More

    ಜಗಕೆ ಬೆಳಕಾದ ಭಗವಾನ್ ಮಹಾವೀರ: ಇಂದು ಜಯಂತಿ

    ಜಗಕೆ ಬೆಳಕಾದ ಭಗವಾನ್ ಮಹಾವೀರ: ಇಂದು ಜಯಂತಿಭಗವಾನ್ ಮಹಾವೀರರ ಜೀವನವು ಒಬ್ಬ ವ್ಯಕ್ತಿಯ ಅಥವಾ ಒಂದು ಜನ್ಮದ ಕಥೆಯಲ್ಲ, ಅನೇಕ ಭವಗಳಲ್ಲಿ ಬಳಲಿ ಆತ್ಮವಿಕಾಸದ ಚರಮ ಸೀಮೆಯಲ್ಲಿ ನಿಂತ ಜೀವಾತ್ಮದ ಮುಕ್ತಿಯ ಆದರ್ಶದ ಚರಿತೆ. ಮಹಾವೀರರ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜೀವನಸಾರ್ಥಕತೆಯತ್ತ ಮುನ್ನಡೆಯಬೇಕು.

    ಅಂದಾಜು 2622 ವರ್ಷಗಳ ಹಿಂದೆ ಭಗವಾನ್ ಮಹಾವೀರರ ಜನ್ಮವಾಯಿತು. ಇದನ್ನು ಭಾರತೀಯ ಸಂಸ್ಕೃತಿಗೆ ಒಂದು ದೊಡ್ಡ ವರದಾನ ಎಂದು ಪರಿಗಣಿಸಬಹುದಾಗಿದೆ. ಏಕೆಂದರೆ ಅವರು ಹುಟ್ಟಿದ ಯುಗದಲ್ಲಿ ಈ ಭೂಮಿಯ ಮೇಲೆ ಹಿಂಸೆ, ಅನಾಚಾರ ಇತ್ಯಾದಿಗಳಿಂದ ಅಂಧಕಾರ ತುಂಬಿತ್ತು, ಮಾನವತೆಯ ಅಂತ್ಯವಾಗುತ್ತಿತ್ತು. ಆಗ ಭಗವಾನ್ ಮಹಾವೀರರು ಮಾನವನ ಕಲ್ಯಾಣಕ್ಕಾಗಿ ತಮ್ಮ ಆತ್ಮಸಾಧನೆಯಿಂದ ಏನನ್ನು ಅರಿಯುತ್ತಿದ್ದರೋ ಅದನ್ನು ಪ್ರಜೆಗಳಿಗೆ ತತ್ವಗಳ ಮೂಲಕ ನೀಡುತ್ತಿದ್ದರು. ಅವರನ್ನು ಜೈನಧರ್ಮವನ್ನು ಉದ್ದೀಪನಗೊಳಿಸಿದ ಮಹಾನ್​ಪುರುಷ ಎನ್ನಬಹುದು. ಅವರು ಜೀವನವನ್ನು ಆತ್ಮಕಲ್ಯಾಣಕ್ಕೆ ಹಾಗೂ ಮಾನವನ ಕಲ್ಯಾಣಕ್ಕಾಗಿ ಸಮರ್ಪಿಸಿದರು.

    ಜನ್ಮ, ಬಾಲ್ಯ: ಭಗವಾನ್ ಮಹಾವೀರರು ವೈಶಾಲಿನಗರ ಬಳಿಯ ಕುಂಡಪುರ ಗ್ರಾಮದಲ್ಲಿ ರಾಜ ಸಿದ್ಧಾರ್ಥ ಹಾಗೂ ಮಾತೆ ತ್ರಿಶಲಾದೇವಿಯ ಪುತ್ರರಾಗಿ ಚೈತ್ರ ಶುಕ್ಲ 13ರಂದು ಜನಿಸಿದರು. ಅವರು ಬಾಲ್ಯಾವಸ್ಥೆಯಲ್ಲಿ ಪರಾಕ್ರಮಿಯಾಗಿದ್ದರು. ಹಾಗಾಗಿ ಅವರಿಗೆ ವೀರ, ಅತಿವೀರ, ಮಹಾವೀರ ಎನ್ನುತ್ತಿದ್ದರು. ಅವರ ಪ್ರತಿಭೆ ಅಸಾಧಾರಣವಾದ್ದರಿಂದ ಅವರಿಗೆ ‘ಸನ್ಮತಿ’ ಎನ್ನುತ್ತಿದ್ದರು. ವರ್ಧಮಾನ ಎಂಬುದು ತಂದೆಯಿಂದ ನಾಮಕರಣವಾದ ಹೆಸರು.

    ಯೌವ್ವನಾವಸ್ಥೆ, ದೀಕ್ಷೆ: ಭಗವಾನ್ ಮಹಾವೀರರು ಯೌವ್ವನಾವಸ್ಥೆಯಲ್ಲಿರುವಾಗ ಪ್ರಪಂಚದಲ್ಲಿ ಘೊರ ಹಿಂಸೆಯ ವಾತಾವರಣ, ಮೂಢನಂಬಿಕೆಗಳು, ಮಹಿಳೆಯರ ಮೇಲಿನ ಶೋಷಣೆ… ಹೀಗೆ ಅನೇಕ ವಿಷಯಗಳಿಂದ ಕ್ರೂರತೆ ತುಂಬಿಕೊಂಡಿತ್ತು. ಇದನ್ನು ಅಂತ್ಯಗೊಳಿಸಿ ಮಾನವತೆಯ ಉದ್ಧಾರಕ್ಕಾಗಿ ಹಾಗೂ ಆತ್ಮಕಲ್ಯಾಣಕ್ಕಾಗಿ ತಮ್ಮ 30ನೇ ವಯಸ್ಸಿನಲ್ಲಿ ಸಂಸಾರ, ರಾಜ್ಯ, ರಾಜವೈಭವವನ್ನು ತ್ಯಾಗ ಮಾಡಿದರು. ತ್ಯಾಗ, ತಪಸ್ಸು, ಸಾಧನೆಯ ಕಠೋರ ಸನ್ಮಾರ್ಗವನ್ನು ಸ್ವೀಕರಿಸಿದರು. ದೀಕ್ಷೆಯ ನಂತರ ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ, ಆಹಾರವನ್ನು ಕಡಿಮೆ ಮಾಡಿ ಹಲವು ಉಪಸರ್ಗಗಳನ್ನು ಅನುಭವಿಸುತ್ತಾ ಹನ್ನೆರಡು ವರ್ಷಗಳ ಕಾಲ ಕಠೋರ ತಪಸ್ಸಿನ ನಂತರ ಭಗವಾನ್ ಮಹಾವೀರರಿಗೆ ಕೇವಲಜ್ಞಾನ ಪ್ರಾಪ್ತವಾಯಿತು. ಅವರು ಜೈನಧರ್ಮದ ಉಪದೇಶ ನೀಡುವುದಿಲ್ಲ. ಅಹಿಂಸೆ, ಸಂಯಮ, ತಪದ ಉಪದೇಶ ನೀಡಿದರು. ಭಗವಾನ್ ಮಹಾವೀರರು ಧಾರ್ವಿುಕ ವಿಧಿವಿಧಾನಗಳಲ್ಲಿ ವಿಕೃತಿ ಉಂಟಾದಾಗ ಅದನ್ನು ದೂರ ಮಾಡಲು ಧಾರ್ವಿುಕ ಪ್ರವಚನವನ್ನು ನೀಡುತ್ತಾರೆ. ಅವರು ಆತ್ಮೋಪಕಾರದೊಂದಿಗೆ ಲೋಕೋಪಕಾರದಲ್ಲಿಯೂ ಕಾರ್ಯನಿರತರಾಗುತ್ತಾರೆ. ಸ್ವಯಂ ತಮ್ಮನ್ನು ಗೆದ್ದುಕೊಂಡು ಇತರರಿಗೂ ತಮ್ಮನ್ನು ಗೆಲ್ಲುವ ಮಾರ್ಗವನ್ನು ತೋರಿಸುತ್ತಾರೆ.

    ಬದುಕಿ ಬದುಕಲು ಬಿಡು: ಭಗವಾನ್ ಮಹಾವೀರರ ಬೋಧನೆಗಳಲ್ಲಿ ಅಹಿಂಸೆ ಪ್ರಮುಖವಾದುದು. ‘ಬದುಕಿ ಬದುಕಲು ಬಿಡು’ ಎಂಬುದು ಅವರ ಮುಖ್ಯ ಸಂದೇಶಗಳಲ್ಲೊಂದು. ಈ ವಿಶ್ವದಲ್ಲಿರುವ ಎಲ್ಲ ಜೀವಿಗಳನ್ನು ನಿನ್ನ ಆತ್ಮನ ಸಮಾನವಾಗಿ ನೋಡು, ನಿನಗೆ ಹೇಗೆ ಬದುಕಬೇಕು, ಸುಖವಾಗಿರಬೇಕು ಎನ್ನುವ ಭಾವನೆ ಇರುತ್ತದೆಯೋ ಹಾಗೆಯೇ ಎಲ್ಲ ಜೀವಿಗಳಿಗೂ ಬದುಕಬೇಕು, ಸುಖವಾಗಿರಬೇಕು ಎಂಬ ಭಾವನೆಯಿರುತ್ತದೆ. ಅದಕ್ಕಾಗಿ ಯಾವ ಜೀವಿಯನ್ನೂ ಹಿಂಸಿಸುವ ಅಧಿಕಾರ ನಮಗಿಲ್ಲ ಎಂದು ಬೋಧಿಸಿದರು. ಭಯೋತ್ಪಾದನೆಯು ಕಾಡುತ್ತಿರುವ ಪ್ರಸ್ತುತ ದಿನಗಳಲ್ಲಿ ಅಹಿಂಸಾ ಪರಮೋಧರ್ಮ ಎನ್ನುವುದು ಒಂದು ಮಂತ್ರವಾಗಬೇಕು.

    ಅನೇಕಾಂತ, ಅಪರಿಗ್ರಹ: ಒಬ್ಬೊಬ್ಬರ ದೃಷ್ಟಿಕೋನ, ವಿಚಾರಗಳು ಬೇರೆಯಾಗುತ್ತವೆ. ನಿಮ್ಮ ವಿಚಾರಗಳು ಸರಿಯಾಗಿರಬಹುದು, ಆದರೆ, ನಿಮ್ಮ ವಿಚಾರಗಳೇ ಸರಿ ಎನ್ನುವುದು ತಪ್ಪು. ಎಲ್ಲರ ಉತ್ತರವನ್ನು, ಅಭಿಪ್ರಾಯವನ್ನು ಗೌರವಿಸಿ ಮುನ್ನಡೆಯಬೇಕು ಎಂದು ಭಗವಾನ್ ಮಹಾವೀರರು ಹೇಳಿದ್ದಾರೆ. ಗೃಹಸ್ಥರಿಗೆ ಸೀಮಿತ ಅಪರಿಗ್ರಹವನ್ನು ಹೇಳಿದ್ದಾರೆ. ಎಷ್ಟು ಅಗತ್ಯವಿದೆಯೋ ಅಷ್ಟನ್ನೇ ಉಪಯೋಗಿಸಬೇಕು. ಅಗತ್ಯವಿಲ್ಲದಿರುವ ವಸ್ತುವಿನ ಮೇಲೆ ಮೋಹವಿಡಬಾರದು. ಸೀಮಿತ ಪರಿಗ್ರಹ ಹೊಂದಿದವನು ಹಗುರವಾಗಿದ್ದು ಎತ್ತರಕ್ಕೆ ಬೆಳೆಯುತ್ತಾನೆ.

    ಭಗವಾನ್ ಮಹಾವೀರರ ಕಾಲದಲ್ಲಿ ಅಹಿಂಸೆ, ಅನೇಕಾಂತ, ಅಪರಿಗ್ರಹ ಮುಂತಾದವುಗಳ ಅವಶ್ಯಕತೆ ಎಷ್ಟಿತ್ತೋ ಈಗಿನ ಕಾಲದಲ್ಲೂ ಅದರ ಅವಶ್ಯಕತೆ ಇದೆ. ಭಗವಾನ್ ಮಹಾವೀರರ ಜ್ಞಾನವಾಣಿಯನ್ನು 12 ಮುಖ್ಯ ಅಂಗಗಳಾಗಿ ವಿಭಾಗಿಸಲಾಗಿದೆ. ಆಚಾರಾಂಗ, ಸೂತ್ರಕೃತಾಂಗ, ಸ್ಥಾನಾಂಗ, ಸಮವಾಯಾಂಗ, ವಾಖ್ಯಾಪ್ರಜ್ಞಾಪ್ತಿ, ಜ್ಞಾತೃಧಮಕಥಾ, ಉಪಾಸಕಾಧ್ಯಯನ, ಅಂತಃಕೃದ್​ದಶಾಂಗ, ಅನುತ್ತರೌಪಾದಿಕ ದಶಾಂಗ, ಪ್ರಶ್ನವ್ಯಾಕಣಾಂಗ, ವಿಪಾಕ ಸೂತ್ರಾಂಗ, ದೃಷ್ಟಿವಾದಾಂಗ. ಜೈನಶಾಸ್ತ್ರ (ಜಿನವಾಣಿ) ಎಲ್ಲವೂ ಇದೇ ಅಂಗದಲ್ಲಿ ಬರುತ್ತದೆ.

    ನಿರ್ವಾಣ: ಭಗವಾನ್ ಮಹಾವೀರರು ಕ್ರೋಧಾದಿ ಕಷಾಯಗಳನ್ನು ಸಂಪೂರ್ಣವಾಗಿ ತ್ಯಾಗ ಮಾಡಿ 72ನೇ ವಯಸ್ಸಿನಲ್ಲಿ ಪಾವಾಪುರಿಯಲ್ಲಿ ನಿರ್ವಾಣ ಹೊಂದಿದರು. ಇಡೀ ಜಗತ್ತು ಮಲಗಿತ್ತು, ಭಗವಾನ್ ಮಹಾವೀರರು ತಮ್ಮ ಯಾತ್ರೆಗೆ ಪೂರ್ಣವಿರಾಮ ಇಟ್ಟರು. ಸಾರ್ಥಕ ಬದುಕಿಗೆ ಬೆಳಕು ತೋರಿದ ಸಂಕೇತವಾಗಿ ಆ ದಿನದಂದು ಜೈನರ ಪ್ರತಿ ಮನೆಯಲ್ಲಿ ದೀಪಾವಳಿ ಆಚರಿಸಲಾಗುತ್ತದೆ. ನಿರ್ವಾಣ ಅಥವಾ ಮೋಕ್ಷವೆಂದರೆ ತನ್ನನ್ನು ತಾನು ಗೆಲ್ಲುವುದು. ಯಾರು ಯಾರನ್ನು ಬೇಕಾದರೂ ಜಯಿಸಬಹುದು. ಆದರೆ, ತನ್ನನ್ನು ತಾನು ಗೆಲ್ಲುವುದು ಕಠಿಣ, ವಿರಳ. ಅಂತಹ ಆತ್ಮವಿಜಯದ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ವರ್ಧಮಾನರು ಮಹಾವೀರರೆಂದು ಪ್ರಖ್ಯಾತಿಯಾದರು.

    ಭಗವಾನ್ ಮಹಾವೀರರ ಜೀವನವು ಒಬ್ಬ ವ್ಯಕ್ತಿಯ ಅಥವಾ ಒಂದು ಜನ್ಮದ ಕಥೆಯಲ್ಲ, ಅನೇಕ ಭವಗಳಲ್ಲಿ ಬಳಲಿ ಆತ್ಮವಿಕಾಸದ ಚರಮ ಸೀಮೆಯಲ್ಲಿ ನಿಂತ ಜೀವಾತ್ಮದ ಮುಕ್ತಿಯ ಆದರ್ಶದ ಚರಿತೆ. ಮಹಾವೀರರ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧರ್ಮ, ಪಂಗಡಗಳು ಎನ್ನದೆ ಎಲ್ಲರೂ ಒಗ್ಗಟ್ಟಿನಿಂದ ಅವರು ತೋರಿಸಿದ ದಾರಿಯಲ್ಲಿ ನಡೆಯುತ್ತಾ ಅವರ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರೋಣ.

    (ಲೇಖಕರು ಶ್ರೀಕ್ಷೇತ್ರ ಶ್ರವಣಬೆಳಗೊಳದ ಪೀಠಾಧಿಕಾರಿ)

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts