More

    ವಿಪರೀತಗಳ ನಡುವಿನ ಮಧ್ಯಮ ಮಾರ್ಗಿ ರೊದ್ದಂ

    ಬೆಂಗಳೂರು: ಸೋಮವಾರ ರಾತ್ರಿ ನಿಧನರಾದ ಖ್ಯಾತ ವೈಮಾನಿಕ ವಿಜ್ಞಾನಿ ಪದ್ಮವಿಭೂಷಣ ಪ್ರೊ. ರೊದ್ದಂ ನರಸಿಂಹ (88) ವಿಜ್ಞಾನದೊಂದಿಗೆ ತತ್ತ್ವಶಾಸ್ತ್ರದಲ್ಲೂ ಅಷ್ಟೇ ಆಸಕ್ತಿ ಹೊಂದಿದ್ದರು. ಮಾನವೀಯ ಮೌಲ್ಯಗಳ ಬಗೆಗಿನ ತುಡಿತವೂ ಅವರ ವಿಶಿಷ್ಟ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿತ್ತು.

    ರೊದ್ದಂ ಅವರು ವಿಚಾರಗಳನ್ನು ಗ್ರಹಿಸುವ ರೀತಿಯೇ ಅವರನ್ನು ಉತ್ತಮ ವಿಜ್ಞಾನಿಯನ್ನಾಗಿಸಿದ್ದವು. ಚಿಕ್ಕಂದಿನಿಂದ ಮೋಡಗಳನ್ನು ಕಂಡಿದ್ದರೂ ರೊದ್ದಂ ಅವರ ಮನಸ್ಸಿನಲ್ಲಿ ಅವುಗಳ ಆಕಾರ, ಚಲನೆ ಕುರಿತು ವಿಶೇಷ ಆಸಕ್ತಿ ಬೆಳೆಯಿತು. ಇದರ ಅಧ್ಯಯನಕ್ಕೆಂದೇ ಭಾರತೀಯ ವಿಜ್ಞಾನ ಮಂದಿರದಲ್ಲಿ ‘ಸೆಂಟರ್ ಫಾರ್ ಅಟ್ಮಾಸ್ಪೆರಿಕ್ ಆಂಡ್ ಓಷನ್ ಸೈನ್ಸಸ್’ ಸ್ಥಾಪಿಸಿ ಸಂಶೋಧಕರ ತಂಡದೊಂದಿಗೆ ಸಂಶೋಧನೆ ಆರಂಭಿಸಿದರು. ನಂತರದಲ್ಲಿ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್​ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್​ಸಿಎಎಸ್​ಆರ್) ಸಂಸ್ಥೆಯಲ್ಲಿ ಈ ಕಾರ್ಯವನ್ನು ಮುಂದುವರಿಸಿದರು. ‘ಇದ್ದಕ್ಕಿದ್ದಂತೆ ಬರಗಾಲ ಏಕೆ ಎದುರಾಗುತ್ತದೆ?’ ಎಂಬ ಕುರಿತು ಅನೇಕ ಸಂಶೋಧನಾ ಪ್ರಬಂಧಗಳನ್ನು ಬರೆದರು. ಈ ನಿಟ್ಟಿನಲ್ಲಿ ಹೊಸ ಹೊಳಹುಗಳನ್ನು ನೀಡಿದರು.

    ಪೂರ್ವ ಹಾಗೂ ಪಶ್ಚಿಮದ ವಿಜ್ಞಾನಗಳನ್ನು ಸಮಚಿತ್ತದಿಂದ ನೋಡುವ ರೊದ್ದಂ ಅವರ ರೀತಿಯೂ ವಿಶಿಷ್ಟವಾದದ್ದು. 2015ರ ಜನವರಿ 3-7ರವರೆಗೆ ಮುಂಬೈನಲ್ಲಿ 102ನೇ ‘ಭಾರತೀಯ ವಿಜ್ಞಾನ ಕಾಂಗ್ರೆಸ್’ ಆಯೋಜನೆಗೊಂಡಿತ್ತು. ಭಾರತದ ವಿಜ್ಞಾನಿಗಳ ವಾರ್ಷಿಕ ಜಾತ್ರೆ ಅದು. ಘಟಾನುಘಟಿ ವಿಜ್ಞಾನಿಗಳು ಹೊಸ ವಿಚಾರ, ಹೊಳಹುಗಳನ್ನು ನೀಡುವ ಸಮ್ಮೇಳನ. ಸಮ್ಮೇಳನದ ಒಂದು ಅವಧಿಯಲ್ಲಿ ‘ಸಂಸ್ಕೃತದ ಮೂಲಕ ಪ್ರಾಚೀನ ವಿಜ್ಞಾನ’ ಎಂಬ ವಿಚಾರದಲ್ಲಿ ಚರ್ಚೆ ನಡೆಯಿತು. ಆಗಮಿಸಿದವರೆಲ್ಲರೂ ಸಂಸ್ಕೃತ ವಿದ್ವಾಂಸರು. ವೈಮಾನಿಕ ಶಾಸ್ತ್ರದಲ್ಲಿ ಭಾರತ ಮುಂದುವರಿದಿತ್ತು ಎಂದೂ, ‘ಪೈಥಾಗೊರಸ್ ಪ್ರಮೇಯ’ ಎನ್ನಲಾಗುವ ಸಿದ್ಧಾಂತ ಭಾರತದ ಮೂಲವನ್ನು ಹೊಂದಿದ್ದು, ನಂತರ ಇತರ ದೇಶಗಳು ನಕಲು ಮಾಡಿದವು ಎಂದೂ ಅನೇಕರು ಹೇಳಿದರು. ಅಲ್ಲದೆ, ‘ವಿಶ್ವದಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್ ಸರ್ಜರಿ ನಡೆಸಲಾಯಿತು’ ಎಂದು ವಾದಿಸಲಾಯಿತು. ಅನೇಕ ವಿಚಾರಗಳಲ್ಲಿ ಭಾರತ ಮುಂಚೂಣಿಯಲ್ಲಿತ್ತು ಎಂಬ ಹೇಳಿಕೆಗಳು ಭಾರತದ ವಿಜ್ಞಾನ ವಲಯದಲ್ಲಿ ಭಾರೀ ವಿವಾದ ಹುಟ್ಟುಹಾಕಿದವು. ಈ ಕುರಿತು 2015ರ ಫೆಬ್ರವರಿಯಲ್ಲಿ ‘ಕರೆಂಟ್ ಸೈನ್ಸ್’ ನಿಯತಕಾಲಿಕೆಯಲ್ಲಿ ಅತಿಥಿ ಸಂಪಾದಕೀಯವನ್ನು ರೊದ್ದಂ ನರಸಿಂಹ ಬರೆದರು.

    ನಮ್ಮ ಪೂರ್ವಜರು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಹಲವು ಶಾಖೆಗಳ ಬಗ್ಗೆ ಅರಿತಿದ್ದರು ಎಂದು ಒಂದು ಗುಂಪು ವಾದಿಸಿತು. ಈ ವಾದವನ್ನು ವ್ಯಂಗ್ಯವಾಗಿ ತಳ್ಳಿಹಾಕಿದ ಇನ್ನೊಂದು ಗುಂಪು, ಹಿಂದಿನ ಕಾಲದ ಸಾಧನೆಗಳೆಲ್ಲವೂ ಸಂದೇಹಾಸ್ಪದ ಅಥವಾ ಅಸಂಬದ್ಧ ಎಂದಿತು. ಎರಡೂ ತಂಡಗಳು ಚರ್ಚೆ ನಡೆಸುತ್ತ ಬಹಳ ದೂರ ಸಾಗಿವೆ ಎಂದು ತಮ್ಮದೇ ವಿಜ್ಞಾನ ಸಮುದಾಯವನ್ನು ರೊದ್ದಂ ಪ್ರಶ್ನಿಸಿದರು. ಜತೆಗೇ, ‘ಪ್ರಾಚೀನ ಪಠ್ಯದಲ್ಲಿದೆ’ ಎಂಬ ಕಾರಣ ನೀಡಿ ವಿಜ್ಞಾನವನ್ನು ತೀರಾ ಸರಳೀಕರಿಸಿ ಹೇಳುವುದೂ ಸರಿಯಲ್ಲ ಎಂದರು.

    ಮಹರ್ಷಿ ಭಾರದ್ವಾಜರ ‘ಬೃಹತ್ ವಿಮಾನ ಶಾಸ್ತ್ರ’ ಮತ್ತು ಜಿ.ಆರ್. ಜೋಸೆಯರ್ ಅವರ ‘ವೈಮಾನಿಕ ಶಾಸ್ತ್ರ’ ಕೃತಿಗಳಲ್ಲಿ ಮೂರು ವಿಧದ ವಿಮಾನಗಳ ಬಗ್ಗೆ ವಿವರಣೆ ಇದೆ. ಈ ವಿನ್ಯಾಸಗಳು ನ್ಯೂಟನ್ ನಿಯಮ ವನ್ನು ಉಲ್ಲಂಘಿಸುತ್ತವೆ ಎಂದು ಖಡಾಖಂಡಿತವಾಗಿ ಹೇಳಿದರು. ಜತೆಗೆ, ಪೈಥಾಗೊರಸ್ ಪ್ರಮೇಯ ಹಾಗೂ ಪ್ಲಾಸ್ಟಿಕ್ ಸರ್ಜರಿ ಕುರಿತು ಭಾರತದ ಹಿರಿಮೆಯನ್ನು ಸಾರಿದರು. ಪೈಥಾಗೊರಸ್ ಪ್ರಮೇಯದ ಬಗ್ಗೆ ಎಲ್ಲಿಯೂ ದಾಖಲೆ ಇಲ್ಲ. ಬೋಧಾಯನ ಉಲ್ಲೇಖಿಸಿದ ಪುರಾತನ ಜ್ಯಾಮಿತಿ ನಿಯಮ ಪೈಥಾಗೊರಸ್ ಪ್ರತಿಪಾದನೆಗೂ ಮುಂಚೆ ಲಭ್ಯವಿರುವ ಜಗತ್ತಿನ ಪ್ರಾಚೀನ ದಾಖಲೆಗಳಲ್ಲಿ ಸೇರಿತ್ತು ಎಂದರು.

    ಪ್ಲಾಸ್ಟಿಕ್ ಸರ್ಜರಿ ಕುರಿತಂತೆ, ‘ಮುರಿದ ಮೂಗು ಹಾಗೂ ಸೀಳಿದ ತುಟಿಗಳನ್ನು ಸರಿಪಡಿಸುವುದರ ಬಗ್ಗೆ ಮೊದಲ ಉಲ್ಲೇಖ ಕ್ರಿ.ಪೂ. 3000ದಿಂದ 2500ರ ನಡುವಿನ ಈಜಿಪ್ತಿನ ದಾಖಲೆಗಳಲ್ಲಿ ಸಿಕ್ಕಿದೆ. ಪ್ಲಾಸ್ಟಿಕ್ ಸರ್ಜರಿ ಕುರಿತ ಭಾರತದ ಹೆಗ್ಗಳಿಕೆಗೆ ಭದ್ರ ಬುನಾದಿಯಿದೆ ಎನ್ನಬಹುದು’ ಎಂದಿದ್ದರು.

    ಯಾವುದೇ ವಿಚಾರವನ್ನು ನಮ್ಮದೆಂಬ ಕಾರಣಕ್ಕೆ ಅಂಧಾನುಕರಣೆ ಮಾಡುವುದು ಎಷ್ಟು ತಪ್ಪೋ, ಐರೋಪ್ಯರಿಂದ ಬಂದದ್ದು ಎಂಬ ಕಾರಣಕ್ಕೆ ಎಲ್ಲವನ್ನೂ ಒಪ್ಪಬೇಕೆಂಬ ಅಲಿಖಿತ ನಿಯಮಗಳ ವಿಪರೀತಗಳಿಂದ ರೊದ್ದಂ ದೂರವಿದ್ದರು. ವಿಪರೀತಗಳ ನಡುವೆ ಮಧ್ಯಮ ಮಾರ್ಗವನ್ನು ಕಂಡುಕೊಂಡು, ಜಗತ್ತಿನ ಒಳಿತಿಗೆ ದುಡಿಯುವ ಮಾರ್ಗವನ್ನು ಪ್ರತಿಪಾದಿಸಿದರು.

    ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಂತಾಪ

    ವಿಪರೀತಗಳ ನಡುವಿನ ಮಧ್ಯಮ ಮಾರ್ಗಿ ರೊದ್ದಂ
    ಮಂಗಳವಾರ ರೊದ್ದಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ.

    ರೊದ್ದಂ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ‘ಭಾರತದ ಪ್ರಾಚೀನ ಜ್ಞಾನ ಹಾಗೂ ಪ್ರಶ್ನಿಸುವ ಮನೋಭಾವದ ವ್ಯಕ್ತರೂಪ’ ಎಂದು ಬಣ್ಣಿಸಿದ್ದಾರೆ. ರೊದ್ದಂ ನಿವಾಸಕ್ಕೆ ತೆರಳಿ ಅಂತಿಮದರ್ಶನ ಪಡೆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಏರೋಸ್ಪೇಸ್ ಮತ್ತು ಬಾಹ್ಯಾಕಾಶ ವಿಜ್ಞಾನಕ್ಕೆ ಅವರ ಕೊಡುಗೆ ಮಹತ್ವಪೂರ್ಣ’ ಎಂದಿದ್ದಾರೆ.

    ಜನರೊಂದಿಗೆ ಬೆರೆಯುತ್ತಿದ್ದ ನಿಗರ್ವಿ

    ವಿಜ್ಞಾನಿಗಳು ಸಾಮಾನ್ಯವಾಗಿ ಜನಸಾಮಾನ್ಯರಿಂದ ದೂರವಿದ್ದು ಕೆಲಸ ಮಾಡುತ್ತಿರುತ್ತಾರೆ. ಅದು ಉದ್ದೇಶಪೂರ್ವಕವಲ್ಲದಿದ್ದರೂ ಅನೇಕ ಬಾರಿ ಅನಿವಾರ್ಯ ವಾಗುತ್ತದೆ. ರೊದ್ದಂ ಅವರು ವಿದ್ಯಾರ್ಥಿಗಳು, ಸಾರ್ವಜನಿಕರ ಜತೆಗೂ ಬೆರೆಯುತ್ತಿದ್ದರು. ವಿಜ್ಞಾನದ ಆವಿಷ್ಕಾರಗಳ ಕುರಿತು ಜನರಿಗೆ ಸರಿಯಾದ ಮಾಹಿತಿ ದೊರೆಯಬೇಕೆಂಬ ಕಾರಣಕ್ಕೆ ಮಾಧ್ಯಮ ಪ್ರತಿನಿಧಿಗಳ ಜತೆಗೆ ಸಂಪರ್ಕ ಹೊಂದಿದ್ದು ಬಿಟ್ಟರೆ, ಸ್ವಂತ ಪ್ರಚಾರದ ಹಿಂದೆ ಎಂದೂ ಬೀಳಲಿಲ್ಲ. ಪದ್ಮ ವಿಭೂಷಣ ಗೌರವದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡುತ್ತ, ‘ಪ್ರಾರಂಭದಲ್ಲಿ ಬೋಧನೆಯತ್ತಲೇ ಗಮನ ನೀಡಿದ್ದೆ. ನಂತರದಲ್ಲಿ ನನ್ನನ್ನು ಎಲ್​ಸಿಎ ತೇಜಸ್ ಸೇರಿ ಅನೇಕ ಯೋಜನೆಗಳಲ್ಲಿ ತೊಡಗಿಸಲಾಯಿತು, ವಿವಿಧ ಸಂಸ್ಥೆಗಳಲ್ಲಿ ಹೊಣೆಗಾರಿಕೆ ನೀಡಲಾಯಿತು. ಈ ಪ್ರಶಸ್ತಿಯು ಮೂಲ ವಿಜ್ಞಾನ ಸಂಶೋಧನೆಗೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ವಿಜ್ಞಾನದ ಕುರಿತ ರಾಷ್ಟ್ರೀಯ ನೀತಿಗೆ ಸಲ್ಲಬೇಕು’ ಎಂದು ಸರಳವಾಗಿ ತಿಳಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts