More

    ಸತ್ತ ಮೇಲೆ ನಗ್ತಿರ್ಬೆಕ್ನನ್ಹೆಣ, ನಗ್ತಿರ್ಬೇಕು…

    ಸತ್ತ ಮೇಲೆ ನಗ್ತಿರ್ಬೆಕ್ನನ್ಹೆಣ, ನಗ್ತಿರ್ಬೇಕು…ಸಾವು ಎಂದರೆ ಸಾವಿರಮೈಲಿ ದೂರ ಹೋಗೋರೆ ಜಾಸ್ತಿ, ಅಂಥದ್ರಲ್ಲಿ ಸಾವನ್ನ ಸ್ವಾಗತಿಸಿ,ಅದೂ ನಗನಗ್ತಾ ಸ್ವಾಗತಿಸೋರು ಅಪರೂಪದಲ್ಲಿ ಅಪರೂಪನೇ! ಅಂಥ ಅಪರೂಪ ಜೀವಿ-ಜೀನಿಯಸ್ ಕೈಲಾಸಂ. ಬಂತಲ್ಲ ನವೆಂಬರ್ 23. ಕೈಲಾಸಂ ಮರೆಯಾದ ದಿನ. ಬರೀ ಭೌತಿಕವಾಗಿ ಮರೆಯಾದದ್ದು; ಮಾನಸಿಕವಾಗಿ, ಬೌದ್ಧಿಕವಾಗಿ ಅವರಿನ್ನೂ ನಮ್ಮೊಂದಿಗೆ ಇದ್ದೇ ಇದ್ದಾರೆ.

    ಅನುಭಾವಿ ಕಬೀರ ದೋಹೆಯೊಂದರಲ್ಲಿ ಹೇಳುತ್ತಾರೆ- ‘ಕಬೀರಾ, ಜಬ ತುಮ್ ಪೈದಾ ಹುಯೇ, ಜಗ ಹಸೆ ತುಮ್ ರೋಯೆ; ಐಸಿ ಕರನೀ ಕರ ಚಲೋ-ತುಮ್ ಹಸೆ ಜಗ ರೋಯೆ’ (ಹೇ ಮನುಷ್ಯ, ಹುಟ್ಟಿದಾಗ ನೀನು ಅಳ್ತಾಯಿದ್ದಿ; ಜಗತ್ತು ನಗ ನಗ್ತಾಯಿತ್ತು. ನೀನು ಈ ಲೋಕದಿಂದ ತೆರಳುವಾಗ ನಿನ್ನ ಸಾಧನೆ ಹೇಗಿರಬೇಕೂಂದ್ರೆ, ನೀನು ನಗ ನಗ್ತಾಯಿರಬೇಕು, ಜಗತ್ತು ಅಳ್ತಾಯಿರಬೇಕು). ಅದು ಸಾರ್ಥಕ ಬದುಕು. ಕೈಲಾಸಂ ಬದುಕಿದ್ದು ಅಂತಹ ಬದುಕನ್ನೇ.

    ಚಿತೆಯ ಮೇಲೆ ಕೈಲಾಸಂ ಮಲಗಿದ್ದರೂ ಮುಖದಲ್ಲಿ ಮಂದಹಾಸ ಇತ್ತು. ತುಟಿಗಳಂಚಿನಲಿ ತುಂಟು ನಗೆ ಮಿಂಚುತಿತ್ತು. ಇಂತಹ ಮುಖಮುದ್ರೆಯನ್ನು ಕಂಡ ಅನಕೃ ‘ಕೈಲಾಸಂ ಶವ ನಗುತ್ತಲೇ ಇತ್ತು.. ಶಾಂತಿಯಿಂದಲೋ, ತೃಪ್ತಿಯಿಂದಲೋ ಅಥವಾ ನಮ್ಮನ್ನು ನೋಡಿಯೋ!!’ ಎಂದಿದ್ದಾರೆ.

    ಈ ಮಾತುಗಳು ಮನನೀಯ- ಅವರು ಬದುಕಿದ್ದಾಗ ನಮ್ಮವರಲ್ಲನೇಕರು ಅವರ ಬೆಲೆ ಅರಿತುಕೊಳ್ಳಲಿಲ್ಲ; ಅರಿತ ಕೆಲವರು ಅವರನ್ನು ಅಗ್ರಮಾನ್ಯರೆಂದು ಪರಿಗಣಿಸಲು ಹಿಂಜರಿದರು ಎಂದು ಅನಕೃ ಮುಂದುವರಿಸಿ, ಕೈಲಾಸಂ ಅವರ ಸುಪ್ರಸಿದ್ಧ ‘ಸತ್ತವನ ಸಂತಾಪ’ ನಾಟಕದ ಸಫರಿಂಗ್-ಅಂಬೋದು ಸರ್ವತ್ರ. ಸತ್ಮೇಲೇನೇ ಅವುಗಳಿಂದ ವಿಮೋಚನೆ. ಮತ್ತೆ, ಸತ್ಮೇಲೆ ನಗ್ತಿರ್ಬೆಕು ನನ್ಹೆಣ. ನಮ್ಮನೆ, ನಂಕೊಂಪೆ ತಪ್ಪಿಸ್ಕೊಂಡು, ನಗ್-ನಗ್ತಾ ಹೋದ್ನಲ್ಲ ಭೂಪ್ತೀಂತ, ನಗ್ತಿರ್ಬೆಕ್ನನ್ಹೆಣ ಎನ್ನುತ್ತಾರೆ.

    ಸೈಡ್ ವಿಂಗ್​ಗೆ ಸರಿದರು: ಬೆಂಗಳೂರಿನ ಬಸವನಗುಡಿಯ ಶ್ರೀನಿವಾಸನ್ ಅವರ ಆವಂತಿ ಮನೆಯಲ್ಲಿ ಕೈಲಾಸಂ 23 ನವೆಂಬರ್ 1946 ರಂದು ಬದುಕಿನ ರಂಗಭೂಮಿಯಲ್ಲಿ ತೀವ್ರ ಸುಸ್ತಾದಾಗ ಸುಧಾರಿಸಿಕೊಳ್ಳಲು ಸೈಡ್​ವಿಂಗ್ ಇಲ್ಲದೆ ಪರಲೋಕ ವಾಸಿಯಾದರು. ಅವರೇ ಹೇಳಿದಂತೆ- ‘ನಾಟಕದಲ್ಲಿ ಸುಸ್ತಾದರೆ ಸುಧಾರಿಸಿಕೊಳ್ಳೋಕೆ ಸೈಡ್​ವಿಂಗ್ ಇದೆ ಮರಿ. ಆದರೆ, ಬದುಕಲ್ಲಿ ಸುಸ್ತಾದರೆ ಸೈಡ್-ವಿಂಗ್ ಇಲ್ಲ!’ ಎಷ್ಟು ಸತ್ಯ ಅಲ್ಲಾ್ವ?!

    ಕೈಲಾಸಂ ಬದುಕಿದ್ದು ಅರವತ್ತೆರಡು ವರ್ಷ. ರಚಿಸಿದ; ಹೇಳಿ ಬರೆಯಿಸಿದ (ಕೈಲಾಸಂ ಪೆನ್ನು ಪೇಪರು ಹಿಡಿದವರೇ ಅಲ್ಲ; ಅವರೇನಿದ್ದರೂ ಡಿಕ್ಟೇಟರ್!) ಕೃತಿಗಳು ಅರವತ್ತು. ಆದರೆ ನಮಗೀಗ ಲಭ್ಯವಿರುವಂಥವು ಹತ್ತೊಂಬತ್ತು. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ‘ಕೈಲಾಸಂ ಕೃತಿಗಳು’ ಗ್ರಂಥ 710 ಪುಟಗಳಷ್ಟು ಕೈಲಾಸಂ ಸಾಹಿತ್ಯವನ್ನು ಹೊತ್ತು ತಂದಿದೆ.

    ಅವರ ಚೊಚ್ಚಲ ನಾಟಕ ‘ಟೊಳ್ಳು-ಗಟ್ಟಿ’ ಅಚ್ಚಾಗಿ ಈಗ ಸರಿಯಾಗಿ ನೂರು ವರ್ಷ; ಶತಕದ ಸಂಭ್ರಮ. ಬಂಡ್ವಾಳವಿಲ್ಲದ ಬಡಾಯಿ, ಪೋಲಿ ಕಿಟ್ಟಿ, ವೈದ್ಯನ ವ್ಯಾಧಿ, ಅಮ್ಮಾವ್ರ ಗಂಡ, ಹೋಮ್ ರೂಲು, ನಂಬ್ರಾಹ್ಮಣ್ಕೆ, ಅನುಕೂಲಕೊಬ್ಬಣ್ಣ… ಹೀಗೆ ಒಂದರಕಿಂತ ಒಂದು ಶ್ರೇಷ್ಠ ನಾಟಕಗಳು. ಜೊತೆಗೊಂದಷ್ಟು ಇಂಗ್ಲಿಷ್ ನಾಟಕಗಳು, ಕೋಳಿ-ಕೆ ರಂಗದಂತಹ ಚೇತೋಹಾರಿ ಹಾಡುಗಳು, ಕಥೆಗಳು ಎಷ್ಟು ವಿಶಾಲ, ವಿಪುಲ ಸಾಹಿತ್ಯ-ಸೃಷ್ಟಿ. ಪ್ರತಿಯೊಂದರಲ್ಲೂ ಸಮಾಜಮುಖಿ ಕಾಳಜಿ, ಲೇಪ ಮಾತ್ರ ಹಾಸ್ಯದ್ದು, ವ್ಯಂಗ್ಯದ್ದು, ವಿಡಂಬನೆಯದು. ಅವರೇ ಹೇಳಿದಂತೆ -ಕಣ್ಣೀರ ಕಡಲ ಮೇಲಿನ ನಗೆಯ ಹಾಯಿದೋಣಿ!

    ಈ ನಗೆಯ ಹಾಯಿದೋಣಿಯ ಪಯಣದಲ್ಲಿ ವಿಹರಿಸುತ್ತ ಸಾಗೋಣ. ಚೈನ್ ಸ್ಮೋಕರ್ ಆಗಿದ್ದ ಕೈಲಾಸಂಗೆ ಯಾರೋ ಕೇಳಿದರಂತೆ, ‘ವೈ ಡು ಯು ಸ್ಮೋಕ್ ಸೊ ಕಾನ್ಸ್ಟಂಟ್ಲೀ ಸರ್?’ ಅಂತ- ಅದಕ್ಕೆ ಕೈಲಾಸಂ ‘ಟು ಕಾನ್ಸ್ಟಂಟ್ಲೀ ರಿಮೈಂಡ ಮೈ ಸೆಲ್ಪ್ ದಾಟ್ ಐ ಎಂಡ್ ಅಪ್ ಇನ್ ಸ್ಮೋಕ್ ಸಂ ಡೇ ಆರ್ ದಿ ಅದರ್… ಡಿಯರ್ ಬಾಯ್’ ಎಂದರಂತೆ. ಇನ್ನೊಬ್ಬರು ಕೇಳಿದರು- ‘ಈ ಪಾಟಿ ಸಿಗರೇಟು ಸೇದತೀರಲ್ಲಾ? ಹ್ಯಾವ್ ಯು ಎನಿಥಿಂಗ್ ಟು ಸೇ ಅಬೌಟ್ ಸಿಗರೇಟ್ ಇನ್ ಪರ್ಟಿಕ್ಯುಲರ್?’. ಕೈಲಾಸಂ ಉವಾಚ, ‘ಮೋಸ್ಟ್ ಸರ್ಟನ್ಲೀ… ವಿ ಬರ್ನಿಟ್ ಆನ್ ಇಟ್ಸ್ ಒನ್ ಎಂಡ್ ಅಂಡ್ ಇಟ್ ಬರ್ನ್ಸ್ ಅಸ್ ಫ್ರಮ್ ದಿ ಅದರ್!. ಟಿಟ್ ಫಾರ್ ಪ್ಯಾಂಟ್!. ವೆರಿ ಸಿಂಪಲ್ ಯು ನೋ’.

    ಮಹಾ ಧೂಮಪಾನಿ ಕೈಲಾಸಂ ಸಿಗರೇಟ್ ಹೊಗೆಯಲ್ಲೇ ತಮ್ಮ ಹೆಸರು ಬರೆಯುತ್ತಿದ್ದರೆಂಬ ದಂತಕತೆ ಕೂಡ ಜನಜನಿತ. ‘ಮೇಲೆ ಕಟ್ಟಿಗೆ, ಕೆಳಗೆ ಕಟ್ಟಿಗೆ ಮಧ್ಯದಲ್ಲಿ ಮಲಗಿ ಸಿಗರೇಟ್ ದಮ್ ಎಳೆಯುತ್ತಾ ಹೋಗಿಬಿಡುತ್ತೇನೆ’ ಎನ್ನುತ್ತಿದ್ದರಂತವರು. ಅವರ ಶವಸಂಸ್ಕಾರದ ಸಂದರ್ಭದಲ್ಲಿ ಕಟ್ಟಿಗೆಗೆ ಬೆಂಕಿ ಇಡುವ ಮೊದಲು ಕೈಲಾಸಂ ಶಿಷ್ಯರೊಬ್ಬರು ಕೈಲಾಸಂ ಬಾಯಿಗೆ ಸಿಗರೇಟು ಇಟ್ಟಿದ್ದೂ ಉಂಟಂತೆ!

    ಕೈಲಾಸಂ ಪ್ರತಿಭೆಯ ಜಲಪಾತ ವೇಸ್ಟ್ ಆಗಬಾರದು; ಅದೆಲ್ಲವೂ ದಾಖಲಾಗಿ ಬರವಣಿಗೆ-ಮುದ್ರಣದಲ್ಲಿ ಉಳಿಯಲಿ ಎಂಬ ಸದಾಶಯದಿಂದ ಡಿವಿಜಿಯವರು ಕೈ ಅವರನ್ನು ಕೇಳಿದರಂತೆ, ‘ನೀವೇನು, ಅಮರರೆಂದು ಭಾವಿಸಿದ್ದೀರೋ ಹೇಗೆ?’ ಅದಕ್ಕೆ ಕೈ, ‘ಮುಂದಿನ ತಲೆಮಾರಿನ ಜನರ ಅದೃಷ್ಟದಲ್ಲಿ ನನಗೆ ನಂಬಿಕೆ ಇದೆ’ ಎಂದಿದ್ದರಂತೆ.

    ‘ನೀವು ಸತ್ತ ಮೇಲೆ, ಜನ ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕು?’ ಎಂಬ ಕಾಲ್ಪನಿಕ ಪ್ರಶ್ನೆಯನ್ನು ಕೈಗೆ ಕೇಳಿದರೆ; ಅವರ ಉತ್ತರ, ‘ಒಬ್ಬ ಸತ್-ಪುರುಷ….ಎಂದರೆ ಸಾಕು ಎಂದು ಊಹಿಸಬಹುದಲ್ವೇ’!!

    ನಿಜ! ಇಂದಿಗೂ ಅವರ ಸಾಹಿತ್ಯ ಚರ್ಚೆ, ನಾಟಕ ಪ್ರಯೋಗ-ಪ್ರದರ್ಶನ ಸಾಗಿಯೇ ಇದೆ. ನಟ ಸಿ.ಆರ್.ಸಿಂಹ ಹಾಗೂ ಟಿ.ಎನ್.ನರಸಿಂಹನ್ ಜೋಡಿ ಟಿಪಿಕಲ್ ಟಿ. ಪಿ.ಕೈಲಾಸಂನಂತಹ ಶ್ರೇಷ್ಠ ರಂಗ ಪ್ರಯೋಗವನ್ನು ನಿರ್ವಿುಸಿ ದೇಶ, ವಿದೇಶಗಳಲ್ಲೂ ಕೈಲಾಸಂ ಕೀರ್ತಿ ಹರಡಲು ಕಾರಣರಾಗಿದ್ದಾರೆ. ಅನೇಕ ಯುವ ನಟ-ನಟಿಯರು ಇಂದಿಗೂ ಕೈಲಾಸಂ ನಾಟಕ, ಹಾಡು, ಕಥೆಗಳನ್ನು ರಂಗದ ಮೇಲೆ ತರುತ್ತಾ ತಾವೂ ಸುಖಿಸಿ ಪ್ರೇಕ್ಷಕರಿಗೂ ಖುಷಿ ನೀಡಿ ಕಣ್ಣಂಚಿನಲ್ಲಿ ಹನಿ ಮಡುಗಟ್ಟುವಂತೆ ಮಾಡುತ್ತಿದ್ದಾರೆ. ಇದು ಕೈಲಾಸಂ ನಾಟಕಗಳ ಸತ್ವ ಹಾಗೂ ಶಕ್ತಿ.

    ಇನ್ನು ಜನಪ್ರಿಯ ಪಂಕ್ತಿಗಳನ್ನು ಉಲ್ಲೇಖಿಸುವುದಾದರೆ, ‘ಆಕಸ್ಮಿಕ’ ಚಿತ್ರದ ‘ಹುಟ್ಟಿದರೇ ಕನ್ನಡ ನಾಡಲಿ….’ ಹಾಡಿಗೆ ಬರೋಣ. ರಂಗಕರ್ವಿು, ಚಿತ್ರ ಸಾಹಿತಿ/ಸಂಗೀತಗಾರ ಹಂಸಲೇಖಾ ಹೇಳುವಂತೆ ‘ದಾಸರನು ಕಂಡ ನಮಗೆ ವೈಕುಂಠ ಯಾಕೆ ಬೇಕು?’ ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು?! ಕೈಲಾsome ಸ್ಮರಣೆಗೆ ಇಷ್ಟು ಸಾಕಲ್ಲವೇ?!!

    (ಲೇಖಕರು ಸಾಹಿತಿ)

    ಎರಡನೇ ಹೆಂಡ್ತಿಯಂತೆ ನಾಲ್ಕನೇ ಪತ್ನಿಯನ್ನೂ ಕಟ್ಟಿಗೆಯಿಂದ ಹೊಡೆದು ಕೊಂದ ಪಾನಮತ್ತ ಪತಿ!

    https://www.vijayavani.net/health-advice-from-government-for-ayyappa-devotees/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts