More

    ರಾತ್ರಿ ವೇಳೆ ವಾಹನ ತಡೆದು ಸುಲಿಗೆ ಮಾಡುತ್ತಿದ್ದ ಐವರು ದರೋಡೆಕೋರರ ಬಂಧನ

    ಬೆಂಗಳೂರು: ರಾತ್ರಿ ಹೊತ್ತು ರಸ್ತೆಯಲ್ಲಿ ವಾಹನ ತಡೆದು ಚಾಲಕರಿಗೆ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಕಗ್ಗಲಿಪುರ ಪೊಲೀಸರು ಬಂಧಿಸಿದ್ದಾರೆ.

    ಹೊಸಕೆರೆಹಳ್ಳಿಯ ಪೇಂಟರ್ ಶೇಷಾದ್ರಿ (25), ದೀಕ್ಷಿತ್ (18), ಬನಶಂಕರಿಯ ಎಲೆಕ್ಟ್ರಿಷಿಯನ್ ಅರುಣ್ ಕುಮಾರ್ (21), ಆವಲಹಳ್ಳಿಯ ಶ್ರೀನಾಥ್ (23) ಮತ್ತು ಮೈಸೂರು ರಸ್ತೆ ಟಿಂಬರ್ ಯಾರ್ಡ್ ರಸ್ತೆ ಕ್ಯಾಬ್ ಚಾಲಕ ನಿಖಿಲ್ (24) ಬಂಧಿತರು. 1 ಕಾರು ಮತ್ತು 2 ಬೈಕ್ ಸೇರಿದಂತೆ 7.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿ ಶೇಷಾದ್ರಿ, ಗ್ಯಾಂಗ್ ಕಟ್ಟಿಕೊಂಡು ರಾತ್ರಿ ವೇಳೆ ಬೈಕ್‌ನಲ್ಲಿ ದಕ್ಷಿಣ ವಿಭಾಗದಲ್ಲಿ ಸುತ್ತಾಡಿ ಕಾರು ಅಥವಾ ಬೈಕ್‌ಗಳನ್ನು ಅಡ್ಡಗಟ್ಟಿ ಬಿಯರ್ ಬಾಟಲ್ ಎಸೆದು ವಾಹನ ನಿಲ್ಲಿಸುತ್ತಿದ್ದರು. ಮಾರಕಾಸಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ, ನಗದು ಕಸಿದುಕೊಂಡು ವಾಹನ ಸಮೇತ ಪರಾರಿ ಆಗುತ್ತಿದ್ದರು. ವಿವಿಧ ಠಾಣೆಯಲ್ಲಿ ಶೇಷಾದ್ರಿ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ.

    ಮೇ 29ರ ರಾತ್ರಿ 12.30ರಲ್ಲಿ ವಿಜಯನಗರದ ಶ್ರೀನಿವಾಸ್ ಮತ್ತು ಅಜಯ್‌ಕುಮಾರ್ ಕಾರಿನಲ್ಲಿ ಕುಂಬಳಗೂಡಿಗೆ ಹೋಗಲು ಮೊಬೈಲ್‌ನಲ್ಲಿ ಗೂಗಲ್ ಮ್ಯಾಪ್ ಹಾಕಿಕೊಂಡು ಹೋಗುತ್ತಿದ್ದರು. ನೈಸ್ ರಸ್ತೆಯಿಂದ ಅಗರ ಕೆರೆ ರಸ್ತೆಗೆ ಬಂದಿದ್ದಾರೆ. ಮಾರ್ಗಮಧ್ಯೆ ಆರೋಪಿಗಳು ಬಿಯರ್ ಬಾಟಲ್‌ಗಳನ್ನು ಕಾರಿನ ಮೇಲೆ ಎಸೆದು ನಿಲ್ಲಿಸಿ ಒಳಗಿದ್ದವರನ್ನು ಕೆಳಗೆ ಇಳಿಸಿ ದರೋಡೆ ಮಾಡಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದ ಅಜಯ್‌ಕುಮಾರ್ ತಲೆಗೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿ ಕಾರು ಕಿತ್ತುಕೊಂಡು ಪರಾರಿಯಾಗಿದ್ದರು.

    ಪಕ್ಕದ ಊರಿಗೆ ಬಂದ ಸ್ನೇಹಿತರು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ಪಡೆದ ಆನಂತರ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ರಾಮಪ್ಪ ಬಿ. ಗುತ್ತೇರ್ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಕದ್ದ ಕಾರಿನಲ್ಲಿ ನಗರ ಸುತ್ತಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts