More

    ವಿವಿಧೆಡೆ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ, 73 ಜನರ ಬಂಧನ

    ಹುಬ್ಬಳ್ಳಿ: ದೀಪಾವಳಿ ನೆಪದಲ್ಲಿ ವಾಣಿಜ್ಯ ನಗರಿಯ ವಿವಿಧೆಡೆ ಆರಂಭವಾಗಿದ್ದ ಇಸ್ಪೀಟ್ ಅಡ್ಡೆಗಳ ಮೇಲೆ ಎಸಿಪಿ ಶಂಕರ ರಾಗಿ ಹಾಗೂ ಎಂ.ವಿ. ಮಲ್ಲಾಪುರ ನೇತೃತ್ವದ ತಂಡ ಶನಿವಾರ, ಭಾನುವಾರ ರಾತ್ರಿ ಪ್ರತ್ಯೇಕವಾಗಿ ದಾಳಿ ನಡೆಸಿ, 50ಕ್ಕೂ ಅಧಿಕ ಜನರನ್ನು ಬಂಧಿಸಿ 1,90,790 ರೂ. ವಶಪಡಿಸಿಕೊಂಡಿದೆ.

    ಕೇಶ್ವಾಪುರ ರೈಲ್ವೆ ಕ್ವಾರ್ಟರ್ಸ್​ನ ವಿನೋಬಾ ನಗರದ ಮನೆಯೊಂದರಲ್ಲಿ ಜೂಜಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. 19 ಜನರನ್ನು ಬಂಧಿಸಿ 87,610 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಶನಿವಾರ ರಾತ್ರಿ ಗದಗ ರಸ್ತೆಯಲ್ಲಿ ಜೂಜಾಡುತ್ತಿದ್ದ 6 ಜನರನ್ನು ಬಂಧಿಸಿ, 19,600 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ನವನಗರದ ನಂದೀಶ್ವರ ನಗರದ ರುದ್ರಭೂಮಿ ಸಮೀಪ ಬೆಳ್ಳಂಬೆಳಗ್ಗೆ ಜೂಜಾಡುತ್ತಿದ್ದ ಅಡ್ಡೆ ಮೇಲೆ ಎಪಿಎಂಸಿ- ನವನಗರ ಠಾಣೆ ಪೊಲೀಸರು ದಾಳಿ ನಡೆಸಿ 7 ಜನರನ್ನು ಬಂಧಿಸಿ, 15,150 ರೂ. ನಗದು ವಶಪಡಿಸಿಕೊಂಡಿದ್ದಾರೆ. ಕೇಶ್ವಾಪುರ ಹಾಗೂ ನವನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಭಾನುವಾರ ರಾತ್ರಿ ಪಡದಯ್ಯನ ಹಕ್ಕಲ ಬಳಿ ಸಿದ್ಧಾರ್ಥ ಕಾಲನಿಯ ನಾಲಾ ಪಕ್ಕದಲ್ಲಿ ಇಸ್ಪೀಟ್ ಆಡುತ್ತಿದ್ದ 9 ಜನರನ್ನು ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿ, 27,430 ರೂ. ವಶಪಡಿಸಿಕೊಂಡಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೃಪಾ ನಗರ ಹಾಗೂ ಹೊಸ ಗಬ್ಬೂರಿನಲ್ಲಿ ಪ್ರತ್ಯೇಕ ದಾಳಿ ನಡೆಸಿ 41 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಬೆಳಗಾವಿ ಉತ್ತರ ವಲಯ ಐಜಿಪಿ ಹಾಗೂ ಹು-ಧಾ ಪ್ರಭಾರ ಆಯುಕ್ತ ರಾಘವೇಂದ್ರ ಸುಹಾಸ ಮಾರ್ಗದರ್ಶನದಲ್ಲಿ ಡಿಸಿಪಿ ಪಿ. ಕೃಷ್ಣಕಾಂತ ನೇತೃತ್ವದ ತಂಡ ಭಾನುವಾರ ನಗರದ ವಿವಿಧೆಡೆ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿದೆ. ಅರವಿಂದ ನಗರದ ಭೈರನಾಥ ಕಲ್ಯಾಣ ಮಂಟಪದ ಎದುರು ಖುಲ್ಲಾ ಜಾಗದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ 17 ಜನರನ್ನು ಬಂಧಿಸಿರುವ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಅವರಿಂದ 10,500 ರೂ. ನಗದು ವಶಪಡಿಸಿಕೊಂಡಿದ್ದಾರೆ. ಇಂದಿರಾ ನಗರದ ದ್ಯಾಮವ್ವನ ಗುಡಿ ಸಮೀಪ ರಸ್ತೆಬದಿ ಇಸ್ಪೀಟ್ ಜೂಜಾಡುತ್ತಿದ್ದ ಅಡ್ಡೆ ಮೇಲೆ ಅಶೋಕನಗರ ಠಾಣೆ ಪೊಲೀಸರು ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದಾರೆ. 15,790 ರೂ. ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

    4 ಪೊಲೀಸರ ಅಮಾನತು: ಧಾರವಾಡದ ಮುಮ್ಮಿಗಟ್ಟಿ ಬಳಿಯ ಹೋಟೆಲ್​ವೊಂದರ ಹಿಂಭಾಗದಲ್ಲಿ ಇತ್ತೀಚೆಗೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮ ಕೈಗೊಂಡಿದ್ದಾರೆ. ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕಾದ ಪೊಲೀಸರೇ ಜೂಜಾಟದಲ್ಲಿ ತೊಡಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮುಲಾಜಿಲ್ಲದೆ ಅಡ್ಡೆ ಮೇಲೆ ದಾಳಿ ನಡೆಸಿ ಎಫ್​ಐಆರ್ ದಾಖಲಿಸಿದ ಡಿವೈಎಸ್​ಪಿ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಗರಗ ಠಾಣೆಯ ಆತ್ಮಾನಂದ ಬೆಟಗೇರಿ, ಮಂಜುನಾಥ ನಾಗಾವಿ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ. ಉಳಿದ ಸಿಬ್ಬಂದಿ ಮೇಲೆ ಸಹ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಪಿ. ಕೃಷ್ಣಕಾಂತ ತಿಳಿಸಿದ್ದಾರೆ.

    ನ. 10ರಂದು ಇಸ್ಪೀಟ್ ಆಡುತ್ತಿದ್ದರು. ಈ ಮಾಹಿತಿ ತಿಳಿದು ಡಿವೈಎಸ್ಪಿ ದಾಳಿ ನಡೆಸಿದ ಸಂದರ್ಭದಲ್ಲಿ ಗರಗ ಪೊಲೀಸ್ ಠಾಣೆಯ ಪೇದೆ ಆತ್ಮಾನಂದ ಬೆಟಗೇರಿ, ಮಂಜುನಾಥ ನಾಗಾವಿ, ಡಿಎಆರ್ ಪೇದೆಗಳಾದ ಮೈನುದ್ದೀನ್ ಮುಲ್ಲಾ, ಶಂಕರ ಭಜಂತ್ರಿ, ಬಸವರಾಜ ಮಠದ, ವರ್ಧಮಾನ ಹಟಿಂಗಳಿ, ಆರ್.ಎಸ್. ಜಂಗನವರಿ, ಹುಲಿಗೆಪ್ಪ ದೊಡಮನಿ, ಮಲ್ಲಿಕಾರ್ಜುನ ಶಿರೂರ, ಧಾರವಾಡ ಗ್ರಾಮೀಣ ಠಾಣೆಯ ಸೈಯದ್​ಸಾಬ್ ಇಸ್ಮಾಯಿಲ್ ಸೇರಿ ಇನ್ನೂ ನಾಲ್ವರು ಪೊಲೀಸರು ಜೂಜಾಟದಲ್ಲಿದ್ದರು ಎಂಬ ಮಾಹಿತಿ ಬಯಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts