More

    ಅಚ್ಚರಿಗಳ ಆಗರ ಗೌರಿಶಂಕರ; ಇಂದು ಮೌಂಟ್ ಎವರೆಸ್ಟ್ ಡೇ

    | ಬಿ.ಎಸ್. ಮಂಜುನಾಥ್

    ಮೌಂಟ್ ಎವರೆಸ್ಟ್.. ಹೆಸರನ್ನು ಕೇಳುತ್ತಲೇ ಎದೆ ಝುಲ್ ಎನ್ನಿಸುವ ಜಗತ್ತಿನ ಅತ್ಯುನ್ನತ ಪರ್ವತವಿದು. ಕವಿ, ಸಾಹಿತಿಗಳ ಪಾಲಿಗೆ ಇದೊಂದು ಬೃಹತ್ ಕ್ಷೀರ ಪರ್ವತ. ಪರ್ವತಾರೋಹಿಗಳ ಪಾಲಿಗೆ ರೋಚಕ ತಾಣ. ವಿಜ್ಞಾನಿಗಳ ಕಣ್ಣಿಗೆ ಅಚ್ಚರಿಯ ಲೋಕ. ಧಾರ್ವಿುಕ ಮನೋಭಾವದವರಿಗೆ ಪವಾಡಗಳ ಸ್ಥಳ. ಭಾರತೀಯರ ಪಾಲಿಗೆ ಗೌರಿಶಂಕರನಾಗಿ ಮುಗಿಲೆತ್ತರಕ್ಕೆ ಎದೆಯುಬ್ಬಿಸಿ ನಿಂತಿರುವ ಈ ಪರ್ವತರಾಜ ಇಂದಿಗೂ ಕುತೂಹಲದ ಕಣಜ. ಮೌಂಟ್ ಎವರೆಸ್ಟ್ ಇಡೀ ಪ್ರಪಂಚಕ್ಕೆ ಸಮಗ್ರವಾಗಿ ಪರಿಚಯವಾಗಿದ್ದು 1856ರಲ್ಲಿ. ಭಾರತದ ಸರ್ವೆಯರ್ ಜನರಲ್ ಆಗಿದ್ದ ಸರ್ ಜಾರ್ಜ್ ಎವರೆಸ್ಟ್ ಹೆಸರನ್ನು ಈ ಶಿಖರಕ್ಕೆ ಇಡಲಾಯಿತು. ಟಿಬೆಟ್ ಭಾಷೆಯಲ್ಲಿ ಈ ಶಿಖರದ ಹೆಸರು ಚೊಮುಲಂಗ್ಮ. ಅರ್ಥಾತ್ ಭೂಮಾತೆ. ಭಾರತೀಯ ನಾಮಧೇಯ ಗೌರಿಶಂಕರ.

    ಎತ್ತರ ಪರಿಷ್ಕರಣೆ: 1954ರಲ್ಲಿ ಸರ್ವೆ ಆಫ್ ಇಂಡಿಯಾ ಈ ಶಿಖರವನ್ನು ಅಳೆದಾಗ ಎತ್ತರ 8848 ಮೀಟರ್ ಎಂದು ಗುರುತಿಸಲಾಗಿತ್ತು. ಬಳಿಕ 2019ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ನೇಪಾಳಕ್ಕೆ ಭೇಟಿ ನೀಡಿದಾಗ ಉಭಯ ರಾಷ್ಟ್ರಗಳು ಜಂಟಿಯಾಗಿ ಎವರೆಸ್ಟ್ ಎತ್ತರವನ್ನು ಅಳೆದು ಘೋಷಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದಾದ ಬಳಿಕ ನೇಪಾಳ ಅಳತೆ ಕಾರ್ಯ ಮುಗಿಸಿತು. ಅಂತಿಮವಾಗಿ ಪರ್ವತದ ಎತ್ತರ 8848.86 ಮೀಟರ್​ಗೆ ಏರಿಕೆ ಆಗಿದೆ.

    ಮೊದಲ ಹೆಜ್ಜೆ: 1953ರಲ್ಲಿ ತೇನ್ಸಿಂಗ್ ನಾರ್ಗೆ ಮತ್ತು ಸರ್ ಎಡ್ಮಂಡ್ ಹಿಲೇರಿ ಮೌಂಟ್ ಎವರೆಸ್ಟ್ ಏರಿದ ಮೊದಲ ಪರ್ವತಾರೋಹಿಗಳು.

    ಸಂಕಷ್ಟ ಸವಾಲು: ಭೂಲೋಕದ ಸ್ವರ್ಗ ಎವರೆಸ್ಟ್ ಈಗ ತ್ಯಾಜ್ಯ ಗುಂಡಿಯಾಗಿ ಬದಲಾಗುತ್ತಿದೆ. ಪರ್ವತಾರೋಹಿಗಳ ಸಂಖ್ಯೆ ಹೆಚ್ಚಾದಂತೆ ಮಾಲಿನ್ಯ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಎವರೆಸ್ಟ್​ನಲ್ಲಿ 8 ಸಾವಿರ ಕೆಜಿ ಮಾನವ ತ್ಯಾಜ್ಯ ಸಂಗ್ರಹವಾಗುತ್ತಿದೆ. ಪರ್ವತಾರೋಹಿಗಳು ಮಲ, ಮೂತ್ರ ವಿಸರ್ಜನೆಗಾಗಿ ಪ್ರತ್ಯೇಕ ಚೀಲಗಳನ್ನು ಹೊತ್ತು ತರುವ ನಿಯಮ ಜಾರಿಗಳಿಸಿದ್ದರೂ ಕೆಲವರು ಪಾಲಿಸುತ್ತಿಲ್ಲ. ಇದರ ಜತೆಗೆ ಎವರೆಸ್ಟ್ ತಪ್ಪಲಿನ ಹಳ್ಳಿಗಳಲ್ಲೂ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಇನ್ನು ಹವಾಮಾನ ವೈಪರೀತ್ಯ, ಹೋಟೆಲ್, ರೆಸಾರ್ಟ್​ಗಳ ಹಾವಳಿ, ಒತ್ತುವರಿ, ನದಿ ನಾಶದಂತಹ ಪ್ರಕರಣಗಳಿಂದಾಗಿ ಹಿಮಾಲಯ ಕರಗಲಾ ರಂಭಿಸಿದೆ. 3000ನೇ ಇಸವಿ ವೇಳೆಗೆ ಎವರೆಸ್ಟ್​ನ ಬಹುತೇಕ ಹಿಮ ಕರಗಿಹೋಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಜತೆಗೆ ಹಿಮಗಾಳಿ, ಹಿಮಪಾತದಂತಹ ನೈಸರ್ಗಿಕ ವಿಕೋಪಗಳಿಂದಾಗಿ 1 ಕೋಟಿ ಜನರ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಲಾಗಿದೆ.

    ಹಿಮಕಣಿವೆ ಸ್ವಾರಸ್ಯ

    • ಮೌಂಟ್ ಎವರೆಸ್ಟ್​ನ ದಕ್ಷಿಣ ಭಾಗ ನೇಪಾಳಕ್ಕೆ ಹಾಗೂ ಉತ್ತರ ಭಾಗ ಚೀನಾಗೆ ಸೇರಿದ್ದಾಗಿದೆ.
    • ತಾಂತ್ರಿಕವಾಗಿ ಮೌಂಟ್ ಎವರೆಸ್ಟ್ ಎತ್ತರದಲ್ಲಿ ಮೊದಲ ಸ್ಥಾನದಲ್ಲಿಲ್ಲ. ಹವಾಯಿನ ಮೌನಕೀ ಪರ್ವತ 10,210 ಮೀ. (33,500 ಅಡಿ) ಎತ್ತರದಲ್ಲಿದೆ. ಆದರೆ ಸಮುದ್ರ ಮಟ್ಟದಿಂದ ಕೇವಲ 4205 ಮೀ. (13,796 ಅಡಿ) ಎತ್ತರದಲ್ಲಿದೆ.
    • ಎವರೆಸ್ಟ್ ಎತ್ತರ 8,848.86 ಮೀಟರ್.
    • ಪ್ರತಿ ನೂರು ವರ್ಷಕ್ಕೆ ಎವರೆಸ್ಟ್ 40 ಸೆಂ.ಮೀ. ಬೆಳೆಯುತ್ತಿದೆ.
    • ಎವರೆಸ್ಟ್​ನ ಎತ್ತರ (ಹಿಮ ಆವೃತ ಪ್ರದೇಶ ಸೇರಿ) 8,848.86 ಮೀಟರ್. ಆದರೆ ಭೌಗೋಳಿಕ ಎತ್ತರ ಪರಿಗಣಿಸುವುದಾದರೆ ಇದರ ಎತ್ತರ 8,844.43
    • ಮೌಂಟ್ ಎವರೆಸ್ಟ್ 60 ದಶಲಕ್ಷ ವರ್ಷಗಳಷ್ಟು ಹಳೆಯ ಪರ್ವತ
    • ಮೌಂಟ್ ಎವರೆಸ್ಟ್​ನ ತುದಿಯಲ್ಲಿ ಯಾರಿಗೂ ಜೀವಿಸಲಾಗದು.
    • ಎವರೆಸ್ಟ್​ನ 8 ಸಾವಿರ ಮೀಟರ್ ಸಾವಿನ ವಲಯವೆಂದು ಗುರುತಿಸಿಕೊಂಡಿದೆ.
    • ಎವರೆಸ್ಟ್ ಯಾನ ಪೂರ್ಣಗೊಳಿಸಲು ಹಿಡಿಯುವ ಕನಿಷ್ಠ ಅವಧಿ 10 ವಾರ.
    • ಮೌಂಟ್ ಎವರೆಸ್ಟ್ ಯಾನಕ್ಕೆ ತಗಲುವ ವೆಚ್ಚ 30 ಸಾವಿರ ಅಮೆರಿಕನ್ ಡಾಲರ್(ಅಂದಾಜು 22 ಲಕ್ಷ ರೂ.; ಲೈಸೆನ್ಸ್, ಸಾರಿಗೆ, ಆಕ್ಸಿಜನ್, ಸಲಕರಣೆ ಸೇರಿ)
    • ಎವರೆಸ್ಟ್ ಮೇಲೆ ಹೆಲಿಕಾಪ್ಟರ್​ಗಳು ಹಾರಲಾಗುವುದಿಲ್ಲ, ವಿಮಾನಗಳಿಗಷ್ಟೇ ಸಾಧ್ಯ.
    • ಎವರೆಸ್ಟ್ ಏರುವ ಕನಸು ಹೊತ್ತು ಹಿಮದಲ್ಲಿ ಕರಗಿಹೋದವರ ಸಂಖ್ಯೆ ಸಾವಿರಕ್ಕೂ ಹೆಚ್ಚು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts