More

    ರಾತ್ರಿ ಖೆಡ್ಡಾ ತೋಡಿ ಹಗಲಿನಲ್ಲಿ ತಾನೇ ಬಿತ್ತು ಕಾಂಗ್ರೆಸ್ಸು!

    ರಾತ್ರಿ ಖೆಡ್ಡಾ ತೋಡಿ ಹಗಲಿನಲ್ಲಿ ತಾನೇ ಬಿತ್ತು ಕಾಂಗ್ರೆಸ್ಸು!ಕೇಂದ್ರ ಸರ್ಕಾರವನ್ನು ಆಯ್ಕೆ ಮಾಡುವ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಮೂಲಕ ಭಾರತವನ್ನು ಜೋಡಿಸುವ ತನ್ಮೂಲಕ ತನ್ನನ್ನು ಜನ ಒಪ್ಪಿಕೊಳ್ಳುವಂತೆ ಮಾಡುವ ಹರಸಾಹಸದಲ್ಲಿದ್ದಾರೆ. ಅವರನ್ನು ತಪಸ್ವಿ ಎಂದು ಬಿಂಬಿಸಲು ಅತ್ತ ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ ಈ ವೇಳೆಗೆ ಸರಿಯಾಗಿ ಅಂತಾರಾಷ್ಟ್ರೀಯ ಟೂಲ್ಕಿಟ್​ಗಳು ಚಟುವಟಿಕೆ ಆರಂಭಿಸಿಬಿಟ್ಟಿವೆ. ಬಿಬಿಸಿ ನರೇಂದ್ರ ಮೋದಿಯವರ ಕುರಿತಂತೆ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆಮಾಡಿ ಇಪ್ಪತ್ತು ವರ್ಷಗಳ ಹಿಂದಿನ ಗಾಯವನ್ನು ಮತ್ತೆ ಹಸಿಗೊಳಿಸುವ ಪ್ರಯತ್ನ ಮಾಡಿದೆ. ಎಡಪಂಥೀಯ ಬುದ್ಧಿಜೀವಿಗಳು ಮತ್ತು ಸ್ವತಃ ಕಾಂಗ್ರೆಸ್ಸಿಗರು ಅದೆಷ್ಟು ಸಂಭ್ರಮಿಸಿದ್ದಾರೆ ಎಂದರೆ ಒಂದಿಡೀ ದಿನ ಅವರೆಲ್ಲ ಭಾರತ್ ಜೋಡೋ ಯಾತ್ರೆಯನ್ನು ಮರೆತು ಈ ಸಾಕ್ಷ್ಯಚಿತ್ರದ ವಿಚಾರವನ್ನೇ ರ್ಚಚಿಸುವ ಪ್ರಯತ್ನ ಮಾಡಿದ್ದಾರೆ. ಪೀಠಿಕೆ ಇಷ್ಟು ಸಾಕೆನಿಸುತ್ತದೆ. ಬಿಬಿಸಿಯ ಈ ದುಸ್ಸಾಹಸದ ಹಿಂದಿನ ಕಾರಣಗಳನ್ನು ಸ್ವಲ್ಪ ರ್ಚಚಿಸೋಣ.

    ನಿಮಗೆಲ್ಲ ಪಂಜಾಬಿನ ರೈತರ ಪ್ರತಿಭಟನೆ ನೆನಪಿರಬೇಕು. ರೈತರ ಏಳ್ಗೆಗೋಸ್ಕರ ನರೇಂದ್ರ ಮೋದಿಯವರು ಕನಸು ಕಟ್ಟಿ ಜಾರಿಗೆ ತಂದ ಮೂರು ಕಾನೂನುಗಳನ್ನು ವಿರೋಧಿಸಿ ಆ ಮಂದಿ ಬೀದಿಗಿಳಿದಿದ್ದರು. ಅಲ್ಲಿ ರೈತರಿಗಿಂತ ಹೆಚ್ಚು ಭಾರತವನ್ನು ವಿರೋಧಿಸುವ ಖಲಿಸ್ತಾನಿಗಳೇ ಇದ್ದರು. ಅವರಿಗೆ ಊಟ-ತಿಂಡಿ ತಲುಪಿಸುವುದರಿಂದ ಹಿಡಿದು ಕಾಲಿಗೆ ಮಸಾಜು ಮಾಡಿ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಂಜಿಸುವ ವ್ಯವಸ್ಥೆಯನ್ನೂ ಕೆಲವರು ಮಾಡಿದ್ದರು. ಇವರಿಗೆ ಸಹಾಯ ಮಾಡಲೆಂದೇ ಒಂದು ಟೂಲ್ಕಿಟ್ ಗ್ಯಾಂಗ್ ಸಿದ್ಧವಾಗಿತ್ತು. ಕೆನಡಾ ಅಧ್ಯಕ್ಷರೂ ಅವರ ಬೆಂಬಲಕ್ಕೆ ನಿಂತಿದ್ದರು. ಮೋದಿಯವರು ಈ ಇಡಿಯ ಪ್ರತಿಭಟನೆಯನ್ನು ಗಮನಕ್ಕೆ ತಂದುಕೊಳ್ಳಲಿಲ್ಲವೆಂದಾದಾಗ ಜಗತ್ತಿನ ಜನರೆದುರು ಅವರನ್ನು ದುರ್ಬಲರೆಂದು ಬಿಂಬಿಸುವ ಮತ್ತು ಪ್ರಜಾವಿರೋಧಿ ಎಂದು ಸಾಬೀತು ಮಾಡುವ ಪ್ರಯತ್ನಕ್ಕೆ ಟೂಲ್ಕಿಟ್ ಚುರುಕಾಗಿ ಕೆಲಸ ಮಾಡಿತು. ಬಹುಶಃ ಸಿಎಎ ನಂತರದ ಎರಡನೇ ಸೋಲು ಇದು ಮೋದಿ ಸರ್ಕಾರಕ್ಕೆ. ಈಗ ಇದೇ ಟೂಲ್ಕಿಟ್ ಮತ್ತೆ ಕ್ರಿಯಾಶೀಲವಾಗಿದೆ. ಸದ್ಯಕ್ಕೆ ಬಿಬಿಸಿ 20 ವರ್ಷಗಳ ಹಳೆಯ ಗೋರಿಯನ್ನು ಕೆದಕಿ ಹೆಣವನ್ನು ಹೊರತೆಗೆಯುವ ಪ್ರಯತ್ನ ಮಾಡಿದೆ. ಸ್ವಲ್ಪ ದಿನಗಳಲ್ಲೇ ನ್ಯೂಯಾರ್ಕ್ ಟೈಮ್್ಸ, ವಾಷಿಂಗ್​ಟನ್ ಪೋಸ್ಟ್ ಮತ್ತು ಅಲ್​ಜಜೀರಾಗಳು ಇದರ ಬೆಂಬಲಕ್ಕೆ ನಿಂತು ಭಾರತವಿರೋಧಿ ವಿಚಾರಧಾರೆಯನ್ನು ಬಲವಾಗಿ ಪ್ರತಿಪಾದಿಸಲು ನಿಂತರೆ ಅಚ್ಚರಿ ಪಡಬೇಕಿಲ್ಲ. 2024 ಹತ್ತಿರವಾಗುತ್ತಿದ್ದಂತೆ ಇವರ ಅಬ್ಬರ ಎಷ್ಟು ಏರಲಿದೆ ಎಂದರೆ ಒಂದೇ ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವೆನಿಸಿಕೊಳ್ಳುತ್ತದೆ ಎಂಬ ಸಿದ್ಧಾಂತವನ್ನು ಅವರು ಕಣ್ಣೆದುರೇ ಸಾಬೀತುಪಡಿಸಲಿದ್ದಾರೆ!

    ಈ ಸಾಕ್ಷ್ಯಚಿತ್ರದ ಮೂಲಕ ಬಿಬಿಸಿ ಒಂದೇ ಬಾರಿಗೆ ಎರಡು ಹಕ್ಕಿಗಳ ಮೇಲೆ ಗುರಿ ಇಟ್ಟಿದೆ. ಮೋದಿ ಮೇಲ್ನೋಟಕ್ಕೆ ಕಾಣುವಂತಹ ಗುರಿಯಾದರೆ ಎರಡನೆಯ ಹೊಡೆತ ಬ್ರಿಟನ್ನಿನ ಈಗಿನ ಪ್ರಧಾನಿ ಮತ್ತು ಹಿಂದೂ ಮೂಲದವರಾಗಿರುವ ರಿಷಿ ಸುನಕರ ಮೇಲೆ. ತಮ್ಮ ಹಿಂದೂ ಹಿನ್ನೆಲೆಯ ಕುರಿತಂತೆ ಅಪಾರವಾದ ಶ್ರದ್ಧೆಯಿರುವ ರಿಷಿ ಸುನಕರು ಅದನ್ನು ಮತ್ತೆ ಮತ್ತೆ ಹೇಳಿಕೊಳ್ಳುತ್ತಲೇ ಇರುತ್ತಾರೆ. 200 ವರ್ಷಗಳ ಕಾಲ ಭಾರತವನ್ನು ಆಳಿ ಇಂದಿಗೂ ಭಾರತ ತಮ್ಮಡಿಯಾಳಾಗಿಯೇ ಇರಬೇಕೆಂದು ಭಾವಿಸುವ ವಸಾಹತುಶಾಹಿ ಮಂದಿಗೆ ಹಿಂದೂ ಮೂಲದವನೊಬ್ಬ ತಮ್ಮನ್ನು ಆಳುವುದನ್ನು ಸಹಿಸಿಕೊಳ್ಳುವುದು ಸಾಧ್ಯವೆಂದುಕೊಂಡಿದ್ದೀರೇನು? ಈ ಕಾರಣಕ್ಕಾಗಿಯೇ ಬಿಬಿಸಿಯ ಈ ವರದಿ ಬಂದೊಡನೆ ಬ್ರಿಟನ್ನಿನಲ್ಲಿ ಪಾಕಿಸ್ತಾನ ಮೂಲದ ಸಂಸತ್ ಸದಸ್ಯನೊಬ್ಬ ರಿಷಿ ಸುನಕರನ್ನು ಗುರಿಮಾಡಿ ಪ್ರಶ್ನೆ ಕೇಳಿದ್ದಾನೆ. ಉತ್ತರವನ್ನು ಬಹಳ ವಿಸ್ತರಿಸದ ರಿಷಿ ಯಾವುದೇ ವ್ಯಕ್ತಿಯ ಮೇಲೆ ಈ ರೀತಿ ಮಸಿ ಬಳಿಯುವುದನ್ನು ಈ ಸಂಸತ್ತು ಒಪ್ಪಿಕೊಳ್ಳಲಾರದು ಎಂದು ಹೇಳುವ ಮೂಲಕ ಸೂಕ್ತವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅಲ್ಲಿಗೆ ಈ ಉದ್ದೇಶದಲ್ಲಿ ಬಿಬಿಸಿ ಹಿನ್ನಡೆ ಕಂಡಂತಾಯ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಈ ಚಾನೆಲ್ಲಿಗೆ ಮೋದಿಯವರ ಹೆಸರನ್ನು ಹಾಳುಗೆಡಹುವುದು ಈ ಸಾಕ್ಷ್ಯಚಿತ್ರದ ಮೂಲಕ ಸುಲಭವಾಗಬಹುದು. ಎನ್​ಡಿಟಿವಿ ಈಗ ಅದಾನಿ ಕೈಸೇರಿರುವುದರಿಂದ ಎಡಪಂಥೀಯರ ಪಾಲಿಗೆ ಉಳಿದಿರುವ ಅಸ್ತ್ರ ಬಿಬಿಸಿಯೇ. ರಷ್ಯಾ-ಯೂಕ್ರೇನ್ ಯುದ್ಧ ಸಮಯದಲ್ಲಿ ಭಾರತ ಆರ್ಥಿಕವಾಗಿ ತನ್ನ ಸ್ವರೂಪವನ್ನು ಕಾಪಾಡಿಕೊಂಡಿರುವ ರೀತಿ ಮತ್ತು ವ್ಯಾಕ್ಸಿನ್ ಮೈತ್ರಿಯ ಮೂಲಕ ಜಗತ್ತಿನ ಪ್ರೀತಿ ಗಳಿಸಿರುವ ರೀತಿ ನೋಡಿದರೆ ಅದಾಗಲೇ ಜಾಗತಿಕ ಮಟ್ಟದಲ್ಲಿ ಅದು ಬ್ರಿಟನ್ನನ್ನು ಮೀರಿಸಿ ಬೆಳೆದಾಗಿದೆ. ಇನ್ನೀಗ ತನ್ನ ಪ್ರಭಾವ ಬಳಸಿ ಡಾಲರ್​ವುುಕ್ತ ವ್ಯವಹಾರಕ್ಕೆ ಭಾರತ ಪ್ರಯತ್ನ ಹಾಕುತ್ತಿರುವುದನ್ನು ಕಂಡರೆ ಅಮೆರಿಕವೂ ಎಚ್ಚೆತ್ತುಕೊಳ್ಳಬೇಕಾದಂತಹ ಸ್ಥಿತಿ ಇದೆ. ಈ ಹೊತ್ತಿನಲ್ಲಿ ಮೋದಿಯವರನ್ನು ಹಿಟ್ಲರ್​ನಂತೆ ಜನಾಂಗೀಯದ್ವೇಷಿ ಎಂದು ಬಿಂಬಿಸುವುದರ ಮೂಲಕ ಜಾಗತಿಕವಾಗಿ ಅವರನ್ನು ಏಕಾಂಗಿಯಾಗಿಸುವ ಪ್ರಯತ್ನ ಇಲ್ಲಿಂದ ಆರಂಭವಾಗಿರಬಹುದೆನಿಸುತ್ತದೆ. ಈ ಇಡಿಯ ಸಾಕ್ಷ್ಯಚಿತ್ರದಲ್ಲಿ ಮೋದಿಯ ವಿರುದ್ಧ ಆರೋಪಗಳ ಸರಮಾಲೆ ಮಾಡಿರುವ ಬ್ರಿಟನ್ನಿನ ಮಾಜಿ ಕಾರ್ಯದರ್ಶಿ ಜಾಕ್ ಸ್ಟ್ರಾ ಈ ಹಿಂದೆ ಇರಾಕ್​ನಲ್ಲಿ ಸಮೂಹ ನಾಶದ ಶಸ್ತ್ರಾಸ್ತ್ರಗಳಿವೆ ಎಂಬ ಸುಳ್ಳನ್ನೂ ಹರಿಬಿಟ್ಟಿದ್ದರು. ಆನಂತರ ಸದ್ದಾಂ ಹುಸೇನನನ್ನು ಮನುಕುಲದ ವಿರೋಧಿ ಎಂದು ಬಿಬಿಸಿ, ನ್ಯೂಯಾರ್ಕ್ ಟೈಮ್್ಸ, ವಾಷಿಂಗ್​ಟನ್ ಪೋಸ್ಟ್​ಗಳೆಲ್ಲ ಹೇಗೆ ಬಿಂಬಿಸಿದವೆಂದರೆ ಅವನ ಜನರೇ ಅದನ್ನು ವಿರೋಧಿಸುತ್ತಿದ್ದಾಗ್ಯೂ ಅವನನ್ನು ನಾಶಗೊಳಿಸಲು ಅಮೆರಿಕಾಕ್ಕೆ ಅಸ್ತ್ರ ಸಿಕ್ಕಿತು. ಈ ವಿಚಾರ ಹೇರಿಕೆಯ ಸಿದ್ಧಾಂತವನ್ನು ಪಶ್ಚಿಮದ ರಾಷ್ಟ್ರಗಳು ಎಷ್ಟು ಸೂಕ್ಷ್ಮವಾಗಿ ಬಳಸಿಕೊಳ್ಳುತ್ತವೆಂದರೆ ತಮಗಾಗದ ವ್ಯಕ್ತಿಯನ್ನು ನಾಶಮಾಡಲು ಬೇಕಾದ ಅಸ್ತ್ರವನ್ನು ರೂಪಿಸಿಕೊಳ್ಳುತ್ತವೆ. ಇದು ಈ ಪ್ರಯತ್ನದ ಮೊದಲ ಭಾಗ. ಹಾಗೇ ಸುಮ್ಮನೆ ಚುನಾವಣೆಗೂ ಮುನ್ನ ಡೊನಾಲ್ಡ್ ಟ್ರಂಪ್ ವಿರುದ್ಧವೂ ಇದೇ ಬಗೆಯ ಸುಳ್ಳುಗಳನ್ನು ಹರಿಬಿಟ್ಟು ಅವರ ವಿರುದ್ಧ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದರಲ್ಲ, ಮೋದಿಯವರ ಮೇಲೂ ಅದೇ ಪ್ರಯತ್ನ ಆರಂಭವಾಗಿದೆ ಅಷ್ಟೇ!

    ಹಾಗಂತ ಈ ಸಾಕ್ಷ್ಯಚಿತ್ರದ ಉದ್ದೇಶ ಇಷ್ಟೇ ಅಲ್ಲ. ಚುನಾವಣೆಗೆ ಮುನ್ನ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ನರೇಂದ್ರ ಮೋದಿಯವರು ಹಿಂದುಳಿದ ಪಸ್ಮಂಡಾ ಮುಸಲ್ಮಾನರನ್ನು ಮತಗಳಿಕೆಯ ಚಿಂತನೆಯನ್ನು ಬಿಟ್ಟು ಒಲಿಸಿಕೊಳ್ಳಿ ಎಂದು ಹೇಳಿದ ಮಾತು ಮುಸ್ಲಿಮರಲ್ಲಿ ಬಲುದೊಡ್ಡ ಸಂಚಲನ ಉಂಟುಮಾಡಿದೆ. ಮೇಲ್ವರ್ಗದ ಅಶ್ರಫ್​ಗಳ ತುಳಿತಕ್ಕೊಳಗಾಗಿ ನರಳುತ್ತಿರುವ ಈ ದಲಿತ ಮುಸಲ್ಮಾನರಿಗೆ ಮೋದಿಯೊಬ್ಬರೇ ಆಶಾಕಿರಣ. ಏಕೆಂದರೆ ಉಳಿದೆಲ್ಲ ಪಕ್ಷಗಳೂ ಈ ಅಶ್ರಫ್​ಗಳ ಮಾತಿನಂತೆ ನಡೆಯುತ್ತವೆ. ಮೋದಿ ಮಾತ್ರ ಅಧಿಕಾರಾವಧಿಯುದ್ದಕ್ಕೂ ಗುಜರಾತಿನ ಬೊಹ್ರಾಗಳನ್ನು ಮತ್ತು ಉತ್ತರ ಭಾರತದಲ್ಲಿ ವ್ಯಾಪಕವಾಗಿರುವ ಪಸ್ಮಂಡಾಗಳನ್ನು ಹತ್ತಿರದಲ್ಲಿಟ್ಟುಕೊಂಡಿದ್ದಾರೆ. ಇದು 2024ರ ಚುನಾವಣೆಯಲ್ಲಿ ಸಮೀಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಬದಲಾಯಿಸಬಲ್ಲದು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗೆ ಸಿಗಬಹುದಾಗಿರುವ ಅಸ್ತ್ರ ಈ ಸಾಕ್ಷ್ಯಚಿತ್ರವೇ. ಈ ಮೂಲಕ ಹಿಂದೂ ಮತ್ತು ಮುಸಲ್ಮಾನರ ಒಡಕನ್ನು ಹೆಚ್ಚು ಮಾಡಿ, ಮುಸಲ್ಮಾನರು ಶಾಶ್ವತವಾಗಿ ತನ್ನ ಮತದಾರರಾಗಿರುವಂತೆ ನೋಡಿಕೊಳ್ಳುವ ಪ್ರಯತ್ನ ಅದರದ್ದು. ಭಾರತ್ ಜೋಡೋ ಎಂದು ತಿರುಗಾಡುತ್ತಿರುವ ಕಾಂಗ್ರೆಸ್ಸಿಗರು ಒಳಗಿಂದೊಳಗೆ ಭಾರತವನ್ನು ತುಂಡು ಮಾಡುತ್ತಿರುವ ರೀತಿ ಇದು.

    ಇಷ್ಟಕ್ಕೂ ಈ ಸಾಕ್ಷ್ಯಚಿತ್ರ ಎಷ್ಟು ಭಯಾನಕವಾಗಿದೆ ಎಂದರೆ 20 ವರ್ಷಗಳ ಹಿಂದೆ ನಡೆದ ಈ ಘಟನೆಯ ಕುರಿತಂತೆ ಬ್ರಿಟನ್ನು ತಾನೇ ವಿಚಾರಣೆ ಮತ್ತು ತನಿಖೆ ನಡೆಸಿತ್ತಂತೆ. ಹೀಗೊಂದು ತನಿಖೆಯನ್ನು ಮತ್ತೊಂದು ರಾಷ್ಟ್ರದಲ್ಲಿ ನಡೆಸುವ ಅಧಿಕಾರವನ್ನು ಇಂಗ್ಲೆಂಡಿಗೆ ಕೊಟ್ಟಿದ್ದಾದರೂ ಯಾರು? ಸರ್ಕಾರಕ್ಕೆ ಅರಿವಾಗದೇ ರಾಷ್ಟ್ರವೊಂದರಲ್ಲಿ ಗುಪ್ತ ವಿಚಾರಣೆ ನಡೆಸುತ್ತದೆ ಎಂದಾದರೆ ಅದು ತನ್ನನ್ನು ತಾನು ಆಳುವ ರಾಷ್ಟ್ರ ಎಂದೇ ಭಾವಿಸಿದೆ ಎಂದರ್ಥವಲ್ಲವೇನು? ಇಷ್ಟೂ ವರ್ಷ ಮಾತನಾಡದೆ ಈಗ ಏಕಾಕಿ ಯಾರಿಗೂ ಸಿಗದ ಈ ಮಾಹಿತಿಯನ್ನು ಬಿಬಿಸಿ ತಾನು ಪಡೆದು ಜನರ ಮುಂದಿರಿಸಿದ್ದಾದರೂ ಹೇಗೆ? ಇಷ್ಟಕ್ಕೂ ಎರಡು ಭಾಗಗಳ ಈ ಸಾಕ್ಷ್ಯಚಿತ್ರದಲ್ಲಿ ಬಿಬಿಸಿಯ ಚಿಂತನಾಲಹರಿಯನ್ನು ವಿರೋಧಿಸುವವರ ಒಂದಾದರೂ ಮಾತುಗಳಿಲ್ಲ. ಇಡಿಯ ಈ ಪ್ರಕರಣವನ್ನು ಹತ್ತಾರು ವರ್ಷಗಳ ಕಾಲ ವಿಚಾರಣೆ ನಡೆಸಿ ಮೋದಿಯವರಿಗೆ ಕ್ಲೀನ್​ಚಿಟ್ ಕೊಟ್ಟ ಸುಪ್ರೀಂಕೋರ್ಟ್​ನ ಕುರಿತಂತೆ ಮಾತಿಲ್ಲ. ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡವರೇ ಸುಳ್ಳು ಹೇಳಿದ್ದಾರೆ ಎಂದು ಸಾಬೀತಾದುದರ ಕುರಿತಂತೆ ಒಂದು ಮಾತಿಲ್ಲ. ಅಷ್ಟೇ ಅಲ್ಲ, ಈ ವಿಚಾರಧಾರೆಯ ಸಮರ್ಥನೆಗೆ ಬಿಬಿಸಿ ಯಾರನ್ನು ಸಂದರ್ಶಿಸಿದೆಯೋ ಅವರ್ಯಾರೂ ನೇರವಾಗಿ ಹೇಳಿಕೆ ಕೊಡಬಲ್ಲಷ್ಟು ಹತ್ತಿರವಿದ್ದವರೇ ಅಲ್ಲ. ನಮ್ಮ-ನಿಮ್ಮಂತೆ ಪತ್ರಿಕೆಗಳಲ್ಲಿ ಓದಿಯೋ ಆನಂತರ ತೊಂದರೆಗೊಳಗಾದವರನ್ನು ಮಾತನಾಡಿಸಿಯೋ ವಿಚಾರ ಅರಿತವರು. ತನಿಖೆಯಲ್ಲಿ ಪಾಲ್ಗೊಂಡ ಅಧಿಕಾರಿಗಳಾಗಲೀ ವಿಚಾರಣೆಯಲ್ಲಿದ್ದ ವಕೀಲರಾಗಲೀ ಇಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಅಂದರೆ ಬಿಬಿಸಿ ತನ್ನ ಅಭಿಪ್ರಾಯವನ್ನು ನಮ್ಮ ಮೇಲೆ ಹೇರಲಿಕ್ಕೆಂದು ವಾಮಮಾರ್ಗವನ್ನೇ ಬಳಸಿಕೊಂಡಿದೆ. ಹೀಗಾಗಿಯೇ ಇದು ಮೂಲೆಗುಂಪು ಮಾಡಲೇಬೇಕಾದಂತಹ ಸರಕು.

    ಇನ್ನೊಂದು ಅಚ್ಚರಿ ಏನು ಗೊತ್ತೇ? ಸಬರ್​ವುತಿ ರೈಲಿನಲ್ಲಿ 59 ಕರಸೇವಕರನ್ನು ಮುಸಲ್ಮಾನರು ಕೊಂದು ಹಾಕಿದ್ದುದರ ಕುರಿತಂತೆ ಈ ಸಾಕ್ಷ್ಯಚಿತ್ರದಲ್ಲಿ ಎಳ್ಳಷ್ಟೂ ದುಃಖ ವ್ಯಕ್ತಪಡಿಸಲಾಗಿಲ್ಲ. ಉಲ್ಟಾ ಈ ಪ್ರಕರಣದಲ್ಲಿ ಮುಸಲ್ಮಾನರ ಪಾತ್ರವಿಲ್ಲ ಎಂದು ಸಾಬೀತುಪಡಿಸುವ ಪ್ರಯತ್ನ ಮಾಡಲಾಗಿದೆ. ಹೀಗಾಗಿಯೇ ಈ ಸಾಕ್ಷ್ಯಚಿತ್ರ ಅರ್ಧಸತ್ಯವನ್ನಲ್ಲ, ಪೂರ್ತಿ ಸುಳ್ಳನ್ನೇ ಹೇಳುವಂಥದ್ದು ಎಂದು ಎಂಥವನಿಗೂ ಅರಿವಾಗುತ್ತದೆ.

    ಇಡಿಯ ಪ್ರಕರಣದಲ್ಲಿ ಅಸಹ್ಯವೆನಿಸಿದ್ದೇನು ಗೊತ್ತೇ? ಈ ಸಾಕ್ಷ್ಯಚಿತ್ರವನ್ನು ಬೆಂಬಲಿಸಿ ಮೋದಿಯನ್ನು ಇರಿಯುವ ಭರದಲ್ಲಿ ಕಾಂಗ್ರೆಸ್ಸು ಬ್ರಿಟೀಷರ ವಸಾಹತುಶಾಹಿ ಭಾವನೆಗಳಿಗೆ ರೆಕ್ಕೆ-ಪುಕ್ಕ ಕಟ್ಟಿಕೊಡುವ ಯತ್ನ ಮಾಡಿದೆ. ಅವರು ಆಳುವವರು ಮತ್ತು ನಾವು ಆಳಿಸಿಕೊಳ್ಳುವವರು ಎಂಬ ಭಾವನೆಯನ್ನು ಇದು ಎತ್ತಿಹಿಡಿಯುತ್ತಿದೆಯಲ್ಲದೇ ಭಾರತೀಯರು ಬಿಳಿಯರ ಗುಲಾಮರು ಎಂದು ಮತ್ತೆ ಸಾಬೀತುಪಡಿಸುವ ಯತ್ನ ಮಾಡುತ್ತಿದೆ. ಇಲ್ಲವಾದಲ್ಲಿ ಸುದೀರ್ಘ ವಿಚಾರಣೆ ನಡೆದು ಯಾವುದನ್ನು ಭಾರತೀಯ ಸವೋಚ್ಚ ನ್ಯಾಯಾಲಯ ತೀರ್ಪಾಗಿ ಕೊಟ್ಟಿತ್ತೋ ಅದನ್ನು ಕಾಂಗ್ರೆಸ್ಸು ವಿರೋಧಿಸಿ ಬಿಬಿಸಿಯ ಹೇಳಿಕೆಯನ್ನು ಸಮರ್ಥಿಸುತ್ತದೆ ಎಂದರೆ ಕಾಂಗ್ರೆಸ್ಸಿಗೆ ನಮ್ಮ ನ್ಯಾಯಾಲಯಗಳು ಹೆಚ್ಚೋ ಅಥವಾ ಇಂಗ್ಲೀಷ್ ಟಿವಿ ಚಾನೆಲ್ಲೋ? ನೆನಪಿರಲಿ, ಇತ್ತೀಚೆಗೆ ಈ ತೀರ್ಪಿನ ಮರು ಪರಿಶೀಲನೆಯ ಕುರಿತಂತೆ ಹಾಕಿರುವ ಅರ್ಜಿಯನ್ನೂ ನ್ಯಾಯಾಲಯ ವಜಾಗೊಳಿಸಿದೆ. ಬಿಳಿಯರ ಈ ಅಭಿಪ್ರಾಯ ಹೇರಿಕೆ ಭಾರತೀಯರ ಪಾಲಿಗೆ ಹೊಸತೇನಲ್ಲ. ಬ್ರಾಹ್ಮಣರು ಉಳಿದವರನ್ನು ಶೋಷಿಸಿದರು, ಭಾರತದಲ್ಲಿ ಶಿಕ್ಷಣ ಎಲ್ಲರಿಗೂ ಸಮಪ್ರಮಾಣದಲ್ಲಿ ದೊರೆಯುತ್ತಿರಲಿಲ್ಲ, ನ್ಯಾಯವ್ಯವಸ್ಥೆ ಇರಲಿಲ್ಲ, ಭಾರತೀಯರು ಹೀನ, ದೀನರು, ದರಿದ್ರರೂ ಆಗಿದ್ದರು ಎಂಬೆಲ್ಲ ಅಭಿಪ್ರಾಯಗಳನ್ನು ನಾವು ನಂಬುವಂತೆ ಮಾಡಿದ್ದಲ್ಲದೇ ಇಂದಿಗೂ ರೊಮಿಲಾ ಥಾಪರ್​ರಂಥವರು ಅದನ್ನೇ ಹೇಳುವಂತೆ ಮಾಡಿಟ್ಟಿರುವವರು ಅವರೇ. ಮುಸಲ್ಮಾನರೇನು ಖುಷಿಪಡಬೇಕಿಲ್ಲ. ಮೂಲ ಇಸ್ಲಾಂನ ವಿರುದ್ಧ ತಮ್ಮ ಬಳಕೆಗೆ ಬೇಕಾಗುತ್ತದೆ ಎಂದು ಖಾದಿಯಾನಿ ಪಂಥವನ್ನು ಹುಟ್ಟುಹಾಕಿದ್ದೇ ಬ್ರಿಟೀಷರು ಎಂದು ಅನೇಕ ಮುಸಲ್ಮಾನರೇ ವಾದಿಸುತ್ತಾರೆ. ಅಂದರೆ ಹಿಂದೂಗಳನ್ನೆದುರಿಸಲು ಮುಸಲ್ಮಾನರನ್ನು ಎತ್ತಿಕಟ್ಟಬೇಕಿತ್ತು ಮತ್ತು ಮುಸಲ್ಮಾನರನ್ನು ಒಳಗಿನಿಂದ ಒಡೆಯಲು ಅವರ ವಿರುದ್ಧ ಅವರನ್ನೇ ಎತ್ತಿಕಟ್ಟಬೇಕಿತ್ತು. ಈಗಲೂ ಅದೇ ಬುದ್ಧಿ ಪ್ರದರ್ಶಿಸುತ್ತಿದ್ದಾರೆ.

    ಒಂದಂತೂ ಸತ್ಯ. ಎಸೆದ ಕಲ್ಲುಗಳಲ್ಲೇ ಅರಮನೆ ಕಟ್ಟಿಕೊಳ್ಳುವ ಚಾಣಾಕ್ಷತೆ ಇರುವ ಮೋದಿ ಚುನಾವಣೆಯಲ್ಲಿ ಇದನ್ನು ಬಳಸಿಕೊಳ್ಳುತ್ತಾರೆ. ಸವೋಚ್ಚ ನ್ಯಾಯಾಲಯವನ್ನು ಧಿಕ್ಕರಿಸಿ ಬ್ರಿಟೀಷ್ ಚಾನೆಲ್​ನ ದಾಸರಾಗಿರುವ ಕಾಂಗ್ರೆಸ್ಸಿನ ಜನ್ಮ ಜಾಲಾಡುತ್ತಾರೆ. ಜಾಗತಿಕ ಮಟ್ಟದಲ್ಲಿ ಈ ಸಾಕ್ಷ್ಯಚಿತ್ರ ಮೋದಿಯವರಿಗೆ ತೊಡಕಾಗಬಹುದೇನೋ, ಆದರೆ ಗುಜರಾತಿನಲ್ಲಿ ಮುಸಲ್ಮಾನರು ಮದರಸಾ ಪೀಡಿತರಾಗದೇ ವಿಕಾಸದೆಡೆಗೆ ಹೊರಳಿರುವುದು ಮೋದಿಯ ಕಾರಣಕ್ಕೆ ಎಂಬ ವಿಚಾರ ಮತ್ತೆ ಸಾಬೀತಾದರೆ ಹಿಂದೂಗಳು ಮತ್ತೊಮ್ಮೆ ಒಗ್ಗಟ್ಟಾಗಿ ಮೋದಿಯ ಬೆನ್ನಹಿಂದೆ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. ಮೋದಿಗಾಗಿ ರಾತ್ರಿಯಿಡಿ ಖೆಡ್ಡಾ ತೋಡಿ ಕಾಂಗ್ರೆಸ್ಸು ಹಗಲಿನಲ್ಲಿ ತಾನೇ ಹೋಗಿ ಬಿದ್ದುಬಿಡುವುದಕ್ಕೆ ಇದು ಮತ್ತೊಂದು ಉದಾಹರಣೆ ಅಷ್ಟೇ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ನಮ್ಮ ಮೆಟ್ರೋ, ಮತ್ತೊಂದು ಅವಘಡ: ಕಾರಿನ ಮೇಲೇ ಬಿದ್ದ ಬ್ಯಾರಿಕೇಡ್, ಕಾರು ಜಖಂ..

    ಗಂಡ-ಹೆಂಡಿರ ಜಗಳ ಚೂರಿ ಇರಿಯುವ ತನಕ; ಟೀ ಕೇಳಿದ್ದಕ್ಕೆ ಪತಿಗೆ ಚಾಕು ಚುಚ್ಚಿದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts