More

    ಕಮಿಷನ್ ಕಲೆಕ್ಷನ್‌ಗಾಗಿ ಕೃತಕ ವಿದ್ಯುತ್ ಅಭಾವ; ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪ 

    ಬೆಂಗಳೂರು: ರಾಜ್ಯದಲ್ಲಿಯೇ ವಿದ್ಯುತ್ ಉತ್ಪಾದನೆಗೆ ವಿುಲ ಅವಕಾಶವಿದ್ದರೂ ಕೃತಕ ಅಭಾವ ಸೃಷ್ಟಿಸಿ ಕಮಿಷನ್ ಗಾಗಿ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಗೆ ಸರ್ಕಾರ ಮುಂದಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.

    ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ವೇಳೆ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಉದ್ದೇಶದಿಂದ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿ ಮಾಡಿ ಕಮಿಷನ್ ಸಂಗ್ರಹ ಮಾಡಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ ಎಂದು ವಾಗ್ದಾಳಿ ಮಾಡಿದರು.

    ರಾಜ್ಯದಲ್ಲಿ ಮಳೆಯ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ. ಆದರೆ ಇತರೆ ಮೂಲಗಳಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು. ಅಧಿಕಾರ ಬಂದಾಗಿನಿಂದಲೇ ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದರೆ ಅಗತ್ಯವಾದಷ್ಟು ವಿದ್ಯುತ್ ಉತ್ಪಾದಿಸಬಹುದಿತ್ತು ಎಂದರು.

    ಪ್ರಸ್ತುತ 16867.63 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಬರಗಾಲದ ನಡುವೆಯೂ ವಿದ್ಯುತ್ ಉತ್ಪಾದನೆ ಮಾಡಲು ಸಮಸ್ಯೆ ಇಲ್ಲ. ಗ್ಯಾರಂಟಿಗಳ ಜಪ ಮಾಡಿಕೊಂಡು ವಿದ್ಯುತ್ ಉತ್ಪಾನೆ ನಿರ್ಲಕ್ಷ್ಯ ಮಾಡಿದರು ಎಂದು ಟೀಕಿಸಿದರು.

    ಕಮೀಷನ್, ಪರ್ಸಂಟೇಜ್, ವರ್ಗಾವಣೆ ಧಂದೆ ಮಾಡಿಕೊಂಡು ಕೂತಿದ್ದಾರೆ. ಎಲ್ಲ ಕಡೆ ಭ್ರಷ್ಟಾಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಐದೇ ತಿಂಗಳಲ್ಲಿ ಈ ಸತ್ಯಹರಿಶ್ಚಂದ್ರರ ಸರ್ಕಾರ ಹೇಗೆ ನಡೆಯುತ್ತಿದೆ ಎಂದು ಜನ ನೋಡಿ ಮನರಂಜನೆ ಪಡೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
    ಬಿಜೆಪಿಯವರು ಮಾಡಿದ ಪಾಪದ ಫಲಕ್ಕೆ ರಾಜ್ಯಕ್ಕೆ ವಿದ್ಯುತ್ ಕೊರತೆ ಎದುರಾಗಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಐದು ತಿಂಗಳಲ್ಲಿ ಏನು ಪುಣ್ಯದ ಲ ಕೊಟ್ಟಿದ್ದಾರೆ ಎಂದು ಹರಿಹಾಯ್ದರು.

    ಮಜಾ ಮಾಡುತ್ತಿದ್ದಾರೆ!

    ಒಂದೆಡೆ ಬರ, ಇನ್ನೊಂದು ಕಡೆ ವಿದ್ಯುತ್ ಕ್ಷಾಮದಿಂದ ಜನರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮುದ್ರದಿಂದ ವಿದ್ಯುತ್ ಉತ್ಪಾದನೆ ಮಾಡಿ, ಬೇಡ ಎಂದವರು ಯಾರು? ಸದ್ಯಕ್ಕೆ ಜನರ ಕಷ್ಟ ಬಗೆಹರಿಸುವ ಕಡೆ ಗಮನ ಕೊಡಿ ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
    ಇಡೀ ರಾಜ್ಯವೇ ಕತ್ತಲೆಯಲ್ಲಿ ಇದ್ದರೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ತಮ್ಮ ಸಚಿವರು, ಅಧಿಕಾರಿಗಳ ಪಟಾಲಂ ಕಟ್ಟಿಕೊಂಡು ಎಳೆಂಟು ಗಂಟೆ ಕ್ರಿಕೆಟ್ ಪಂದ್ಯ ನೋಡಲು ಹೋಗಿದ್ದಾರೆ. ಅಲ್ಲಿ ಇವರೆಲ್ಲ ಮಜಾ ಮಾಡಿಕೊಂಡು ಕೂತಿದ್ದರು ಎಂದು ವ್ಯಂಗ್ಯವಾಡಿದರು.

    ರೈತರಿಗೆ ಒಂದು ಗಂಟೆ ಕರೆಂಟ್ ಕೊಡುತ್ತಿಲ್ಲ

    ಕೃಷಿ ಪಂಪ್‌ಸೆಟ್‌ಗಳಿಗೆ ಒಂದು ತಾಸು ಕರೆಂಟ್ ಕೂಡ ಸಿಗುತ್ತಿಲ್ಲ. ಇಂತಹ ಕಷ್ಟ ಕಾಲದಲ್ಲಿಯೂ ಜನರು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ. ತೆರಿಗೆ ಸಂಗ್ರಹ ಕಡಿಮೆ ಆಗಿಲ್ಲ. ಸರ್ಕಾರದಲ್ಲಿ ಹಣದ ಕೊರತೆ ಆಗಿಲ್ಲ. ಆರು ತಿಂಗಳಿನಿಂದ 79,000 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಆದರೆ ಗ್ಯಾರಂಟಿ ಎನ್ನುತ್ತ ಸರ್ಕಾರ ಜನರ ಮೂತಿಗೆ ತುಪ್ಪ ಸವರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕರಾದ ಸುರೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

    ರಾಜ್ಯಕ್ಕೆ ಅಗತ್ಯವಾದಷ್ಟು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯ ನಮಗಿದೆ. 3906.6 ಮೆ.ವ್ಯಾ. ಜಲ ವಿದ್ಯುತ್, 5020 ಮೆ.ವ್ಯಾ. ಉಷ್ಣ ವಿದ್ಯುತ್, 2050 ಮೆ.ವ್ಯಾ. ಖಾಸಗಿ ಕಂಪನಿಗಳ ವಿದ್ಯುತ್ ಸೇರಿದಂತೆ ಒಟ್ಟು 9947 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ರಾಜ್ಯಕ್ಕಿದೆ. ಆದರೂ ಸರ್ಕಾರ ಕೃತಕ ಅಭಾವ ಸೃಷ್ಟಿಸುತ್ತಿದೆ. ಪರ್ಸೆಂಟೇಜ್ ಹೊಡೆಯಲು ಇದೆಲ್ಲವನ್ನೂ ಮಾಡಲಾಗುತ್ತಿದೆ. ಇನ್ನೂ ಎಷ್ಟು ಕೊಳ್ಳೆ ಹೊಡೆಯುತ್ತೀರಿ ಸಾಕು ನಿಲ್ಲಿಸಿ. ಸಚಿವ ಜಾರ್ಜ್ ಅವರಿಗೆ ಹಣದ ಕೊರತೆ ಇಲ್ಲ, ಬಹುಶಃ ಹೈಕಮಾಂಡ್ ಇವರಿಂದ ಕಮೀಷನ್ ಸಂಗ್ರಹಕ್ಕೆ ಒತ್ತಡ ಹೇರುತ್ತಿರಬೇಕು ಎಂದು ಕುಮಾರಸ್ವಾಮಿ ಆರೋಪಿಸಿದರು.

    ಅದೇನು ಬಿಚ್ಚಿಡುತ್ತೀರೋ ಬಿಚ್ಚಿಡಿ

    ಎಲ್ಲರದ್ದು ಬಿಚ್ಚಿಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮುಂದೇ ಏನಾಗುತ್ತೋ ಗೊತ್ತಿಲ್ಲ. ಬೇಗ ಬಿಚ್ಚಿಡಿ. ಬಂಧೀಖಾನೆ ಸಚಿವರಾಗಿ ಕರಿಯರ್ ಆರಂಭ ಮಾಡಿದವರು ನೀವು. ಎಷ್ಟಾದರೂ ಅವರು ಅಲ್ಲಿಂದಲೇ ಬಂದವರಲ್ಲವೇ? ಬೇಗ ಬಿಚ್ಚಿಡಿ. ನೀವು ಬಿಚ್ಚಿಡುವ ಮೊದಲೇ ಏನಾದರೂ ಆದರೆ ಕಷ್ಟ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts