More

    ವಿದ್ವತ್ತು, ಕಲೆ, ವಿವೇಕ ಮೇಳವಿಸಿದ್ದ ವ್ಯಕ್ತಿತ್ವ ಮಹಾಬಲೇಶ್ವರ ಅಣ್ಣಪ್ಪ ಹೆಗಡೆ

    ವಿದ್ವತ್ತು, ಕಲೆ, ವಿವೇಕ ಮೇಳವಿಸಿದ್ದ ವ್ಯಕ್ತಿತ್ವ ಮಹಾಬಲೇಶ್ವರ ಅಣ್ಣಪ್ಪ ಹೆಗಡೆಪ್ರೊ. ಎಂ.ಎ. ಹೆಗಡೆ ಈ ನಾಡಿನ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ವಿದ್ವತ್ ವಲಯಕ್ಕೆ ಸೀಮಿತವಾಗದೇ ನಾಡಿನ ಸಾಂಸ್ಕೃತಿಕ ವಲಯಕ್ಕೂ ಕೊಡುಗೆ ನೀಡಿದವರು. ಸತ್ಯನಿಷ್ಠರಾಗಿ, ನಿಷ್ಠುರವಾದಿಯಾಗಿ ಬಾಳಿದವರು. ಮೌಲ್ಯಕ್ಕೆ ತಲೆಬಾಗಿದ, ಕಲಾವಿದರ ಕಷ್ಟಕ್ಕೆ ಮರುಗಿದ, ಅನ್ಯಾಯಕ್ಕೆ ಸಿಡಿದೆದ್ದ ವ್ಯಕ್ತಿತ್ವ. ಅವರು ಕಳೆದ ಭಾನುವಾರ (ಏ.18) ವಿಧಿವಶರಾದರು.

    | ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

    ವಿದ್ವತ್ ವಲಯದಲ್ಲಿ ಪ್ರೊ. ಎಂ.ಎ. ಹೆಗಡೆ (1948-2021) ಎಂದೇ ಪರಿಚಿತರಾದ ಮಹಾಬಲೇಶ್ವರ ಅಣ್ಣಪ್ಪ ಹೆಗಡೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜೋಗಿನ್ಮನೆಯವರು. ಚಿಕ್ಕಂದಿನಲ್ಲಿ ಅಜ್ಜಿಮನೆ ಬಾಳೂರು ಸಮೀಪದ ದಂಟ್ಕಲ್​ನಲ್ಲಿಯೇ ಬೆಳೆದವರು. ಹೀಗಾಗಿ ಇವರ ಹೆಸರಿನ ಜತೆ ದಂಟ್ಕಲ್ ಸೇರಿಕೊಂಡಿತು. ಅವರು ಸ್ವತಃ ಯಕ್ಷಗಾನ ಕಲಾವಿದ, ವಿದ್ವಾಂಸರಾಗಿದ್ದ ಹೆಗಡೆಯವರು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಮುನ್ನೋಟದ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅತ್ಯಂತ ಕ್ರಿಯಾಶೀಲರಾಗಿ ಹಳೆಯ ತಲೆಮಾರಿನ ಅನುಭವ, ವಿವೇಕ ಹಾಗೂ ಹೊಸ ತಲೆಮಾರಿನ ಉತ್ಸಾಹ, ತಂತ್ರಜ್ಞಾನದ ಪರಿಣತಿಯನ್ನು ಹದವಾದ ನೆಲೆಯಲ್ಲಿ ಒಂದುಗೂಡಿಸಲು ನಿರಂತರ ಪ್ರಯತ್ನಿಸುತ್ತಾ, ಕಲಾಪ್ರಕಾರದ ಬೆಳವಣಿಗೆ ಹಾಗೂ ಹೊಸ ಆವಿಷ್ಕಾರಗಳ ಬಗ್ಗೆ ಸದಾ ಚಿಂತಿಸುತ್ತಿದ್ದರು. ಇದಕ್ಕೊಂದು ಸಣ್ಣ ನಿದರ್ಶನ: ಸಾಮಾನ್ಯವಾಗಿ ಯಕ್ಷಗಾನವನ್ನು ಸಾಹಿತ್ಯದ ಪ್ರಧಾನ ಧಾರೆಯೊಳಗೆ ರ್ಚಚಿಸುವುದಿಲ್ಲ; ಯಕ್ಷಗಾನದ ಚರ್ಚೆಯೇನಿದ್ದರೂ ಒಂದು ಸೀಮಿತ ಚೌಕಟ್ಟಿನೊಳಗೆ ಮಾತ್ರ ನಡೆಯುತ್ತದೆ ಎಂದು ಭಾವಿಸಿದ್ದ ಹೆಗಡೆಯವರು ಯಕ್ಷಗಾನ ಸಾಹಿತ್ಯವನ್ನು ಸಾಹಿತ್ಯದ ಪ್ರಧಾನ ಧಾರೆಯೊಂದಿಗಿಟ್ಟು ನೋಡುವ ಪ್ರಯತ್ನವಾಗಬೇಕೆಂದು ಪ್ರತಿಪಾದಿಸುತ್ತಿದ್ದರು. ಅವರು ವಿದ್ವಾಂಸರಾದ ಆನಂದರಾಮ ಉಪಾಧ್ಯರ ಜತೆಗೂಡಿ ನನ್ನೊಂದಿಗೆ ಈ ಬಗ್ಗೆ ರ್ಚಚಿಸಿದ್ದರು; ಮಾತ್ರವಲ್ಲ, ಕನ್ನಡ ಸಾಹಿತ್ಯ ವಿಮರ್ಶಾ ಜಗತ್ತು ಯಕ್ಷಗಾನ ಸಾಹಿತ್ಯದ ಬಗ್ಗೆ ಯಾಕೆ ಮೌನವಾಗಿದೆ ಎಂದು ಅವರು ಕೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಕೆಎಸ್​ನ ಟ್ರಸ್ಟ್ ಸಹಯೋಗದಲ್ಲಿ ವಿಚಾರ ಸಂಕಿರಣವೊಂದನ್ನು ಏರ್ಪಡಿಸುವ ಆಲೋಚನೆ ನಮಗಿತ್ತು. ಇಲ್ಲಿಯೇ ಇನ್ನೊಂದು ಅಂಶವನ್ನೂ ನಾನು ಪ್ರಸ್ತಾಪಿಸಬೇಕು. ಯಕ್ಷಗಾನವೆಂದರೆ ಕರಾವಳಿ ತೀರದ ಪ್ರಾಂತ್ಯಕ್ಕೆ ಸೀಮಿತವಾದಂತಿದೆ. ಹಾಗೆ ನೋಡಿದರೆ ಯಕ್ಷಗಾನದ ಮೊದಲ ಕವಿ ಮಂಡ್ಯ ಜಿಲ್ಲೆಯ ಕೆಂಪಣ್ಣಗೌಡ; ಹದಿನೈದನೇ ಶತಮಾನದಲ್ಲಿದ್ದ ಈತನ ತಂದೆ ಓದೋ ಕೆಂಪಯ್ಯ. ಈ ಹೆಸರೇ ಸಾಂಸ್ಕೃತಿಕವಾಗಿ ಅನೇಕ ಸಂಗತಿಗಳನ್ನು ಹೇಳುತ್ತದೆ. ಬಹುಶಃ ಕಾವ್ಯಗಳನ್ನು ಗಮಕ, ಯಕ್ಷಗಾನ ಶೈಲಿಯಲ್ಲಿ ಈತ ಓದುತ್ತಿದ್ದಿರಬೇಕು; ತಂದೆಯಿಂದ ಪ್ರಭಾವಿತನಾಗಿದ್ದ ಕೆಂಪಣ್ಣಗೌಡ ಕರಿರಾಯ ಚರಿತ್ರೆ, ನಳಚರಿತ್ರೆ ಹಾಗೂ ಶನಿಮಹಾತ್ಮೆ ಎಂಬ ಮೂರು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾನೆ. ಹೆಗಡೆಯವರಿಗೆ ಈ ಬಗೆಗೆ ವಿಶೇಷ ಆಸಕ್ತಿಯಿತ್ತು. ಮೂಡಲಪಾಯ, ದೊಡ್ಡಾಟ, ಘಟ್ಟದಕೋರೆ, ಕೇಳಿಕೆ ಮೊದಲಾದ ಯಕ್ಷಗಾನ ಪ್ರಭೇದಗಳ ಬಗ್ಗೆ ಪರಸ್ಪರ ಪೂರಕ ಅಧ್ಯಯನ ನಡೆಯಬೇಕೆಂದು ಅವರು ಆಶಿಸಿದ್ದರು. ಯಕ್ಷಗಾನ ಕರಾವಳಿಯ ಕಲೆ ಮಾತ್ರವೆಂದು ಸೀಮಿತಗೊಳಿಸುವುದು ಬೇಡ, ಅದು ಕನ್ನಡ ನಾಡಿನ ಕಲೆ, ಮಾತ್ರವಲ್ಲ ದ್ರಾವಿಡರ ವಿಶಿಷ್ಟ ಕಲೆ ಎಂಬ ನೆಲೆಯಲ್ಲಿ ನಾವು ಯಕ್ಷಗಾನವನ್ನು ಕುರಿತು ರ್ಚಚಿಸಬೇಕು ಎಂಬುದು ಅವರ ನಿಲುವಾಗಿತ್ತು. ಕೆಂಪಣ್ಣಗೌಡನ ಬಗ್ಗೆ ಪುಸ್ತಕವೊಂದನ್ನು ನಾನು ಯಕ್ಷಗಾನ ಅಕಾಡೆಮಿಗಾಗಿ ಬರೆದುಕೊಡಬೇಕೆಂದು ಅವರು ಮನವಿ ಮಾಡಿದ್ದರು.

    ಹೆಗಡೆಯವರ ವ್ಯಕ್ತಿತ್ವದಲ್ಲಿ ಪ್ರಧಾನವಾಗಿ ಮೂರು ಅಂಶಗಳನ್ನು ಗುರ್ತಿಸಬಹುದು. ಮೊದಲನೆಯದು ಯಕ್ಷಗಾನ ಕ್ಷೇತ್ರ, ಎರಡನೆಯದು ಶಾಸ್ತ್ರಕೋವಿದ ವಿದ್ವತ್ ವಲಯ ಹಾಗೂ ಮೂರನೆಯದು ಚಲನಶೀಲವಾದ ಸಾಂಸ್ಕೃತಿಕ ಸಂಘಟನೆ. ಚಿಕ್ಕಂದಿನಿಂದಲೇ ಮಾವ ದಂಟ್ಕಲ್ ಪಟೇಲರೆಂದೇ ಹೆಸರಾಗಿದ್ದ ಗಣಪತಿ ಹೆಗಡೆಯವರ ಪ್ರಭಾವಕ್ಕೆ ಮಹಾಬಲೇಶ್ವರ ಒಳಗಾದರು. ಗಣಪತಿ ಹೆಗಡೆಯವರಿಗೆ ಓದುವ ಹವ್ಯಾಸವಿತ್ತು. ಆ ಪ್ರಭಾವ ಇವರ ಮೇಲಾಯಿತು. ಕಡೆಯವರೆಗೂ ಓದು ಅವರಿಗೆ ಪ್ರಿಯವಾದ ಸಂಗಾತಿಯಾಗಿತ್ತು. ಹೆಗಡೆ ತಮ್ಮ ಹನ್ನೊಂದನೇ ವಯಸ್ಸಿನಲ್ಲಿಯೇ ತಾಳಮದ್ದಲೆಯ ಅರ್ಥಧಾರಿಯಾಗಿ ಯಕ್ಷಗಾನ ರಂಗವನ್ನು ಪ್ರವೇಶಿಸಿದರು. ನಂತರ ಕೆರೆಮನೆ ಶಂಭು ಹೆಗಡೆಯವರಲ್ಲಿ ನೃತ್ಯಾಭ್ಯಾಸ ಮಾಡಿ, ಬಣ್ಣ ಹಚ್ಚಿ ವೇಷಧಾರಿಯಾದರು. ಹೊಸ್ತೋಟ ಮಂಜುನಾಥ ಭಾಗವತರನ್ನೂ ತಮ್ಮ ಗುರುಗಳೆಂದೇ ಸ್ವೀಕರಿಸಿದ್ದರು. ಕಾನಸೂರು, ಕೆರೆಮನೆ, ಗಡಿಮನೆ, ಕೊಳಗಿ ಮುಂತಾದ ಮೇಳಗಳಲ್ಲದೆ, ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಲಿಯಲ್ಲಿ ಅತಿಥಿ ಕಲಾವಿದರಾಗಿ ಪ್ರಸಿದ್ಧಿ ಪಡೆದಿದ್ದರು. ಅರ್ಥಧಾರಿ ಹಾಗೂ ವೇಷಧಾರಿ ಮಾತ್ರವಲ್ಲದೆ ಪ್ರಸಂಗಕರ್ತರಾಗಿಯೂ ಹೆಗಡೆಯವರು ಪ್ರಸಿದ್ಧರಾಗಿದ್ದರು. ತ್ರಿಶಂಕುಚರಿತ್ರೆ, ಧರ್ಮದುರಂತ, ವಜ್ರಕಿರೀಟ, ರಾಮಧಾನ್ಯಚರಿತೆ, ಅಕ್ಕಮಹಾದೇವಿ, ಆದಿಚುಂಚನಗಿರಿ ಕ್ಷೇತ್ರ ಮಹಾತ್ಮೆ ಮುಂತಾಗಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಅವುಗಳಲ್ಲಿ ಸೀತಾವಿಯೋಗ ಅತ್ಯಂತ ಜನಪ್ರಿಯ ಪ್ರಸಂಗ. ಅವರು ಅನೇಕ ಯಕ್ಷಗಾನ ಪ್ರಸಂಗಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಹೀಗೆ ಬಹುಮುಖೀ ನೆಲೆಯಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಕೆಲಸ ಮಾಡಿದವರು ವಿರಳ. ಇದು ಹೆಗಡೆಯವರ ವ್ಯಕ್ತಿತ್ವದ ಹೆಚ್ಚು ಪರಿಚಿತವಾದ ಒಂದು ಮುಖವಾದರೆ ಕನ್ನಡ ಸಾಹಿತ್ಯವಲಯಕ್ಕೆ ಅವರು ನೀಡಿರುವ ಮಹತ್ವದ ಕೊಡುಗೆ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗುಲು. ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಹೆಗಡೆಯವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲೂ ಪ್ರವೇಶ ಪಡೆದಿದ್ದರು. ಅವರ ಅಲಂಕಾರ ತತ್ವ, ಭಾರತೀಯ ತತ್ವಶಾಸ್ತ್ರ ಪ್ರವೇಶ, ಶಬ್ದ ಮತ್ತು ಜಗತ್ತು, ಭಾರತೀಯ ದರ್ಶನಗಳು ಮತ್ತು ಭಾಷೆ, ಅಭಿನಯದರ್ಪಣ, ಸಿದ್ದಾಂತಬಿಂದು, ಪರಮಾನಂದಸುಧಾ, ಗೀತಾಗೂಢಾರ್ಥದೀಪಿಕಾ, ಸೌಂದರ್ಯಲಹರಿ ಮತ್ತು ಸಮಾಜ ಮೊದಲಾದ ಕೃತಿಗಳನ್ನು ನಾವಿಲ್ಲಿ ಗಮನಿಸಬೇಕು. ಹಳಗನ್ನಡ ಹಾಗೂ ಹೊಸಗನ್ನಡ ಕಾವ್ಯಗಳಿಂದ ನಿದರ್ಶನಗಳನ್ನು ನೀಡುತ್ತಾ ಅಲಂಕಾರ ತತ್ವವನ್ನು ವಿವರಿಸುವ ಬಗೆ; ಅದ್ವೈತ ವೇದಾಂತ ಪ್ರಕಾಂಡ ಪಂಡಿತರಾದ ಮಧುಸೂದನ ಸರಸ್ವತಿಯವರನ್ನು ಕನ್ನಡದಲ್ಲಿ ಸಮರ್ಥವಾಗಿ ಪರಿಚಯಿಸುವ ಕ್ರಮ; ಶಂಕರಾಚಾರ್ಯರ ನಾಲ್ಕು ಸೂತ್ರಭಾಷ್ಯದ ಅನುವಾದ ಹಾಗೂ ಅದರ ಅರ್ಥಪೂರ್ಣ ವ್ಯಾಖ್ಯಾನ; ಬಿಮಲ್​ಕೃಷ್ಣ ಮತಿಲಾಲರ ‘ದಿ ವರ್ಡ್ ಅಂಡ್ ದಿ ವರ್ಲ್ಡ್’ ಕೃತಿಯನ್ನು ಕನ್ನಡದಲ್ಲಿ ಮರುಸೃಷ್ಟಿಸಿದ್ದು; ಭಾರತೀಯ ದರ್ಶನಗಳನ್ನು ಸಂವಹನಶೀಲವಾಗಿ ವಿವರಿಸಿರುವ ಬಗೆ; ಆನಂದವರ್ಧನನ ಧ್ವನ್ಯಾಲೋಕ ಮತ್ತು ಅಭಿನಯದರ್ಪಣ ಮತ್ತು ಅಭಿನವಗುಪ್ತನ ‘ಪ್ರತ್ಯಭಿಜ್ಞಾವಿಮಶಿನಿ’ ಇವುಗಳನ್ನು ಕನ್ನಡದಲ್ಲಿ ಅವರು ವಿವರಿಸಿಕೊಂಡಿರುವ ರೀತಿ – ಇವೆಲ್ಲ ಹೆಗಡೆಯವರ ಬಗೆಗಿನ ನಮ್ಮ ಗೌರವವನ್ನು ಹೆಚ್ಚಿಸುತ್ತವೆ. ಹೆಗಡೆಯವರು ಬಿ.ಎಚ್. ಶ್ರೀಧರ ಅವರ ಶಿಷ್ಯ ಪರಂಪರೆಗೆ ಸೇರಿದವರು. ಅವರ ಗಾಢ ಪ್ರಭಾವಕ್ಕೊಳಗಾಗಿ ಜನಪ್ರಿಯವಲ್ಲದ ಗಂಭೀರ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹೆಗಡೆಯವರು ಜಡ ಪಂಡಿತರಾಗಿರಲಿಲ್ಲ; ತಾವು ತೊಡಗಿಸಿಕೊಂಡ ಎಲ್ಲ ವಲಯಗಳಲ್ಲೂ ಸಮಕಾಲೀನ ಅಗತ್ಯಗಳನ್ನು ಅವರು ಬಲ್ಲವರಾಗಿದ್ದರು; ಪರಂಪರೆಯನ್ನು ಆಧುನಿಕ ಸಂದರ್ಭದಲ್ಲಿಟ್ಟು ನೋಡಲು ಪ್ರಯತ್ನಿಸಿದರು. ಯಕ್ಷಗಾನದ ಅವರ ಪ್ರತಿಭಾ ಪ್ರಖರತೆಯ ಎದುರು ಹೆಗಡೆಯವರು ಸಾಹಿತ್ಯ, ತತ್ವಶಾಸ್ತ್ರ, ಸಂಶೋಧನೆಯ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅಷ್ಟಾಗಿ ಸಹೃದಯರ ಗಮನ ಸೆಳೆದಿಲ್ಲವೆನ್ನಿಸುತ್ತದೆ.

    ‘ವಿದ್ಯಾ ದದಾತಿ ವಿನಯಂ’ ಎಂಬ ಮಾತು ಹೆಗಡೆಯವರಿಗೆ ಯಥಾರ್ಥವಾಗಿ ಅನ್ವಯವಾಗುವಂಥದು. ಎಲ್ಲರೊಡನೆ ಸಹಜವಾಗಿ ಬೆರೆಯುತ್ತಿದ್ದ ಹೆಗಡೆಯವರಿಗೆ ಅದ್ಭುತ ಸಂಘಟನಾ ಸಾಮರ್ಥ್ಯವಿತ್ತು. ಎರಡನೆಯ ಅವಧಿಗೆ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವರು ಹೊಸ ತಲೆಮಾರಿನ ಪ್ರತಿಭೆಗಳನ್ನು ಗುರುತಿಸಿ ಪೋ›ತ್ಸಾಹಿಸುತ್ತ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಪ್ರಾಂಶುಪಾಲರೂ ಆಗಿದ್ದ ಹೆಗಡೆಯವರದು ಸೃಜನಶೀಲ ಕುಟುಂಬ; ಅವರ ಸಹೋದರ ರಾಜಶೇಖರ ಜೋಗಿನ್ಮನೆ ಪ್ರತಿಭಾವಂತ ಕತೆಗಾರ; ಮಗಳು ಬಕುಲಾ ಸಂಗೀತ ವಿದುಷಿ; ಅಳಿಯ ಶ್ರೀಪಾದ ಹೆಗಡೆ ಖ್ಯಾತ ಹಿಂದೂಸ್ಥಾನೀ ಗಾಯಕ. ಬದುಕಿನ ಕಡೆಯ ಕ್ಷಣದವರೆಗೆ ಸೃಜನಶೀಲರಾಗಿದ್ದ ಹೆಗಡೆಯವರು ಸೃಜನಶೀಲ ಪರಿಸರ ನಿರ್ಮಾಣ ಮಾಡಲು ನಿರಂತರ ಶ್ರಮಿಸುತ್ತ, ಸಮಾಜಮುಖಿ ಚಿಂತನೆಯನ್ನು ಒಳಗೊಂಡಿದ್ದವರು. ನಾಡಿನವರ ಪರವಾಗಿ ಅವರಿಗೆ ಗೌರವದ ನಮನಗಳು.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts