More

    ಏರುದಾರಿಯಲ್ಲಿ ಅಡಕೆ ಧಾರಣೆ

    ಶ್ರವಣ್‌ಕುಮಾರ್ ನಾಳ, ಪುತ್ತೂರು

    ಕರಾವಳಿಯ ಅಡಕೆ ಮಾರುಕಟ್ಟೆ ಏರಿಗತಿಯಲ್ಲಿ ಸಾಗುತ್ತಿದ್ದು, ಮುಚ್ಚಿದ ಹಲವು ಗೋದಾಮುಗಳು ಮತ್ತೆ ತೆರೆದುಕೊಳ್ಳುತ್ತಿವೆ. ಮುಕ್ತ ಮಾರುಕಟ್ಟೆಯಲ್ಲಿ ಅಡಕೆ ವ್ಯವಹಾರ ನಡೆಸುತ್ತಿದ್ದ ವರ್ತಕರು ಲಾಕ್‌ಡೌನ್ ಹಿನ್ನೆಲೆ ತಿಂಗಳ ಕಾಲ ವ್ಯವಹಾರ ನಿಲ್ಲಿಸಿದ್ದರಿಂದ ಗುಜರಾತಿನ ಕಂಪನಿಗಳಿಗೆ ಅಡಕೆ ಕೊರತೆ ಎದುರಾಗಿದೆ. ಈಗ ಅಡಕೆಗೆ ಉತ್ತಮ ಧಾರಣೆ ಕಂಡುಬರುತ್ತಿರುವುದು ಗೋದಾಮುಗಳ ಬಾಗಿಲು ತೆರೆದುಕೊಳ್ಳಲು ಕಾರಣ.

    ಕರಾವಳಿಯ ಗ್ರಾಮಾಂತರ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಕೆ ಈಬಾರಿ ಇಳುವರಿ ಕೊರತೆಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಅಡಕೆ ಕೊರತೆಯಿಂದಾಗಿ ಬೆಲೆ ಏರುಗತಿಯಲ್ಲಿ ಸಾಗುತ್ತಿತ್ತು. ಲಾಕ್‌ಡೌನ್ ಹಿನ್ನೆಲೆ ಅಂತಾರಾಜ್ಯ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿದ್ದರೂ, ಎಪಿಎಂಸಿ ಹಾಗೂ ಕ್ಯಾಂಪ್ಕೊ ಸಂಸ್ಥೆ ಅಡಕೆ ಖರೀದಿಸುತ್ತಿವೆ. 2016ರಲ್ಲಿ ಹೊಸ ಅಡಕೆ ಧಾರಣೆ ಕೆ.ಜಿ.ಗೆ 250ರೂ. ದಾಟಿದ್ದು ಬಿಟ್ಟರೆ ನಂತರದ ವರ್ಷಗಳಲ್ಲಿ ಇಳಿಕೆಯ ಹಾದಿಯಲ್ಲೇ ಸಾಗಿತ್ತು. ಆದರೆ 2019ರಲ್ಲಿ ಜನವರಿಯಲ್ಲಿ 250 ರೂ. ಆಸುಪಾಸು ತಲುಪಿತ್ತು. ಈ ಬಾರಿ ಲಾಕ್‌ಡೌನ್ ಮಧ್ಯೆಯೂ ಹೊಸ ಅಡಕೆ 255 ರೂ, ಹಳೇ ಅಡಕೆಗೆ 270 ರೂ.ಧಾರಣೆ ಇದೆ.

    2014ರ ಆರಂಭದಲ್ಲಿ 1 ಕಿಂಟ್ವಾಲ್ ಹೊಸ ಅಡಕೆ 242 ರೂ, 2015ರಲ್ಲಿ 200 ರೂ, 2016ರಲ್ಲಿ 250 ರೂ, 2017ರಲ್ಲಿ 180 ರೂ, 2018ರಲ್ಲಿ 220 ರೂ.ಆಸುಪಾಸಿನಲ್ಲಿತ್ತು. 2018ರ ನವೆಂಬರ್‌ನಲ್ಲಿ 200ರಿಂದ 210ರೂ. ಧಾರಣೆಯಿದ್ದ ಹೊಸ ಅಡಕೆ ಮಾರುಕಟ್ಟೆ, ವರ್ಷಾಂತ್ಯಕ್ಕೆ 210-220ರೂ.ವರೆಗೆ ಏರಿತ್ತು. 2019ರ ಆರಂಭದಿಂದ ಧಾರಣೆಯಲ್ಲಿ ಏರುತ್ತಲೇ ಸಾಗಿದ್ದು, ವರ್ಷಾಂತ್ಯಕ್ಕೆ ಎಪಿಎಂಸಿ ಹಾಗೂ ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಹೊಸ ಅಡಕೆ 242 ರೂ, ಹೊಸಅಡಕೆ (ಸಿಂಗಲ್ ಚೋಲ್) 295 ರೂ, ಹಳೇ ಅಡಕೆ(ಡಬಲ್ ಚೋಲ್) 297ರೂ.ನಲ್ಲಿ ವ್ಯವಹರಿಸಿತ್ತು. 2020ರ ಆರಂಭದಿಂದ ಮಾರುಕಟ್ಟೆ ಅಡಕೆ ಕೊರತೆ ಎದುರಿಸುತ್ತಿದ್ದು, ಬೆಲೆಯೂ ಏರುಗತಿಯಲ್ಲೇ ಸಾಗಿತ್ತು. ಆದರೆ ಮಾರ್ಚ್ ವೇಳೆ ಘೋಷಣೆಯಾಗಿದ್ದ ಲಾಕ್‌ಡೌನ್‌ನಿಂದಾಗಿ ಅಂತಾರಾಜ್ಯ ಸಾರಿಗೆ ಸಂಪರ್ಕ ಸ್ಥಗಿತಗೊಂಡು ಅಡಕೆ ಗೋದಾಮು ಮುಚ್ಚಿದವು.
    ಪ್ರಸ್ತುತ ಗುಜರಾತಿನಲ್ಲಿ ಅಡಕೆ ಕೊರತೆ ಹೆಚ್ಚಾಗಿದ್ದು, ರಾಜ್ಯಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಅಂತಾರಾಜ್ಯ ಸರಕು ಸಾಗಾಟಕ್ಕೆ ಅನುಮತಿ ಲಭ್ಯವಾದರೆ ಈ ಬಾರಿ 300-350ರೂ. ಗಡಿ ದಾಟುವ ನಿರೀಕ್ಷೆ ಇದೆ ಎಂದು ಕೃಷಿ ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

    ಬೇಡಿಕೆ ಹೆಚ್ಚಾಗಲು ಕಾರಣ?
    ಕೊಳೆರೋಗ ಹಾಗೂ ಇಳುವರಿ ಕಡಿಮೆಯಾಗಿ ಬೇಡಿಕೆಯ ಆಧಾರದಲ್ಲಿ ಪೂರೈಕೆಗೆ ಅಡಕೆ ಕೊರತೆಯೇ ಅಡಕೆ ಬೆಲೆಯೇರಿಕೆಗೆ ಕಾರಣ ಎಂಬುದು ಕೃಷಿಕರ ವಾದ. ಆದರೆ, ಮಾರುಕಟ್ಟೆ ತಜ್ಞರ ಅಭಿಪ್ರಾಯ ಪ್ರಕಾರ, ಅಡಕೆ ಮಾರುಕಟ್ಟೆ ಎರಡು ವರ್ಷಗಳಿಂದ ಪಾರದರ್ಶಕವಾಗಿ ನಡೆಯಲು ಸರ್ಕಾರ ಕೈಗೊಂಡ ನೀತಿಯೇ ಮಾರುಕಟ್ಟೆ ಚೇತರಿಕೆಗೆ ಕಾರಣ. ಈ ಧಾರಣೆಗಳು ದೀರ್ಘಾವಧಿವರೆಗೂ ಸ್ಥಿರ ಧಾರಣೆಯನ್ನೇ ಕಾಯ್ದುಕೊಳ್ಳಲಿದೆ ಎಂಬುದಾಗಿ ವಿಶ್ಲೇಷಿಸಿದ್ದಾರೆ. ಈ ಮಧ್ಯೆ, ಗುಜರಾತಿನ ಬಹುತೇಕ ಅಡಕೆ ಗೋದಾಮು ಖಾಲಿಯಾಗಿದ್ದು, ಅಡಕೆ ಬೇಡಿಕೆ ಹೆಚ್ಚಾಗಿದೆ. ಮಯನ್ಮಾರ್‌ನಿಂದ ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಕಡಿಮೆ ಗುಣಮಟ್ಟದ ವಿದೇಶಿ ಅಡಕೆ ಅಕ್ರಮ ಆಮದಿಗೆ ಬ್ರೇಕ್‌ಬಿದ್ದ ಹಿನ್ನೆಲೆಯಲ್ಲಿ ಉತ್ತರ ಭಾರತದ ಅಡಕೆ ಗೋದಾಮು ಖಾಲಿಯಾಗಿದೆ. ಸ್ಟಾಾ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ದುರ್ಬಳಕೆಗೂ ಕಡಿವಾಣ ಹಾಕಿದ್ದರಿಂದ ಅನಿವಾರ್ಯವಾಗಿ ದಕ್ಷಿಣ ಭಾರತದ ದೇಸಿ ಅಡಕೆಗೆ ಬೇಡಿಕೆ ಹೆಚ್ಚಾಗಿದೆ.

    ಕೊಳೆರೋಗ, ಇಳುವರಿ ಕೊರತೆಯಾಗಿದ್ದರಿಂದ ಈ ಬಾರಿ ಅಡಕೆ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಅಡಕೆ ಮಾರುಕಟ್ಟೆ ಕಳೆದ 1-2 ವರ್ಷಗಳಿಂದ ಪಾರದರ್ಶಕವಾಗಿ ನಡೆಯಲು, ಮಾರುಕಟ್ಟೆ ಚೇತರಿಕೆಗೆ ಸರ್ಕಾರ ಕೈಗೊಂಡ ನೀತಿಯೇ ಕಾರಣ. ಬೇಡಿಕೆ ಹೆಚ್ಚಾದಾಗ ಪೂರೈಕೆ ಕಡಿಮೆ ಪ್ರಮಾಣದಲ್ಲಿದ್ದರೆ ಬೆಲೆ ಏರಿಕೆ ಸಹಜ.
    ಡಾ.ವ್ನಿೇಶ್ವರ ವರ್ಮುಡಿ
    ಕೃಷಿ ಮಾರುಕಟ್ಟೆ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts