More

    ತಾತ್ವಿಕ ಚಿಂತನೆಯ ವಚನಕಾರ; ಇಂದು ದೇವರ ದಾಸಿಮಯ್ಯ ಜಯಂತಿ

    ತಾತ್ವಿಕ ಚಿಂತನೆಯ ವಚನಕಾರ; ಇಂದು ದೇವರ ದಾಸಿಮಯ್ಯ ಜಯಂತಿ| ಡಾ.ಸ್ವಾಮಿರಾವ ಕುಲಕರ್ಣಿ

    ಬಹು ಪುರಾತನವಾದ ಭಕ್ತಿಪಂಥವು ಜನಸಾಮಾನ್ಯರ ಆಚರಣೆಗೂ ಪಾತ್ರವಾದದು. ಈ ಕಾರಣದಿಂದಾಗಿ ಶಿವಶರಣರು, ಹರಿದಾಸರು ಭಕ್ತಪಂಥದ ಮೂಲಕ ಸಾಮಾಜಿಕ ಚಿಂತನೆ ಮತ್ತು ಮೌಲ್ಯಗಳ ಪ್ರೇರಣೆಗೆ ಕಾರಣರಾದರು. ಭಕ್ತಿಪಂಥ ಧರ್ಮ, ಜಾತಿ, ವರ್ಗ, ಲಿಂಗ ಭೇದಗಳ ಮೇರೆಯನ್ನು ಮೀರಿದೆ. ಇದರಿಂದಾಗಿ ಜನಸಾಮಾನ್ಯರನ್ನು ಆಕರ್ಷಿಸಿತು. ಭಗವಂತ, ಭಕ್ತಿಯನ್ನು ಬದುಕಿಗೆ ಹತ್ತಿರ ತಂದು ಸಾಹಿತ್ಯವನ್ನು ಜನಮುಖಿ, ಸಮಾಜಮುಖಿಯಾಗಿಸಿದ ಕೀರ್ತಿ ಶಿವಶರಣರದು.

    ಶರಣರ ಮಹಾದ್ವಾರ ಎಂಬ ಖ್ಯಾತಿಗೆ ಪಾತ್ರವಾದ ಕಲಬುರಗಿ ಜಿಲ್ಲೆ, ಕನ್ನಡ ಸಾಹಿತ್ಯದ ಉಗಮ ಸ್ಥಾನವಾಗಿರುವಂತೆ ವಚನ ಚಳವಳಿಯ ಬುನಾದಿಯ ತಾಣವೂ ಹೌದು. ಸದ್ಯದ ಸಂಶೋಧನೆ ಪ್ರಕಾರ ಪ್ರಥಮ ಶಿವಶರಣ ಎಂದು ಗುರುತಿಸಲ್ಪಟ್ಟಿರುವ ದೇವರ (ಜೇಡರ) ದಾಸಿಮಯ್ಯ 11ನೇ ಶತಮಾನದ ಮಧ್ಯಭಾಗದಲ್ಲಿದ್ದ ಶಿವಶರಣ. ಕಲಬುರಗಿ ಜಿಲ್ಲೆಯ (ಈಗಿನ ಯಾದಗಿರಿ ಜಿಲ್ಲೆ) ಸುರಪುರ ತಾಲೂಕಿನ ಮುದನೂರು ಈತನ ಜನ್ಮಸ್ಥಳ. ನೇಕಾರ (ದೇವಾಂಗ) ವೃತ್ತಿ ಈತನದು. ಈತನ ಪತ್ನಿ ದುಗ್ಗಳೆಯೂ ಶಿವಶರಣೆ. ಬಸವಣ್ಣ ವಿವಿಧ ವಚನಗಳಲ್ಲಿ ದಾಸಿಮಯ್ಯನನ್ನು ಕೊಂಡಾಡಿರುವುದು ಈತನ ಉನ್ನತ ವ್ಯಕ್ತಿತ್ವಕ್ಕೆ ಸಾಕ್ಷಿ.

    ಭಕ್ತಿಯಿಲ್ಲದ ಬಡವ ನಾನಯ್ಯ

    ದಾಸಯ್ಯನ ಮನೆಯಲು ಬೇಡಿದೆ

    ದಾಸಯ್ಯನ ಶವದಾನವ ನೆರೆಯ ನೋಡಯ್ಯ

    ಬಾಣ ಮಯೂರನಂತೆ ಬಣ್ಣಿಸಬಲ್ಲನೇ

    ದಾಸಿಮಯ್ಯನಂತೆ ಉಣ ಕೊಡಬಲ್ಲೆನೇ?

    ದಾಸನ ವಸ್ತ್ರವ ಬೇಡಿದಾತನೀ ದೇವ

    ಈಶನು ಭಕ್ತನಾಗಿ ಬಂದು ದಾಸನ ವಸ್ತ್ರದ ಬೇಡಿದೆ

    ದಾಸನಂತೆ ತವನಿಧಿಯ ಬೇಡುವನಲ್ಲ

    ಹೀಗೆ ನಾನಾ ರೀತಿಯಲ್ಲಿ ಬಸವಣ್ಣ ದಾಸಿಮಯ್ಯನನ್ನು ಸ್ಮರಿಸಿದ್ದರೆ, ಇತರ ಶಿವಶರಣರು ‘ನೆಯ್ಯ ಬಲ್ಲವರೆಲ್ಲರೂ ದಾಸಿಮಯ್ಯನಾಗಬಲ್ಲರೇ?’ ಎಂಬುದಾಗಿ ದಾಸಿಮಯ್ಯನ ಶಿವಭಕ್ತಿಯನ್ನು ಕೊಂಡಾಡಿದ್ದಾರೆ. ಇಂತಹ ಶಿವಶರಣ ವಚನ ಸಾಹಿತ್ಯದ ಮಹಾಸೌಧಕ್ಕೆ ಭದ್ರ ಬುನಾದಿ ಹಾಕಿದುದು ಚರಿತ್ರಾರ್ಹ ಸಂಗತಿ.

    ದಾಸಿಮಯ್ಯನ ವಚನಗಳಲ್ಲಿ ತಾತ್ವಿಕ ವಿಚಾರ: ಶೈವ, ವೀರಶೈವರಲ್ಲಿ ಶಿವದಾಸ ಪರಂಪರೆ ಇದ್ದು, ಆ ಪರಂಪರೆಯವರನ್ನು ದಾಸಪಂಥ, ದಾಸಕುಲದವರೆಂದು ಕರೆಯುತ್ತಿದ್ದರು ಎಂಬುದಾಗಿ ಎಲ್.ಬಸವರಾಜು ಅವರು ‘ದೇವರ ದಾಸಿಮಯ್ಯನ ವಚನಗಳು’ ಪುಸ್ತಕದ ಪೀಠಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದಾಗಿಯೇ ದೇವರ ದಾಸ (ದೇವರ ದಾಸಿಮಯ್ಯ), ಶಂಕರದಾಸ (ಶಿವಶರಣ), ಈತನ ಪತ್ನಿ ಶಿವದಾಸಿ ಇತ್ಯಾದಿ ಹೆಸರುಗಳು ಇದ್ದವೆಂದು ಅವರು ಹೇಳುತ್ತಾರೆ. ಇಂತಹ ದಾಸಪಂಥಕ್ಕೆ ಸೇರಿದವರು ದಾಸಿಮಯ್ಯ. ಈ ಹಿನ್ನೆಲೆಯಲ್ಲಿ ಅದ್ವೈತ ಕ್ಕಿಂತಲೂ ಭಿನ್ನವಾದ ತಾತ್ವಿಕ ಸಿದ್ಧಾಂತವೊಂದರ ಪ್ರೇರಕ ಈ ದಾಸಿಮಯ್ಯ.

    ದೇವರ ದಾಸಿಮಯ್ಯ ಸೋಹಂ ಎಂದಿದ್ದರೂ ಅದ್ವೈತಿಯಲ್ಲಿ ದಾಸೋಹಂ ತತ್ತ್ವದ ದಾಸೋಹಿ. ಗುರುವಿಗೆ ದಾಸ, ಗುರು ತೋರಿದ ಲಿಂಗಕ್ಕೆ ದಾಸ. ಆ ಶಿವಲಿಂಗ ವ್ಯಾಪಿಸಿರುವ ಜಂಗಮನಿಗೆ ದಾಸ. ಶೈವದಾಸ ಪೀಠಕ್ಕೆ ಸೇರಿದವನು ದಾಸಿಮಯ್ಯ ಎಂಬ ವಿಚಾರವನ್ನು ಅವರು ವ್ಯಕ್ತಪಡಿಸಿದ್ದಾರೆ. (ದೇವರ ದಾಸಿಮಯ್ಯನ ವಚನಗಳು: ಎಲ್.ಬಸವರಾಜು, ಪೀಠಿಕೆ, ಪುಟ16).

    ಇದಕ್ಕೆ ಸಾಕ್ಷಿ ಎನ್ನುವಂತೆ ದಾಸಿಮಯ್ಯನ ಒಂದು ವಚನ

    ದಾಸನ ಕುಲವಾದಾತ ಈಶಂಗಲ್ಲದೆ ಶರಣೆನ್ನ

    ಆಸೆ ಮಾಡ, ನೋಡ ಅನ್ಯ ದೇವಂಗಳಿಗೆ

    ಆಸೆ ಮಾಡ, ನೋಡ ದೇಶದ ಪಿಶಾಚಿಗಳಿಗೆ

    ಆಸೆ ಮಾಡಿದನಾದಡೆ ಅವ ದಾಸನ ಕುಲವಲ್ಲ

    ಅವನನ್ನಕುಲ ಕಾಣಾ ರಾಮನಾಥ.

    ಈ ವಚನ ಶೈವ ದಾಸಕುಲಕ ಪರಂಪರೆಯ ತಾತ್ವಿಕ ಸಿದ್ಧಾಂತವೂ ಆಗಿರುವಂತೆ ದಾಸಿಮಯ್ಯನ ಬದುಕಿನ ನಂಬಿಕೆಯೂ ಆಗಿದೆ. ಪಾಲ್ಗುರಿಕೆ ಬಸವ ಪುರಾಣ ಕೃತಿಯಲ್ಲಿ ದಾಸಿಮಯ್ಯನ ಆಧ್ಯಾತ್ಮಿಕ, ತಾತ್ವಿಕ ಚಿಂತನೆಯ ಆಳ, ಗಂಭೀರ ವಿಚಾರಗಳು ಲಭ್ಯ ಇವೆ. ಆ ಪುರಾಣದ ಪ್ರಕಾರ ಪೋಟ್ಲಿಚೆರುವಿನಲ್ಲಿ 700 ಜೈನ ಬಸದಿಗಳಿದ್ದು, 1000 ಜೈನ ಮುನಿಗಳಿದ್ದರಂತೆ. ಸಿಂಗಬಲ್ಲಹ ಅರಸ, ಈತನ ಪತ್ನಿ ಸುಗ್ಗಲದೇವಿ ಶಿವಭಕ್ತಳು. ತನ್ನ ಗುರು ದಾಸಿಮಯ್ಯನನ್ನು ರಾಜ್ಯಕ್ಕೆ ಕರೆಯಿಸಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ಜಿನಮುನಿಗಳು ಜೈನರಾಜನಿಗೆ ದೂರು ಸಲ್ಲಿಸುತ್ತಾರೆ. ಈ ಸಮಯದಲ್ಲಿ ನಡೆದ ಚರ್ಚೆಯಲ್ಲಿ ಸುಗ್ಗಲದೇವಿ, ದಾಸಿಮಯ್ಯನ ಜತೆ ತರ್ಕ ಮಾಡಿ ಗೆಲ್ಲುವಂತೆ ಜಿನಮುನಿಗಳಿಗೆ ಸೂಚಿಸುತ್ತಾಳೆ. ಜೈನ ಮುನಿಗಳು ಮತ್ತು ದಾಸಿಮಯ್ಯ ಮಧ್ಯೆ ನಡೆದ ವಾದ, ತರ್ಕದ ವಿಚಾರಗಳು ಈ ಪುರಾಣದಲ್ಲಿ ವಿವರವಾಗಿ ನೀಡಲಾಗಿದೆ. ಏಕಮೇವರುದ್ರೋ ವಿಷಯ ಕುರಿತಂತೆ ಮಾತ್ರವಲ್ಲ ಶಿವಸ್ವರೂಪ, ಶಿವ ಮತ್ತು ಶರೀರ (ಅಂಗ-ಲಿಂಗ) ಶಿವಭಕ್ತಿಯ ವ್ಯಾಪ್ತಿ ಇತರ ಪ್ರಶ್ನೆಗಳಿಗೆ ತನ್ನ ತಾತ್ವಿಕ ವಿಚಾರಗಳನ್ನು ಮಂಡಿಸುವ ದಾಸಿಮಯ್ಯ ಕೊನೆಗೆ ಜಿನಮುನಿಗಳನ್ನು ಗೆದ್ದು ಅವರನ್ನು ಶೈವ ಸಂಪ್ರದಾಯಕ್ಕೆ ಸೇರುವಂತೆ ಮಾಡಿದರೆಂಬ ವಿಚಾರ ಮೂಡಿವೆ. ಅಲ್ಲಿ ಬರುವ ಚರ್ಚೆಯ ಅಂಶಗಳನ್ನು ಸಂಗ್ರಹಿಸಿದರೆ- ಸುಖ, ದುಃಖ, ಪಾಪ, ಪುಣ್ಯಗಳಿಗೆ ಆಶ್ರಯವಾಗಿರುವ ಶರೀರವು (ಅಂಗ) ಶಿವನಲ್ಲ, ಜೀವನು ಜೀವಿಯಾಗಲಾರ. ಪಂಚಭೂತಾತ್ಮಕ, ಪಂಚೇಂದ್ರಿಯಾತ್ಮಕ, ದೇಹ ಗುಣಾತ್ಮಕನಾದ ಆತ್ಮನೂ ಶಿವನಲ್ಲ. ಸಕಲದಲ್ಲೂ ಕಪಟನಾಟಕ ಸೂತ್ರಗಳನ್ನು ಪ್ರಕಟಿಸುವ ಚೈತನ್ಯ ಸ್ವಭಾವವೇ ಶಿವನು ಎಂಬ ಸಿದ್ಧಾಂತ, ತತ್ತ್ವ ವಿಚಾರ ವಿಶಿಷ್ಟವಾದದು.

    ಮಣಿಗಣ ಸೂತ್ರದಂತೆ ತ್ರಿನಯನ ನೀನಿಪ್ಪೆಯಯ್ಯ

    ಎಣಿಸುವಡೆ ತನು-ಭಿನ್ನ, ಆತ್ಮನೊಬ್ಬನೇ

    ಅಣುರೇಣು ಮಧ್ಯದಲಿ ಗುಣಭರಿತ ನೀನೆಂದು

    ಮಣಿವುತಿದ್ದೆನಯ್ಯ ರಾಮನಾಥ

    ಶಿವ ಮತ್ತು ಶರೀರ ಸಂಬಂಧವನ್ನು ದಾಸಿಮಯ್ಯ ಕಂಡ ರೀತಿಯದು. ವಿವಿಧ ಮಣಿಗಳನ್ನು ಪೋಣಿಸಿದ ಸರಕ್ಕೆ ಸೂತ್ರ ರೂಪದಲ್ಲಿರುವ ದಾರ ಕಣ್ಣಿಗೆ ಕಾಣದು. ಆದರೆ ಇರುವುದು ಸತ್ಯ. ಇದೇ ರೀತಿ ಆತ್ಮನಲ್ಲಿ ಪರಮಾತ್ಮನ ಇರುವಿಕೆ

    ಶರಿಧಿಯ ಮೇಲೆ ತಿರೆಯ ಕರಗದಂತಿರಿಸಿದೆ

    ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ

    ಇಂತಹ ಉಪಮೆಗಳ ಮೂಲಕ ಅಂಗದಲ್ಲಿರುವ ಲಿಂಗ ಚೈತನ್ಯವನ್ನು ದಾಸಿಮಯ್ಯ ಗುರುತಿಸುತ್ತಾರೆ. ಶಿವಸತ್ವ, ಶಿವಭಕ್ತಿಯನ್ನು ಆಂತರಿಕ ಚೈತನ್ಯ ಎಂದು ವರ್ಣಿಸುವ ದಾಸಿಮಯ್ಯ ಫಲದೊಳಗೆ ತೋರುವ ಸೂರ್ಯನಂತೆ ಸರ್ವರಲ್ಲಿ ಶಿವಚೈತನ್ಯವಿಪ್ಪುದು ಎಂದು ಸಾರುತ್ತಾರೆ. ಇಂತಹ ಶಿವ ಚೈತನ್ಯವನ್ನು ಜಾಗೃತಗೊಳಿಸುವವನೆ ಗುರು.

    ಭಕ್ತಿಯ ಬಗೆಗೆ ಹಲವು ಬಗೆಯ ದರ್ಶನವನ್ನು ದಾಸಿಮಯ್ಯ ವಚನಗಳಲ್ಲಿ ಕಾಣಬಹುದಾಗಿದೆ. ಭಕ್ತಿ ಒಂದು ಪ್ರಮುಖ ತತ್ತ್ವ, ಸಿದ್ಧಾಂತವಾಗಿ ದಾಸಿಮಯ್ಯ ಕಂಡುಕೊಂಡಿದ್ದಾರೆ. ನಿರಾಕರಣೆ ಅವರ ಭಕ್ತಿ ತತ್ತ್ವದ ಮೂಲ ತಳಹದಿ.

    ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ, ಹಿರದಪ್ಪ ರಾಜ್ಯವನಿತ್ತಡೆ ಒಲ್ಲೆ ಎನ್ನುವ ನಿಷ್ಠಾಪೂರ್ಣ ಭಕ್ತಿಯವರದು.

    ಭಕ್ತಿಯ ಬಲ್ಲವರು ನೆಚ್ಚಿ ಮೆಚ್ಚಿ

    ಮನವನೊಚ್ಚತಗೊಡುವರು

    ಭಕ್ತಿಯನರಿಯ ಬದಲು ಪಾಪಿ ಜೀವಿಗಳು

    ಕಚ್ಚುವುದು, ಬೊಗಳುವುದು ರಾಮನಾಥಾ

    ಭಕ್ತಿಯ ಗಂಭೀರ ಪರಾಮರ್ಶೆ ಇಲ್ಲಿದೆ. ಡಾಂಭಿಕ, ಸೋಗುತನವನ್ನು ನೇರ, ನಿಷ್ಠುರವಾಗಿ ಟೀಕಿಸಿದ್ದಾರೆ, ಖಂಡಿಸಿದ್ದಾರೆ.

    ಪರವಧುವ ನೆನೆಯದೆ, ಪರಧನವ ತುಡುಕದೆ

    ಪರದೈವದಿಚ್ಛೆ ಪಡೆಯದೆ

    ಗುರುಲಿಂಗ ಜಂಗಮಕ್ಕೆ ವರದಾಸನಾದಾತ ನೀ

    ಧರೆ ಮೂರಕ್ಕೆ ಗುರುವಾಗಿಪ್ಪ ನೈ ರಾಮನಾಥಾ

    ಸಾರ್ವತ್ರಿಕ, ಸಾರ್ವಕಾಲಿಕ ವಿಚಾರಗಳೇ ದಾಸಿಮಯ್ಯ ವಚನಗಳಲ್ಲಿ ಮೂಡಿ ನಿಂತಿರುವ ತಾತ್ವಿಕ ಸಿದ್ಧಾಂತವಾಗಿವೆ. ಶ್ರದ್ಧೆ ಮತ್ತು ಶುದ್ಧತೆ ವ್ಯಕ್ತಿಯ, ವ್ಯಕ್ತಿತ್ವದ ಮುಖ್ಯ ಲಕ್ಷಣ. ಚರಿತ್ರೆಗಿಂತ ಚಾರಿತ್ರ್ಯ ಮುಖ್ಯ ಎಂಬುದು ದಾಸಿಮಯ್ಯ ತತ್ತ್ವ. ವಂಚನೆ, ಮೋಸ, ಡಾಂಭಿಕ ಗುಣಗಳಿಂದ ಯಾವ ಕಾಲಕ್ಕೂ ಏನನ್ನೂ ಸಾಧಿಸಲಾಗದೆಂಬುದು ದಾಸಿಮಯ್ಯ ತಾತ್ವಿಕ ದೃಷ್ಟಿಕೋನ. ಈ ಹಿನ್ನೆಲೆಯಲ್ಲಿ ದಾಸಿಮಯ್ಯ ಕೇವಲ ಶಿವಭಕ್ತನಾಗಿ ಉಳಿಯದೆ ಸಮಾಜ, ವ್ಯಕ್ತಿಯ ಹಿತಚಿಂತನೆಗಾಗಿ ಇಹ ಪರಗಳೆರಡಕ್ಕೂ ಬೇಕಾದ ತಾತ್ವಿಕ ಚಿಂತನೆಯನ್ನು ಹೇಳಿದ ವಿಶಿಷ್ಟ ವ್ಯಕ್ತಿ, ಸಮಾಜಚಿಂತಕ, ಸಮಾಜಸುಧಾರಕ. ಇದೇ ದಾಸಿಮಯ್ಯ ತಾತ್ವಿಕ ಚಿಂತನೆಯ ವೈಶಿಷ್ಟ್ಯ.

    (ಲೇಖಕರು ಹಿರಿಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts