಂಕೃತ ತೇರಿನತ್ತ ಬಾಳೆಹಣ್ಣು ಅರ್ಪಿಸಿ ಭಕ್ತಿ ಸಲ್ಲಿಸಿದರು. ಕೆಲವು ಭಕ್ತರು ಹರಕೆ ಕಟ್ಟಿಕೊಂಡರು.

    ವಿಧ್ಯುಕ್ತವಾಗಿ ತೇರು ಆರಂಭವಾಗುತ್ತಿದ್ದಂತೆ ಶಂಭುಲಿಂಗೇಶ್ವರ ಮಹಾರಾಜ್ ಕೀ ಜೈ ಎಂಬ ಜಯಘೋಷಗಳು ಮೊಳಗಿದವು. ಬಂದ ಜನರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಪುಷ್ಪಾಲಂಕಾರ ಮಾಡಲಾಗಿತ್ತು.

    ರಥೋತ್ಸವಕ್ಕೂ ಮುನ್ನ ಹೂವಿನ ಹಾರ, ಫಲ ಇತ್ಯಾದಿ ದೇವರ ಸಾಮಗ್ರಿಗಳ ಹರಾಜು ಪ್ರಕ್ರಿಯೆ ನಡೆಯಿತು. ಅದೇ ಗ್ರಾಮದ ಶಂಭುಲಿಂಗಪ್ಪ ಎಂಬುವರು 1.25 ಲಕ್ಷ ರೂ.ಗೆ ದೇವರ ಪಟವನ್ನು ಹರಾಜಿನಲ್ಲಿ ಪಡೆದುಕೊಂಡರು.

    ಶಾಸಕ ಎಸ್.ವಿ.ರಾಮಚಂದ್ರಪ್ಪ, ಮಾಜಿ ಶಾಸಕ ಎಚ್.ಪಿ.ರಾಜೇಶ್, ಮುಖಂಡರಾದ ಅಸಗೋಡು ಜಯಸಿಂಹ, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮೊದಲಾದವರು ರಥೋತ್ಸವದಲ್ಲಿ ಭಾಗಿಯಾಗಿದ್ದರು.

    ಜಾತ್ರೆಯಲ್ಲಿ ಬಳೆಯಂಗಡಿ, ಮಕ್ಕಳ ಆಟಿಕೆ ಸಾಮಗ್ರಿಗಳು ಕಂಡುಬಂದವು. ಜಾತ್ರೆ ನಿಮಿತ್ತ ಭಾನುವಾರ ಸಂಜೆ ‘ಕರುಳಿನ ಕುಡಿ ಕ್ರಾಂತಿಯ ಕಿಡಿ’ ಸಾಮಾಜಿಕ ನಾಟಕ ಪ್ರದರ್ಶಿತವಾಯಿತು.

    ಸೋಮವಾರ ಸಂಜೆ ಆಂಜನೇಯ ಸ್ವಾಮಿ ತೇರು ಜರುಗಲಿದೆ. ಜತೆಗೆ ಎರಡು ದಿನದ ಕುಸ್ತಿ ಪಂದ್ಯಗಳು ಆರಂಭವಾಗಲಿದ್ದು ದಾವಣಗೆರೆ, ಹರಪನಹಳ್ಳಿ, ಬೆಳಗಾಂ ಮೊದಲಾದ ಕಡೆಗಳ ಪೈಲ್ವಾನರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts