More

    ಅಡಕೆ ಧಾರಣೆ ಏರುಗತಿಯಲ್ಲಿ ಸಾಗುವ ನಿರೀಕ್ಷೆ

    ಶ್ರವಣ್ ಕುಮಾರ್ ನಾಳ ಪುತ್ತೂರು
    ಇರಾಕ್-ಅಮೆರಿಕ ನಡುವಿನ ಯುದ್ಧ ಸನ್ನಿವೇಶ ಭಾರತ ಸೇರಿದಂತೆ ಪ್ರಮುಖ ಮಿತ್ರರಾಷ್ಟ್ರಗಳ ಆರ್ಥಿಕತೆಗೆ ಹೊಡೆತ ಬಿದ್ದಿರುವುದು ನಿಜ. ಆದರೆ ಇದನ್ನೇ ನೆಪವಾಗಿಸಿ ಅಡಕೆ ಮಾರುಕಟ್ಟೆಯಲ್ಲೂ ಧಾರಣೆ ಇಳಿಕೆಯಾಗುತ್ತಿದೆ ಎಂಬ ಗುಮಾನಿ ಹಬ್ಬಿಸಿ ಕರಾವಳಿಯ ಅಡಕೆ ಬೆಳಗಾರರನ್ನು ಭೀತಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ.

    ಕಳೆದ ಆಗಸ್ಟ್‌ನಿಂದ ಡಿಸೆಂಬರ್ 2ನೇ ವಾರದವರೆಗೆ ಎಪಿಎಂಸಿ ಹಾಗೂ ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಹೊಸ ಅಡಕೆ 260-265 ರೂ, ಹೊಸಅಡಕೆ (ಸಿಂಗಲ್ ಚೋಲ್) 298-300 ರೂ, ಹಳೆಅಡಕೆ (ಡಬಲ್ ಚೋಲ್) 300-315ರೂ.ವರೆಗೆ ಏರುಹಾದಿಯಲ್ಲೇ ಸಾಗುತ್ತಿತ್ತು. ವರ್ಷಾಂತ್ಯಕ್ಕೆ ಚೇತರಿಕೆ ಕಂಡು ಹೊಸ ಅಡಕೆ 250, ಹೊಸಅಡಕೆ (ಸಿಂಗಲ್ ಚೋಲ್) 298, ಹಳೆಅಡಕೆ (ಡಬಲ್ ಚೋಲ್) 300 ರೂ.ನಲ್ಲಿ ಸ್ಥಿರವಾಗಿದೆ. ಇಷ್ಟಕ್ಕೇ ಅಡಕೆ ಮಾರುಕಟ್ಟೆ ಕುಸಿಯಲಿದೆ ಎಂದು ವದಂತಿ ಹಬ್ಬಿಸಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸುವ ಮೂಲಕ ವರ್ತಕರು ಅಡಕೆಯನ್ನು ಮಾರುಕಟ್ಟೆಗೆ ಬರುವಂತೆ ಮಾಡಿ ಲಾಭ ಪಡೆಯುತ್ತಿದ್ದಾರೆ. ಹೀಗೆ ಕಡಿಮೆ ದರದಲ್ಲಿ ಅಡಕೆ ಖರೀದಿಸಿ ಶೇಖರಿಸಿಡುವ ವರ್ತಕರು ಧಾರಣೆ ಹೆಚ್ಚಿದಾಗ ಮಾರಿ ಹೆಚ್ಚಿನ ಲಾಭ ಗಳಿಸುತ್ತಾರೆ.

    ವ್ಯವಹಾರ ಸ್ಥಗಿತ: ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಡಿ.13ರಿಂದ ಜನವರಿ 14ರವರೆಗೆ ಕಮೂರ್ತ ಮಾಸ ಆಚರಣೆಯಲ್ಲಿದ್ದು, ಈ ವೇಳೆ ಶುಭ ಸಮಾರಂಭಗಳು, ಪೂಜಾಕಾರ್ಯಗಳು ಇಲ್ಲಿ ನಿಷಿದ್ಧ. ಈ ಅವಧಿಯಲ್ಲಿ ಸಭೆ, ಸಮಾರಂಭಗಳೂ ನಡೆಯುವುದಿಲ್ಲ. ಸಾಮಾನ್ಯವಾಗಿ ಒಂದು ತಿಂಗಳ ಕಾಲ ಅಡಕೆ ವ್ಯವಹಾರವೂ ಸ್ಥಗಿತಗೊಳ್ಳುತ್ತದೆ. ಇದರ ನೇರ ಪರಿಣಾಮ ಕರಾವಳಿ ಮಾರುಕಟ್ಟೆಯ ಮೇಲೂ ಆಗುತ್ತದೆ. ಆದರೆ ಮಕರ ಸಂಕ್ರಮಣ ಬಳಿಕ ಸಾಲುಸಾಲು ಹಬ್ಬಗಳು ಇರುವುದರಿಂದ ಅಡಕೆ ಮಾರುಕಟ್ಟೆ ಚಿಗಿತುಕೊಳ್ಳುವುದು ರೂಢಿ.

    ಅಡಕೆ ಗೋದಾಮು ಖಾಲಿ: ಮಯನ್ಮಾರ್‌ನಿಂದ ಬಾಂಗ್ಲಾ ದೇಶದ ಮೂಲಕ ಭಾರತಕ್ಕೆ ಕಳಪೆ ಗುಣಮಟ್ಟದ ವಿದೇಶಿ ಅಡಕೆ ಅಕ್ರಮ ಆಮದಿಗೆ ಎರಡು ತಿಂಗಳಿನಿಂದ ಪೂರ್ಣಪ್ರಮಾಣದ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ಉತ್ತರ ಭಾರತದಲ್ಲಿ ಅಡಕೆ ಸ್ಟಾಕ್ ಇಲ್ಲ. ಸ್ಟಾಾ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ದುರ್ಬಳಕೆಗೂ ಕಡಿವಾಣ ಹಾಕಿದ್ದರಿಂದ ಅನಿವಾರ್ಯವಾಗಿ ದಕ್ಷಿಣ ಭಾರತದ ಅಡಕೆಗೆ ಬೇಡಿಕೆ ಹೆಚ್ಚಾಗಿದೆ. ಮಾರ್ಚ್ ವರ್ಷದ ಕೊನೆಯ ಆರ್ಥಿಕ ತಿಂಗಳಾಗಿರುವುದರಿಂದ ಬ್ಯಾಂಕ್ ಸಾಲ, ಕೃಷಿ ಸಾಲ ಪಾವತಿಗೆ ಬಹುತೇಕ ಬೆಳೆಗಾರರು ಒಣಗಿದ ಅಡಕೆಯನ್ನು ಮಾರ್ಚ್‌ವರೆಗೆ ಶೇಖರಿಸಿಡುತ್ತಾರೆ. ತಕ್ಷಣಕ್ಕೆ ಮಾರಾಟ ಮಾಡದಿದ್ದರೆ ಉತ್ತಮ ಧಾರಣೆ ಬರಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

    300 ರೂ. ಗಡಿ ದಾಟುವ ನಿರೀಕ್ಷೆ: 2019ರ ಡಿಸೆಂಬರ್ 2ನೇ ವಾರದವರೆಗೆ ಏರಿಕೆ ಕಂಡಿದ್ದ ಅಡಕೆ ಧಾರಣೆ ಡಿ.13ರಿಂದ 25ರವರೆಗೆ ಇಳಿಮುಖವಾಗಿದೆ. ವರ್ಷಾಂತ್ಯದಲ್ಲಿ ಏರಿಕೆ ಕಂಡು 2020ರ ಆರಂಭದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಮಾರುಕಟ್ಟೆಗೆ ಬೇಡಿಕೆಯಷ್ಟು ಅಡಕೆ ಪೂರೈಕೆಯಾಗದ ಕಾರಣ ಧಾರಣೆ ಏರುಮುಖವಾಗುತ್ತಿದೆ. ಹೀಗೆಯೇ ಮುಂದುವರಿದರೆ ಮಾರ್ಚ್ ವೇಳೆ ಹೊಸ ಅಡಕೆ ಧಾರಣೆ 300-320 ರೂ. ಗಡಿ ದಾಟುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಹೇಳುತ್ತಾರೆ.

    ವರ್ಷಾಂತ್ಯ ಹಾಗೂ ವರ್ಷಾರಂಭದಲ್ಲಿ ಅಡಕೆಗೆ ಬೇಡಿಕೆ ಕಡಿಮೆಯಾಗುವುದು ಸಾಮಾನ್ಯ. ಇದಕ್ಕೆ ಗುಜರಾತ್- ರಾಜಸ್ಥಾನದಲ್ಲಿ ಕಮೂರ್ತ ಮಾಸ ಆಚರಣೆಯೂ ಕಾರಣವಾಗಿರಬಹುದು. ಮುಂದಿನ ದಿನಗಳಲ್ಲಿ ಭಾರತಕ್ಕೆ ಅಡಕೆ ಕಳ್ಳ ಸಾಗಣಿಕೆಯಿಂದ ಆಮದಾಗದಿದ್ದರೆ ಖಂಡಿತಾವಾಗಿಯೂ ಅಡಕೆ ಧಾರಣೆ ಏರುಗತಿಯಲ್ಲಿ ಸಾಗಲಿದೆ.
    – ಎಸ್.ಆರ್ .ಸತೀಶ್ಚಂದ್ರ, ಕ್ಯಾಂಪ್ಕೋ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts