More

    ಕೃತಕ ನೆರೆ ಸಮಸ್ಯೆಗೆ ಹೌಸ್ ಲಿಫ್ಟಿಂಗ್ ಮೊರೆ

    ಸುರತ್ಕಲ್: ಹೊಸಬೆಟ್ಟು ಬಳಿಯ ಬೈಲಾರೆ ಪ್ರದೇಶ ಪ್ರತೀ ವರ್ಷ ಮಳೆಗಾಲದಲ್ಲಿ ಕೃತಕ ನೆರೆ ಸಮಸ್ಯೆಯಿಂದ ಸುದ್ದಿಯಾಗುತ್ತಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಭರವಸೆಯಾಗಿಯೇ ಉಳಿದಿದೆ. ಸತತ ಕೃತಕ ನೆರೆ ಸಮಸ್ಯೆಯಿಂದ ಪಾರಾಗಲು ಪ್ರದೇಶದ ಕೆಲ ನಿವಾಸಿಗಳು ಇದೀಗ ತಾವಾಗಿಯೇ ಲಕ್ಷಾಂತರ ರೂ. ವ್ಯಯಿಸಿ ಜಾಕ್ ತಂತ್ರಜ್ಞಾನ ಬಳಸಿ ಹೌಸ್ ಲಿಫ್ಟಿಂಗ್ ಕಾರ್ಯ ವಿಧಾನಕ್ಕೆ ಮೊರೆಹೋಗುತ್ತಿದ್ದಾರೆ.

    ಈಗ ಬೈಲಾರೆ ಪ್ರದೇಶದಲ್ಲಿ ಒಂದು ಮನೆ ಎತ್ತರಿಸುವ ಕಾರ್ಯ ನಡೆಯುತ್ತಿದ್ದು, ಇನ್ನೊಂದು ಮನೆ ಎತ್ತರಿಸಲು ಸಿದ್ಧತೆ ನಡೆಸಲಾಗಿದೆ. ಒಂದು ಮನೆ ಮೇಲೆತ್ತುವ ಕಾರ್ಯ ಈಗಾಗಲೇ ನಡೆಸಲಾಗಿದೆ. ಅನೇಕ ಮಂದಿ ಕೃತಕ ನೆರೆಯಿಂದ ಪಾರಾಗಲು ತಗ್ಗಿನಲ್ಲಿದ್ದ ಮನೆ ಕೆಡವಿ ಎತ್ತರದಲ್ಲಿ ಮರು ನಿರ್ಮಿಸಿದ್ದಾರೆ. ಸಮಸ್ಯೆಗೆ ಪರಿಹಾರ ಕಾಣಲಾಗದ ಕೆಲವರು ಮನೆ ಮಾರಾಟ ಮಾಡಿ ತೆರಳಿದ್ದಾರೆ.

    ನಡೆಯದ ಹೂಳೆತ್ತುವ ಕಾಮಗಾರಿ: ಕಳೆದ ಮಳೆಗಾಲದಲ್ಲಿ ಸೆಪ್ಟೆಂಬರ್ ಬಳಿಕ ಮೂರು ಬಾರಿ ಬಂದಿದ್ದ ಕೃತಕ ನೆರೆಯಿಂದಾಗ ಹಲವು ಮನೆ ನಿವಾಸಿಗಳು ಮನೆ ಬಿಟ್ಟು ಬೇರೆ ಕಡೆ ನೆಲೆಸಬೇಕಾದ ಸಂದರ್ಭ ಬಂದೊದಗಿತ್ತು. ತೋಡಿನ ಹೂಳು ತೆಗೆಯಲು 70 ಸಾವಿರ ರೂ. ಅಂದಾಜಿಸಿದ್ದರೂ, ಕೆಲಸ ನಡೆದಿರಲಿಲ್ಲ. ಈ ವರ್ಷ ಈ ಕೆಲಸ ಮಾಡುವ ಭರವಸೆ ದೊರೆತಿದೆ ಎನ್ನುತ್ತಾರೆ ಸ್ಥಳೀಯರು.

    ಹೊಸಬೆಟ್ಟು ನವನಗರದಿಂದ ಚಿತ್ರಾಪುರ ಚಾನೆಲ್‌ವರೆಗಿರುವ ಬೈಲಾರೆ ಪ್ರದೇಶದಲ್ಲಿ ಸುಮಾರು 16 ಬಡಾವಣೆಗಳಿದ್ದು, 800 ಮನೆಗಳಿವೆ. ಬೈಲಾರೆಗೆ ಎನ್‌ಐಟಿಕೆ ತಜ್ಞರ ವರದಿ ಪ್ರಕಾರ 15 ಅಡಿ, 20 ಅಡಿ 30 ಅಗಲದ ಕಾಲುವೆ ನಿರ್ಮಿಸಬೇಕು ಎಂದು ಮುಡಾ ಸೂಚಿಸಿತ್ತು. ಹಿಂದಿನ ಸರ್ಕಾರ ಅವಧಿಯಲ್ಲಿ 3.75 ಕೋಟಿ ರೂ. ವೆಚ್ಚದಲ್ಲಿ 380 ಮೀ. ರಾಜಕಾಲುವೆ ನಿರ್ಮಿಸಲಾಗಿತ್ತು. ಉಳಿದಿರುವ 3,800 ಮೀ ರಾಜಕಾಲುವೆಯನ್ನು ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಲು ಪ್ರಸ್ತಾಪಿಸಲಾಗಿದ್ದು, ಅಷ್ಟರಲ್ಲಿ ಕರೊನಾ ಹಾವಳಿಯ ಆರ್ಥಿಕ ಹೊಡೆತದಿಂದ ಯೋಜನೆ ಅತಂತ್ರವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

    ಬೈಲಾರೆ ನಿವಾಸಿಗಳಿಗೆ ಕೃತಕ ನೆರೆ ಸಮಸ್ಯೆಯಿಂದ ಉಳಿಗಾಲವಿಲ್ಲ. ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ರಾಜಕಾಲುವೆ ಯೋಜನೆ ಪೂರ್ಣಗೊಳಿಸಬೇಕು.
    ವಿಶ್ವೇಶ್ವರ ಬದವಿದೆ, ಬೈಲಾರೆ ನಿವಾಸಿಗಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ

    ಸಮಸ್ಯೆ ಬಗ್ಗೆ ಮತ್ತೊಮ್ಮೆ ಸರ್ಕಾರದ, ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
    ಡಾ.ವೈ.ಭರತ್ ಶೆಟ್ಟಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts