More

  ಕಲೆ ಸಂಸ್ಕೃತಿಯ ಜೀವಾಳ: ಜಿಪಂ ಉಪಾಧ್ಯಕ್ಷೆ ಶಾರದಾ

  ತುಮಕೂರು: ಸ್ತ್ರೀಶಕ್ತಿ ಸ್ವ-ಸಹಾಯ ಗುಂಪು ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಸಬಲೀಕರಣದಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದು ಜಿಪಂ ಉಪಾಧ್ಯಕ್ಷೆ ಶಾರದಾ ಅಭಿಪ್ರಾಯಪಟ್ಟರು.

  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸಹಯೋಗದಲ್ಲಿ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ‘ಮಹಿಳಾ ಸಾಂಸ್ಕೃತಿಕ ಉತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳಾ ಸಬಲೀಕರಣ ಹಾಗೂ ಅಭ್ಯುದಯಕ್ಕಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರು ಆರ್ಥಿಕವಾಗಿ ಸಧೃಡರಾಗಲು ಮುಂದಾಗಬೇಕು ಎಂದರು.

  ಕಲೆ ಸಂಸ್ಕೃತಿಯ ಜೀವಾಳ. ಮನರಂಜನೆ ಹಾಗೂ ಮಾನಸಿಕ ಸಂತೋಷಕ್ಕಾಗಿ ಕಲೆ ರೂಢಿಸಿಕೊಳ್ಳಲಾಗಿದೆ. ಅನೇಕ ಶತಮಾನಗಳಿಂದ ಮಹಿಳೆಯು ಕಲೆಯನ್ನು ಜೀವಂತಿಕೆಯಾಗಿ ಉಳಿಸಿಕೊಂಡು ಬಂದಿದ್ದಾಳೆ ಎಂದರು. ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಮಹಿಳೆಯರ ಸಹಕಾರ ಇಲ್ಲದೇ ಯಾವುದೇ ಪುರುಷರು ಸಾಧನೆ ತೋರಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪುರುಷರ ಸಾಧನೆಯ ಹಿಂದೆ ಮಹಿಳೆ ಇರುತ್ತಾಳೆ ಎಂದರು.

  ತುಮಕೂರಿನಲ್ಲಿ ನಡೆಯುವ ಜಿಲ್ಲಾ ಉತ್ಸವಕ್ಕೆ ಬೇರೆ ಜಿಲ್ಲೆಗಳಿಂದ ಬಂದು ಗ್ರಾಮೀಣ ಸೊಗಡಿನ ಕಲೆಗಳನ್ನು ಪ್ರದರ್ಶನ ಮಾಡುತ್ತಿರುವುದು ಮಾದರಿ ಬೆಳವಣಿಗೆ. ಹೆಣ್ಣು ಸಂಸಾರದ ಕಣ್ಣು, ಅವರಲ್ಲಿ ನಾನಾ ಕಲೆಗಳು ತುಂಬಿರುತ್ತವೆ. ಅಂತಹ ಕಲೆಗಳಿಗೆ ಸರ್ಕಾರವೆ ಉತ್ತಮ ವೇದಿಕೆ ಕಲ್ಪಿಸಿದೆ. ಇದರಲ್ಲಿ ನಿಮ್ಮ ಪ್ರತಿಭೆ ಹೊರಹಾಕಿ ಹೆಣ್ಣು ಅಬಲೆಯಲ್ಲ ಸಬಲೆ ಎಂದು ತೋರಿಸಬೇಕು ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕಿ ದಯಾಶೀಲಾ ಮಾತನಾಡಿ, ನಮಸ್ಕಾರ ನಮ್ಮ ಸಂಸ್ಕಾರವನ್ನು ತೋರಿಸುತ್ತದೆ. ಆದಿ ಕಾಲದಿಂದಲೂ ವಿಭಿನ್ನ ನಾಗರಿಕತೆಗಳನ್ನು ಕಟ್ಟಿ ಬೆಳೆಸುವಲ್ಲಿ ಮಹಿಳೆಯ ಪಾತ್ರ ಅತ್ಯಂತ ಪ್ರಧಾನವಾದುದು. ಸಂಸ್ಕಾರದ ಗಣಿಯಾಗಿರುವ ಮಹಿಳೆ ಸಮಾಜದಲ್ಲಿ ನೆಮ್ಮದಿ, ಸುಖ, ಶಾಂತಿಗೆ ಕಾರಣಳಾಗಿದ್ದಾಳೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚನ್ನಕೇಶವ, ಕಾರ್ಯಕ್ರಮ ಸಂಚಾಲಕ ಕೆ.ಸಣ್ಣಹೊನ್ನಯ್ಯ ಕಂಟಲಗೆರೆ ಸೇರಿ ಮತ್ತಿತರ ಗಣ್ಯರು ಇದ್ದರು.

  ಉತ್ಸವಕ್ಕೆ ಜಾನಪದ ಕಲಾತಂಡಗಳ ಮೆರುಗು: ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಮಹಿಳಾ ಡೊಳ್ಳು ಕುಣಿತ, ಮಹಿಳಾ ವೀರಗಾಸೆ ನೃತ್ಯ, ಮಹಿಳಾ ಕಂಸಾಳೆ ನೃತ್ಯ, ಮಹಿಳಾ ತಮಟೆ, ಕೋಲಾಟ, ಲಂಬಾಣಿ ನೃತ್ಯ, ಜಾನಪದ ನೃತ್ಯ ತಂಡಗಳು ಪ್ರದರ್ಶನ ನೀಡಿದವು. ಮಹಿಳೆಯರಿಗಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ, ಕರಕುಶಲ ವಸ್ತು ಪ್ರದರ್ಶನ ಹಾಗೂ ಮಹಿಳಾ ಕಲಾವಿದರ ವೇಷಭೂಷಣ ಪ್ರೇಕ್ಷಕರ ಗಮನಸೆಳೆದವು. ಕಾರ್ಯಕ್ರಮಕ್ಕೂ ಮುನ್ನ ಮಹಿಳಾ ಜನಪದ ಕಲಾತಂಡಗಳ ಮೆವರಣಿಗೆ ಬಿಜಿಎಸ್ ವೃತ್ತದಿಂದ ಆರಂಭವಾಗಿ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಮಾವೇಶಗೊಂಡಿತು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts